ADVERTISEMENT

ತರಬೇತಿ ವಿಮಾನ ಅಪಘಾತ ಎಚ್ಚರಿಕೆಯ ಹೆಜ್ಜೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:08 IST
Last Updated 20 ಫೆಬ್ರುವರಿ 2019, 20:08 IST
ವಿಮಾನ ದುರಂತ
ವಿಮಾನ ದುರಂತ   

ಗಗನದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳನ್ನು ಎರಚುತ್ತಾ ನವಿಲಿನಂತೆ ನರ್ತಿಸುತ್ತಿದ್ದ ಭಾರತೀಯ ವಾಯುಪಡೆಯ ಸೂರ್ಯಕಿರಣ್‌ (ಹಾಕ್‌) ತರಬೇತಿ ವಿಮಾನಗಳೆರಡು ಪರಸ್ಪರ ರೆಕ್ಕೆ ತಗುಲಿ ನೆಲಕ್ಕೆ ಉರುಳಿವೆ. ಏರೋಇಂಡಿಯಾ– 2019 ವೈಮಾನಿಕ ಪ್ರದರ್ಶನದ ಮುನ್ನಾ ದಿನ ಆಗಸದಲ್ಲಿ ತಾಲೀಮು ನಡೆಸಲು ಈ ವಿಮಾನಗಳು ಯಲಹಂಕ ವಾಯುನೆಲೆಯಿಂದ ಗಗನಮುಖಿಯಾದ ಕೆಲವೇ ನಿಮಿಷಗಳಲ್ಲಿ ಈ ಅವಘಡ ಸಂಭವಿಸಿದೆ. ಎರಡೂ ವಿಮಾನಗಳು ಆಗಸದಲ್ಲೇ ಉರಿದು, ಯಲಹಂಕದ ವಾಯುನೆಲೆಯಿಂದ 17 ಕಿ.ಮೀ. ದೂರದ, ಜನವಸತಿಯ ಇಸ್ರೊ ಬಡಾವಣೆಯಲ್ಲಿ ನೆಲಕ್ಕೆ ಅಪ್ಪಳಿಸಿವೆ.

ವಿಮಾನದಲ್ಲಿ ಯಾವುದೇ ತಾಂತ್ರಿಕ ತೊಂದರೆ ಇಲ್ಲದಿದ್ದರೂ ಈ ಆಕಸ್ಮಿಕ ಘಟಿಸಿದೆ. ಮೂವರು ಪೈಲಟ್‌ಗಳ ಪೈಕಿ 37 ವರ್ಷದ ವಿಂಗ್‌ ಕಮಾಂಡರ್‌ ಸಾಹಿಲ್‌ ಗಾಂಧಿ ಮೃತರಾಗಿದ್ದಾರೆ. ಮೂವರೂ ವಿಮಾನದ ಇಜೆಕ್ಟ್ ಬಟನ್‌ ಒತ್ತಿದ್ದರೂ ಸಾಹಿಲ್‌ ಧರಿಸಿದ್ದ ಪ್ಯಾರಾಚೂಟ್‌ ತೆರೆದುಕೊಳ್ಳುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡು ವಿಮಾನದ ಜೊತೆಗೆ ಅವರೂ ನೆಲಕ್ಕೆ ಅಪ್ಪಳಿಸಿದರು. ವಿಂಗ್‌ ಕಮಾಂಡರ್‌ ವಿಜಯ್‌ ಶೆಲ್ಕೆ ಹಾಗೂ ಸ್ಕ್ವಾಡ್ರನ್‌ ಲೀಡರ್‌ ತೇಜೇಶ್ವರ್‌ ಸಿಂಗ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ಪರಸ್ಪರ ರೆಕ್ಕೆ ತಗುಲಿ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಭಾಸವಾಗಿದೆ.

ಭಾರತೀಯ ವಾಯುಪಡೆಯು ದುರ್ಘಟನೆಯ ತನಿಖೆಗೆ ಆದೇಶಿಸಿದೆ. ಅದೃಷ್ಟವಶಾತ್‌ ನಾಗರಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಏರೋ ಇಂಡಿಯಾ ಪ್ರದರ್ಶನವು ಅಪಘಾತಗಳಿಂದ ಮುಕ್ತವಾಗಿಲ್ಲ. 2007ರಲ್ಲಿ ಸಾರಂಗ್‌ ಹೆಲಿಕಾಪ್ಟರ್‌ ದುರಂತದಲ್ಲಿ ಸ್ಕ್ವಾಡ್ರನ್‌ ಲೀಡರ್‌ ಪ್ರಿಯೆ ಶರ್ಮ ಮೃತಪಟ್ಟಿದ್ದರು. ಅದೇ ವರ್ಷ, ಇಂಟರ್‌ಮೀಡಿಯಟ್‌ ಜೆಟ್‌ ತರಬೇತಿ ಯುದ್ಧವಿಮಾನವು ಆಗಸಕ್ಕೆ ಹಾರುವ ಮುನ್ನವೇ ಅದರ ಚಕ್ರ ರನ್‌ವೇನಲ್ಲಿ ಸ್ಫೋಟಗೊಂಡಿತ್ತು. 2015ರಲ್ಲಿ ಜೆಕ್‌ ಗಣರಾಜ್ಯದ ರೆಡ್‌ ಬುಲ್‌ ವಿಮಾನಗಳ ರೆಕ್ಕೆಗಳು ಪರಸ್ಪರ ಉಜ್ಜಿಕೊಂಡಿದ್ದವು. ಯುದ್ಧೋಪಕರಣ ಹಾಗೂ ಯುದ್ಧ ವಿಮಾನಗಳನ್ನು ತಯಾರಿಸುವ ಅಂತರರಾಷ್ಟ್ರೀಯ ಕಂಪನಿಗಳು ಭಾಗವಹಿಸುವ ಏರೋಇಂಡಿಯಾ ಉದ್ಘಾಟನೆಗೆ ಮುನ್ನಾ ದಿನ ಈ ದುರಂತ ನಡೆದಿರುವುದು ಭಾರತೀಯ ವಾಯುಪಡೆಯನ್ನು ಕಸಿವಿಸಿಗೆ ಈಡುಮಾಡಿದೆ.

ADVERTISEMENT

ಭಾರತೀಯ ವಾಯುಪಡೆಗೆ ಸೇರಿದ ಐದು ವಿಮಾನಗಳು ಬರೀ 21 ದಿನಗಳ ಅಂತರದಲ್ಲಿ ಅಪಘಾತಕ್ಕೆ ಈಡಾಗಿವೆ. ಮೂವರು ಪೈಲಟ್‌ಗಳು ಮೃತರಾಗಿದ್ದಾರೆ. ಜ.28ರಂದು ಗೋರಖಪುರದಲ್ಲಿ ಜಾಗ್ವಾರ್‌, ಫೆಬ್ರುವರಿ 12ರಂದು ಮಿಗ್‌–27 ರಾಜಸ್ಥಾನದಲ್ಲಿ ಅಪಘಾತಕ್ಕೆ ಒಳಗಾದರೆ, ಮೇಲ್ದರ್ಜೆಗೆ ಏರಿಸಿದ ಮಿರಾಜ್‌– 2000 ಫೆ.1ರಂದು ಬೆಂಗಳೂರಿನಲ್ಲಿ ರನ್‌ವೇ ಗೋಡೆಗೆ ಡಿಕ್ಕಿ ಹೊಡೆದಾಗ ಇಬ್ಬರು ಪರಿಣತ ಪೈಲಟ್‌ಗಳು ಸುಟ್ಟು ಕರಕಲಾದರು. ಎನ್ಎಎಲ್‌ ರೂಪಿಸಿದ ಸರಸ್‌ ಸಹ ಪರೀಕ್ಷಾರ್ಥ ಹಾರಾಟದ ವೇಳೆ ಅಪಘಾತಕ್ಕೆ ಈಡಾಗಿತ್ತು. ಇಂತಹ ಅಪಘಾತಗಳು ಪೈಲಟ್‌ಗಳು ಹಾಗೂ ಅವರ ಕುಟುಂಬಗಳ ಮನೋಬಲವನ್ನೇ ಉಡುಗಿಸುತ್ತವೆ.

ಬೆಂಗಳೂರಿನಲ್ಲಾದ ಮಿರಾಜ್‌ ಅಪಘಾತದ ಬಗೆಗಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನಮ್ಮ ವಿಮಾನಗಳ ಸ್ಥಿತಿಗತಿ ಬಗ್ಗೆ ಸೂಕ್ಷ್ಮವಾಗಿ ಟೀಕಿಸಿದೆ. ‘ವಿದೇಶಗಳಲ್ಲಿ ಮಿರಾಜ್‌ನ 5, 6ನೇ ಪೀಳಿಗೆಯ ವಿಮಾನಗಳು ಹಾರುತ್ತಿವೆ. ಆದರೆ ನಾವು 3, 3.5 ಪೀಳಿಗೆಯ ವಿಮಾನಗಳನ್ನೇ ನೆಚ್ಚಿಕೊಂಡಿದ್ದೇವೆ’ ಎಂದು ಕುಟುಕಿದೆ. ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿರುವ ಭಾರತೀಯ ವಾಯುಪಡೆಯು ಹಳೆಯ ಪೀಳಿಗೆಯ ಮಿರಾಜ್‌, ಜಾಗ್ವಾರ್‌, ಮಿಗ್‌ ಯುದ್ಧ ವಿಮಾನಗಳನ್ನೇ ಪದೇ ಪದೇ ಮೇಲ್ದರ್ಜೆಗೆ ಏರಿಸಿ ಮರುಬಳಕೆ ಮಾಡುತ್ತಿದೆ.

ತರಬೇತಿ ಹಂತದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾದ ಕಾರಣ ನಿಪುಣ ಪೈಲಟ್‌ಗಳನ್ನು ನಾವು ಕಳೆದುಕೊಳ್ಳುವಂತಾಗಿದೆ. ಅಪಘಾತದ ನಂತರ ಲೋಪಗಳನ್ನು ಪತ್ತೆ ಹಚ್ಚಿದರೂ ಅಮೂಲ್ಯ ಜೀವಗಳು ವಾಪಸ್‌ ಬರುವುದಿಲ್ಲ. ರಕ್ಷಣಾ ಇಲಾಖೆ ಈ ಬಗ್ಗೆ ಮತ್ತಷ್ಟು ನಿಗಾ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.