ADVERTISEMENT

ಪ್ರಜಾವಾಣಿ ಸಂದರ್ಶನ | ಈ ಬಾರಿ ನಿಖರ ಸಮೀಕ್ಷೆ; ಗೊಂದಲಕ್ಕೆ ಅವಕಾಶವಿಲ್ಲ: ದಯಾನಂದ

ಚಂದ್ರಹಾಸ ಹಿರೇಮಳಲಿ
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
ಕೆ.ಎ.ದಯಾನಂದ, ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಕೆ.ಎ.ದಯಾನಂದ, ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ   
ರಾಜ್ಯದಾದ್ಯಂತ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗಾಗಿ ಎಲ್ಲ ಸಿದ್ಧತೆಗಳನ್ನು ನಡೆಸಿದೆ. ಈ ಹೊತ್ತಿನಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಎ.ದಯಾನಂದ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. ಅವರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ವಿವರಗಳು ಇಲ್ಲಿವೆ

ಬಿಹಾರ ಮತ್ತು ತೆಲಂಗಾಣದಲ್ಲಿ ನಡೆದಿರುವ ಜಾತಿ ಸಮೀಕ್ಷೆ ಬಗ್ಗೆ, ಅವುಗಳ ನಿಖರತೆ ಬಗ್ಗೆ ಹಲವು ಆರೋಪ, ದೂರುಗಳು ವ್ಯಕ್ತವಾಗಿದ್ದವು. ರಾಜ್ಯದಲ್ಲಿ ನಡೆಸಲಾಗುತ್ತಿರುವ ಸಮೀಕ್ಷೆಯಲ್ಲಿ ಅವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೇ?

ಉತ್ತರ: ತೆಲಂಗಾಣ, ಬಿಹಾರದ ಜಾತಿ ಸಮೀಕ್ಷೆ ಜತೆಗೆ ಕರ್ನಾಟಕದ ಸಮೀಕ್ಷೆಯ ಹೋಲಿಕೆಯೇ ಸರಿಯಲ್ಲ. ತೆಲಂಗಾಣದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಮೀಕ್ಷೆ ನಡೆಸಿಲ್ಲ. ಯೋಜನಾ ಇಲಾಖೆ ಸಮೀಕ್ಷೆ ನಡೆಸಿದೆ. ಎಚ್‌.ಕಾಂತರಾಜ ವರದಿ ಆಧಾರದಲ್ಲೇ ಸಮೀಕ್ಷೆ ಕೈಗೊಳ್ಳಲು ಅಲ್ಲಿನ ತಂಡ ಮಾಹಿತಿ‌ ಪಡೆದಿತ್ತು. ಆದರೆ, ಆ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ ಎನ್ನುವ ಆರೋಪವಿದೆ. ರಾಜ್ಯದಲ್ಲಿ ಕಾನೂನುಬದ್ಧ ಸಂಸ್ಥೆಯಾದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವೇ ಸಮೀಕ್ಷೆ ನಡೆಸುತ್ತಿದೆ. ಹಿಂದಿನ ಸಮೀಕ್ಷೆಯಲ್ಲಿ ಗಣತಿದಾರರು ಎಲ್ಲರ ಮನೆಗೂ ಭೇಟಿ ನೀಡಿಲ್ಲ ಎನ್ನುವ ಆರೋಪವಿತ್ತು. ಅದನ್ನು ತೊಡೆದು ಹಾಕಲು ಈ ಬಾರಿ ಮನೆಗಳನ್ನು ಜಿಯೋ ಟ್ಯಾಗ್‌ ಮಾಡಿ ಬ್ಲಾಕ್‌ಗಳನ್ನು ರಚಿಸಲಾಗಿದೆ. ಆ್ಯಪ್‌ ಆಧಾರಿತ ವೈಜ್ಞಾನಿಕ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಗಣತಿದಾರರು ಎಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದರಿಂದ ಸಿಗಲಿದೆ. ಆ ಸ್ಥಳದ ಲೊಕೇಷನ್ ಕ್ಯಾಪ್ಚರ್ ಆಗುತ್ತದೆ. ಸಮೀಕ್ಷೆ ವೇಳೆ ಮಾಹಿತಿ ನೀಡುವವರ ಫೋಟೊ ಕೂಡ ತೆಗೆದುಕೊಳ್ಳಲಾಗುತ್ತದೆ. ಎಲ್ಲೋ ಕುಳಿತು ಸಮೀಕ್ಷೆ ನಡೆಸಲು ಸಾಧ್ಯವೇ ಇಲ್ಲ. ಈ ಬಾರಿಯ ಸಮೀಕ್ಷೆ ಅತ್ಯಂತ ಸ್ಪಷ್ಟ, ನಿಖರವಾಗಿರಲಿದೆ.

ರಾಜ್ಯದ ಜಾತಿವಾರು ಸಮೀಕ್ಷೆಯ ಬೆನ್ನಲ್ಲೇ ಕೇಂದ್ರವೂ ಜನಗಣತಿ ಮತ್ತು ಜಾತಿ ಸಮೀಕ್ಷೆ ಒಟ್ಟಿಗೇ ನಡೆಸಲಿದೆ. ಎರಡರ ನಡುವೆ ಸಂಘರ್ಷ ಉಂಟಾಗುವುದಿಲ್ಲವೇ? 

ADVERTISEMENT

ಉತ್ತರ: ಕರ್ನಾಟಕದಲ್ಲಿ ನಡೆಯುತ್ತಿರುವುದು ಜಾತಿ ಸಮೀಕ್ಷೆ ಅಲ್ಲ, ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಈ ಸಮೀಕ್ಷೆಗೆ ಸಿದ್ಧಪಡಿಸಿರುವ 60 ಪ್ರಶ್ನೆಗಳಲ್ಲಿ ಜಾತಿ ಕುರಿತು ಒಂದು ಪ್ರಶ್ನೆಯಷ್ಟೇ ಇದೆ. ಇದು ಜಾತಿಯ ಆಧಾರದಲ್ಲಿ ಅವರ ಸ್ಥಿತಿಗತಿ ನಿರ್ಧರಿಸುವ ಸಮೀಕ್ಷೆಯಲ್ಲ. ಈ ಸಮೀಕ್ಷೆ ಮೀಸಲಾತಿಯ ಮಾನದಂಡವೂ ಅಲ್ಲ. ಎಲ್ಲ ಜಾತಿಗಳಲ್ಲಿನ ಸಾಮಾಜಿಕ, ಶೈಕ್ಷಣಿಕ, ಉದ್ಯೋಗದ ಸ್ಥಿತಿಗತಿಗಳನ್ನು ಗುರುತಿಸಿ ವಿಶ್ಲೇಷಿಸಿ ಸೂಕ್ತ ಶಿಪಾರಸು ಮಾಡುವ ಉದ್ದೇಶ ಇದರದ್ದು. ಉದಾಹರಣೆಗೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಾಸಿಸುವ ಜನರಿಗೂ, ಒಂದು ಚಿಕ್ಕ ಕಾಲೊನಿಯಲ್ಲಿ ವಾಸಿಸುವ ಒಂದೇ ಜಾತಿಗೆ ಸೇರಿದ ವ್ಯಕ್ತಿಗಳ ಸ್ಥಿಗತಿಗಳಲ್ಲಿ ಭಾರಿ ವ್ಯತ್ಯಾಸ ಇರುತ್ತದೆ.

ಈ ಬಾರಿ ಸಮೀಕ್ಷೆಯನ್ನು ಉದ್ದೇಶಿತ ಸಮಯದಲ್ಲಿ ಮುಗಿಸಲು ಸಾಧ್ಯವಾಗುತ್ತದೆಯೇ?

ಉತ್ತರ: ಖಂಡಿತ ಆ ಪ್ರಯತ್ನವನ್ನು ಆಯೋಗ ಮಾಡುತ್ತದೆ ಎಂಬ ನಂಬಿಕೆ ಇದೆ. ಸಣ್ಣ ವ್ಯತ್ಯಾಸಗಳಾದರೆ ಒಂದೆರಡು ದಿನ ವಿಸ್ತರಿಸಿಕೊಳ್ಳಬಹುದು. ಅದಕ್ಕಾಗಿ ದಸರಾ ರಜೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. 

ದೇಶದಲ್ಲೇ ಮೊದಲ ಬಾರಿ ಮನೆಗಳ ವಿದ್ಯುತ್‌ ಸಂಪರ್ಕದ ಮಾಹಿತಿಯನ್ನು (ಆರ್‌ಆರ್‌ ಸಂಖ್ಯೆ) ಸಮೀಕ್ಷೆಗೆ ಬಳಸಿಕೊಳ್ಳುತ್ತಿದೆ.  ಈಗಾಗಲೇ ಇಂಧನ ಇಲಾಖೆಯ ಸಿಬ್ಬಂದಿ ಪ್ರತಿ ಮನೆಗೂ ಜಿಯೋ ಟ್ಯಾಗ್‌ ಮಾಡಿ, ಪ್ರತಿ ಮನೆಗಳನ್ನೂ ಗುರುತಿಸಿ ಮನೆಪಟ್ಟಿ ಮಾಡಲಾಗಿದೆ. ಅದಕ್ಕಾಗಿ ಪ್ರತ್ಯೇಕ ಆ್ಯಪ್‌ ಸಿದ್ಧಪಡಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು, ಸಮೀಕ್ಷಾ ವ್ಯಾಪ್ತಿಯಿಂದ ಯಾವುದೇ ಮನೆ ಬಿಟ್ಟುಹೋಗದಂತೆ ಮುನ್ನೆಚ್ಚರಿಕೆ ವಹಿಸಲು ವಿಧಾನ ಸಹಕಾರಿಯಾಗಿದೆ. 

ಈ ಹಿಂದಿನ ಜಾತಿ ಸಮೀಕ್ಷೆಯನ್ನು ರಾಜ್ಯದ ಪ್ರಬಲ ಸಮುದಾಯಗಳು ಒಪ್ಪಿರಲಿಲ್ಲ. ಈ ಬಾರಿಯ ಸಮೀಕ್ಷೆ ವರದಿಯನ್ನು ಅವು ಒಪ್ಪುತ್ತವೆಯೇ?

ಉತ್ತರ: ಈ ಬಾರಿಯ ಸಮೀಕ್ಷೆಯನ್ನು ಎಲ್ಲರೂ ಒಪ್ಪುತ್ತಾರೆ ಎನ್ನುವ ವಿಶ್ವಾಸವಿದೆ. ಇದು ಜನರೇ ನೀಡುವ ಮಾಹಿತಿ. ತಮ್ಮ ಸ್ಥಿತಿಗತಿ, ಜಾತಿ ವಿವರ ಎಲ್ಲವನ್ನೂ ತಮ್ಮಿಷ್ಟದಂತೆ ನೀಡುವ ಸ್ವಾತಂತ್ರ್ಯವನ್ನೂ ಜನರಿಗೇ ಕೊಡಲಾಗಿದೆ. ಅವರು ನೀಡಿದ ಮಾಹಿತಿಯನ್ನು ಒಟ್ಟುಗೂಡಿಸಿ, ವಿಶ್ಲೇಷಿಸಿ ವರದಿ ಸಿದ್ಧಪಡಿಸುವ ಕೆಲಸವನ್ನು ಆಯೋಗ ಮಾಡುತ್ತದೆ. ವರದಿ ಕುರಿತು ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ವಿವಾದಕ್ಕೆ ಕಾರಣಗಳೇನೂ ಇರುವುದಿಲ್ಲ. 

ಈ ಹಿಂದಿನ ಸಮೀಕ್ಷೆಯಲ್ಲಿ ಕಂಡುಬಂದ ಲೋಪಗಳು ಮತ್ತೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆಯೇ?

ಎಲ್ಲ ಗಣತಿದಾರರು ಮನೆ ಮನೆಗೆ ಭೇಟಿ ನೀಡದೇ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನುವುದೇ ಹಿಂದೆ ಇದ್ದ ಪ್ರಮುಖ ಆರೋಪ. ಅದಕ್ಕೆ ಈ ಬಾರಿ ಎರಡು ಕೋಟಿ ಮನೆಗಳಿಗೆ ಜಿಯೋ ಟ್ಯಾಗ್‌ ಮಾಡಲಾಗಿದೆ. ಆ್ಯಪ್‌ ಮೂಲಕ ಸಂಪೂರ್ಣ ನಿಗಾ ಇಡಲಾಗುತ್ತದೆ. ಗಣತಿದಾರರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ. 

ಜಾತಿ ಹೆಸರು ನಮೂದಿಸುವ ವಿಚಾರದಲ್ಲಿ ಕೆಲವು ಸಮುದಾಯಗಳಲ್ಲಿ ಗೊಂದಲಗಳಿವೆ. ಉದಾಹರಣೆಗೆ, ವೀರಶೈವ ಲಿಂಗಾಯತರ ಜಾತಿ ಹೆಸರು ಹೇಗೆ ಬರೆಯಬೇಕು ಎನ್ನುವುದರ ಬಗ್ಗೆ ತುಂಬಾ ಗೊಂದಲ ಇದೆ. ಇಂಥವುಗಳನ್ನು ಹೇಗೆ ಪರಿಹರಿಸುತ್ತೀರಿ?

ಉತ್ತರ: ಯಾವುದೇ ಗೊಂದಲ ಇಲ್ಲ. ಪರಿಶಿಷ್ಟರಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 50, ಹಿಂದುಳಿದ ವರ್ಗಗಳಲ್ಲಿ 887 ಜಾತಿಗಳನ್ನು ಗುರುತಿಸಲಾಗಿದೆ. ಇವುಗಳಿಗೆ ಸೇರದ ಸಾವಿರಾರು ಜಾತಿಗಳಿವೆ. ಅವುಗಳು ಮೇಲಿನ ಯಾವುದಾದರೂ ಒಂದು ಜಾತಿಯ ಉಪಜಾತಿ ಆಗಿರಬಹುದು. ಆ ಜಾತಿಯ ಕಾಲಂನಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ, ಪ್ರತ್ಯೇಕ ಜಾತಿ ನಮೂದಿಸುವ ಅಥವಾ ಇಷ್ಟವಿಲ್ಲದವರು ಇಲ್ಲವೆಂದು, ತಿರಸ್ಕರಿಸುವ ಅವಕಾಶವನ್ನೂ ನೀಡಲಾಗಿದೆ.

ಆರಂಭದಲ್ಲೇ ಧರ್ಮ ಮತ್ತು ಜಾತಿ ಮಧ್ಯೆ ಗೊಂದಲ ಏಕೆ? 

ಉತ್ತರ: ಕಾನೂನು ಪ್ರಕಾರ ಇರುವ ಅವಕಾಶದಂತೆ ಸಮೀಕ್ಷೆ ನಡೆಯುತ್ತದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಅದೇ ಜಾತಿಯಲ್ಲೇ ಗುರುತಿಸಿಕೊಳ್ಳಲು ಅವಕಾಶವಿದೆ. ಹಿಂದುಳಿದ ವರ್ಗಗಳಿಗೆ ಅಂತಹ ಅವಕಾಶ ಕಾನೂನಿನಲ್ಲಿ ಇಲ್ಲ. ಅವರನ್ನು ಕ್ರೈಸ್ತರೆಂದೇ ಪರಿಗಣಿಸಲಾಗುತ್ತದೆ. ಅಲ್ಲದೇ ಯಾರು ಯಾವ ಜಾತಿ ನಮೂದಿಸಿದರೂ ಈ ಸಮೀಕ್ಷೆ ಮೂಲಕ ಮೀಸಲಾತಿ ಪಡೆಯಲು ಆಗದು. ವಿವಾದ ಉಂಟಾಗಿದ್ದರಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ 33 ಜಾತಿಗಳನ್ನು ಕಾಲಂನಿಂದ ಕೈಬಿಡಲಾಗಿದೆ. ಇಲ್ಲಿ ಗೊಂದಲಕ್ಕೆ
ಅವಕಾಶವೇ ಇಲ್ಲ.

ಜಾತಿ ಹೆಸರು ನಮೂದಿಸುವ ವಿಚಾರದಲ್ಲಿ ಕೆಲವು ಸಮುದಾಯಗಳಲ್ಲಿ ಗೊಂದಲಗಳಿವೆ. ಉದಾಹರಣೆಗೆ ವೀರಶೈವ ಲಿಂಗಾಯತರ ಜಾತಿ ಹೆಸರು ಹೇಗೆ ಬರೆಯಬೇಕು ಎನ್ನುವುದರ ಬಗ್ಗೆ ತುಂಬಾ ಗೊಂದಲ ಇದೆ. ಇಂಥವುಗಳನ್ನು ಹೇಗೆ ಪರಿಹರಿಸುತ್ತೀರಿ?

ಉತ್ತರ: ಯಾವುದೇ ಗೊಂದಲ ಇಲ್ಲ. ಪರಿಶಿಷ್ಟರಲ್ಲಿ 101 ಪರಿಶಿಷ್ಟ ಪಂಗಡದಲ್ಲಿ 50 ಹಿಂದುಳಿದ ವರ್ಗಗಳಲ್ಲಿ 887 ಜಾತಿಗಳನ್ನು ಗುರುತಿಸಲಾಗಿದೆ. ಇವುಗಳಿಗೆ ಸೇರದ ಸಾವಿರಾರು ಜಾತಿಗಳಿವೆ. ಅವುಗಳು ಮೇಲಿನ ಯಾವುದಾದರೂ ಒಂದು ಜಾತಿಯ ಉಪಜಾತಿ ಆಗಿರಬಹುದು. ಆ ಜಾತಿಯ ಕಾಲಂನಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಪ್ರತ್ಯೇಕ ಜಾತಿ ನಮೂದಿಸುವ ಅಥವಾ ಇಷ್ಟವಿಲ್ಲದವರು ಇಲ್ಲವೆಂದು ತಿರಸ್ಕರಿಸುವ ಅವಕಾಶವನ್ನೂ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.