ADVERTISEMENT

ಸಂಪಾದಕೀಯ | ಪರೀಕ್ಷೆಯಲ್ಲಿ ಅರ್ಥಹೀನ ಪ್ರಶ್ನೆಗಳು; ಸಿಬಿಎಸ್‌ಇಗೆ ಬೇಕು ಎಚ್ಚರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 21:39 IST
Last Updated 15 ಡಿಸೆಂಬರ್ 2021, 21:39 IST
.
.   

ಭಾರತವು ಬಹುತ್ವದ ದೇಶ. ಜೊತೆಗೆ, ಅಸಮಾನತೆಯನ್ನೂ ಒಡಲೊಳಗೆ ಇರಿಸಿಕೊಂಡಿರುವ ದೇಶ. ಇಲ್ಲಿನ ಸಂಸ್ಕೃತಿ, ಸಂಪ್ರದಾಯಗಳು, ಸಮುದಾಯದ ಆಚರಣೆಗಳು ಬಹುತ್ವವನ್ನು ಸಲಹುವ ಜೊತೆಯಲ್ಲೇ ಒಂದಿಷ್ಟು ಅಸಮಾನತೆಗಳನ್ನೂ ತಮ್ಮೊಂದಿಗೆ ಇರಿಸಿಕೊಂಡಿವೆ. ಬಹುತ್ವವನ್ನು ಸಂಭ್ರಮಿಸುವುದು, ಅಸಮಾನತೆಯನ್ನು ಖಂಡಿಸುವುದು ಜೊತೆಜೊತೆಗೆ ಸಾಗಬೇಕಿರುವ ಸಂಕೀರ್ಣ ಸಮಾಜ ನಮ್ಮದು. ತರತಮ ಪ್ರಜ್ಞೆಯನ್ನು ತೊಡೆಯುವ ಕೆಲಸ ಮನೆಗಳಿಂದಲೂ ಶಾಲೆಗಳಿಂದಲೂ ಆಗಬೇಕು. ಸಮಾಜದ ಎಲ್ಲ ವರ್ಗಗಳೂ ಈ ಕಾರ್ಯದಲ್ಲಿ ಕೈಜೋಡಿಸಬೇಕು. ಆದರೆ, ಲಿಂಗ ಆಧಾರಿತ ಅಸಮಾನತೆಯಂತಹ ಹುಳುಕುಗಳ ನಿವಾರಣೆಗೆ ಶಾಲೆಗಳ ಹಂತದಲ್ಲಿಯೇ ಪ್ರಯತ್ನ ಆರಂಭವಾಗದಿದ್ದರೆ,ಅವುಗಳನ್ನು ಸಮುದಾಯದಿಂದ ತೊಡೆಯುವುದು ಕಷ್ಟಸಾಧ್ಯ ಕೆಲಸವಾಗುತ್ತದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ಸಿಬಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯಲ್ಲಿ ಅಳವಡಿಸಿದ್ದ ಕೆಲವು ಸಾಲುಗಳು ತೀರಾ ಪ್ರತಿಗಾಮಿಯಾಗಿದ್ದವು, ಕೀಳು ಅಭಿರುಚಿಯಿಂದ ಕೂಡಿದ್ದವು ಎಂಬುದು ಗೊತ್ತಾಗುತ್ತದೆ.

ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಇಂಗ್ಲಿಷ್ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ,ವಿದ್ಯಾರ್ಥಿಗಳು ಒಂದು ಪ್ಯಾರಾವನ್ನು ಓದಿ, ಉತ್ತರ ಬರೆಯಬೇಕಿತ್ತು. ‘ಪತ್ನಿಗೆ ಸ್ವಾತಂತ್ರ್ಯ ನೀಡಿದ್ದರಿಂದಾಗಿ ಮಕ್ಕಳ ಮೇಲೆ ಪಾಲಕರಿಗೆ ನಿಯಂತ್ರಣ ತಪ್ಪಿಹೋಯಿತು...’, ‘ಹಲವು ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಮಹಿಳೆಯರು ಸ್ವಾತಂತ್ರ್ಯ ಪಡೆಯುತ್ತಿರುವುದೇ ಮುಖ್ಯ ಕಾರಣ...’, ‘ಪತ್ನಿಯು, ಪತಿಯ ಮಾತು ಕೇಳುವುದನ್ನು ನಿಲ್ಲಿಸಿದ್ದು ಮಕ್ಕಳು ಹಾಗೂ ಕೆಲಸದವರಲ್ಲಿನ ಅಶಿಸ್ತಿಗೆ ಮುಖ್ಯ ಕಾರಣ...’ ಎಂಬ ಸಾಲುಗಳು ಈ ಪ್ಯಾರಾದಲ್ಲಿ ಇದ್ದವು. ‘ಪತಿಯ ಹಾದಿಯನ್ನು ಒಪ್ಪಿಕೊಳ್ಳುವ ಮೂಲಕ ಮಾತ್ರವೇ ತಾಯಿಯು ಚಿಕ್ಕವರ ವಿಧೇಯತೆಗೆಪಾತ್ರಳಾಗಬಹುದು’ ಎನ್ನುವ ಮಾತುಗಳೂ ಅದರಲ್ಲಿ ಇದ್ದವು. ಈ ಪ್ಯಾರಾವನ್ನು ಓದಿ ವಿದ್ಯಾರ್ಥಿಗಳು, ಅದರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಬೇಕಿತ್ತು.

ಈ ಸಾಲುಗಳಿಗೆ ದೇಶದ ಬಹುತೇಕ ಕಡೆಗಳಲ್ಲಿ ವಿರೋಧ ವ್ಯಕ್ತವಾದ ನಂತರದಲ್ಲಿ ಸಿಬಿಎಸ್‌ಇ ವಿಷಾದ ವ್ಯಕ್ತಪಡಿಸಿದೆ, ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನುಕೈಬಿಡುವುದಾಗಿ ಹೇಳಿದೆ. ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ವಿವರಣೆಯನ್ನು ಕೇಳಿದರು. ಪ್ರಶ್ನೆಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪುನರ್‌ ಪರಿಶೀಲನೆಗೆ ಒಳಪಡಿಸಲು, ಪ್ರಕ್ರಿಯೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ತಜ್ಞರ ಸಮಿತಿಯನ್ನು ರಚಿಸುವುದಾಗಿ ಸಿಬಿಎಸ್‌ಇ ಭರವಸೆ ನೀಡಿದೆ. ಪ್ರಶ್ನೆಗಳನ್ನು ತಜ್ಞರ ಮೂಲಕವೇ ಸಿದ್ಧಪಡಿಸಬೇಕು. ಪ್ರಶ್ನೆಗಳನ್ನು ಸಿದ್ಧಪಡಿಸುವವರಿಗೆ ಅವುಗಳ ಅರ್ಥ ಗೊತ್ತಿರಬೇಕು, ಉತ್ತರಗಳ ಅರ್ಥ ಮತ್ತು ಪರಿಣಾಮಗಳೂ ತಿಳಿದಿರಬೇಕು. ಎಳೆಯ ವಯಸ್ಸಿನ ವಿದ್ಯಾರ್ಥಿಗಳು ಈ ಪ್ರಶ್ನೆಗಳಿಗೆ ಉತ್ತರ ಬರೆಯುತ್ತಾರೆ. ಈ ಪ್ಯಾರಾದಲ್ಲಿ ಇದ್ದಂತಹ ಸಾಲುಗಳು ಪುರುಷ ಪ್ರಾಧಾನ್ಯವನ್ನೇ ಆತ್ಯಂತಿಕ ಸತ್ಯವೆಂಬ ರೀತಿಯಲ್ಲಿ ಬಿಂಬಿಸುತ್ತವೆ. ಈ ಪ್ಯಾರಾ ತನ್ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರಲಿಲ್ಲ ಎಂದು ಸಿಬಿಎಸ್‌ಇ ಒಪ್ಪಿಕೊಂಡಿದೆ.

ADVERTISEMENT

ನಮ್ಮ ಸಮಾಜದ ಪ್ರಜ್ಞೆಯಲ್ಲಿ ಆಳವಾಗಿ ಬೇರೂರಿರುವ ಕೆಲವು ಆಲೋಚನೆಗಳು, ನಂಬಿಕೆಗಳನ್ನು ಈ ಪ್ಯಾರಾ ಸ್ಪಷ್ಟವಾಗಿ ಹೇಳುತ್ತಿದೆ. ಇಂತಹ ಪ್ರತಿಗಾಮಿ ಆಲೋಚನೆಗಳನ್ನು ಹೋಗಲಾಡಿಸುವುದು ಶಿಕ್ಷಣದ ಉದ್ದೇಶಗಳಲ್ಲಿ ಒಂದು. ಮಕ್ಕಳ ಮನಸ್ಸಿನಲ್ಲಿ ಇಂತಹ ತಾರತಮ್ಯದ ಆಲೋಚನೆಗಳು ಬರಬಾರದು, ಅವರು ಮುಕ್ತವಾಗಿ ಆಲೋಚಿಸುವ ವ್ಯಕ್ತಿಗಳಾಗಿ ಬೆಳೆಯಬೇಕು ಎಂಬುದು ಶಿಕ್ಷಣದ ಗುರಿ. ಆದರೆ, ಶೈಕ್ಷಣಿಕ ಪ್ರಕ್ರಿಯೆಯ ಬಹುಮುಖ್ಯ ಭಾಗವಾಗಿರುವ ಪರೀಕ್ಷೆಗಳಲ್ಲಿ ಇಂತಹ ಹಿಮ್ಮುಖ ಚಲನೆಯ ಪ್ರಶ್ನೆಗಳು ಇರುತ್ತವೆ ಎನ್ನುವುದು ತೀರಾ ದುರದೃಷ್ಟಕರ. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಸರ್ಕಾರಗಳು ದಶಕಗಳಿಂದಲೂ ಪ್ರೋತ್ಸಾಹಿಸುತ್ತ ಬಂದಿವೆ. ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ, ಅವರಿಗಾಗಿ ವಿಶೇಷ ಯೋಜನೆಗಳೂ ಜಾರಿಯಲ್ಲಿ ಇವೆ.

ಶಿಕ್ಷಣದ ಮೂಲಕ ಮಹಿಳೆಯರನ್ನು ಸಶಕ್ತರನ್ನಾಗಿಸುವ ಯೋಜನೆಗಳೂ ಇವೆ. ಆದರೆ, ಇಂತಹ ಯತ್ನಗಳ ನಡುವೆ ಈ ಬಗೆಯ ಪ್ರಶ್ನೆಗಳು ಕಪ್ಪುಚುಕ್ಕೆಯಂತೆ ಕಾಣಿಸುತ್ತವೆ. ಸಿಬಿಎಸ್‌ಇ ಪ್ರಶ್ನೆಪತ್ರಿಕೆಗಳಲ್ಲಿ ವ್ಯಾಕರಣ ದೋಷ, ಅಕ್ಷರ ದೋಷ, ಪಠ್ಯದಲ್ಲಿ ಇಲ್ಲದಿದ್ದ ಪ್ರಶ್ನೆಗಳು ಕಾಣಿಸಿಕೊಳ್ಳುವುದು... ಇವೆಲ್ಲ ಇದ್ದಿದ್ದೇ. ಆದರೆ, ಈ ಪ್ಯಾರಾದಲ್ಲಿ ಇದ್ದ ದೋಷ ಇಂಥದ್ದಲ್ಲ. ಈ ಪ್ಯಾರಾ ಹಾಗೂ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನುರೂಪಿಸಿದ್ದು ಯಾರು ಎಂಬುದನ್ನು ಸಿಬಿಎಸ್‌ಇ ಪತ್ತೆ ಮಾಡಬೇಕು. ಅದು ಹೇಗೆ ಪ್ರಶ್ನೆಪತ್ರಿಕೆಯೊಳಗೆ ನುಸುಳಿಕೊಂಡಿತು ಎಂಬುದನ್ನು ಜನರಿಗೆ ತಿಳಿಸುವ ಕೆಲಸವನ್ನೂ ಮಾಡಬೇಕು. ಮುಂದಿನ ದಿನಗಳಲ್ಲಿ ಇಂಥವು ಮರುಕಳಿಸದಂತೆಯೂ ನೋಡಿಕೊಳ್ಳಬೇಕು. ಶಾಲೆಗೆ ಹೋಗುವ ಮಕ್ಕಳು ಎಲ್ಲರನ್ನೂ ಸಮಾನವಾಗಿ ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು ಎಂಬ ಬಯಕೆ ಸಿಬಿಎಸ್‌ಇಯಲ್ಲಿಯೂ ಇರಬೇಕು. ಎಲ್ಲರೂ ಸಮಾನರು ಹಾಗೂ ಲಿಂಗ ಆಧಾರಿತ ತಾರತಮ್ಯ ತಪ್ಪು ಎಂಬ ಲೋಕದೃಷ್ಟಿ ಮಕ್ಕಳಲ್ಲಿ ಬೆಳೆಯದೇ ಇದ್ದರೆ, ಪ್ರಜಾತಂತ್ರ ಎಂಬ ವ್ಯವಸ್ಥೆಗೂ ಅರ್ಥ ಇರುವುದಿಲ್ಲ. ಈ ಎಚ್ಚರವುಸಿಬಿಎಸ್‌ಇಯಲ್ಲಿ ಸದಾ ಕಾಲ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.