ADVERTISEMENT

ಆಡಳಿತ ಹಳಿಗೆ ಬರಲಿ: ಸುಸ್ಥಿರ ಅಭಿವೃದ್ಧಿ ಆದ್ಯತೆಯಾಗಲಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 20:00 IST
Last Updated 29 ಜುಲೈ 2019, 20:00 IST
   

ಹದಿನಾಲ್ಕು ತಿಂಗಳ ಅವಧಿಯುದ್ದಕ್ಕೂ ಸರ್ಕಾರವನ್ನು ಉಳಿಸುವ ಹಾಗೂ ಬೀಳಿಸುವ ರಾಜಕೀಯ ಮೇಲಾಟದ ಒಂದು ಹಂತ ಕೊನೆಗೊಂಡಿದೆ. ಈಗ ಹೊಸ ಸರ್ಕಾರ ರಚನೆಯಾಗಿದೆ. 15ನೇ ವಿಧಾನಸಭೆಯ ಮೊದಲ ಕಾಲು ಭಾಗದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಎರಡನೇ ಸಲ ಮುಖ್ಯಮಂತ್ರಿಯಾಗಿದ್ದಾರೆ. ರಾಜಕೀಯದಲ್ಲಿ ಮೌಲ್ಯಗಳು ಮರೆಯಾಗಿ ಬಹುಕಾಲ ಕಳೆದುಹೋಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಹಾಗೂ ಆ ಕ್ಷಣದ ರಾಜಕೀಯ ಅನಿವಾರ್ಯಕ್ಕಾಗಿ ಜೆಡಿಎಸ್‌– ಕಾಂಗ್ರೆಸ್‌ ನಾಯಕರು ಒಟ್ಟಾಗಿ ಅಸ್ತಿತ್ವಕ್ಕೆ ತಂದಿದ್ದ ಸಮ್ಮಿಶ್ರ ಸರ್ಕಾರವು ಇದ್ದಷ್ಟು ಕಾಲವೂ ಹಂಗಿನಲ್ಲೇ ಇತ್ತು. ಎತ್ತು ಏರಿಗೆ, ಕೋಣ ನೀರಿಗೆ ಎಂಬಂತೆ ಜೋಡೆತ್ತುಗಳು ಎಂದೂ ಒಂದು ನೊಗದಡಿ ತಲೆನೂಕಿ ಸರ್ಕಾರವೆಂಬ ಬಂಡಿಯನ್ನು ಎಳೆಯಲೇ ಇಲ್ಲ. ಕೊಸರಾಡಿದ್ದೇ ಹೆಚ್ಚು. ‘ಆಪರೇಷನ್ ಕಮಲ’ದ ಕರಿಛಾಯೆಯು ಮೈತ್ರಿ ಸರ್ಕಾರದ ಬೆನ್ನಿಗೆ ಬಿದ್ದಿತ್ತು. ಮಿತ್ರಪಕ್ಷಗಳ ನಡುವಣ ಒಳಜಗಳ, ಬಿಜೆಪಿಯ ಅಧಿಕಾರ ಲಾಲಸೆಯ ನಿರಂತರ ಕಾರ್ಯಾಚರಣೆಯಿಂದಾಗಿ ರಾಜ್ಯದ ಮಾನ ಹರಾಜಾಗಿದೆ. ಒಂದು ಕಾಲದಲ್ಲಿ ಔನ್ನತ್ಯದಲ್ಲಿದ್ದ ಕರ್ನಾಟಕದ ಸಂಸದೀಯ ನಡವಳಿಕೆಗೆ ಈಗ ಮಸಿ ಅಂಟಿಕೊಂಡುಬಿಟ್ಟಿದೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮವು ಆಡಳಿತದ ಮೇಲೆ ಬಿದ್ದಿತ್ತು. ಸುಡುವ ಬರ, ನೀರಿಗೆ ಹಾಹಾಕಾರ, ಬೆಳೆಗೆ ಸಿಗದ ಯೋಗ್ಯ ಬೆಲೆಯಿಂದಾಗಿ ನಾಡಿನ ಜನರು ಕಂಗೆಟ್ಟು ನಿಡುಸುಯ್ದರೂ ಅವರ ಗೋಳು ಕೇಳುವ ಸೌಜನ್ಯವನ್ನು ಸರ್ಕಾರ ತೋರಲಿಲ್ಲ ಎಂಬ ಆರೋಪ ಇದೆ. ಅಸ್ಥಿರತೆಯ ಈ ಅಧ್ಯಾಯ ಕೊನೆಗೊಂಡು, ದಕ್ಷಿಣದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಿದ ಬಿಜೆಪಿಗೆ ಈಗ ಗುರುತರ ಹೊಣೆಯಿದೆ. ಅಧಿಕಾರಕ್ಕೆ ಏರಲೇಬೇಕು ಎಂಬ ಹಟ ಮತ್ತು ಉಮೇದಿನಿಂದ ರಾಜ್ಯದ ಚುಕ್ಕಾಣಿಯನ್ನು ಯಡಿಯೂರಪ್ಪ ಹಿಡಿದಿದ್ದಾರೆ. ರೈತರ ಪರ ಕಾಳಜಿಯನ್ನು ಪ್ರತಿ ಮಾತಿನಲ್ಲೂ ಧ್ವನಿಸುವ ಮುಖ್ಯಮಂತ್ರಿ, ಅನ್ನದಾತನ ಅಳಲು ಆಲಿಸುವ, ಬಡವರ ಹಸಿವು ನೀಗಿಸುವ, ಗರ ಬಡಿದಂತಿರುವ ರಾಜ್ಯದ ಅಭಿವೃದ್ಧಿಯ ಕನಸಿಗೆ ಜೀವ ಕೊಡುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕಿದೆ. ಇಲ್ಲದೇ ಇದ್ದರೆ, ಅವರನ್ನು ಮತ್ತು ಅವರು ಪ್ರತಿನಿಧಿಸುವ ಪಕ್ಷವನ್ನುರಾಜ್ಯದ ಜನ ಕ್ಷಮಿಸಲಾರರು.

ಸಭಾಧ್ಯಕ್ಷರಾಗಿದ್ದ ಕೆ.ಆರ್‌. ರಮೇಶ್‌ ಕುಮಾರ್‌ ಅವರು ಗೌರವಯುತವಾಗಿ ನಿರ್ಗಮಿಸಿದ್ದಾರೆ.ಪದತ್ಯಾಗಕ್ಕೆ ಮುನ್ನ ಪ್ರಜಾತಂತ್ರದ ಹಿರಿಮೆಯನ್ನು ಹೆಚ್ಚಿಸುವ ರೀತಿಯಲ್ಲಿ, ಪಕ್ಷಾಂತರ ನಿಷೇಧ ಕಾಯ್ದೆಗೆ ಸುಪ್ರೀಂ ಕೋರ್ಟ್‌ ಹೊಸ ವ್ಯಾಖ್ಯಾನ ಕೊಡಬೇಕಾದ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ. 17 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಹೀಗಾಗಿ, ನೂತನ ಸರ್ಕಾರದ ಮುಂದಿನ ಸವಾಲು–ಸಂಕಷ್ಟ ಇನ್ನೂ ಮುಗಿದಂತೆ ಕಾಣಿಸುತ್ತಿಲ್ಲ. ಮೈತ್ರಿ ಸರ್ಕಾರವನ್ನು ಕೆಡವಿ, ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪನವರ ಪ್ರತೀ ಹೆಜ್ಜೆಯ ಕೆಳಗೆ ರೇಷಿಮೆಯ ಹಾಸೇನೂ ಇಲ್ಲ. ನಡೆ–ನುಡಿಯ ಮೇಲೆ ಜನರು ಹಾಗೂ ಪಕ್ಷದ ವರಿಷ್ಠರ ಕಣ್ಗಾವಲು ಸದಾ ಇರುತ್ತದೆ. ಕೆಡಹುವ ಕೆಲಸಕ್ಕೆ ಬಳಕೆಯಾದ 17 ಶಾಸಕರು ಅನರ್ಹಗೊಂಡ ಕ್ಷೇತ್ರಗಳಲ್ಲಿ ಉಪಚುನಾವಣೆಯೆಂಬ ಕೊಂಡವನ್ನು ಬಿಜೆಪಿ ಹಾಯಬೇಕಿದೆ. 224 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸದಸ್ಯರ ಬಲ ಬೇಕು. ಶಾಸಕರು ಅನರ್ಹಗೊಂಡ ಕಾರಣ ಸದಸ್ಯರ ಸಂಖ್ಯೆ 207ಕ್ಕೆ ಕುಸಿದಿದೆ. ಬಿಜೆಪಿಯು ಈಗ 105 ಸದಸ್ಯರನ್ನು ಹೊಂದಿದೆ. ಇಷ್ಟು ಬಲ ಇಟ್ಟುಕೊಂಡು ಅಧಿಕಾರದ ಗದ್ದುಗೆಗೆ ಏರಿದ ಮುಖ್ಯಮಂತ್ರಿ, ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಬೇಕಾದರೆ ಉಪಚುನಾವಣೆಯ ಗೆಲುವಿಗೆ ಅವಿರತ ಶ್ರಮ ಹಾಕಬೇಕಾಗಿದೆ. ಕನಿಷ್ಠ 10 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದಿದ್ದರೆ ಅಸ್ಥಿರತೆಯೆಂಬ ಪೆಡಂಭೂತ ಮತ್ತೆ ಸರ್ಕಾರದ ಬೆನ್ನಿಗೆ ಏರಲಿದೆ. ಮೈತ್ರಿ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಹಲವಾರು ಚುನಾವಣೆಗಳು ಎದುರಾದವು. ಇವು, ಮೈತ್ರಿ ಸರ್ಕಾರಕ್ಕೆ ಪ್ರತಿಷ್ಠೆಯಾಗಿದ್ದವೇ ವಿನಾ ಅಳಿವು ಉಳಿವನ್ನು ನಿರ್ಣಯಿಸುವ ಸಂಗತಿ ಆಗಿರಲಿಲ್ಲ. ಈಗ ಬಂದಿರುವ ಸರ್ಕಾರ ಮುಖಾಮುಖಿಯಾಗಬೇಕಿರುವ ಚುನಾವಣೆ, ಸರ್ಕಾರದ ಹಣೆಬರಹವನ್ನು ಬರೆಯಲಿದೆ. ತಮಗೆ ಕೈಕೊಟ್ಟು ಹೋಗಿರುವವರಿಗೆ ಪಾಠ ಕಲಿಸುವ ಜಿದ್ದಿನಲ್ಲಿ ಕಾಂಗ್ರೆಸ್–ಜೆಡಿಎಸ್‌ ನಾಯಕರು ಇದ್ದಾರೆ. ಸರ್ಕಾರ ಕೆಡವಿರುವವರಿಗೆ ಬುದ್ಧಿ ಕಲಿಸಲು ಮಿತ್ರಕೂಟ ಕೈಜೋಡಿಸಬಹುದು. ಉಪಚುನಾವಣೆಯ ಪರಿಷೆ ಮುಗಿಯುವವರೆಗೆ, ಅಂದರೆ ಸರಿಸುಮಾರು ಆರು ತಿಂಗಳ ಕಾಲ ಸರ್ಕಾರದ ಸ್ಥಿತಿ ತೂಗುಯ್ಯಾಲೆಯಲ್ಲೇ ಇರುತ್ತದೆ. ರಾಜಕೀಯ ಮೇಲಾಟ ಅಷ್ಟಕ್ಕೇ ನಿಲ್ಲದು. ಜಿಲ್ಲಾ ಪಂಚಾಯಿತಿ, ನಗರಪಾಲಿಕೆಗಳ ಚುನಾವಣೆಯ ಮತ್ತೊಂದು ಮಜಲು ಸರ್ಕಾರಕ್ಕೆ ಸವಾಲಿನ ರೂಪದಲ್ಲಿ ಎರಗಲಿದೆ. ಹೀಗೆ ಮೇಲಿಂದ ಮೇಲೆ ಬರಲಿರುವ ಚುನಾವಣೆಗಳಿಗೆ ಮುನ್ನ ಆಡಳಿತವನ್ನು ಸರಿದಾರಿಗೆ ತಂದು, ಜನಪರ ಆಡಳಿತ ನೀಡುವ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಹೊಣೆಗಾರಿಕೆ ನೂತನ ಮುಖ್ಯಮಂತ್ರಿ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT