ADVERTISEMENT

ಸಂಪಾದಕೀಯ | ಲೋಕಸಭಾ ಕ್ಷೇತ್ರ ಮರುವಿಂಗಡಣೆ; ಎಲ್ಲರೂ ಒಪ್ಪುವ ಸೂತ್ರ ಸಿದ್ಧವಾಗಲಿ

ಸಂಪಾದಕೀಯ
Published 26 ಮಾರ್ಚ್ 2025, 0:30 IST
Last Updated 26 ಮಾರ್ಚ್ 2025, 0:30 IST
   
ಜನಸಂಖ್ಯೆಯನ್ನು ಮಾತ್ರವೇ ಆಧಾರವಾಗಿ ಇರಿಸಿಕೊಂಡು ಕ್ಷೇತ್ರಗಳ ಮರುವಿಂಗಡಣೆ ನಡೆಸಿದಾಗ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗುತ್ತದೆ ಎಂಬ ಆತಂಕದಲ್ಲಿ ಹುರುಳಿದೆ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ವಿಚಾರವಾಗಿ ಚರ್ಚಿಸಲು ವಿವಿಧ ರಾಜ್ಯ ಸರ್ಕಾರಗಳ ಪ್ರಮುಖರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಚೆನ್ನೈನಲ್ಲಿ ಕಳೆದ ವಾರ ಸಭೆ ಸೇರಿದ್ದರು. ಇವರಲ್ಲಿ ದಕ್ಷಿಣದ ರಾಜ್ಯಗಳಿಗೆ ಸೇರಿದ ಪ್ರಮುಖರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈಗಿನ ಜನಸಂಖ್ಯೆಯನ್ನು ಆಧರಿಸಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಬಗ್ಗೆ ದಕ್ಷಿಣದ ರಾಜ್ಯಗಳಲ್ಲಿ ಇರುವ ಕಳವಳವನ್ನು ಈ ಸಭೆಯು ಪ್ರಮುಖವಾಗಿ ಪ್ರಸ್ತಾಪಿಸಿದೆ.

ನ್ಯಾಯಸಮ್ಮತ ಮರುವಿಂಗಡಣೆಗಾಗಿ ಜಂಟಿ ಕ್ರಿಯಾ ಸಮಿತಿ ಹೆಸರಿನಲ್ಲಿ ನಡೆದ ಮೊದಲ ಸಭೆ ಇದು. ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಪಂಜಾಬ್‌ನ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ಉಪಮುಖ್ಯಮಂತ್ರಿ, ಒಡಿಶಾ, ತೆಲಂಗಾಣದ ರಾಜಕೀಯ ನಾಯಕರು ಸಭೆಯಲ್ಲಿ ಇದ್ದರು. 1971ರ ಜನಗಣತಿಯನ್ನು ಆಧರಿಸಿದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಇನ್ನೂ 25 ವರ್ಷ ಬದಲಾಯಿಸಬಾರದು ಎಂದು ಸಭೆಯು ಒತ್ತಾಯಿಸಿದೆ. ಸಭೆಯ ಆತಿಥ್ಯ ವಹಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಜಂಟಿ ಕ್ರಿಯಾ ಸಮಿತಿಯು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯನ್ನು ವಿರೋಧಿಸುತ್ತಿಲ್ಲ; ಬದಲಿಗೆ, ‘ಜನಸಂಖ್ಯೆಯ ಹೆಚ್ಚಳವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಿರುವ ರಾಜ್ಯಗಳನ್ನು ಶಿಕ್ಷೆಗೆ ಗುರಿಪಡಿಸದ ರೀತಿಯಲ್ಲಿ ನ್ಯಾಯಸಮ್ಮತವಾಗಿ ಮರುವಿಂಗಡಣೆ ನಡೆಯಬೇಕು ಎಂಬ ಆಗ್ರಹ ಮಂಡಿಸಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ, ಕ್ಷೇತ್ರಗಳ ಮರುವಿಂಗಡಣೆ ಕಾರ್ಯವು ‘ನ್ಯಾಯಸಮ್ಮತವಾಗಿ ನಡೆದರೆ’, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯನ್ನು 25 ವರ್ಷ ತಡೆಹಿಡಿಯಬೇಕು ಎಂಬ ಆಗ್ರಹವನ್ನು ಮಂಡಿಸುವುದಿಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ‘ನ್ಯಾಯಸಮ್ಮತವಾಗಿ’ ನಡೆಯುವುದು ಅಂದರೆ ಏನು ಎನ್ನುವ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಖಚಿತ. ಆದರೆ, ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮ ಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ರಾಜ್ಯಗಳಿಗೆ ಲೋಕಸಭೆಯಲ್ಲಿ ಪ್ರಾತಿನಿಧ್ಯ ಕಡಿಮೆ ಮಾಡಿ, ಅವುಗಳಿಗೆ ಶಿಕ್ಷೆ ವಿಧಿಸಬಾರದು ಎಂಬುದನ್ನು ಸಭೆಯು ಸ್ಪಷ್ಟವಾಗಿ ಹೇಳಿದೆ. ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳು ಹೊಂದಿರುವ ಸಂಖ್ಯಾ ಬಲವು ಕಡಿಮೆ ಆಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭರವಸೆ ನೀಡಿದ್ದಾರೆ.

ADVERTISEMENT

ಆದರೆ, ಅವರ ಈ ಮಾತು ಸಮಾಧಾನ ಮೂಡಿಸುವಂತೆ ಇಲ್ಲ. ಏಕೆಂದರೆ, ಜನಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿರುವ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಹೆಚ್ಚಳವಾದರೆ, ಆ ರಾಜ್ಯಗಳ ಸಂಖ್ಯಾ ಬಲಕ್ಕೆ ಹೋಲಿಸಿದಾಗ ದಕ್ಷಿಣದ ರಾಜ್ಯಗಳ ಸಂಖ್ಯಾ ಬಲವು ಕುಗ್ಗುತ್ತದೆ. ಸಮಸ್ಯೆಯ ತಿರುಳು ಇರುವುದೇ ಇಲ್ಲಿ. ಇದನ್ನು ಪರಿಹರಿಸುವ ಕೆಲಸ ಆಗಬೇಕು. ಇಲ್ಲವಾದರೆ, ಕ್ಷೇತ್ರ ಮರುವಿಂಗಡಣೆ ಕಾರ್ಯವು ದೇಶದ ರಾಜಕೀಯ ಮತ್ತು ಸಾಂವಿಧಾನಿಕ ಸಂರಚನೆಯ ಬಹುಮುಖ್ಯ ಭಾಗವಾದ ಒಕ್ಕೂಟ ವ್ಯವಸ್ಥೆಯಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತದೆ. ಅದರಿಂದ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಪರಿಣಾಮಗಳು ಉಂಟಾಗುತ್ತವೆ.

ಕೇಂದ್ರ ಗೃಹ ಸಚಿವರ ಮಾತುಗಳನ್ನು ಹೊರತುಪಡಿಸಿದರೆ, ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ತಾನು ಏನು ಮಾಡಲು ಬಯಸಿದ್ದೇನೆ ಎಂಬುದನ್ನು ಕೇಂದ್ರವು ವಿವರಿಸಿಲ್ಲ. ಜನಗಣತಿಯನ್ನು ನಡೆಸುವಲ್ಲಿ ಆಗಿರುವ ವಿಳಂಬವು ಸರ್ಕಾರದ ಉದ್ದೇಶಗಳ ಬಗ್ಗೆ ಒಂದಿಷ್ಟು ತಳಮಳ ಸೃಷ್ಟಿಸಿದೆ. ಕೇಂದ್ರ ಸರ್ಕಾರದ ಕಡೆಯಿಂದ ಅಧಿಕೃತವಾಗಿ ಯಾವುದೇ ಮಾತು ಬಂದಿಲ್ಲವಾದರೂ ಆಡಳಿತಾರೂಢ ಬಿಜೆಪಿಯ ಕೆಲವು ಸದಸ್ಯರು ಜನಸಂಖ್ಯೆ ಆಧರಿಸಿದ ಕ್ಷೇತ್ರ ಮರುವಿಂಗಡಣೆಯನ್ನು ಸಮರ್ಥಿಸಲು ಆರಂಭಿಸಿದ್ದಾರೆ.

ಜನಸಂಖ್ಯೆ ಎಷ್ಟೇ ಇದ್ದರೂ, ಒಬ್ಬ ವ್ಯಕ್ತಿಗೆ ಒಂದೇ ಮತವಲ್ಲವೇ ಎಂಬ ಮಾತು ತಾತ್ವಿಕವಾಗಿ ಸರಿಯಾದರೂ ಜನಸಂಖ್ಯೆಯನ್ನು ಮಾತ್ರವೇ ಆಧಾರವಾಗಿ ಇರಿಸಿಕೊಂಡು ಕ್ಷೇತ್ರಗಳ ಮರುವಿಂಗಡಣೆ ನಡೆಸಿದಾಗ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗುತ್ತದೆ ಎಂಬ ಆತಂಕದಲ್ಲಿ ಹುರುಳಿದೆ. ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ಎಲ್ಲ ಅಭಿಪ್ರಾಯಗಳಿಗೂ ಕೇಂದ್ರವು ಕಿವಿಗೊಡಬೇಕು. ಪಾರದರ್ಶಕವಾದ ಹಾಗೂ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯನ್ನು ಅನುಸರಿಸಬೇಕು. ಎಲ್ಲರಿಗೂ ಒಪ್ಪಿತವಾಗುವ ಸೂತ್ರವೊಂದನ್ನು ಅದು ರೂಪಿಸಬೇಕು. ಈ ಎಲ್ಲ ಕೆಲಸಗಳನ್ನು ಮಾಡಲು ಕೇಂದ್ರ ಸರ್ಕಾರದ ಬಳಿ ಸಮಯವಂತೂ ಖಂಡಿತ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.