ADVERTISEMENT

ಸಂದರ್ಶನ | ಒಪಿಎಸ್‌ ಮರು ಜಾರಿಗೆ ಹೋರಾಟ ತೀವ್ರ: ಸಿ.ಎಸ್‌. ಷಡಾಕ್ಷರಿ

ಚಂದ್ರಹಾಸ ಹಿರೇಮಳಲಿ
Published 3 ಜನವರಿ 2025, 23:30 IST
Last Updated 3 ಜನವರಿ 2025, 23:30 IST
<div class="paragraphs"><p>ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ</p></div>

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ

   
‘ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಬದಲಾಗಿ ಹಳೆ ಪಿಂಚಣಿ ಯೋಜನೆ (ಒಪಿಎಸ್‌) ಜಾರಿಗೆ ತೀವ್ರ ಹೋರಾಟ ನಡೆಸುವುದು ಮುಂದಿನ ಮೊದಲ ಹೆಜ್ಜೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದರು. ಸಂಘದ ಅಧ್ಯಕ್ಷರಾಗಿ 2024–2029ನೇ ಅವಧಿಗೆ ಎರಡನೇ ಬಾರಿ ಆಯ್ಕೆಯಾಗಿರುವ ಅವರು, ವಿವಿಧ ವೃಂದ ಸಂಘಗಳ 5.20 ಲಕ್ಷ ನೌಕರರ ಬೇಡಿಕೆ, ಮುಂದಿನ ಯೋಜನೆಗಳು, ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ‘ಪ್ರಜಾವಾಣಿ’ ಜತೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

ಚುನಾವಣೆಯಲ್ಲಿ ಎರಡೂ ಬಣಗಳ ತಲಾ ಒಬ್ಬರು ಆಯ್ಕೆಯಾಗಿದ್ದೀರಿ? ಸಮನ್ವಯ ಹೇಗೆ ಸಾಧ್ಯ?

ಚುನಾವಣೆಗಾಗಿ ಭಿನ್ನ ಬಣ ಅಷ್ಟೆ. ನಂತರ ಎಲ್ಲರೂ ಸರ್ಕಾರಿ ನೌಕರರ ಸೇವೆಗೆ ಮೀಸಲು. ರಾಜ್ಯ ಸಂಘದಲ್ಲಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರವಿದೆ. ಅಧ್ಯಕ್ಷ ಹಾಗೂ ಖಜಾಂಚಿ ಸೇರಿದಂತೆ ಎಲ್ಲರೂ ಕಾರ್ಯಕಾರಿ ಸಮಿತಿ ತೀರ್ಮಾನದಂತೆ ಕೆಲಸ ಮಾಡಬೇಕು.

ADVERTISEMENT

ಸಂಘದ ಚುನಾವಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡಿತ್ತಾ?

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಎಂದೂ ಹಸ್ತಕ್ಷೇಪ ಮಾಡಿಲ್ಲ. ಸರ್ಕಾರದಲ್ಲಿರುವ ಕೆಲವರ ಹೆಸರು ಬಳಸಿಕೊಂಡು ಭಿನ್ನ ಬಣ ಪ್ರಚಾರ ನಡೆಸಿತು ಅಷ್ಟೆ. ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕೊಟ್ಟರೆ ನೌಕರರ ಬೇಡಿಕೆ ಈಡೇರಿಕೆಯ ಹೋರಾಟ ಸಾಧ್ಯವಾಗದು.

ಮೊದಲ ಅವಧಿಯ ಕೆಲಸದ ಬಗ್ಗೆ ಹೇಳಿ?

ಹೌದು. ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 7ನೇ ವೇತನ ಆಯೋಗ ರಚನೆಯಾದ ನಂತರ ಮಧ್ಯಂತರ ಪರಿಹಾರಕ್ಕೆ ಆಗ್ರಹಿಸಿ ನಡೆಸಿದ್ದ ಒಂದು ದಿನದ ಮುಷ್ಕರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ನೌಕರರ ಮೂಲವೇತನದ ಶೇ 17ರಷ್ಟು ಮಧ್ಯಂತರ ಪರಿಹಾರ ಘೋಷಿಸಿತ್ತು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿತು. ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ, ಕೆಜಿಐಡಿ ಡಿಜಟಲೀಕರಣ ಸೇರಿದಂತೆ ಹತ್ತಾರು ಆದೇಶಗಳಾಗಲು ಸಂಘ ಶ್ರಮಿಸಿದೆ. ಶತಮಾನೋತ್ಸವ ಭವನ ನಿರ್ಮಾಣ ಹಾಗೂ ಹಲವು ಜಿಲ್ಲೆ, ತಾಲ್ಲೂಕುಗಳಲ್ಲಿ ಭವನಗಳ ನಿರ್ಮಾಣ ಮಾಡಲಾಗಿದೆ. 

ಈ ಅವಧಿಯ ಸವಾಲುಗಳು ಏನು?

ಮುಖ್ಯವಾಗಿ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಹೋರಾಟ ತೀವ್ರಗೊಳಿಸುತ್ತೇವೆ. ಸರ್ಕಾರವು ಐಎಎಸ್‌ ಅಧಿಕಾರಿ ಅಂಜುಂ ಪರ್ವೇಜ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಸಮಿತಿ ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಒತ್ತಡ ಹಾಕುತ್ತೇವೆ. ನಗದುರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಆದೇಶವಾಗಿದ್ದರೂ ಮೂರು ಇಲಾಖೆಗಳ ಸಮನ್ವಯ ವಿಳಂಬವಾದ ಕಾರಣ ಅನುಷ್ಠಾನ ನಿಧಾನವಾಗಿತ್ತು. ಈಗ ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ಜನವರಿ ಅಂತ್ಯಕ್ಕೆ ಜಾರಿಯಾಗುವ ನಿರೀಕ್ಷೆ ಇದೆ. 

ಹಿಂದಿನ ಅವಧಿಲ್ಲಿ ಒಪಿಎಸ್‌ ಜಾರಿಗೆ ಹೆಚ್ಚು ಒತ್ತು ನೀಡಲಿಲ್ಲ ಎನ್ನುವ ಆರೋಪ ಇದೆಯಲ್ಲ?

ಖಂಡಿತ ಇಲ್ಲ, ಮೊದಲ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲೂ ಹಳೆ ಪಿಂಚಣಿ ವ್ಯವಸ್ಥೆ ಮರುಜಾರಿ ಆಗಿರಲಿಲ್ಲ. 2022–23ರಿಂದ ಕೆಲ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಆರಂಭವಾಯಿತು. ನಾವೂ ಬೇಡಿಕೆ ಸಲ್ಲಿಸಿದೆವು. ಬಸವರಾಜ ಬೊಮ್ಮಾಯಿಯವರ ಸರ್ಕಾರ ಸಮಿತಿ ರಚಿಸಿದರೂ ಅಷ್ಟರಲ್ಲಿ ಅವರ ಅವಧಿ ಮುಗಿಯಿತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ ಪರಿಶೀಲನೆಗಾಗಿ ಮತ್ತೊಂದು ಸಮಿತಿ ನೇಮಿಸಿದೆ. ಒಪಿಎಸ್‌ ಮರುಜಾರಿಯಾದ ರಾಜ್ಯಗಳಿಗೆ ಸಮಿತಿ ತೆರಳಿ ಸಾಧಕ–ಬಾಧಕಗಳ ಅಧ್ಯಯನ ಮಾಡುತ್ತಿದೆ. ವರದಿ ಶೀಘ್ರ ಸಲ್ಲಿಕೆಯಾಗಲಿದೆ.

ಶಿಕ್ಷಕರ ಹಲವು ಸಮಸ್ಯೆಗಳು ಜೀವಂತವಾಗಿವೆಯಲ್ಲ?

ರಾಜ್ಯದಲ್ಲಿ 120 ವೃಂದ ಸಂಘಗಳಿವೆ. ಸರ್ಕಾರಿ ನೌಕರರ ಸಂಘ ಎಲ್ಲ ಸಂಘಗಳಿಗೂ ಮಾತೃ ಸಂಸ್ಥೆ. ಶಿಕ್ಷಕರ ಸಂಘದ ಕೆಲ ಮುಖಂಡರ ಸ್ವಾರ್ಥದ ನಡೆಯಿಂದಾಗಿ ಸಮನ್ವಯ ಸಾಧ್ಯವಾಗಿಲ್ಲ. ಆದರೂ ವೇತನ, ಬಡ್ತಿ ತಾರತಮ್ಯ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದೇವೆ. 2016ಕ್ಕೂ ಪೂರ್ವದಲ್ಲಿ ನೇಮಕಗೊಂಡ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಆಗಿರುವ ಬಡ್ತಿ ಅನ್ಯಾಯ ಸರಿಪಡಿಸಲಾಗುವುದು. ಶಿಕ್ಷಕರನ್ನು ಒತ್ತಡ ಮುಕ್ತಗೊಳಿಸಿ, ಬೋಧನೆಗೆ ಸೀಮಿತಗೊಳಿಸಲು ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು. 

ನೌಕರರ ಹಕ್ಕುಗಳಿಗಷ್ಟೇ ಸಂಘ ಸೀಮಿತವೇ? 

ಸರ್ಕಾರದ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕವಾಗಿ ಮಾಡಲು ಕಾಲಕಾಲಕ್ಕೆ ತರಬೇತಿ, ಸಲಹಾ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಉತ್ತಮ ಕೆಲಸ ಮಾಡಿದ ಫಲವಾಗಿಯೇ ತೆರಿಗೆ ಸಂಗ್ರಹದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ನೌಕರರನ್ನು ಇನ್ನಷ್ಟು ಕ್ರಿಯಾಶೀಲರಾಗಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ಭ್ರಷ್ಟಾಚಾರದ ವಿರುದ್ಧ ಸಂಘ ಧ್ವನಿ ಎತ್ತುತ್ತಿದೆಯೇ?

ಭ್ರಷ್ಟಾಚಾರ ನಿರ್ಮೂಲನೆಗೆ ಸಂಘ ಸದಾ ಸಹಕಾರ ನೀಡುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು ಲೋಕಾಯುಕ್ತರ ಜತೆ ಹಲವು ಸಭೆಗಳನ್ನು ಆಯೋಜಿಸಿದ್ದೇವೆ.  ಸರ್ಕಾರ ಹೆಚ್ಚಿನ ಪಾತ್ರ ವಹಿಸಬೇಕು. ಎಲ್ಲ ವರ್ಗಾವಣೆಗಳಿಗೂ ಕೌನ್ಸೆಲಿಂಗ್‌ ಕಡ್ಡಾಯಗೊಳಿಸಬೇಕು. ಆನ್‌ಲೈನ್‌ ಸೇವೆ ಶೇ 100ರಷ್ಟು ಜಾರಿಯಾಗಬೇಕು.  

‘ಮೃತ ನೌಕರನ ಕುಟುಂಬಕ್ಕೆ ₹1 ಕೋಟಿ ಪರಿಹಾರದ ಯೋಜನೆ’
‘ಕರ್ತವ್ಯದಲ್ಲಿರುವಾಗಲೇ ನೌಕರ ಮೃತ ಪಟ್ಟರೆ ಅವರ ಕುಟುಂಬಕ್ಕೆ ವೇತನ ಖಾತೆ ಹೊಂದಿರುವ ಬ್ಯಾಂಕ್‌ ಮೂಲಕವೇ ₹1 ಕೋಟಿ ಪರಿಹಾರ ಒದಗಿಸುವ ಯೋಜನೆ ಜಾರಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಷಡಾಕ್ಷರಿ ಹೇಳಿದರು. ಮುಂದಿನ ಯೋಜನೆ ಕುರಿತು ತಮ್ಮ ಭಾವನೆ ಹಂಚಿಕೊಂಡ ಅವರು ‘ಖಾಲಿ ಇರುವ 2.70 ಲಕ್ಷ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಒತ್ತಡ ಹಾಕುತ್ತೇವೆ’ ಎಂದರು.  ನೌಕರರಿಗೆ ₹100 ಶುಲ್ಕದಲ್ಲಿ ವಸತಿ ಸೌಲಭ್ಯ ನೀಡಲು ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ 40 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ 300 ಕೊಠಡಿಗಳ ವಸತಿ ಸಮುಚ್ಚಯ ನಿರ್ಮಾಣ ಮಾಡುವ ಆಶಯವಿದೆ. ₹150 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಸಭಾಭವನ ಕ್ಲಬ್‌ಹೌಸ್‌ ಇರಲಿದೆ ಎಂದರು. 2026ರಲ್ಲಿ ಕೇಂದ್ರ ವೇತನ ಆಯೋಗ ರಚಿಸಿದ ನಂತರ ಕೇಂದ್ರ ಮಾದರಿಯ ವೇತನ ಸರ್ಕಾರಿ ನೌಕರರ ಮಕ್ಕಳಿಗೆ ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಲ್ಲಿ ಮೀಸಲಾತಿ ಕಲ್ಪಿಸಲು ಹೋರಾಟ ರೂಪಿಸಲಾಗುವುದು. ಹಲವು ಇಲಾಖೆಗಳಲ್ಲಿ ಬಾಕಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.