
ಸಂಪಾದಕೀಯ
ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದೆ. ರೈತರ ಪ್ರತಿಭಟನೆಗೆ ಸ್ಪಂದಿಸುವಲ್ಲಿ ಸರ್ಕಾರಗಳು ಅನುಸರಿಸುವ ವಿಳಂಬ ಧೋರಣೆ ಈ ಬಾರಿಯೂ ಮುಂದುವರಿದಿರುವುದು ಜನಪ್ರತಿನಿಧಿಗಳ ರೈತಕಾಳಜಿ ಮಾತುಗಳಿಗಷ್ಟೇ ಸೀಮಿತ ಎನ್ನುವುದಕ್ಕೆ ನಿದರ್ಶನದಂತಿದೆ. ಟನ್ ಕಬ್ಬಿಗೆ ₹3,500 ದರ ನೀಡಬೇಕೆನ್ನುವುದು ರೈತರ ಆಗ್ರಹ. ಇಂಧನ, ರಸಗೊಬ್ಬರ, ಕೃಷಿ ಕಾರ್ಮಿಕರ ವೆಚ್ಚ ಸೇರಿದಂತೆ ಕಬ್ಬು ಬೆಳೆಗೆ ಆಗುತ್ತಿರುವ ವೆಚ್ಚ ಹೆಚ್ಚಾಗಿರುವುದರಿಂದ, ಸರ್ಕಾರವು ಕಬ್ಬಿಗೆ ಘೋಷಿಸಿರುವ ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ಹೆಚ್ಚಾಗಬೇಕೆನ್ನುವುದು ಸಾಮಾನ್ಯ ಜ್ಞಾನ. ಜೀವನವಶ್ಯಕ ವಸ್ತುಗಳ ಬೆಲೆ ನಿಯಂತ್ರಣದ ಬಗ್ಗೆ ಸಾಮಾನ್ಯವಾಗಿ ತಲೆ ಕೆಡಿಸಿಕೊಳ್ಳದ ಸರ್ಕಾರಗಳು, ರೈತರಿಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಚೌಕಾಸಿಗಿಳಿಯುತ್ತವೆ. ಈ ಚೌಕಾಸಿಗೆ ಜಗ್ಗದೆ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದ್ದಾರೆ. ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ರಾಯಚೂರು, ಗದಗ, ಹಾವೇರಿ, ರಾಯಚೂರು, ಕಲಬುರಗಿ, ಶಿವಮೊಗ್ಗ, ದಾವಣಗೆರೆ, ಮಂಡ್ಯ ಜಿಲ್ಲೆಗಳ ರೈತರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ರೈತರ ಆಂದೋಲನಕ್ಕೆ ಜನಬೆಂಬಲವೂ ದೊರೆಯುತ್ತಿದೆ; ರಸ್ತೆ ತಡೆ, ಪಾದಯಾತ್ರೆ, ಉಪವಾಸ, ನಿರಶನ, ಬಂದ್, ಅರೆಬೆತ್ತಲೆ ಪ್ರತಿಭಟನೆ ಸೇರಿದಂತೆ ವಿವಿಧ ರೀತಿಯಲ್ಲಿ ರೈತರ ಆಂದೋಲನ ತೀವ್ರಗೊಳ್ಳುತ್ತಿದೆ. ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂಪ್ರೇರಿತ ಬಂದ್ ವಾತಾವರಣ ರೂಪುಗೊಂಡಿದೆ.
ಟನ್‌ಗೆ ₹3,500ಕ್ಕಿಂತಲೂ ಒಂದು ರೂಪಾಯಿ ಕಡಿಮೆಯಾದರೂ ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿರುವ ರೈತರು, ತಮ್ಮ ಒತ್ತಾಯ ಈಡೇರದೆ ಹೋದರೆ ಈ ವರ್ಷದ ಕಬ್ಬು ನುರಿಯುವ ಹಂಗಾಮು ಆರಂಭವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ರೈತರ ಬೇಡಿಕೆ ನ್ಯಾಯಯುತವಾದುದು. ಮಹಾರಾಷ್ಟ್ರದಲ್ಲಿ ಕಬ್ಬಿಗೆ ₹3,410 ದರ ನೀಡಲಾಗುತ್ತಿದೆ. ಮಹಾರಾಷ್ಟ್ರದ ಬಿದ್ರಿಯ ದೂಧಗಂಗಾ– ವೇದಗಂಗಾ ಸಹಕಾರ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ ₹3,614 ಕೊಡುವುದಾಗಿ ಹೇಳಿದೆ. ನೆರೆಯ ರಾಜ್ಯದ ಕಾರ್ಖಾನೆಗಳು ಹೆಚ್ಚಿನ ದರ ನೀಡುತ್ತಿರುವಾಗ ಇಲ್ಲಿನ ಕಾರ್ಖಾನೆಗಳು ₹3,010 ದರ ನೀಡುವುದನ್ನು ಒಪ್ಪಿಕೊಳ್ಳುವುದು ಹೇಗೆ? ಉಪ ಉತ್ಪನ್ನಗಳಲ್ಲಿ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದರೆ, ರೈತರಿಗೆ ಹೆಚ್ಚಿನ ದರ ದೊರಕಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಸಕ್ಕರೆ, ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅವರು ಹೇಳಿದ್ದಾರೆ. ಬೆಲೆ ನಿರ್ಧಾರ ನಾಲ್ಕು ಗೋಡೆಗಳ ನಡುವೆ ನಡೆಯಬೇಕಾದ ಪ್ರಕಿಯೆಯಾಗಿದ್ದು, ರಸ್ತೆಯಲ್ಲಿ ಈ ಬಗ್ಗೆ ಚರ್ಚೆ ಬೇಡ ಎಂದೂ ಸಚಿವರು ಹೇಳಿದ್ದಾರೆ. ರೈತರು ಬೀದಿಗಿಳಿಯುವ ಸ್ಥಿತಿಯನ್ನು ಸರ್ಕಾರವೇ ತಂದಿದೆ ಎನ್ನುವುದನ್ನು ಸಚಿವರು ಮರೆಯಬಾರದು. ಪ್ರತಿಭಟನೆ ಆರಂಭವಾಗಿ ವಾರದ ನಂತರ ಸ್ಥಳಕ್ಕೆ ಭೇಟಿ ನೀಡಿರುವ ಕಾನೂನು ಸಚಿವ ಎಚ್.ಕೆ. ಪಾಟೀಲ ಬೆಳೆಗಾರರ ಅಹವಾಲು ಆಲಿಸಿರುವುದು ಬಿಟ್ಟರೆ, ಸರ್ಕಾರದ ಕಡೆಯಿಂದ ರೈತರಿಗೆ ಯಾವ ಸ್ಪಂದನವೂ ದೊರೆತಿಲ್ಲ. ರೈತರಿಗೆ ನ್ಯಾಯ ದೊರಕಿಸಿಕೊಡುವ ವಿಷಯವೂ ರಾಜಕೀಯ ಕೆಸರೆರಚಾಟದ ಸಂಗತಿಯಾಗಿರುವುದು ದುರದೃಷ್ಟಕರ. ರಾಜ್ಯ ಸರ್ಕಾರ ರೈತರ ಹಿತಾಸಕ್ತಿ ರಕ್ಷಿಸುತ್ತಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ. ಕಬ್ಬಿಗೆ ಬೆಲೆ ನಿಗದಿಪಡಿಸುವುದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರ ಹಾಗೂ ವಿಪಕ್ಷಗಳ ಮಾತುಗಳು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ತರ್ಕದಂತೆ ಇವೆಯೇ ಹೊರತು, ರೈತರ ಹಿತಾಸಕ್ತಿ ಇಬ್ಬರಿಗೂ ಮುಖ್ಯವಾದಂತಿಲ್ಲ. 2013–14ರಲ್ಲಿ ಕಬ್ಬಿನ ಬೆಳೆಗಾರರು ಬೆಳಗಾವಿಯಲ್ಲಿ ಇದೇ ರೀತಿ ಪ್ರತಿಭಟನೆ ನಡೆಸಿದ್ದರು, ಓರ್ವ ರೈತ ವಿಷ ಸೇವಿಸಿ ಸಾವನ್ನಪ್ಪಿದ್ದರು. ಆಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಈಗಲೂ ಪ್ರತಿಭಟನಾನಿರತ ರೈತರೊಬ್ಬರು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ದುರಂತ ಮರುಕಳಿಸದಂತೆ ನೋಡಿಕೊಳ್ಳಬೇಕಾದ ವಿವೇಕವನ್ನು ಸರ್ಕಾರ ಪ್ರದರ್ಶಿಸಬೇಕಾಗಿದೆ.
ಸಕ್ಕರೆ ಕಾರ್ಖಾನೆಗಳ ಮಾಲೀಕರಲ್ಲಿ ಬಹುತೇಕರು ರಾಜಕೀಯ ಪಕ್ಷಗಳ ಮುಖಂಡರೇ ಆಗಿದ್ದಾರೆ. ಆ ರಾಜಕೀಯ ಒತ್ತಡವನ್ನು ಮೀರಿ, ಸರ್ಕಾರ ತನ್ನ ರೈತಕಾಳಜಿಯನ್ನು ಸಾಬೀತುಪಡಿಸಬೇಕಾಗಿದೆ. ರೈತರ ಪ್ರತಿಭಟನೆಯನ್ನು ಕಬ್ಬಿನ ಬೆಲೆ ಏರಿಕೆಯ ರೂಪದಲ್ಲಷ್ಟೇ ಸರ್ಕಾರ ಲಘುವಾಗಿ ನೋಡಬಾರದು. ಕಬ್ಬು ಬೆಳೆಯುವ ಪ್ರದೇಶಗಳ ಆರ್ಥಿಕತೆಗೆ ಸಂಬಂಧಿಸಿದ ವಿಚಾರ ಇದಾಗಿದೆ. ರೈತರು ಸಬಲರಾಗದೆ ಹಾಗೂ ಗ್ರಾಮೀಣ ಆರ್ಥಿಕತೆ ಉತ್ತಮಗೊಳ್ಳದೆ ರಾಜ್ಯ ನೆಮ್ಮದಿಯಿಂದಿರುವುದು ಸಾಧ್ಯವಿಲ್ಲ. ಹಾಗಾಗಿ, ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯ ಏರಿಳಿತ ಕಬ್ಬಿನ ದರದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಕಬ್ಬು ಅರೆಯುವ ಸಂದರ್ಭದಲ್ಲಿ ದೊರೆಯುವ ಉಪ ಉತ್ಪನ್ನಗಳೂ ಆದಾಯದ ಮೂಲವಾಗಿವೆ. ಈ ಆದಾಯದಲ್ಲಿ ಬೆಳೆಗಾರರಿಗೂ ಪಾಲು ದೊರಕಿಸುವ ದಿಸೆಯಲ್ಲಿ ಸರ್ಕಾರ ಪ್ರಯತ್ನ ನಡೆಸಬೇಕಾಗಿದೆ. ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಮೊದಲೇ, ಕಬ್ಬು ಬೆಳೆಗಾರರ ಬೇಡಿಕೆಯನ್ನು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಿ, ರೈತರ ಹಿತಾಸಕ್ತಿ ರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು; ರೈತರಿಗೆ ಸಕಾಲದಲ್ಲಿ ಹಣ ದೊರೆಯುವಂತೆ, ತೂಕದಲ್ಲಿ ಮೋಸ ಆಗದಂತೆ ನೋಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.