ಹೊಸ ವರ್ಷದ ಸಂಭ್ರಮವು ಭವಿಷ್ಯದತ್ತ ನೋಟ ಹಾಯಿಸುವುದರ ಜೊತೆಗೆ, ಸಾಗಿಬಂದ ಹಾದಿಯನ್ನು ಅವಲೋಕಿಸುವುದನ್ನೂ ಒಳಗೊಂಡಿರುತ್ತದೆ. ಹೊಸ ವರ್ಷದ ಮೊದಲ ದಿನವು ಎಷ್ಟರಮಟ್ಟಿಗೆ ಒಳ್ಳೆಯದೋ ವರ್ಷದ ಇತರ ದಿನಗಳೂ ಅಷ್ಟೇ ಒಳ್ಳೆಯವು ಎಂಬುದು ತಾರ್ಕಿಕವಾಗಿ ನಿಜ. ಆದರೆ ಹೊಸ ವರ್ಷದ ಮೊದಲ ದಿನವು ಒಂದಿಷ್ಟು ನೆನಪುಗಳನ್ನು ಮೆಲುಕು ಹಾಕಲು ಹಾಗೂ ಹೊಸ ಭರವಸೆಗಳೊಂದಿಗೆ ಮುಂದಿನ ದಿನಗಳತ್ತ ನೋಟ ಹಾಯಿಸಲು ನೆಪವಾಗಿ ಒದಗಿಬರುವುದು ಸತ್ಯ. ಹೊಸ ವರ್ಷವನ್ನು ಪ್ರತಿ ವ್ಯಕ್ತಿಯೂ ವಿಶಿಷ್ಟವಾಗಿ ಎದುರುಗೊಳ್ಳಬಹುದು. ಏಕೆಂದರೆ ಗತ ಹಾಗೂ ಭವಿಷ್ಯವು ಪ್ರತಿಯೊಬ್ಬರಿಗೂ ವಿಶಿಷ್ಟ. ಆಗಿಹೋದ ಒಂದು ವರ್ಷದ ಹಾದಿಯಲ್ಲಿ ಪ್ರತಿಯೊಬ್ಬರ ಅನುಭವ ಭಿನ್ನ, ಹೊಸ ವರ್ಷಕ್ಕೆ ಇರಿಸಿಕೊಳ್ಳುವ ಭರವಸೆಗಳು ಕೂಡ ಭಿನ್ನ. ಹೀಗಿದ್ದರೂ ಕುಟುಂಬ, ಸಮುದಾಯ, ದೇಶಗಳ ಮಟ್ಟದಲ್ಲಿ ದೃಷ್ಟಿಕೋನಗಳು ರೂಪುಗೊಳ್ಳುವ ಕಾರಣ, ಅನುಭವ ಮತ್ತು ಭರವಸೆಗಳಲ್ಲಿಯೂ ಸಮಾನ ಅಂಶಗಳು ಇದ್ದೇ ಇರುತ್ತವೆ. ಬಯಸಿದ ಬಗೆಯಲ್ಲೇ ನಡೆದ ಸಂಗತಿಗಳ ಬಗ್ಗೆ ವೈಯಕ್ತಿಕ ಮಟ್ಟದಲ್ಲಿ ತೃಪ್ತಿ ಇರಬಹುದು. ಬಯಸಿದಂತೆ ನಡೆಯದ ಸಂಗತಿಗಳ ಬಗ್ಗೆ ಬೇಸರ ಇದ್ದಿರಬಹುದು. ಹೊಸ ವರ್ಷದ ಆರಂಭದಲ್ಲಿ ನಿರ್ಣಯಗಳನ್ನು ಕೈಗೊಳ್ಳುವುದು, ಹಲವರು ಅದನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಕೆಲವರು ನಿರ್ಣಯಗಳನ್ನು ಮುರಿಯುವುದು ಇದ್ದೇ ಇರುತ್ತದೆ. ಇವುಗಳ ನಡುವೆ, ಹೊಸ ವರ್ಷವನ್ನು ಮನುಕುಲವು ಹೊಸ ಭರವಸೆಗಳೊಂದಿಗೆ ಬರಮಾಡಿಕೊಳ್ಳುವುದು ಮಾತ್ರ ಅನೂಚಾನವಾಗಿ ನಡೆದುಕೊಂಡು ಬಂದಿರುವುದು ದಿಟ.
ದೇಶವು ಈಗ ಹೊಸ ವರ್ಷಕ್ಕೆ ಕಾಲಿರಿಸಿದೆ. ಈ ಹೊತ್ತಿನಲ್ಲಿ 2024ನೇ ಇಸವಿಯ ಮೇಲೆ ನೋಟ ಹರಿಸಿದಾಗ, ಪ್ರಜಾತಂತ್ರವು ಜಯ ಸಾಧಿಸಿದ್ದು ಮತ್ತು ದೇಶವು ಸಂವಿಧಾನವನ್ನು ಅಂಗೀಕರಿಸಿದ್ದಕ್ಕೆ 75 ವರ್ಷಗಳು ತುಂಬಿದ್ದು ಪ್ರಮುಖವಾಗಿ ಕಾಣುತ್ತವೆ. ಆತ್ಮವಿಶ್ವಾಸದಿಂದ ಬೀಗುತ್ತಿದ್ದ, ಕೇಂದ್ರದಲ್ಲಿ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸದಲ್ಲಿ ಇದ್ದ ಪಕ್ಷದ ಸಂಖ್ಯಾಬಲವನ್ನು ಮತದಾರರು ಕಡಿಮೆ ಮಾಡಿದರು. ಆ ಪಕ್ಷಕ್ಕೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಅಧಿಕಾರ ನೀಡದ ಮತದಾರರು, ಮಿತ್ರಪಕ್ಷಗಳನ್ನು ಅದು ನೆಚ್ಚಿಕೊಳ್ಳಲೇಬೇಕು ಎಂಬ ಆದೇಶ ಇತ್ತರು. ನಾಯಕರ ಸುತ್ತ ಕಟ್ಟಲಾಗುವ ಪ್ರಭಾವಳಿಯು ತಮ್ಮನ್ನು ಸರ್ವಕಾಲಕ್ಕೂ ಪ್ರಭಾವಿಸುವುದಿಲ್ಲ ಎಂಬುದನ್ನು ಮತದಾರರು ತೋರಿಸಿಕೊಟ್ಟರು. ಸಂವಿಧಾನ ಮತ್ತು ಅದರ ಕುರಿತ ಮಾತುಗಳು ವರ್ಷದುದ್ದಕ್ಕೂ ಅನುರಣಿಸಿದವು. ಭಾರತವೆಂಬ ಗಣರಾಜ್ಯಕ್ಕೆ ಮಾರ್ಗದರ್ಶನ ನೀಡುವ ಸನ್ನದಿನಂತೆ ಇರುವ ಈ ಗ್ರಂಥವು ಹೆಮ್ಮೆಯಿಂದ ತಲೆ ಎತ್ತಿ ನಿಂತಿತು. ಲೋಕಸಭಾ ಚುನಾವಣೆಯಲ್ಲಿ ಗಳಿಸಿದ್ದ ಚೈತನ್ಯವನ್ನು ಉಳಿಸಿಕೊಳ್ಳಲು ವಿರೋಧ ಪಕ್ಷಗಳಿಗೆ ಆಗಲಿಲ್ಲ. ದೇಶದಲ್ಲಿ ನಾಗರಿಕ ಹಕ್ಕುಗಳಿಗೆ ಎದುರಾಗಿರುವ ಸವಾಲುಗಳು ಮುಂದುವರಿದವು, ತಾರತಮ್ಯವನ್ನು ಸಹಜವೆಂದು ಹೇಳುವಂತಹ ಭಾಷಣಗಳು ಹಾಗೂ ಕೃತ್ಯಗಳು ಬಹಳಷ್ಟು ಸಂಖ್ಯೆಯಲ್ಲಿ ವರದಿಯಾದವು. ದೇಶದ ಷೇರುಪೇಟೆಯು 2024ರಲ್ಲಿ ಜಿಗಿಯಿತು. ಆದರೆ ದೇಶದ ದೊಡ್ಡ ವರ್ಗದ ಜನರಿಗೆ ಹಣವು ದುಬಾರಿಯಾಯಿತು, ಬಡತನವು ಅವರ ಪಾಲಿಗೆ ನಿತ್ಯದ ಸಂಗಾತಿಯಾಗಿಯೇ ಉಳಿಯಿತು. ಇವೆಲ್ಲವುಗಳ ನಡುವೆಯೂ ದೇಶವು ಯೌವನದ ಉತ್ಸಾಹವನ್ನು ಉಳಿಸಿಕೊಂಡಿದೆ.
ಜಾಗತಿಕ ಮಟ್ಟದಲ್ಲಿ ಎರಡು ಭೀಕರ ಯುದ್ಧಗಳು ಮುಂದುವರಿದಿವೆ. ಈ ಯುದ್ಧಗಳನ್ನು ನಿಲ್ಲಿಸಲು ಜಾಗತಿಕ ಸಮುದಾಯಕ್ಕೆ ಹಾಗೂ ಜಾಗತಿಕ ಸಮುದಾಯವು ಕಟ್ಟಿರುವ ಸಂಸ್ಥೆಗಳಿಗೆ ಸಾಧ್ಯವಾಗದೇ ಇರುವುದು, ಈ ಸಮುದಾಯ ಮತ್ತು ಸಂಸ್ಥೆಗಳು ತಮ್ಮ ನೈತಿಕ ಬಲವನ್ನು ಕಳೆದುಕೊಂಡಿರುವು
ದನ್ನು ಸ್ಪಷ್ಟವಾಗಿ ಹೇಳುತ್ತಿದೆ. ಪುಂಡ ರಾಷ್ಟ್ರಗಳನ್ನು ಕೂಡ ಹದ್ದುಬಸ್ತಿನಲ್ಲಿ ಇರಿಸಲು ಈ ಸಂಸ್ಥೆಗಳಿಗೆ ಆಗುತ್ತಿಲ್ಲ ಎಂಬುದನ್ನು ಇದು ಸಾರುತ್ತಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಕ್ಕೆ ಹೊಸ ಅಧ್ಯಕ್ಷರು ಶೀಘ್ರವೇ ಬರಲಿದ್ದಾರೆ. ಇದು ಭವಿಷ್ಯದ ಬಗ್ಗೆ ಒಂದಿಷ್ಟು ಪ್ರಶ್ನೆಗಳನ್ನು, ಭೀತಿಯನ್ನು ಸೃಷ್ಟಿಸಿದೆ. ವಿಶ್ವದ ಇನ್ನೊಂದು ಸೂಪರ್‌ಪವರ್ ದೇಶವು ಆರ್ಥಿಕ ಬೆಳವಣಿಗೆ ಕುಸಿತದ ಕಾರಣದಿಂದಾಗಿ ದುರ್ಬಲಗೊಂಡಿದೆ. ಹವಾಮಾನ ಬದಲಾವಣೆ ಎಂಬುದು ವಾಸ್ತವ. ಅದರ ಪರಿಣಾಮಗಳನ್ನು ಮನುಕುಲ ಎದುರಿಸುತ್ತಿದೆ. ಆದರೆ ಅದನ್ನು ನಿರ್ವಹಿಸುವುದು ಹೇಗೆ ಎಂಬ ವಿಚಾರದಲ್ಲಿ ಒಮ್ಮತಕ್ಕೆ ಬರಲು ಜಾಗತಿಕ ಸಮುದಾಯಕ್ಕೆ ಇನ್ನೂ ಸಾಧ್ಯವಾಗಿಲ್ಲ. 2024ರ ಸಿಹಿ–ಕಹಿ ಏನೇ ಇರಲಿ, ಹೊಸ ವರ್ಷದ ಹೊಸ್ತಿಲಲ್ಲಿ ನಿಂತು, ಈಗಷ್ಟೇ ಸರಿದುಹೋದ ವರ್ಷದಲ್ಲಿ ಕಂಡಂತಹ ವಿಪತ್ತುಗಳು, ಉಂಡ ಕಹಿಗಳು 2025ರಲ್ಲಿ ಎದುರಾಗದೇ ಇರಲಿ ಎಂಬ ಹಾರೈಕೆಯನ್ನು ಹೊಂದಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.