ADVERTISEMENT

Editorial | ಈಶಾನ್ಯ ರಾಜ್ಯಗಳ ಫಲಿತಾಂಶ: ಸಂಪ್ರದಾಯದ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 2:04 IST
Last Updated 3 ಮಾರ್ಚ್ 2023, 2:04 IST
   

2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಪೀಠಿಕೆ ಎಂಬಂತೆ ಪರಿಗಣಿತವಾಗಿರುವ ವಿಧಾನಸಭಾ ಚುನಾವಣೆಗಳ ಪೈಕಿ, ಮೂರು ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ತೋರಿಸಿಕೊಟ್ಟಿದೆ. ದೇಶದ ಮೂರು ಈಶಾನ್ಯ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದೆ. ಮೇಘಾಲಯ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಸ್ಪಷ್ಟವಾಗಿ ತೋರಿಸಿದೆ. ದೇಶದ ಈಶಾನ್ಯ ರಾಜ್ಯಗಳು ತಮ್ಮ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮೊದಲಿನಿಂದಲೂ, ಕೇಂದ್ರದಲ್ಲಿ ಅಧಿಕಾರ ಹಿಡಿದ ಪಕ್ಷವನ್ನು ಬೆಂಬಲಿಸುತ್ತ ಬಂದಿವೆ.

ಇದಕ್ಕೆ ಐತಿಹಾಸಿಕ ಕಾರಣಗಳೂ ಇವೆ. ಇಲ್ಲಿ ಚುನಾವಣೆಗಳ ಸಂದರ್ಭದಲ್ಲಿ ಹೆಚ್ಚು ಪ್ರಭಾವ ಬೀರುವುದು ಪಕ್ಷಗಳ ಸಿದ್ಧಾಂತಗಳಲ್ಲ. ಬದಲಿಗೆ, ಇಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಹಿತಾಸಕ್ತಿಗಳು ಹೆಚ್ಚು ಕೆಲಸ ಮಾಡುತ್ತವೆ. ಹೀಗಾಗಿ, ಆಡಳಿತ ಪಕ್ಷವಾಗಿದ್ದ ಅಥವಾ ಆಡಳಿತ ಮೈತ್ರಿಕೂಟದ ಭಾಗವಾಗಿದ್ದ ಬಿಜೆಪಿಯು ಈ ರಾಜ್ಯಗಳಲ್ಲಿ ಒಳ್ಳೆಯ ಫಲಿತಾಂಶ ಪಡೆದಿರುವುದು ಆಶ್ಚರ್ಯ ಮೂಡಿಸುವಂಥದ್ದೇನೂ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ, ಸಂಪನ್ಮೂಲಗಳ ಲಭ್ಯತೆ, ಕೆಲವು ವಿಷಯಗಳನ್ನು ಜಾಣ್ಮೆಯಿಂದ ನಿಭಾಯಿಸಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಾರ್ಗದರ್ಶನದಲ್ಲಿ ಸುಸಂಘಟಿತವಾಗಿ ನಡೆದ ಚುನಾವಣಾ ಅಭಿಯಾನ, ಮೇಘಾಲಯ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಬೇರೆ ಪಕ್ಷಗಳಲ್ಲಿ ಹೆಚ್ಚಿನ ಬಲ ಇಲ್ಲದಿದ್ದುದು ಬಿಜೆಪಿ ಪ್ರಾಬಲ್ಯ ಮೆರೆಯುವುದಕ್ಕೆ ಕಾರಣಗಳಾಗಿ ಬಂದವು.

ತ್ರಿಪುರಾದಲ್ಲಿ 2018ರಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯಿತು. ಈಗ ಅಲ್ಲಿ ಅಧಿಕಾರವನ್ನು ಪಕ್ಷ ಉಳಿಸಿಕೊಂಡಿದೆ. ಹೀಗಿದ್ದರೂ ಅಲ್ಲಿ ಪಕ್ಷಕ್ಕೆ ಒಂದಿಷ್ಟು ಎಚ್ಚರಿಕೆಯ ಸಂದೇಶಗಳು ರವಾನೆಯಾಗಿವೆ. ಪಕ್ಷವು ಅಲ್ಲಿ ಕಟ್ಟಿಕೊಂಡಿರುವ ಮೈತ್ರಿಕೂಟವು ಕೆಲವು ಸ್ಥಾನಗಳನ್ನು ಕಳೆದುಕೊಂಡಿದೆ. ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳಿಗಿಂತ ತುಸು ಹೆಚ್ಚು ಸ್ಥಾನಗಳನ್ನು ಮಾತ್ರ ಮೈತ್ರಿಕೂಟವು ಗೆದ್ದುಕೊಂಡಿದೆ. ಅಲ್ಲಿನ ಸರ್ಕಾರಕ್ಕೆ ಹೇಳಿಕೊಳ್ಳುವ ಹೆಸರು ಇರಲಿಲ್ಲ. ಆಡಳಿತ ವಿರೋಧಿ ಅಲೆಯನ್ನು ನಿಯಂತ್ರಿಸಲು ಅಲ್ಲಿ ಹಿಂದಿನ ವರ್ಷ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾಯಿತು. ಕಾಂಗ್ರೆಸ್ ಹಾಗೂ ಸಿಪಿಎಂ ನಡುವಿನ ಹೊಂದಾಣಿಕೆಯು ಬಿಜೆಪಿಗೆ ಸವಾಲು ಒಡ್ಡುವ ಹಂತಕ್ಕೆ ಹೋಗಲಿಲ್ಲ. ಆದರೆ, ಅದು ಎಡಪಕ್ಷವು ಈ ಹಿಂದೆ ಹೊಂದಿದ್ದ ಸ್ಥಾನಗಳನ್ನು ಬಹುತೇಕ ಉಳಿಸಿಕೊಳ್ಳುವಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ.

ADVERTISEMENT

ತ್ರಿಪುರಾದಲ್ಲಿ ಚುನಾವಣಾ ಹೀರೊ ಆಗಿ ಹೊರಹೊಮ್ಮಿರುವುದು ಅಲ್ಲಿನ ಟಿಪರಾ ಮೊಥಾ ಪಕ್ಷ. ಕಾಂಗ್ರೆಸ್ಸಿನ ಮಾಜಿ ನಾಯಕ ಪ್ರದ್ಯೋತ್ ದೇಬ್‌ ಬರ್ಮನ್‌ ಅವರು ಸ್ಥಾಪಿಸಿದ ಈ ಪಕ್ಷವು ಅಲ್ಲಿನ ಬುಡಕಟ್ಟು ಸಮುದಾಯಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿದೆ. ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಪ್ರಮುಖ ಮೈತ್ರಿಪಕ್ಷ ಎನ್‌ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪೀಪಲ್ಸ್ ಪಾರ್ಟಿ) ನಿರ್ಣಾಯಕ ಗೆಲುವು ಸಾಧಿಸಿವೆ. ಹಿಂದೆ ಸರ್ಕಾರದ ಭಾಗವಾಗಿದ್ದ ಎನ್‌ಪಿಎಫ್‌ ಕೆಟ್ಟ ಸೋಲು ಕಂಡಿದೆ. ಕಾಂಗ್ರೆಸ್ ಅಲ್ಲಿ ದೂಳೀಪಟವಾಗಿದೆ.

ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ನೇತೃತ್ವದ ಎನ್‌ಪಿಪಿ (ನ್ಯಾಷನಲಿಸ್ಟ್‌ ಪೀಪಲ್ಸ್ ಪಾರ್ಟಿ) ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಹೀಗಿದ್ದರೂ, ಅದು ಬೇರೊಂದು ಪಕ್ಷದ ಬೆಂಬಲ ಪಡೆದು ಸರ್ಕಾರ ರಚಿಸುವಷ್ಟು ಸಂಖ್ಯಾಬಲ ಹೊಂದಿದೆ. ಬಿಜೆಪಿಯು ಸಂಗ್ಮಾ ಅವರಿಗೆ ಸರ್ಕಾರ ರಚಿಸಲು ಬೆಂಬಲ ಕೊಡುವ ಸಾಧ್ಯತೆ ದಟ್ಟವಾಗಿದೆ, ಬೆಂಬಲದ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ ಎಂಬ ವರದಿಗಳು ಇವೆ. ಚುನಾವಣೆಗೂ ಮೊದಲು ಎನ್‌ಪಿಪಿ, ಬಿಜೆಪಿ ಜೊತೆಗಿನ ಸಖ್ಯವನ್ನು ಕಡಿದುಕೊಂಡಿತ್ತು.

ಈ ರಾಜ್ಯದಲ್ಲಿ ಬಲ ಕಾಯ್ದುಕೊಂಡ ಸಮಾಧಾನ ಬಿಜೆಪಿಗೆ ಇದ್ದಿರಬಹುದು. ಇಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ತನ್ನ ಅಸ್ತಿತ್ವ ತೋರಿಸಿದೆ. ಟಿಎಂಸಿಯು ಕಾಂಗ್ರೆಸ್ಸಿನ ಬಹುತೇಕ ನಾಯಕರನ್ನು ತನ್ನತ್ತ ಸೆಳೆದಿತ್ತು. ಆದರೆ, ಸಾರಾಸಗಟಾಗಿ ಆಗಿದ್ದ ನಾಯಕರ ವಲಸೆಯನ್ನು ಚುನಾವಣಾ ಫಲಿತಾಂಶವು ಪ್ರತಿಫಲಿಸುತ್ತಿಲ್ಲ. ಶಾಸಕರನ್ನು ಉಳಿಸಿಕೊಳ್ಳಲಾಗದಿದ್ದ ಕಾಂಗ್ರೆಸ್, ತಳಮಟ್ಟದಲ್ಲಿ ಅಸ್ತಿತ್ವ ಉಳಿಸಿಕೊಂಡಿದ್ದೇನೆ ಎಂಬುದನ್ನು ತೋರಿಸಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.