ADVERTISEMENT

‘ಶಾಸನಸಭೆಯಲ್ಲೂ ಭೂಗಳ್ಳರು ಇರಬಹುದು’

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 20:00 IST
Last Updated 28 ಡಿಸೆಂಬರ್ 2018, 20:00 IST
ಎ.ಟಿ. ರಾಮಸ್ವಾಮಿ 
ಎ.ಟಿ. ರಾಮಸ್ವಾಮಿ    

–ಎ.ಟಿ.ರಾಮಸ್ವಾಮಿ, ಶಾಸಕ ಅರಕಲಗೂಡು ಕ್ಷೇತ್ರ

* 2007ರಲ್ಲಿ ನೀವು ಸಲ್ಲಿಸಿದ ಸರ್ಕಾರಿ ಭೂ ಒತ್ತುವರಿ ಕುರಿತ ವರದಿ ಎಲ್ಲಿ ಹೋಯಿತು?

ಬರಿ ಸಣ್ಣಪುಟ್ಟ, ಬಡ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದೊಡ್ಡ ಪ್ರಕರಣಗಳು ಹಾಗೇ ಉಳಿದುಕೊಂಡಿವೆ. ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡಿರುವುದು ಬಹಳ ನೋವು ತರಿಸಿದೆ. ಸರ್ಕಾರಿ ಲೆಕ್ಕದಲ್ಲಿ ಅವರೆಲ್ಲಾ ಭೂ ಮಾಲೀಕರು. ಅವರನ್ನೆಲ್ಲ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು.

ADVERTISEMENT

* ಹಿಂದೆ ಸಮಿತಿ ರಚಿಸಿದಾಗ ಮುಖ್ಯಮಂತ್ರಿ ಆಗಿದ್ದವರೇ ಈಗಲೂ ಮುಖ್ಯಮಂತ್ರಿ. ನೀವೂ ಅದೇ ಪಕ್ಷದ ಶಾಸಕ. ಆಗಿನಿಂದ ಈಗಿನವರೆಗೆ ಭೂಗಳ್ಳರು ಆರಾಮವಾಗಿ ಇದ್ದಾರಲ್ಲ?

ಹೌದು, ಭೂಗಳ್ಳರು ಆರಾಮವಾಗಿಯೇ ಇರುತ್ತಾರೆ. ಈಗ ಕ್ರಮ ಕೈಗೊಳ್ಳಲು ಏಕಪಕ್ಷದ ಸರ್ಕಾರ ಅಧಿಕಾರದಲ್ಲಿ ಇಲ್ಲ. ಹಲವಾರು ಅಡ್ಡಿ, ಆತಂಕಗಳು ಇವೆ. ಖೋಡೆಯವರ ಜಮೀನಿನ ವಿರುದ್ಧ ಧ್ವನಿ ಎತ್ತಿದಾಗ, ಸಂಬಂಧಪಟ್ಟ ಅಧಿಕಾರಿಯನ್ನು ಎತ್ತಂಗಡಿ ಮಾಡಲಾಯಿತು. ಇಷ್ಟಾದರೆ ಸಾಲದು. ಬಡವರಿಗೆ ಶಿಕ್ಷೆ, ಬಲಾಢ್ಯರಿಗೆ ರಕ್ಷಣೆ ಸರ್ವಥಾ ಸಮರ್ಥನೀಯವಲ್ಲ.

* ಸರ್ಕಾರಿ ಭೂಮಿಯ ಕಳ್ಳರಿಗೆ ಶಿಕ್ಷೆಯಾಗುವುದು ಯಾವಾಗ?

ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿರಂತರ ಹೋರಾಟ ಮಾಡಿಕೊಂಡು ಬಂದಿ
ದ್ದೇನೆ. ನೆಲ, ಜಲ ಹಾಗೂ ಸಾರ್ವಜನಿಕರ ತೆರಿಗೆ ಹಣ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು.

* ಭೂಗಳ್ಳರಿಗೆ ಸರ್ಕಾರವೇ ರಕ್ಷಣೆ ನೀಡುತ್ತದೆ ಎನಿಸುವುದಿಲ್ಲವೇ?

ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿದ್ದು, ದಾಖಲೆಯಲ್ಲಿ ‘ಭೂ ಮಾಲೀಕರು’ ಎಂದೇ ಸರ್ಕಾರದಿಂದ ಪರಿಗಣಿಸಲ್ಪಟ್ಟಿದ್ದಾರೆ. ಇದು ದೇಶದ್ರೋಹದ ಕೆಲಸ. ಅವರಿಗೆ ರಕ್ಷಣೆ ಕೊಡಬಾರದು.

* ಭೂಮಿ ರಕ್ಷಣೆಗೆ ಏನು ಮಾಡಬೇಕು?

ನಕಲಿ ದಾಖಲೆ ಹಾವಳಿ ಬೆಳಕಿಗೆ ಬಂದ ತಕ್ಷಣ ಮಿಂಚಿನ ಕಾರ್ಯಾಚರಣೆ ನಡೆಸಿ ಗೂಂಡಾ ಕಾಯ್ದೆ ಅಡಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಕು. ಸಮೀಕ್ಷೆ ಪ್ರಕಾರ ಬೆಂಗಳೂರು ಸುತ್ತಮುತ್ತ ನಕಲಿ ದಾಖಲೆ ಸೃಷ್ಟಿಸಿ 40 ಸಾವಿರ ಎಕರೆ ಸರ್ಕಾರಿ ಭೂಮಿ ಕಬಳಿಕೆ ಮಾಡಲಾಗಿದೆ. ಅವರನ್ನೆಲ್ಲ ಮಟ್ಟಹಾಕಬೇಕು.

* ಭೂಗಳ್ಳರು ಶಾಸನಸಭೆಯಲ್ಲೂ ಇದ್ದಾರೆ ಎಂದು ಹೇಳುತ್ತಾರಲ್ಲ; ನಿಜವೇ?

ಇರಬಹುದು. ಎಲ್ಲರೂ ಭೂಗಳ್ಳರು ಎಂದು ಹೇಳುವುದಿಲ್ಲ. ಸರ್ಕಾರಿ ಭೂಮಿ ಕಬಳಿಕೆ ಮಾಡಿದವರನ್ನು ಬಿಡಬಾರದು.

ಸಂದರ್ಶನ:ಕೆ.ಎಸ್. ಸುನಿಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.