ADVERTISEMENT

ಸಂಪಾದಕೀಯ | ಎಲ್‌ಪಿಜಿ ಬೆಲೆ: ಹಣದುಬ್ಬರದ ಕಾಲದಲ್ಲಿ ಅನಪೇಕ್ಷಿತ ಏರಿಕೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 19:30 IST
Last Updated 9 ಮಾರ್ಚ್ 2023, 19:30 IST
   

ಕೇಂದ್ರ ಸರ್ಕಾರದ ಮಾಲೀಕತ್ವದ ತೈಲ ಮಾರಾಟ ಕಂಪನಿಗಳು ಮನೆ ಬಳಕೆಯ ಹಾಗೂ ವಾಣಿಜ್ಯ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ದರವನ್ನು ಮಾರ್ಚ್‌ 1ರಿಂದ ಅನ್ವಯವಾಗುವಂತೆ ಹೆಚ್ಚಿಸಿವೆ. ಮನೆ ಬಳಕೆಯ ಎಲ್‌ಪಿಜಿ ದರವನ್ನು ಕಳೆದ ವರ್ಷದ ಜುಲೈನಲ್ಲಿ ಹೆಚ್ಚಿಸಲಾಗಿತ್ತು. ಈಗ ಪ್ರತೀ ಸಿಲಿಂಡರ್‌ಗೆ ₹ 50ರಷ್ಟು ಹೆಚ್ಚು ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಇದರ ಬೆಲೆಯು ₹ 1,105.50ಕ್ಕೆ ತಲುಪಿದೆ. ವಾಣಿಜ್ಯ ಬಳಕೆ ಎಲ್‌ಪಿಜಿ ಬೆಲೆಯನ್ನು ಈ ವರ್ಷದ ಆರಂಭದಲ್ಲಿ ಹೆಚ್ಚು ಮಾಡಲಾಗಿತ್ತು. ಈಗ ಪ್ರತೀ ಸಿಲಿಂಡರ್‌ಗೆ ₹ 350ರಷ್ಟು ಹೆಚ್ಚು ಮಾಡಲಾಗಿದೆ. ಇದರ ಬೆಲೆಯು ಬೆಂಗಳೂರಿನಲ್ಲಿ ಈಗ ₹ 2,190.50ಕ್ಕೆ ತಲುಪಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯು ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಎದ್ದು ಕಾಣುವಂತಹ ಪರಿಣಾಮ ಬೀರಿರುವ ಹೊತ್ತಿನಲ್ಲಿಯೇ ಎಲ್‌ಪಿಜಿ ಸಿಲಿಂಡರ್‌ ದರ ಮತ್ತಷ್ಟು ಏರಿಕೆ ಆಗಿದೆ. ಹಣದುಬ್ಬರದ ಪರಿಣಾಮದಿಂದಾಗಿ ಮಾರುಕಟ್ಟೆಯಲ್ಲಿ ಜನ ಕೊಳ್ಳುವುದು ಕಡಿಮೆ ಆಗುತ್ತಿದೆ, ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ ಬೆಳವಣಿಗೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದಕ್ಕೆ ಇದೂ ಒಂದು ಕಾರಣ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಜೀವನಾವಶ್ಯಕ ಉತ್ಪನ್ನಗಳು ಹಾಗೂ ಸೇವೆಗಳ ಬೆಲೆ ಏರಿಕೆಯ ಯಾದಿಗೆ ಎಲ್‌ಪಿಜಿ ದರದಲ್ಲಿನ ಈಗಿನ ಹೆಚ್ಚಳವು ಒಂದು ಹೊಸ ಸೇರ್ಪಡೆ.

ಈ ಮೂರು ವರ್ಷಗಳ ಅವಧಿಯಲ್ಲಿ ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಆಗಿರುವ ಹೆಚ್ಚಳವು ದಿಗಿಲು ಮೂಡಿಸುವಂತೆ ಇದೆ. 2020ರ ಮೇ 1ರಂದು ₹ 581 ಆಗಿದ್ದ ಎಲ್‌ಪಿಜಿ ದರ ಈಗ ಸರಿಸುಮಾರು ದುಪ್ಪಟ್ಟಾಗಿದೆ. ‘2020ರ ಮೇ ತಿಂಗಳಲ್ಲಿ ₹ 581 ಹೂಡಿಕೆ ಮಾಡಿ ಎಲ್‌ಪಿಜಿ ಸಿಲಿಂಡರ್ ಖರೀದಿಸಿದ್ದಿದ್ದರೆ, ಅದನ್ನೇ ಈಗ ₹ 1,105ಕ್ಕೆ ಮಾರಾಟ ಮಾಡಿ, ಶೇಕಡ 90ರಷ್ಟು ಲಾಭ ಮಾಡಿಕೊಳ್ಳಬಹುದಿತ್ತು’ ಎಂಬ ಮಾತನ್ನು ಈಗ ಕೆಲವರು ತಮಾಷೆಗೆ ಹೇಳುತ್ತಿದ್ದಾರೆ. ಇಂತಹ ಮಾತುಗಳ ಹಿಂದೆ ಬೆಲೆ ಹೆಚ್ಚಳದ ಬಿಸಿಯ ಅನುಭವವೂ ಕೆಲಸ ಮಾಡಿದೆ. ಹಿಂದೆ ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ಕೇಂದ್ರ ಸರ್ಕಾರದ ಕಡೆಯಿಂದ ಸಬ್ಸಿಡಿ ದೊರೆಯುತ್ತಿತ್ತು. ಆದರೆ 2020ರ ಮಧ್ಯಭಾಗದ ನಂತರದಲ್ಲಿ ಬಹುತೇಕರಿಗೆ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಸಿಗುತ್ತಿಲ್ಲ. 2010ಕ್ಕೂ ಮೊದಲು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವ ಪೆಟ್ರೋಲ್‌ಗೆ, 2014ಕ್ಕೂ ಮೊದಲು ಡೀಸೆಲ್‌ಗೆ ಕೂಡ ಸರ್ಕಾರದ ಕಡೆಯಿಂದ ಸಬ್ಸಿಡಿ ಸಿಗುತ್ತಿತ್ತು. ಈ ಎರಡು ಇಂಧನಗಳಿಗೆ ನೀಡುವ ಸಬ್ಸಿಡಿಯನ್ನು ರದ್ದು ಮಾಡುವ ಸಂದರ್ಭದಲ್ಲಿ ಸರ್ಕಾರದ ಕಡೆಯಿಂದ ಅಧಿಕೃತ ವಿವರಣೆ ಬಂದಿತ್ತು. ಆದರೆ, ಎಲ್‌ಪಿಜಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸುವುದಕ್ಕೆ ಕಾರಣ ಏನು ಎಂಬ ಬಗ್ಗೆ ಅಧಿಕೃತ ವಿವರಣೆಯೇ ಇಲ್ಲ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಅಡಿಯಲ್ಲಿ ಎಲ್‌ಪಿಜಿ ಸಂಪರ್ಕ ಪಡೆದವರಿಗೆ ಮಾತ್ರ ಈಗ ಸಬ್ಸಿಡಿ ನೀಡಲಾಗುತ್ತಿದೆ.

ADVERTISEMENT

ಪೆಟ್ರೋಲ್ ಹಾಗೂ ಡೀಸೆಲ್‌ ಮೇಲಿನ ಸಬ್ಸಿಡಿಯನ್ನು ಹಿಂದಕ್ಕೆ ಪಡೆಯುವ ಸಂದರ್ಭದಲ್ಲಿ ಕೇಂದ್ರವು ಇವುಗಳ ಬೆಲೆಯನ್ನು ತೈಲ ಮಾರಾಟ ಕಂಪನಿಗಳೇ ತೀರ್ಮಾನಿಸಲಿವೆ ಎಂದು ಹೇಳಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತಗಳಿಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿ ಬೆಲೆ ತೀರ್ಮಾನ ಆಗಲಿದೆ ಎಂಬ ವಿವರಣೆಯನ್ನು ಕೇಂದ್ರ ನೀಡಿತ್ತು. ಆದರೆ ದೇಶಿ ಮಾರುಕಟ್ಟೆಯಲ್ಲಿ ಇಂಧನ ಬೆಲೆಗೂ ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಲೆಗೂ ಇರುವ ಸಂಬಂಧಕ್ಕಿಂತ, ವಿವಿಧ ಚುನಾವಣೆಗಳಿಗೂ ದೇಶಿ ಮಾರುಕಟ್ಟೆಯಲ್ಲಿ ಇಂಧನ ಬೆಲೆಗೂ ಹೆಚ್ಚು ಸಂಬಂಧವಿದೆ ಎಂಬುದು ಈಗ ನಿರ್ವಿವಾದದ ಸಂಗತಿ.

ವಾಸ್ತವದಲ್ಲಿ ಪೆಟ್ರೋಲ್, ಡೀಸೆಲ್‌, ಎಲ್‌ಪಿಜಿಯಂತಹ ಜೀವನಾವಶ್ಯಕ ಉತ್ಪನ್ನಗಳ ಬೆಲೆಯನ್ನು ನಿರ್ಧರಿಸುವ ಅಧಿಕಾರವನ್ನು ಸರ್ಕಾರವು ಮಾರುಕಟ್ಟೆ ಶಕ್ತಿಗಳಿಗೆ ಬಿಟ್ಟಿಲ್ಲ‌; ಬದಲಿಗೆ ಅವುಗಳ ಬೆಲೆಯನ್ನು ಸಂಪೂರ್ಣವಾಗಿ ತಾನೇ ನಿರ್ಧರಿಸುತ್ತಿದೆ. ಜನರ ಸಂಪಾದನೆಯ ಸಾಮರ್ಥ್ಯಕ್ಕೆ, ಕೊಳ್ಳುವ ಶಕ್ತಿಗೆ ಮಿತಿಗಳು ಇರುತ್ತವೆ. ಹೀಗಿರುವಾಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯು ಅನಿಯಂತ್ರಿತವಾಗುವುದು ತಾತ್ವಿಕವಾಗಿ ಸರಿಯಲ್ಲ. ಎಲ್‌ಪಿಜಿ ದರದಲ್ಲಿ ಆಗುತ್ತಿರುವ ಏರಿಕೆಯು ಜನರಿಗೆ ಪೆಟ್ಟು ಕೊಡುವಂಥದ್ದು. ಇದರಿಂದ ಅವರ ಕೊಳ್ಳುವ ಶಕ್ತಿ ಇನ್ನಷ್ಟು ಕುಗ್ಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.