ADVERTISEMENT

ಸಂವಿಧಾನದ ಆಶಯ ಸೋಲಿಸುವ ರಾಜಕಾರಣಿಗಳ ನಡವಳಿಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 20:15 IST
Last Updated 29 ಜನವರಿ 2019, 20:15 IST
ಸಂಪಾದಕೀಯ
ಸಂಪಾದಕೀಯ   

ಸಂವಿಧಾನ ಪ್ರತಿಪಾದಿಸುವ ‘ಸಮಾನತೆ’ಯ ಆಶಯದಲ್ಲಿ ಪುರುಷ ಪ್ರಧಾನ ಸಮಾಜ, ಊಳಿಗಮಾನ್ಯ ವ್ಯವಸ್ಥೆ ಮತ್ತು ಕೋಮು ಆಧಾರಿತ ವಿಭಜನೆಗಳನ್ನು ಇಲ್ಲವಾಗಿಸುವ ಗುರಿಗಳಿವೆ. ಸಂವಿಧಾನದ ಆಶಯಗಳನ್ನು ಅನುಷ್ಠಾನಕ್ಕೆ ತರುತ್ತೇವೆಂದು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೇರಿರುವ ಜನಪ್ರತಿನಿಧಿಗಳೇ ಸಮಾನತೆ ಎಂಬ ಆಶಯವನ್ನು ಸಾರ್ವಜನಿಕವಾಗಿ ಸಂಪೂರ್ಣವಾಗಿ ಉಲ್ಲಂಘಿಸುವ ವಿಚಿತ್ರ ವಿದ್ಯಮಾನವೊಂದು ಪ್ರತಿದಿನವೂ ನಮ್ಮ ಕಣ್ಣೆದುರು ಅನಾವರಣಗೊಳ್ಳುತ್ತಿದೆ.

ಬಿಹಾರದ ಮಂತ್ರಿ ವಿನೋದ್ ನಾರಾಯಣ ಝಾ ಅವರು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಂದ ಪ್ರಿಯಾಂಕಾ ಗಾಂಧಿಯವರನ್ನು ಟೀಕಿಸಲು ಹೊರಟಾಗ ಅವರಿಗೆ ರಾಜಕೀಯ ನೆನಪಿಗೇ ಬರಲಿಲ್ಲ. ಪ್ರಿಯಾಂಕಾ ಒಬ್ಬ ಮಹಿಳೆ ಎಂಬುದನ್ನೇ ಮನಸ್ಸಿನಲ್ಲಿಟ್ಟುಕೊಂಡು ಟೀಕಿಸಿದರು. ಉತ್ತರಪ್ರದೇಶದ ಶಾಸಕಿ ಸಾಧನಾ ಸಿಂಗ್ ಸ್ವತಃ ಮಹಿಳೆಯಾದರೂ ಮಾಯಾವತಿಯವರನ್ನು ಟೀಕಿಸಲು ಬಳಸಿದ್ದು ಅದೇ ಪುರುಷ ಪ್ರಧಾನ ವ್ಯವಸ್ಥೆಯ ಪರಿಭಾಷೆಯನ್ನು.

ಕೋಮು ಭಾವನೆಗಳನ್ನು ಪ್ರಚೋದಿಸುವ ಮಾತುಗಳನ್ನಾಡುತ್ತಲೇ ಬಂದಿರುವ ಕೇಂದ್ರ ಮಂತ್ರಿ ಅನಂತಕುಮಾರ ಹೆಗಡೆ ತಮ್ಮನ್ನು ಟೀಕಿಸಿದ ದಿನೇಶ್ ಗುಂಡೂರಾವ್ ಅವರ ಮೇಲೆ ದಾಳಿ ನಡೆಸಿದ್ದೂ ಹೀಗೆಯೇ. ದಿನೇಶ್ ಅವರ ಪತ್ನಿ ತಬು ರಾವ್ ಅವರನ್ನು ಗುರಿಯಾಗಿಟ್ಟುಕೊಂಡು ಅನಂತಕುಮಾರ ಹೆಗಡೆ ನಾಲಗೆ ಹರಿಬಿಟ್ಟರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಗ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಭೆಯೊಂದರಲ್ಲಿ ತಮ್ಮದೇ ಪಕ್ಷದ ಸ್ಥಳೀಯ ನಾಯಕಿಯೊಬ್ಬರ ಮೇಲೆ ಜಮೀನ್ದಾರಿಕೆಯ ಗತ್ತಿನಲ್ಲಿ ಹರಿಹಾಯ್ದರು. ಈ ಎಲ್ಲಾ ಪ್ರಕರಣಗಳ ಮಧ್ಯೆಯೂ ಹಲವು ಸೂಕ್ಷ್ಮ ವ್ಯತ್ಯಾಸಗಳಿವೆ. ಆದರೆ ಎಲ್ಲದರಲ್ಲೂ ಸಮಾನವಾಗಿರುವ ಒಂದು ಸಾಮಾನ್ಯ ಅಂಶವಿದೆ. ಪ್ರತಿಬಾರಿಯೂ ದಾಳಿಗೆ ಒಳಗಾದದ್ದು ಒಬ್ಬ ಹೆಣ್ಣು.

ADVERTISEMENT

ಪ್ರಿಯಾಂಕಾ ಅವರನ್ನು ಟೀಕಿಸುವುದರ ಹಿಂದಿನ ಕಾರಣಗಳು ಏನೇ ಇದ್ದರೂ ಟೀಕೆಗೆ ಸಿಕ್ಕಿದ್ದು ಆಕೆ ಮಹಿಳೆ ಎಂಬ ವಿಚಾರ. ಉಳಿದ ಪ್ರಕರಣಗಳಲ್ಲಿಯೂ ಇದುವೇ ಕಾಣಿಸುತ್ತದೆ. ಅಂದರೆ ಪುರುಷ ಪ್ರಧಾನ ವ್ಯವಸ್ಥೆ, ಊಳಿಗಮಾನ್ಯ ನಿಲುವುಗಳು ಮತ್ತು ಕೋಮುವಾದಗಳೆಲ್ಲವೂ ಕೊನೆಗೂ ಬಲಿಪಶುವನ್ನಾಗಿಸುವುದು ಮಹಿಳೆಯನ್ನೇ ಎಂಬುದನ್ನು ಇದು ಸೂಚಿಸುತ್ತದೆ. ದುರದೃಷ್ಟವೆಂದರೆ, ಈ ಎಲ್ಲಾ ಪ್ರಕರಣಗಳನ್ನು ಒಟ್ಟಾಗಿ ನೋಡಿದರೆ ಮತ್ತೊಂದು ಅಂಶವೂ ಕಾಣಿಸುತ್ತದೆ. ಯಾವುದೇ ರೀತಿಯ ಸಾಮಾಜಿಕ, ರಾಜಕೀಯ ಅಥವಾ ಸೈದ್ಧಾಂತಿಕ ಹಿನ್ನೆಲೆಗಳಿಂದ ಬಂದರೂ ಮಹಿಳೆಯನ್ನು ಕೀಳಾಗಿಸಿ ಮಾತನಾಡುವುದರಲ್ಲಿ ಸಮಾನತೆ ಇದೆ ಎಂಬ ದುರಂತವೂ ಈ ಪ್ರಕರಣಗಳಲ್ಲಿ ಕಾಣಸಿಗುತ್ತದೆ.

ರಾಜಕಾರಣಿಗಳು ಹೀಗೆಲ್ಲಾ ಏಕೆ ವರ್ತಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರನ್ನು ಆರಿಸಿರುವ ಮತದಾರರ ಮನೋಭಾವವನ್ನೇ ಶೋಧಿಸಬೇಕು. ಮೇಲೆ ಉದಾಹರಿಸಲಾದ ಎಲ್ಲಾ ಪ್ರಕರಣಗಳಲ್ಲೂ ಕೆಟ್ಟ ನಾಲಗೆಯನ್ನು ಹರಿಬಿಟ್ಟವರೆಲ್ಲರ ಪರವಾಗಿಯೂ ವಾದಿಸುವ ದೊಡ್ಡ ಸಮೂಹವೊಂದು ಇರುವುದು ಕಾಣಸಿಗುತ್ತದೆ. ಸಿದ್ದರಾಮಯ್ಯನವರ ಸಿಡುಕಿನ ವರ್ತನೆಯನ್ನು ಸಮರ್ಥಿಸಲು ‘ಅವರಿಂದ ಬೈಸಿಕೊಳ್ಳಲು ಇಚ್ಛೆಪಡುವವರೂ ಇದ್ದಾರೆ’ ಎಂಬ ಬಾಲಿಶ ಮಾತುಗಳು ಕೇಳಿಬಂದವು. ಹೀಗೆ ಬಹಿರಂಗವಾಗಿ ಹೇಳುವವರಲ್ಲಿ ಒಂದು ಸ್ವಾರ್ಥಭರಿತ ಅಂಧಾಭಿಮಾನವಿರುತ್ತದೆ. ಇದನ್ನು ಬಹಿರಂಗವಾಗಿ ಹಂಚಿಕೊಳ್ಳದೆಯೂ ಈ ಬಗೆಯ ವರ್ತನೆಯನ್ನು ಒಪ್ಪಿಕೊಳ್ಳುವ ಮೌನಿ ವರ್ಗವೊಂದು ದೊಡ್ಡ ಸಂಖ್ಯೆಯಲ್ಲಿ ಇದೆ ಎಂಬುದನ್ನೂ ನಾವು ಅರಿಯಬೇಕಾಗಿದೆ.

ಅನಂತಕುಮಾರ ಹೆಗಡೆ ತಮ್ಮ ‘ಬೆಂಕಿ ಭಾಷಣ’ಗಳ ಮೂಲಕವೇ ಮತದಾರ ವರ್ಗವೊಂದನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಧನಾ ಸಿಂಗ್ ಮತ್ತು ವಿನೋದ್ ನಾರಾಯಣ ಝಾ ಕೂಡಾ ಇದಕ್ಕೆ ಹೊರತಲ್ಲ. ಇನ್ನು ಸಿದ್ದರಾಮಯ್ಯನವರ ವಿಷಯಕ್ಕೇ ಬಂದರೂ ಅವರ ಸಿಡುಕು, ಊಳಿಗಮಾನ್ಯ ಸಂಸ್ಕೃತಿಯನ್ನು ಹೋಲುವ ವರ್ತನೆಗಳನ್ನು ಆರಾಧಿಸುವ ವರ್ಗವೊಂದಿದೆ. ಈ ಆರಾಧಕರಿಗೆ ಸಂವಿಧಾನದ ಆಶಯಗಳ ಬಗ್ಗೆ ಗೊತ್ತಿದೆಯೋ ಇಲ್ಲವೋ ಎಂಬುದು ಅಸ್ಪಷ್ಟ. ಆದರೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿರುವವರಿಗೆ ಖಂಡಿತವಾಗಿಯೂ ಸಂವಿಧಾನದ ಆಶಯಗಳ ಅರಿವು ಇದೆ. ಆದರೆ ಅವರು ಅದನ್ನು ಪ್ರಜ್ಞಾಪೂರ್ವಕವಾಗಿ ಮರೆಯುವುದರ ಮೂಲಕವೇ ತಮ್ಮ ಮತಗಳನ್ನು ಗಳಿಸುತ್ತಿದ್ದಾರೆ.

ಬಹುಶಃ ಈ ಸ್ಥಿತಿ ಬದಲಾಗುವ ತನಕವೂ ನಾವುಸಂವಿಧಾನದ ಆಶಯವನ್ನು ಎತ್ತಿಹಿಡಿಯುವ ರಾಜಕೀಯ ಸಂಸ್ಕೃತಿಯೊಂದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಅರ್ಥಪೂರ್ಣಗೊಳಿಸುವ ಒಂದು ಜನಸಂಸ್ಕೃತಿಯೊಂದು ಬೇಕು ಎಂಬುದು ಅತಿ ಆಶಾವಾದವಾಗುತ್ತದೆ. ಕನಿಷ್ಠಪಕ್ಷ, ಮಾದರಿಯಾಗಿ ನಡೆದುಕೊಳ್ಳುವ ಜನಪ್ರತಿನಿಧಿಗಳ ಸಂಸ್ಕೃತಿಯಾದರೂ ನಮಗಿದೆಯೇ ಎಂದು ನೋಡಿಕೊಂಡರೆ ಅಲ್ಲಿಯೂ ನಿರಾಶೆ ಹುಟ್ಟಿಸುವಂಥ ವಾತಾವರಣವೇ ಇದೆ. ಈ ವಿಷವರ್ತುಲದಿಂದ ಪಾರಾಗದ ಹೊರತು ಸಂವಿಧಾನದ ಆಶಯಗಳು ಸಾಕಾರಗೊಳ್ಳುವುದಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.