
ಖಾಲಿ ಹುದ್ದೆಗಳನ್ನು ತುಂಬುವಲ್ಲಿನ ಸರ್ಕಾರದ ವಿಳಂಬ ತಂತ್ರ ಉದ್ಯೋಗಾಕಾಂಕ್ಷಿಗಳಿಗೆ ಎಸಗುವ ವಂಚನೆ. ಯುವಜನರಿಗೆ ಉದ್ಯೋಗ ನೀಡುವುದಕ್ಕಿಂತಲೂ ಮಿಗಿಲಾದ ‘ಗ್ಯಾರಂಟಿ’ ಮತ್ತೊಂದಿಲ್ಲ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸುವಂತೆ ‘ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ’ (ಅಕ್ಸಾ) ಫೆ. 24ರಂದು ಧಾರವಾಡದಲ್ಲಿ ನಡೆಸಿದ ಬೃಹತ್ ಪ್ರತಿಭಟನೆ, ಯುವಜನರ ಉದ್ಯೋಗದ ನಿರೀಕ್ಷೆಗಳಿಗೆ ಸ್ಪಂದಿಸದಿರುವ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದಿರುವ ಕನ್ನಡಿಯಾಗಿದೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ನಡೆಸಿದ ಪ್ರತಿಭಟನೆ, ಈ ಹೊತ್ತಿನ ಬಹು ಮುಖ್ಯ ಸಮಸ್ಯೆಯೊಂದರ ಬಗ್ಗೆ ಯುವಜನ ಜಾಗೃತಗೊಂಡಿರುವುದರ ಸಂಕೇತವಾಗಿದೆ. ಅದು ಏಕಾಏಕಿ ರೂಪುಗೊಂಡ ವಿದ್ಯಮಾನವಾಗಿರದೆ, ಕಳೆದ ಆರು ತಿಂಗಳಿನಿಂದಲೂ ಹೊಗೆಯಾಡುತ್ತಿದ್ದ ಅಸಮಾಧಾನದ ವ್ಯಕ್ತರೂಪವಾಗಿದೆ. ಖಾಲಿ ಹುದ್ದೆಗಳನ್ನು ತುಂಬುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು, ಯುವಜನರು ಕಳೆದ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿಯೂ ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆಯ ಸೊಲ್ಲು ಈಗ ಮತ್ತಷ್ಟು ಬಲವಾಗಿದೆ. 50 ಸಾವಿರ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು, ಸರ್ಕಾರ ಅಧಿಸೂಚನೆ ಹೊರಡಿಸದಿದ್ದರೆ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ ಎಂದು ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ್ ಹೇಳಿದ್ದಾರೆ. ‘ಭ್ರಷ್ಟಾಚಾರ ಮುಕ್ತವಾಗಿ ನೇಮಕಾತಿ ನಡೆಸಿ’, ‘ಯುವಜನರಿಗೆ ಕೆಲಸ ಕೊಡಿ’ ಎನ್ನುವ ಉದ್ಯೋಗಾಕಾಂಕ್ಷಿಗಳ ಬೇಡಿಕೆ ಮತ್ತಷ್ಟು ದೊಡ್ಡದಾಗುವ ಮುನ್ನ ಸರ್ಕಾರ ಎಚ್ಚರಗೊಳ್ಳಬೇಕಾಗಿದೆ. ನಾಡಿನ ಎಲ್ಲ ಭಾಗಗಳ ನಿರುದ್ಯೋಗಿ ಯುವಜನರ ಸಂಕಟ ಹಾಗೂ ಹತಾಶೆಯ ರೂಪದಲ್ಲಿ ನೋಡಬಹುದಾದ ಪ್ರತಿಭಟನೆಯನ್ನು ಸರ್ಕಾರ ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಶಾಲಾ ಶಿಕ್ಷಣ ಇಲಾಖೆಯಲ್ಲಿನ 79,694 ಹುದ್ದೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಒಟ್ಟು 2,84,881 ಹುದ್ದೆಗಳನ್ನು ಸರ್ಕಾರ ತುಂಬಬೇಕಾಗಿದೆ. ಈ ಹುದ್ದೆಗಳನ್ನು ವರ್ಷಗಟ್ಟಲೆ ತುಂಬದೆ ಉಳಿಸಿಕೊಂಡಿರುವ ಸರ್ಕಾರದ ಧೋರಣೆಯು ಯುವಜನರನ್ನು ಉದ್ಯೋಗದ ಹಕ್ಕಿನಿಂದ ವಂಚಿಸಿದೆ ಹಾಗೂ ಆಡಳಿತಯಂತ್ರ ದುರ್ಬಲಗೊಳ್ಳಲು ಕಾರಣವಾಗಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿ
ರುವ ಹುದ್ದೆಗಳ ಆಧಾರದಲ್ಲಿ, ಆ ಇಲಾಖೆ ಎಷ್ಟರಮಟ್ಟಿಗೆ ದುರ್ಬಲಗೊಂಡಿರಬಹುದು ಎನ್ನುವುದನ್ನು ಊಹಿಸಬಹುದಾಗಿದೆ. ವೆಚ್ಚವನ್ನು ತಗ್ಗಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ ಹಾಗೂ ಖಾಲಿ ಇರುವ ಹುದ್ದೆಗಳನ್ನು ತುಂಬಲು ಉತ್ಸುಕವಾಗಿಲ್ಲ. ‘ಗ್ಯಾರಂಟಿ ಯೋಜನೆ’ಗಳ ಮೂಲಕ ನಾಡಿನ ಜನರ ಬದುಕಿನಲ್ಲಿ ಬದಲಾವಣೆ ತಂದಿರುವುದಾಗಿ ಬಿಂಬಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನನ್ನು ‘ಗ್ಯಾರಂಟಿ ಸರ್ಕಾರ’ ಎಂದೂ ಕರೆದುಕೊಳ್ಳುತ್ತಿದೆ. ಸರ್ಕಾರದ ಗ್ಯಾರಂಟಿಗಳಲ್ಲಿ ನಿರುದ್ಯೋಗ ಭತ್ಯೆ ನೀಡುವ ‘ಯುವನಿಧಿ’ಯೂ ಒಂದಾಗಿದೆ. ಆದರೆ, ಗ್ಯಾರಂಟಿ ಯೋಜನೆಗಳ ಬದಲಾವಣೆ ದೀರ್ಘವಾದುದಲ್ಲ ಹಾಗೂ ಆ ಯೋಜನೆಗಳು ಶಾಶ್ವತ ಫಲಿತಾಂಶವನ್ನೂ ನೀಡಲಾರವು. ಬದಲಾವಣೆ ಶಾಶ್ವತವಾಗಿ ಉಳಿಯಬೇಕಾದರೆ ಯುವಜನರಿಗೆ ಉದ್ಯೋಗ ನೀಡುವುದು ಅಗತ್ಯ ಎನ್ನುವುದನ್ನು ಸರ್ಕಾರ ಮರೆಯಬಾರದು. ಒಂದು ಉದ್ಯೋಗ ಇಡೀ ಕುಟುಂಬದ ದಿಕ್ಕುದೆಸೆ ಬದಲಿಸುವ ಸಾಮರ್ಥ್ಯ ಹೊಂದಿರುತ್ತದೆ. ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯನ್ನು ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನವೂ ನಡೆದಂತಿದೆ. ಇಂಥ ಅಸೂಕ್ಷ್ಮ ನಡವಳಿಕೆ ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ. ಪ್ರತಿಭಟನಾಕಾರರ ಭಾವನೆಗಳಿಗೆ ಸರ್ಕಾರ ಸಹಾನುಭೂತಿಯಿಂದ ಸ್ಪಂದಿಸಬೇಕು.
ನೇಮಕಾತಿ ಪ್ರಕ್ರಿಯೆ ಮುಂದೆ ಹೋದಷ್ಟೂ ಉದ್ಯೋಗಾಕಾಂಕ್ಷಿಗಳ ಹತಾಶೆ ಹೆಚ್ಚುತ್ತದೆ, ಅವರನ್ನು ನೆಚ್ಚಿಕೊಂಡ ಕುಟುಂಬಗಳ ಸಂಕಷ್ಟವೂ ಮುಂದುವರಿಯುತ್ತದೆ. ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳಲು ರಾಜಕೀಯ ಪಕ್ಷಗಳು ನೇರ ಹೊಣೆಯಾಗಿವೆ. ಖಾಲಿ ಹುದ್ದೆಗಳನ್ನು ತುಂಬುವುದು ಹಾಗೂ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಯಾವ ಪಕ್ಷಕ್ಕೂ ಆದ್ಯತೆಯ ವಿಷಯವಾಗಿಲ್ಲ. ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಭರ್ತಿ ಆಗದಿರುವುದರಲ್ಲಿ ಆಡಳಿತ ಪಕ್ಷದಷ್ಟೇ ವಿರೋಧಪಕ್ಷದ ಹೊಣೆಗಾರಿಕೆಯೂ ಇದೆ. ನೇಮಕಾತಿಗಳು ನನೆಗುದಿಗೆ ಬಿದ್ದಿರುವುದಕ್ಕೆ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ರಾಜ್ಯ ಬಿಜೆಪಿ, ಅದೇ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಕೇಳುವುದಿಲ್ಲ. ಯುವಜನರನ್ನು ಓಟ್‌ಬ್ಯಾಂಕ್ ರೂಪದಲ್ಲಷ್ಟೇ ನೋಡುವ ರಾಜಕೀಯ ಪಕ್ಷಗಳು, ನಿರುದ್ಯೋಗದ ಸಮಸ್ಯೆಯನ್ನು ಮರೆಮಾಚಲಿಕ್ಕಾಗಿ ಯುವಜನರನ್ನು ದಾರಿತಪ್ಪಿಸಲು ಪ್ರಯತ್ನಿಸಿವೆ. ನಿರುದ್ಯೋಗ ಸಮಸ್ಯೆ ಆರ್ಥಿಕ ಸಮಸ್ಯೆಯಾಗಿಯಷ್ಟೇ ಉಳಿಯದೆ ಸಾಮಾಜಿಕ ಬಿಕ್ಕಟ್ಟಾಗಿಯೂ ಪರಿಣಮಿಸಿರುವ ಸಂದರ್ಭದಲ್ಲಿ, ವಿಭಜಕ ರಾಜಕಾರಣಕ್ಕಿಂತಲೂ ಜೀವನ ನಿರ್ವಹಣೆಗೆ ಉದ್ಯೋಗ ಅಗತ್ಯ ಎನ್ನುವ ಅರಿವು ಜಾಗೃತಗೊಂಡಿರುವ ರೂಪದಲ್ಲೂ ಧಾರವಾಡದಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ನೋಡಬಹುದಾಗಿದೆ. ಒಳಮೀಸಲಾತಿ ಕಾರಣದಿಂದಾಗಿ ನೇಮಕಾತಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು; ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯೊಳಗೆ ಪಾರದರ್ಶಕವಾಗಿ ತುಂಬಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರ ಮಾತು ಆದಷ್ಟು ಬೇಗ ಕ್ರಿಯೆಯಾಗಿ ಬದಲಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.