ADVERTISEMENT

ಸಂಪಾದಕೀಯ | ಹಾಲು, ವಿದ್ಯುತ್‌ ದರ ಏರಿಕೆ; ಗ್ರಾಹಕರಿಗೆ ಪೆಟ್ಟಿನ ಮೇಲೆ ಪೆಟ್ಟು

ಸಂಪಾದಕೀಯ
Published 29 ಮಾರ್ಚ್ 2025, 0:30 IST
Last Updated 29 ಮಾರ್ಚ್ 2025, 0:30 IST
   
ದರ ಏರಿಕೆ ನಿರ್ಧಾರವನ್ನು ಕೈಬಿಟ್ಟು ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮಾದರಿ ನಡೆಯನ್ನು ಸರ್ಕಾರ ಆಯ್ಕೆ ಮಾಡಿಕೊಳ್ಳಬೇಕು

ರಾಜ್ಯದಲ್ಲಿ ಹಾಲು ಮತ್ತು ವಿದ್ಯುತ್‌ ದರ ಏಕಕಾಲಕ್ಕೆ ಹೆಚ್ಚಳವಾಗಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಹಾಲು ಮತ್ತು ಮೊಸರಿಗೆ ಪ್ರತಿ ಲೀಟರ್‌ಗೆ ₹ 4ರಷ್ಟು ಹೆಚ್ಚಳ ಮಾಡಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಮತ್ತು ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳು ವಿದ್ಯುತ್‌ ದರ ಪರಿಷ್ಕರಣೆ ಕೋರಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ತನ್ನ ತೀರ್ಮಾನವನ್ನು ಪ್ರಕಟಿಸಿದೆ.

ವಿದ್ಯುತ್‌ ಬಳಕೆದಾರರು ಮಂಜೂರಾತಿ ಪಡೆದ ಲೋಡ್‌ನ ಪ್ರಮಾಣಕ್ಕೆ ಅನುಗುಣವಾಗಿ ನಿಗದಿತ ಶುಲ್ಕವನ್ನು ಹೆಚ್ಚಳ ಮಾಡುವುದಕ್ಕೆ ಆಯೋಗ ಒಪ್ಪಿಗೆ ಸೂಚಿಸಿದೆ. ಪ್ರತಿ ಕಿಲೊವಾಟ್‌ ಲೋಡ್‌ಗೆ ₹ 25ರಂತೆ ನಿಗದಿತ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಗೃಹ ಬಳಕೆಯ ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು 10 ಪೈಸೆಯಷ್ಟು ಕಡಿಮೆ ಮಾಡಲಾಗಿದೆ. ವಿದ್ಯುತ್‌ ದರ ಇಳಿಕೆ ಮಾಡಿದಂತೆ ಬಿಂಬಿಸಿ ಜನರ ಮೇಲೆ ಭಾರಿ ಹೊರೆಯನ್ನು ಹೊರಿಸುವ ಈ ಕ್ರಮ ಸ್ವೀಕಾರಾರ್ಹವಲ್ಲ. ವಿದ್ಯುತ್‌ ಪ್ರಸರಣ ಮತ್ತು ಸರಬರಾಜು ನೌಕರರ ಪಿಂಚಣಿ ಹಾಗೂ ಗ್ರಾಚ್ಯುಟಿಗೆ ಸರ್ಕಾರ ಭರಿಸಬೇಕಾದ ಪಾಲನ್ನು ಗ್ರಾಹಕರಿಗೆ ವರ್ಗಾಯಿಸುವ ಪ್ರಸ್ತಾವವನ್ನು ಆಯೋಗವು ಕಳೆದ ವಾರ ಅನುಮೋದಿಸಿತ್ತು. ಇದರಿಂದಾಗಿ ಗ್ರಾಹಕರು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚುವರಿಯಾಗಿ ತೆರಬೇಕಾಗಿದೆ.  

ಅಗತ್ಯ ವಸ್ತುಗಳು, ಸರಕು ಮತ್ತು ಸೇವೆಗಳ ದರ ಏರಿಕೆಯ ಬಿಸಿಯಲ್ಲಿ ಬೇಯುತ್ತಿರುವ ಸಾರ್ವಜನಿಕರನ್ನು ಹಾಲು ಮತ್ತು ವಿದ್ಯುತ್‌ ದರ ಹೆಚ್ಚಳದ ತೀರ್ಮಾನಗಳು ಮತ್ತಷ್ಟು ಸಂಕಷ್ಟಕ್ಕೆ ದೂಡಲಿವೆ. ಅಗತ್ಯ ವಸ್ತುಗಳ ದರ ನಿರಂತರವಾಗಿ ಏರುಮುಖದಲ್ಲೇ ಇದೆ. ಇದರಿಂದಾಗಿ ಕಡಿಮೆ ಆದಾಯದ ಜನಸಮೂಹವು ಆರ್ಥಿಕ ಸಂಕಷ್ಟದಲ್ಲೇ ಜೀವನ ಸಾಗಿಸಬೇಕಾದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸಹಕಾರಿ ವಲಯದ ಕೆಎಂಎಫ್‌ ಹಾಲು ಮತ್ತು ಮೊಸರಿನ ದರ ಹೆಚ್ಚಿಸಿದ್ದರೆ, ರಾಜ್ಯ ಸರ್ಕಾರಿ ಸ್ವಾಮ್ಯದ ಕೆಪಿಟಿಸಿಎಲ್‌ ಹಾಗೂ ಎಸ್ಕಾಂಗಳು ವಿದ್ಯುತ್‌ ದರ ಹೆಚ್ಚಿಸಿವೆ. ಈ ತೀರ್ಮಾನಗಳು ರಾಜ್ಯದ ಬಹುಪಾಲು ಜನರನ್ನು ಆರ್ಥಿಕವಾಗಿ ಬಾಧಿಸಲಿವೆ. 2023ರ ಜುಲೈನಿಂದ ಈಚೆಗೆ ಮೂರನೇ ಬಾರಿಗೆ ಹಾಲು ಮತ್ತು ಮೊಸರಿನ ದರವನ್ನು ಕೆಎಂಎಫ್‌ ಹೆಚ್ಚಿಸಿದೆ.

ADVERTISEMENT

ಈ ಅವಧಿಯಲ್ಲಿ ಪ್ರತಿ ಲೀಟರ್‌ ಹಾಲು ಮತ್ತು ಮೊಸರಿನ ದರದಲ್ಲಿ ₹ 7ರಷ್ಟು ಏರಿಕೆ ಮಾಡಲಾಗಿದೆ. ಹಾಲು ಮತ್ತು ಮೊಸರು ಬಹುತೇಕ ಕುಟುಂಬಗಳ ನಿತ್ಯ ಬಳಕೆಯ ಉತ್ಪನ್ನಗಳು. ಅಪೌಷ್ಟಿಕತೆ ನಿವಾರಣೆಯಲ್ಲೂ ಇವುಗಳ ಪಾತ್ರ ಗಣನೀಯ. ಇವುಗಳ ದರವನ್ನು ನಿರಂತರವಾಗಿ ಏರಿಕೆ ಮಾಡುತ್ತಾ, ಜನರ ಕೈಗೆಟುಕದಂತೆ ಮಾಡುವ ನಿರ್ಧಾರವು ಜನಹಿತಕ್ಕೆ ವಿರುದ್ಧವಾದುದು. ದರ ಏರಿಕೆಯ ಪೂರ್ಣ ಮೊತ್ತವನ್ನು ಹಾಲು ಉತ್ಪಾದಕರಿಗೇ ವರ್ಗಾವಣೆ ಮಾಡುತ್ತಿರುವುದಾಗಿ ರಾಜ್ಯ ಸರ್ಕಾರ ಮತ್ತು ಕೆಎಂಎಫ್‌ ಸಮರ್ಥಿಸಿಕೊಳ್ಳಬಹುದು. ಆದರೆ, ರಿಯಾಯಿತಿ ದರದಲ್ಲಿ ಪಶು ಆಹಾರ ಒದಗಿಸುವ ಮತ್ತು ಬೇರೆ ರೂಪದಲ್ಲಿ ಸಹಾಯಧನ ನೀಡುವ ಮೂಲಕ ಸರ್ಕಾರವೇ ನೆರವಾಗಲು ಅವಕಾಶ ಇದೆ. ಆ ಹೊರೆಯನ್ನು ದರ ಹೆಚ್ಚಳದ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಜನಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ದೂಡುವಂತಹ ನಿರ್ಧಾರ.

ಕೆಎಂಎಫ್‌ ಹಾಲು ಮತ್ತು ಮೊಸರನ್ನು ಮಾತ್ರ ಮಾರಾಟ ಮಾಡುತ್ತಿಲ್ಲ. ಬೆಣ್ಣೆ, ತುಪ್ಪ, ಚೀಸ್‌ ಸೇರಿದಂತೆ ಹಾಲಿನ ಉಪಉತ್ಪನ್ನ ಗಳನ್ನೂ ಉತ್ಪಾದಿಸಿ, ಮಾರಾಟ ಮಾಡುತ್ತಿದೆ. ಉಪಉತ್ಪನ್ನಗಳ ಮಾರಾಟದಲ್ಲಿನ ಲಾಭಾಂಶವನ್ನು ರೈತರಿಗೆ ವರ್ಗಾಯಿಸುವ ಮೂಲಕ ಅವರ ಹಿತ ಕಾಯಬಹುದು. ಸಂಬಂಧಪಟ್ಟವರು ಈ ದಿಸೆಯಲ್ಲಿ ಗಂಭೀರವಾಗಿ ಯೋಚಿಸಬೇಕಿದೆ.

ವಿದ್ಯುತ್‌ ದರ ಹೆಚ್ಚಳದ ವಿಚಾರದಲ್ಲೂ ಗ್ರಾಹಕರ ಮೇಲೆ ನಿರಂತರವಾಗಿ ಗದಾಪ್ರಹಾರ ಆಗುತ್ತಲೇ ಇದೆ. ಪ್ರತಿ ವರ್ಷವೂ ವಿದ್ಯುತ್‌ ದರ ಪರಿಷ್ಕರಣೆ ನಡೆಯುತ್ತಿದೆ. ಕೆಪಿಟಿಸಿಎಲ್‌ ಮತ್ತು ವಿದ್ಯುತ್‌ ಸರಬರಾಜು ಕಂಪನಿಗಳು ಅನುಭವಿಸುತ್ತಿರುವ ನಷ್ಟವನ್ನು ಗ್ರಾಹಕರಿಗೆ ವರ್ಗಾಯಿಸುವ ತೀರ್ಮಾನಗಳೇ ಯಾವಾಗಲೂ ಹೊರಬೀಳುತ್ತವೆ. ಈ ಬಾರಿ ಅದರಲ್ಲೂ ಭಿನ್ನ ಮಾರ್ಗವೊಂದನ್ನು ಆಯ್ಕೆ ಮಾಡಿಕೊಳ್ಳ ಲಾಗಿದೆ. ಮಂಜೂರಾದ ಲೋಡ್‌ ಆಧಾರದಲ್ಲಿ ನಿಗದಿತ ಶುಲ್ಕ ಹೆಚ್ಚಳ ಮಾಡಿರುವುದರಿಂದ ಗ್ರಾಹಕರು ಹೆಚ್ಚು ವಿದ್ಯುತ್‌ ಬಳಕೆ ಮಾಡದಿದ್ದರೂ ದುಬಾರಿ ಮೊತ್ತ ಪಾವತಿಸಬೇಕಾಗುತ್ತದೆ.

ಈಗ ‘ಗೃಹ ಜ್ಯೋತಿ’ ಯೋಜನೆಯಡಿ ರಾಜ್ಯದ ಹೆಚ್ಚಿನ ಕುಟುಂಬಗಳು ಉಚಿತವಾಗಿ ವಿದ್ಯುತ್‌ ಪಡೆಯುತ್ತಿವೆ. ಯೋಜನೆ ಜಾರಿಯಲ್ಲಿ ಇರುವವರೆಗೂ ಈ ಹೊರೆ ಅವರನ್ನು ಬಾಧಿಸದೇ ಇರಬಹುದು. ಆದರೆ, ಗೃಹ ಜ್ಯೋತಿ ಯೋಜನೆಯ ಅನುಕೂಲ ಪಡೆಯದ ಕುಟುಂಬಗಳು, ವಾಣಿಜ್ಯ, ಕೈಗಾರಿಕೆ ಮತ್ತು ಇತರ ವಲಯದ ಗ್ರಾಹಕರಿಗೆ ಇದು ದೊಡ್ಡ ಹೊರೆಯಾಗಿ ಪರಿಣಮಿಸಲಿದೆ. ಪ್ರಸರಣ ನಷ್ಟ, ವಿದ್ಯುತ್‌ ಸೋರಿಕೆ ತಡೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಬಾಕಿ ಇರುವ ಸಾವಿರಾರು ಕೋಟಿ ರೂಪಾಯಿಗಳ ಮೊತ್ತದ ವಿದ್ಯುತ್‌ ಶುಲ್ಕ ವಸೂಲಾತಿಯಂತಹ ಕ್ರಮಗಳ ಮೂಲಕ ಕೆಪಿಟಿಸಿಎಲ್‌ ಹಾಗೂ ಎಸ್ಕಾಂಗಳನ್ನು ನಷ್ಟದಿಂದ ಹೊರ ತರುವುದಕ್ಕೆ ಆದ್ಯತೆ ನೀಡಬೇಕು. ಆಡಳಿತ ವೆಚ್ಚವನ್ನು ತಗ್ಗಿಸುವ ಮೂಲಕ ಈ ಸಂಸ್ಥೆಗಳನ್ನು ಸಶಕ್ತ
ಗೊಳಿಸಬೇಕು. ದರ ಏರಿಕೆ ನಿರ್ಧಾರವನ್ನು ಕೈಬಿಟ್ಟು ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮಾದರಿ ನಡೆಯನ್ನು ಸರ್ಕಾರ ಆಯ್ಕೆ ಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.