
ಜಮ್ಮು ಮತ್ತು ಕಾಶ್ಮೀರ ತಂಡ ‘ರಣಜಿ ಚಾಂಪಿಯನ್’ ಆಗಿ ಹೊರಹೊಮ್ಮಿರುವುದು ಕ್ರೀಡಾಸಾಧನೆ ಮಾತ್ರವಾಗಿರದೆ, ಸಂಘರ್ಷದ ನೆಲದಲ್ಲಿ ಮೂಡಿರುವ ಸೌಹಾರ್ದದ ಚಿಗುರೂ ಆಗಿದೆ.
ದೇಶಿ ಕ್ರಿಕೆಟ್‌ನ ಅತ್ಯಂತ ಬಲಾಢ್ಯ ತಂಡಗಳಲ್ಲಿ ಒಂದಾಗಿರುವ ಕರ್ನಾಟಕದ ಸವಾಲನ್ನು ಅತ್ಯಂತ ಸುಲಭವಾಗಿ ಮೆಟ್ಟಿ ನಿಂತ ಜಮ್ಮು ಮತ್ತು ಕಾಶ್ಮೀರ ತಂಡವು ರಣಜಿ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಹೊಸ ‘ರಾಜ’ನಾಗಿ ಹೊರಹೊಮ್ಮಿದೆ. ಭಯೋತ್ಪಾದನೆಯ ಅಟ್ಟಹಾಸ ಮತ್ತು ಅದನ್ನು ಹಿಮ್ಮೆಟ್ಟಿಸಲು ನಡೆದ ಸೈನ್ಯದ ಬಲಪ್ರಯೋಗದಿಂದ ನಲುಗಿ ಹೋಗಿರುವ, ಮಾನಸಿಕವಾಗಿ ಜರ್ಜರಿತವಾಗಿರುವ ಕಾಶ್ಮೀರ ಕಣಿವೆಯ ಪಾಲಿಗೆ ಜೀವನೋತ್ಸಾಹಕ್ಕೆ ಕಾರಣವಾಗುವಂತಹ ಚಾರಿತ್ರಿಕ ಸಾಧನೆ ಇದು. ಹೊಳೆಯುವ ಟ್ರೋಫಿಯನ್ನು ಹೊತ್ತೊಯ್ದಿರುವ ಕಾಶ್ಮೀರವನ್ನು ದೇಶ ಭಿನ್ನ ದೃಷ್ಟಿಕೋನದಿಂದ ನೋಡಲು ರಣಜಿಯ ಗೆಲುವು ಪ್ರೇರಣೆ ಆಗುವಂತಿದೆ. ರಾಜಕೀಯವಾಗಿ ರಾಜ್ಯದ ಸ್ಥಾನಮಾನವನ್ನೇ ಕಳೆದುಕೊಂಡು ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರವು, ತಾನೀಗ ಕ್ರಿಕೆಟ್‌ನ ಅಂಬೆಗಾಲು ಇಡುತ್ತಿರುವ ಕೂಸಲ್ಲ, ಬದಲಾಗಿ ದೇಶಿ ಕ್ರಿಕೆಟ್ ಸಾಮ್ರಾಟ ಎಂದು ಸಾರಿ ಹೇಳಿದೆ. ಕಳೆದ ನಾಲ್ಕು ದಶಕಗಳಿಂದ ಎಲ್ಲಿ ಗನ್‌ಗಳು, ಬಾಂಬ್‌ಗಳೇ ಹೆಚ್ಚಾಗಿ ಮಾತನಾಡುತ್ತಿದ್ದವೋ, ಎಲ್ಲಿ ಶಾಲಾ–ಕಾಲೇಜುಗಳು ಹೆಚ್ಚಿನ ಅವಧಿಗೆ ಮುಚ್ಚಿರುತ್ತಿದ್ದವೋ, ಎಲ್ಲಿ ಅರಳಬೇಕಿದ್ದ ಪ್ರತಿಭೆಗಳು ಆಘಾತಕ್ಕೆ ಒಳಗಾಗಿದ್ದವೋ ಅಲ್ಲಿನ ನೆಲದಲ್ಲಿ ಬರೆಯಲಾದ ಯಶೋಗಾಥೆಗೆ ದೊಡ್ಡ ಕಿಮ್ಮತ್ತಿದೆ. ಇನ್ನೇನು ಶತಮಾನೋತ್ಸವ ಆಚರಿಸಿಕೊಳ್ಳಲು ಸಜ್ಜಾಗುತ್ತಿರುವ ರಣಜಿ ಕ್ರಿಕೆಟ್ ಟೂರ್ನಿಗೆ (ಎಂಟು ವರ್ಷಗಳಷ್ಟೇ ಬಾಕಿ), 67 ವರ್ಷಗಳ ಹಿಂದೆ ಪ್ರವೇಶ ಪಡೆದಿದ್ದ ಜಮ್ಮು ಮತ್ತು ಕಾಶ್ಮೀರ ತಂಡವು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಮೊದಲ ಯತ್ನದಲ್ಲೇ ದೇಶ ತನ್ನತ್ತ ಬೆರಗಿನಿಂದ ನೋಡುವಂತೆ ಮಾಡಿತು. ಎಂಟು ಸಲದ ಚಾಂಪಿಯನ್ ಕರ್ನಾಟಕ ತಂಡವನ್ನು ಫೈನಲ್‌ನಲ್ಲಿ ಸೋಲಿಸಿದ ಆ ತಂಡ, ಫೈನಲ್‌ವರೆಗಿನ ಹಾದಿಯಲ್ಲಿ ಮಾಜಿ ಚಾಂಪಿಯನ್‌ಗಳಾದ ಐದು ತಂಡಗಳನ್ನು –ದೆಹಲಿ, ಹೈದರಾಬಾದ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ– ಪರಾಭವಗೊಳಿಸಿದೆ. ಈ ದಾಖಲೆಯೇ ಆ ತಂಡದ ಯಶಸ್ಸಿನ ಹಿರಿಮೆ ಏನೆಂಬುದನ್ನು ಢಾಳಾಗಿ ಹೇಳುತ್ತದೆ.
ಭಾರತೀಯ ಕ್ರಿಕೆಟ್‌ನ ಮುಕುಟ ಮಣಿಯಾಗಿ ಹೊಳೆಯುತ್ತಿರುವ ಜಮ್ಮು ಮತ್ತು ಕಾಶ್ಮೀರ ತಂಡದ ಸಾಧನೆಯ ಕಡೆಗೆ ಹೊರಳುನೋಟ ಬೀರಿದರೆ ತಂಡದ ಸಾಂಘಿಕ ಯತ್ನ ಎದ್ದು ಕಾಣುತ್ತದೆ. ಅಕೀಬ್ ನಬಿ ದಾರ್ ಎಂಬ ತಾರೆಯ ಮಿಂಚೂ ಅಲ್ಲಿ ಹರಿಯುತ್ತದೆ. ಹತ್ತು ಪಂದ್ಯಗಳಿಂದ 60 ವಿಕೆಟ್ ಪಡೆದ ಈ ವೇಗಿ, ನಿಸ್ಸಂಶಯವಾಗಿ ಪ್ರಸಕ್ತ ರಣಜಿ ಋತು ಕಂಡ ಅದ್ಭುತ ಪ್ರತಿಭೆ. ಸರಾಸರಿ 12.56 ರನ್‌ಗಳಿಗೆ ಒಂದರಂತೆ ವಿಕೆಟ್ ಕಿತ್ತಿರುವ, ಓವರ್‌ಗೆ 2.65 ರನ್ ಮಾತ್ರ ನೀಡಿರುವ ಈ ಬೌಲರ್, ತಂಡಕ್ಕೆ ಅಗತ್ಯವಾದಾಗ ಬ್ಯಾಟ್‌ನಿಂದಲೂ ಕಾಣಿಕೆ ನೀಡಿದ್ದಾರೆ. ಪಂದ್ಯದ ದಿಕ್ಕನ್ನೇ ತಿರುಗಿಸಬಲ್ಲ ಅಕೀಬ್ ಅವರಂತಹ ಆಟಗಾರ ಯಾವುದೇ ತಂಡಕ್ಕೂ ದೊಡ್ಡ ಆಸ್ತಿ. ಅಕೀಬ್ ಅವರಿಗೆ ಈಗ 29 ವರ್ಷ. ಬೇರೆ ರಾಜ್ಯದ ಹುಡುಗನಾಗಿದ್ದರೆ ಈ ವೇಳೆಗೆ ಅವರು ಸ್ಟಾರ್‌ಗಿರಿಯಲ್ಲಿ ಮಿಂದೇಳುತ್ತಿದ್ದರು. ಕಾಶ್ಮೀರದ ಕಣಿವೆಯಿಂದ ಕ್ರಿಕೆಟ್ ಕ್ಷಿತಿಜದಲ್ಲಿ ಕಾಣಿಸಿಕೊಳ್ಳಲೇ ಈ ಅದ್ಭುತ ಬೌಲರ್‌ನಿಗೆ ಇಷ್ಟು ವರ್ಷಗಳು ಬೇಕಾದವು. ಬ್ಯಾಟಿಂಗ್‌ನಲ್ಲಿ ಅಬ್ದುಲ್ ಸಮದ್ ಸ್ಥಿರವಾದ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಪಾರಸ್ ಡೋಗ್ರಾ ತಂಡಕ್ಕೆ ಅತ್ಯುತ್ತಮ ನಾಯಕತ್ವ ಸಿಗುವಂತೆ ಮಾಡುವ ಜತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಕಮ್ರಾನ್ ಇಕ್ಬಾಲ್ ಮತ್ತು ಶುಭಂ ಪುಂಡೀರ್ ಅವರು ತಂಡಕ್ಕೆ ಅಗತ್ಯವಾದಾಗಲೆಲ್ಲ ನೆರವಿಗೆ ಧಾವಿಸಿದರು. ಕೆ. ವಾಧ್ವಾನ್, ಅಬಿದ್ ಮುಷ್ತಾಕ್, ಎಸ್.ಪಿ. ಖಜುರಿಯಾ ಮತ್ತು ಸಾಹಿಲ್ ಲೂತ್ರಾ ಅವರ ಸಾಧನೆ ಕೂಡ ಗಮನಾರ್ಹ. ಹೀಗೆ ಜಮ್ಮು ಮತ್ತು ಕಾಶ್ಮೀರ ಒಂದು ಪರಿಪೂರ್ಣ ತಂಡವಾಗಿ ಆಡಿತು.
ಪ್ರಸಕ್ತ ಕ್ರಿಕೆಟ್ ಋತುವಿನ ಉದ್ದಕ್ಕೂ ಅಮೋಘವಾಗಿ ಆಡಿದ್ದ ಕರ್ನಾಟಕ ತಂಡಕ್ಕೆ ಫೈನಲ್ ಸೋಲು ದೊಡ್ಡ ಪಾಠ. ಟೆಸ್ಟ್ ಪಂದ್ಯಗಳಲ್ಲಿ ಆಡಿದ ಐವರು ಅನುಭವಿಗಳನ್ನು ಹೊಂದಿದ್ದರೂ ಜಮ್ಮು ಮತ್ತು ಕಾಶ್ಮೀರದ ಸವಾಲಿಗೆ ಕರ್ನಾಟಕ ತಂಡದಲ್ಲಿ ಉತ್ತರವಿರಲಿಲ್ಲ. ಬೌಲಿಂಗ್ ದಾಳಿ ಮೊನಚು ಕಳೆದುಕೊಂಡರೆ, ಅನುಭವಿ ಬ್ಯಾಟರ್‌ಗಳು ಅತಿಯಾದ ಆತ್ಮವಿಶ್ವಾಸಕ್ಕಾಗಿ ಬೆಲೆ ತೆರಬೇಕಾಯಿತು. ಆದರೆ, ಆರ್. ಸ್ಮರಣ್ (950 ರನ್), ಶ್ರೇಯಸ್ ಗೋಪಾಲ್ (48 ವಿಕೆಟ್) ಟೂರ್ನಿಯುದ್ದಕ್ಕೂ ಸ್ಥಿರವಾದ ಪ್ರದರ್ಶನ ನೀಡಿ ಗಮನ ಸೆಳೆದರು. ಸೋಲಿನಲ್ಲಿಯೂ ಸಮಾಧಾನ ಮೂಡಿಸುವ ಇಂತಹ ಸಂಗತಿಗಳು ಕರ್ನಾಟಕ ತಂಡಕ್ಕಿವೆ. ಇಡೀ ದೇಶಕ್ಕೆ ಬ್ಯಾಟ್‌ಗಳನ್ನು ಕೊಡುತ್ತಿದ್ದ ಕಾಶ್ಮೀರ ಇನ್ನು ಮುಂದೆ ಭಾರತ ತಂಡಕ್ಕೆ ಬ್ಯಾಟರ್‌ಗಳನ್ನೂ ಬೌಲರ್‌ಗಳನ್ನೂ ಕಳುಹಿಸುತ್ತದೆಂದು ನಿರೀಕ್ಷಿಸಬಹುದಾಗಿದೆ. ಅಕೀಬ್, ಅಬ್ದುಲ್, ಡೋಗ್ರಾ ಅವರಂತಹ ಆಟಗಾರರು ಭಾರತ ತಂಡಕ್ಕೆ ಸೇರ್ಪಡೆಯಾಗಲಿ; ಕ್ರೀಡಾ ಯಶೋಗಾಥೆಯ ಮುಲಾಮು ಕಣಿವೆ ನಾಡಿನ ಗಾಯಗಳನ್ನು ವಾಸಿ ಮಾಡಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.