ಸಂಪಾದಕೀಯ: ಆರ್‌ಬಿಐಗೆ ಹೊಸ ಗವರ್ನರ್- ಸಮತೋಲನ ಸಾಧಿಸುವ ಸವಾಲು
ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹೊಸ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅಧಿಕಾರ ಸ್ವೀಕರಿಸಿದ್ದಾರೆ. ಆರ್‌ಬಿಐ ಗವರ್ನರ್ ಆಗಿದ್ದ ಶಕ್ತಿಕಾಂತ ದಾಸ್ ಅವರ ಅಧಿಕಾರ ಅವಧಿ ಮುಗಿದಿದೆ. ದಾಸ್ ಅವರಂತೆಯೇ ಮಲ್ಹೋತ್ರಾ ಅವರೂ ಅಧಿಕಾರಿಯಾಗಿ ಅನುಭವ ಗಳಿಸಿದವರು. ಆರ್‌ಬಿಐ ಗವರ್ನರ್ ಸ್ಥಾನದಲ್ಲಿ ಅಧಿಕಾರಿಯೊಬ್ಬರು ಇದ್ದರೆ, ಸರ್ಕಾರ ಮತ್ತು ಗವರ್ನರ್ ನಡುವಿನ ಸಂಘರ್ಷ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಮಹತ್ವದ ಸ್ಥಾನಕ್ಕೆ ಅಧಿಕಾರಿಯೊಬ್ಬರನ್ನು ಆಯ್ಕೆ ಮಾಡಿರಬಹುದು.
ಹಿಂದೆ ಅರ್ಥಶಾಸ್ತ್ರಜ್ಞರು ಗವರ್ನರ್ ಹುದ್ದೆಯಲ್ಲಿ ಇದ್ದಾಗ ಸರ್ಕಾರ ಮತ್ತು ಗವರ್ನರ್ ನಡುವೆ ಸಂಘರ್ಷ ಉಂಟಾದ ನಿದರ್ಶನಗಳಿವೆ. ದಾಸ್ ಅವರಿಗಿಂತ ಮೊದಲು ಗವರ್ನರ್ ಆಗಿದ್ದ ನಾಲ್ಕು ಮಂದಿ– ವೈ.ವಿ. ರೆಡ್ಡಿ, ಡಿ. ಸುಬ್ಬರಾವ್, ರಘುರಾಮ್ ರಾಜನ್ ಮತ್ತು ಉರ್ಜಿತ್ ಪಟೇಲ್– ಸರ್ಕಾರದ ಜೊತೆ ಗಂಭೀರ ತಕರಾರುಗಳನ್ನು ಹೊಂದಿದ್ದರು.
ಗವರ್ನರ್ ಹುದ್ದೆಯಲ್ಲಿ ಇರುವವರು ಆರ್‌ಬಿಐನ ಸ್ವಾಯತ್ತೆಯನ್ನು ರಕ್ಷಿಸಲು ಯತ್ನಿಸಿದಾಗ ಸಂಘರ್ಷ ಉಂಟಾಗುತ್ತದೆ. ಆದರೆ, ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದಾದರೆ ಆರ್‌ಬಿಐ ಇಂತಹ ಸ್ವಾಯತ್ತೆಯನ್ನು ಹೊಂದಿರಬೇಕು. ಅದರಲ್ಲೂ ಮುಖ್ಯವಾಗಿ, ವಿವಿಧ ಸಂಸ್ಥೆಗಳನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ಬಾಗಿಸುವ ಕೆಲಸದಲ್ಲಿ ಸರ್ಕಾರಗಳು ತೊಡಗಿದಾಗ, ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗುತ್ತದೆ. ದಾಸ್ ಅವರು ಸರ್ಕಾರದ ಜೊತೆ ಬಹಳ ಉತ್ತಮವಾದ ಸಂಬಂಧ ಹೊಂದಿದ್ದರು. ಆದರೆ ತಮ್ಮ ಅಧಿಕಾರ ಅವಧಿಯ ಕೊನೆಯ ಹಂತದಲ್ಲಿ ಅವರು, ಬಡ್ಡಿ ದರವನ್ನು ತಗ್ಗಿಸಬೇಕು ಎಂದು ಸರ್ಕಾರದ ಕಡೆಯಿಂದ ಬಂದ ಬೇಡಿಕೆಯನ್ನು ಅಲಕ್ಷಿಸಿದರು. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸುವುದು ಆರ್‌ಬಿಐನ ಅತಿಮುಖ್ಯ ಜವಾಬ್ದಾರಿ ಎಂಬುದಕ್ಕೆ ಬದ್ಧತೆ ತೋರಿ, ಅವರು ಈ ರೀತಿ ಮಾಡಿದರು.
ದಾಸ್ ಅವರಿಗೆ ಆರ್‌ಬಿಐ ಗವರ್ನರ್ ಆಗಿ ಮೂರು ವರ್ಷಗಳ ಹೆಚ್ಚುವರಿ ಅಧಿಕಾರ ಅವಧಿ ಸಿಕ್ಕಿತ್ತು. ದಾಸ್ ಅವರು ಗವರ್ನರ್ ಆಗಿದ್ದ ಅವಧಿಯು ಆರ್‌ಬಿಐ ಗವರ್ನರ್ ಆಗಿ ವ್ಯಕ್ತಿಯೊಬ್ಬರ ಎರಡನೆಯ ಅತಿದೀರ್ಘ ಅವಧಿ. ಅವರ ಆಡಳಿತ ಅವಧಿಯಲ್ಲಿ ಆಂತರಿಕವಾಗಿ ಹಾಗೂ ಹೊರಗಿನಿಂದ ಗಂಭೀರ ಸವಾಲುಗಳು ಎದುರಾಗಿದ್ದವು. ಅದರಲ್ಲೂ, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿನ ಹಣಕಾಸಿನ ಪರಿಸ್ಥಿತಿಯ ನಿರ್ವಹಣೆಯು ಬಹಳ ಸವಾಲಿನದಾಗಿತ್ತು.
ಆ ಸಂದರ್ಭದಲ್ಲಿ ಕೇಂದ್ರೀಯ ಬ್ಯಾಂಕ್ ಕೈಗೊಂಡ ಕ್ರಮಗಳು ಅರ್ಥ ವ್ಯವಸ್ಥೆ, ಸಂಸ್ಥೆಗಳು ಹಾಗೂ ವ್ಯಕ್ತಿಗಳ ಹಣಕಾಸಿನ ಸ್ಥಿತಿಯ ಮೇಲೆ ಸಾಂಕ್ರಾಮಿಕದ ಪ್ರಭಾವದ ತೀವ್ರತೆಯು ಒಂದಿಷ್ಟು ಕಡಿಮೆಯಾಗುವಂತೆ ಮಾಡಿದವು. ದಾಸ್ ಅವರ ನೇತೃತ್ವದಲ್ಲಿ ಹಣಕಾಸಿನ ಶಿಸ್ತಿಗೆ ಆದ್ಯತೆ ನೀಡಲಾಯಿತು, ಇದರಿಂದ ಬ್ಯಾಂಕ್‌ಗಳು ಪ್ರಯೋಜನ ಪಡೆದವು. ಆದರೆ, ಆರ್‌ಬಿಐಗೆ ಇರುವ ಬಹಳ ಮುಖ್ಯವಾದ ಹೊಣೆಯಾದ ಹಣದುಬ್ಬರದ ನಿಯಂತ್ರಣವು ಸಾಧ್ಯವಾಯಿತು ಎನ್ನಲಾಗದು. ಏಕೆಂದರೆ ಹಣದುಬ್ಬರ ಪ್ರಮಾಣವು ಹಲವು ತ್ರೈಮಾಸಿಕಗಳ ಅವಧಿಗೆ ಹೆಚ್ಚಿನ ಮಟ್ಟದಲ್ಲೇ ಉಳಿದಿತ್ತು, ಅದು ಮುಂದಿನ ಕೆಲವು ಸಮಯದವರೆಗೂ ಹೆಚ್ಚಿನ ಮಟ್ಟದಲ್ಲಿ ಉಳಿಯುವ ಸಾಧ್ಯತೆ ಇದೆ. ಪ್ರಾದೇಶಿಕ ಸಂಘರ್ಷಗಳಿಂದಾಗಿ ಉಂಟಾದ ಜಾಗತಿಕ ಅಸ್ಥಿರತೆಯ ಸಂದರ್ಭದಲ್ಲಿ ಕರೆನ್ಸಿ ನಿರ್ವಹಣೆಯೂ ಬಹಳ ಸವಾಲಿನ ಕೆಲಸ ಆಗಿತ್ತು. ದಾಸ್ ಅವರು ಬಹಳ ಸಮರ್ಥ ನಿರ್ವಾಹಕನ ರೀತಿಯಲ್ಲಿ ಕೆಲಸ ಮಾಡಿದರು. ಅದಕ್ಕಾಗಿ ಅವರನ್ನು ಪ್ರಶಂಸಿಸಲಾಗಿದೆ.
ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೆಪೊ ದರದ ವಿಚಾರದಲ್ಲಿ ಆರ್‌ಬಿಐ ತನ್ನ ನಿಲುವನ್ನು ಸಡಿಲಿಸಬೇಕು ಎಂಬ ಅಭಿಪ್ರಾಯವು ಸರ್ಕಾರದ ಉನ್ನತ ಮಟ್ಟದಲ್ಲಿ, ಕೈಗಾರಿಕೋದ್ಯಮಿ
ಗಳ ನಡುವೆ ಇರುವ ಸಂದರ್ಭದಲ್ಲಿ ಸಂಜಯ್ ಮಲ್ಹೋತ್ರಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಆರ್ಥಿಕ ಬೆಳವಣಿಗೆ ಹಾಗೂ ಬೆಲೆ ಸ್ಥಿರತೆ ಸುತ್ತಲಿನ ಚರ್ಚೆಯು ಬಹಳ ಹಳೆಯದು, ಅದು ತಕ್ಷಣಕ್ಕೇನೂ ಕೊನೆಗೊಳ್ಳದು. ಇವೆರಡರ ನಡುವಿನ ಸಂಬಂಧವು ಬಹಳ ಸಂಕೀರ್ಣವಾಗಿದೆ ಕೂಡ.
ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಹಣಕಾಸಿನ ನೀತಿಯು ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬ ಬಗ್ಗೆಯೂ ಪ್ರಶ್ನೆಗಳು ಇವೆ. ಈ ಪ್ರಶ್ನೆಗಳು ಹಾಗೂ ಚರ್ಚೆಗಳು ಬಹಳ ಪ್ರಸ್ತುತವೇ ಆದರೂ ಹಣದುಬ್ಬರದ ಪ್ರಮಾಣವನ್ನು ಮಿತಿಯಲ್ಲಿ ಇರಿಸುವ ತನ್ನ ಬದ್ಧತೆಯಿಂದ ಆರ್‌ಬಿಐ ಹಿಂದೆ ಸರಿಯಬಾರದು. ಹಣದುಬ್ಬರವನ್ನು ಹೆಚ್ಚಿನ ಅವಧಿಗೆ ನಿಯಂತ್ರಿಸದಿದ್ದರೆ, ಆರ್ಥಿಕ ಬೆಳವಣಿಗೆಗೆ ಏಟು ಬೀಳುತ್ತದೆ, ಇತರ ಹಲವು ಪರಿಣಾಮಗಳಿಗೂ ಅದು ಕಾರಣವಾಗುತ್ತದೆ. ಮಲ್ಹೋತ್ರಾ ಅವರು ಇದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು. ಇವೆಲ್ಲಕ್ಕಿಂತ ಮುಖ್ಯವಾಗಿ, ತಾವು ನೇತೃತ್ವ ವಹಿಸಿರುವ ಸಂಸ್ಥೆಯ ಸ್ವಾತಂತ್ರ್ಯದ ಬಗ್ಗೆಯೂ ಅವರು ಗಮನ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.