ADVERTISEMENT

Exclusive ಸಂದರ್ಶನ: ಗ್ಯಾರಂಟಿ ಹುಳುಕು ಮುಚ್ಚಿಡಲು CM ಬೋಗಸ್‌ ವಾದ– FM ನಿರ್ಮಲಾ

ಮಂಜುನಾಥ್ ಹೆಬ್ಬಾರ್‌
Published 19 ಫೆಬ್ರುವರಿ 2024, 0:31 IST
Last Updated 19 ಫೆಬ್ರುವರಿ 2024, 0:31 IST
<div class="paragraphs"><p>ನಿರ್ಮಲಾ ಸೀತಾರಾಮನ್‌</p></div>

ನಿರ್ಮಲಾ ಸೀತಾರಾಮನ್‌

   

ನವದೆಹಲಿ: ‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಪಂಚ ಗ್ಯಾರಂಟಿ‌ಗಳ ಅನುಷ್ಠಾನಕ್ಕಾಗಿ ರಾಜ್ಯದ ಸಂಪನ್ಮೂಲ ಬರಿದು ಮಾಡುತ್ತಿದೆ. ಉದ್ಯೋಗ ಸೃಷ್ಟಿಯಂತಹ ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲ. ತಮ್ಮ ಲೋಪಗಳನ್ನೆಲ್ಲ ಮರೆಮಾಚಿ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಜನರ ಹಿತಾಸಕ್ತಿ ಕಾಪಾಡುವ ಉದ್ದೇಶ ಇಲ್ಲ. ಬರೀ ರಾಜಕೀಯ ಮಾಡುವ ದುರುದ್ದೇಶ ಇದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಿಡಿಕಾರಿದರು.

ತೆರಿಗೆ ಪಾಲು ಹಂಚಿಕೆ, ಅನುದಾನ, ನೆರವು ನೀಡಿಕೆಯ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಳವಳಿ ನಡೆಸಿ ರಾಷ್ಟ್ರದ ಗಮನ ಸೆಳೆದಿದೆ. ಕೇಂದ್ರದಿಂದ ಅನ್ಯಾಯವಾಗಿದೆ ಎಂದು ರಾಜ್ಯ ಬಜೆಟ್‌ನಲ್ಲೂ ಪ್ರಸ್ತಾಪಿಸಿದೆ.

ADVERTISEMENT

‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿರುವ ನಿರ್ಮಲಾ ಸೀತಾರಾಮನ್‌, ‘ಕೇಂದ್ರದ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್‌ಗೆ ಗೊತ್ತಿದೆ. ಹೀಗಾಗಿ, ಪದೇ ಪದೇ ಬೋಗಸ್‌ ವಾದಗಳನ್ನು ಎತ್ತುವ ಹಾಗೂ ಆಪಾದನೆಗಳನ್ನು ಮಾಡುವ ಮೂಲಕ ತಮ್ಮ ಹುಳುಕು ಮುಚ್ಚಿಡಲು ಸಿದ್ದರಾಮಯ್ಯ ಹೊರಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

* ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ಹಂಚಿಕೆ, ಸೆಸ್‌, ಸರ್‌ಚಾರ್ಜ್‌ ಮತ್ತು ವಿಶೇಷ ಅನುದಾನದ ನೀಡಿಕೆಯಲ್ಲಿ 2017ರಿಂದ ಇಲ್ಲಿಯವರೆಗೆ ರಾಜ್ಯಕ್ಕೆ ₹1,87,867 ಕೋಟಿ ನಷ್ಟ ಆಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ತೆರಿಗೆ ಪಾಲು ಹಂಚಿಕೆಯಲ್ಲಿ ತಾರತಮ್ಯ ಆಗಿದೆ ಎಂದು ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಧ್ವನಿ ಎತ್ತಿವೆ. ದಕ್ಷಿಣದ ರಾಜ್ಯಗಳಿಗೆ ಘೋರ ಅನ್ಯಾಯವಾಗಿರುವುದು ನಿಜವೇ?

ನಿರ್ಮಲಾ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗಳು ನಡೆಯಬೇಕು. ಇದು ಕೆಟ್ಟದ್ದಲ್ಲ. ಪರ–ವಿರೋಧ ವಾದಗಳು ನಡೆಯಲೇಬೇಕು. ಆದರೆ, ಬಿಜೆಪಿಯೇತರ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರವು ದ್ವೇಷ ಸಾಧಿಸುತ್ತಿದೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಮಾಡುತ್ತಿರುವುದು ಇದನ್ನೇ. ರಾಜ್ಯದ ಮುಖ್ಯಮಂತ್ರಿಯೇ ಖುದ್ದು ಆರೋಪ ಮಾಡಿದಾಗ ರಾಜ್ಯದ ಜನರಿಗೆ ಅನುಮಾನ ಮೂಡುವುದು ಸಹಜ. ಜತೆಗೆ, ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದ್ದರೆ ಕೇಂದ್ರ ಹಣಕಾಸು ಆಯೋಗದ ಕಡೆಗೆ ಬೊಟ್ಟು ಮಾಡಬೇಕು. ಅದು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ದೋಷಾರೋಪ ಮಾಡುತ್ತಿರುವುದು ಜವಾಬ್ದಾರಿಯುತ ನಡವಳಿಕೆ ಅಲ್ಲ.

* ಕೇಂದ್ರದ ಬಿಜೆಪಿ ಸರ್ಕಾರವು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಯ್ಯುವ ಕೆಲಸ ಮಾಡುತ್ತಿದೆ ಹಾಗೂ ಹಾಲು ಕೊಡುವ ಹಸುವಿನ ಕೆಚ್ಚಲು ಕೊಯ್ಯಲು ಹೊರಟಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ. ಅಭಿವೃದ್ಧಿ ಹೊಂದಿದ ಉತ್ತರದ ರಾಜ್ಯಗಳಿಗೂ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂಬುದು ಅವರ ಆಕ್ಷೇಪ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು?

ನಿರ್ಮಲಾ: ಕರ್ನಾಟಕದಲ್ಲಿ ಆರು ತಿಂಗಳ ಹಿಂದಿನವರೆಗೂ ಚೆನ್ನಾಗಿತ್ತು ಎಂದು ಲೋಕಸಭೆಯ ಕಾಂಗ್ರೆಸ್‌ ಪಕ್ಷದ ನಾಯಕ ಅಧೀರ್ ರಂಜನ್‌ ಚೌಧರಿ ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಎಲ್ಲವೂ ಚೆನ್ನಾಗಿತ್ತು ಎಂಬುದು ಅದರ ಅರ್ಥ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಈಗ ಎಲ್ಲವೂ ಸಮಸ್ಯೆ ಆಗಿದೆ. ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರೇ ಹೇಳಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಬಗ್ಗೆ ಬೇರೇನೂ ಸಾಕ್ಷ್ಯ ಬೇಕು. ಗ್ಯಾರಂಟಿಗಳ ಹೆಸರಿನಲ್ಲಿ ಜನರಲ್ಲಿ ಕೀಳರಿಮೆ ತುಂಬಲು ಸಿದ್ದರಾಮಯ್ಯ ಹೊರಟಿದ್ದಾರೆ. ನಿಮಗೆ ಒಂದಿಷ್ಟು ಹಣ ಎಸೆದಿದ್ದೇನೆ ಹಾಗೂ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ಕೇಳಬೇಡಿ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.

ದೇಶದಲ್ಲಿ ಅತೀ ಹೆಚ್ಚು ತೆರಿಗೆ ನೀಡುತ್ತಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಎರಡನೇ ಸಾಲಿನಲ್ಲಿದ್ದು, ಅದಕ್ಕೆ ತಕ್ಕಂತೆ ತೆರಿಗೆ ಪಾಲು ನೀಡಬೇಕು ಎಂದು ಸಿದ್ದರಾಮಯ್ಯ ವಾದ ಮುಂದಿಟ್ಟಿದ್ದಾರೆ. ಈ ವಾದವನ್ನೇ ನಾಳೆ ಬೆಂಗಳೂರಿನ ಜನರು ಮುಂದಿಟ್ಟರೆ ನೀವು ಏನು ಮಾಡುತ್ತೀರಿ. ರಾಜ್ಯದ ಖಜಾನೆಗೆ ಬೆಂಗಳೂರಿನಿಂದ ಶೇ 70ರಷ್ಟು ಹಣ ಸೇರುತ್ತಿದೆ. ಇದರಲ್ಲಿ ನಮಗೆ ಶೇ 50ರಷ್ಟು ಪಾಲನ್ನು ಕೊಡಿ ಎಂದು ಬೆಂಗಳೂರಿನ ನಾಗರಿಕರು ಚಳವಳಿ ಆರಂಭಿಸಿದರು ಎಂದಿಟ್ಟುಕೊಳ್ಳಿ. ಚಿತ್ರದುರ್ಗ, ಕೋಲಾರ ಹಾಗೂ ಬೀದರ್‌ಗೆ ಕೊಡಬೇಡಿ ಎಂದರೆ ಅದಕ್ಕೆ ನಿಮ್ಮ ಉತ್ತರವೇನು? ದೇಶದ ಹಾಗೂ ರಾಜ್ಯದ ಎಲ್ಲ ಪ್ರದೇಶವೂ ಅಭಿವೃದ್ಧಿ ಆಗಬೇಕಲ್ಲವೇ? 

ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಎತ್ತಿರುವ ಕೆಲವೊಂದು ವಿಚಾರಗಳ ಬಗ್ಗೆ ನನ್ನ ಸಹಮತ ಇದೆ. ಈ ಬಗ್ಗೆ ಮುಕ್ತ ಚರ್ಚೆ ಆಗಲಿ. ಈ ರಾಜ್ಯಗಳು ಕೇಂದ್ರ ಹಣಕಾಸು ಆಯೋಗದ ಜತೆಗೆ ಚರ್ಚಿಸಲಿ. 16ನೇ ಹಣಕಾಸು ಆಯೋಗ ರಚನೆಯಾಗಿದೆ. ಆಯೋಗದ ಕಾರ್ಯವ್ಯಾಪ್ತಿಗೆ ಚೌಕಟ್ಟು ಹಾಕಲಾಗಿದೆ. ಆಯೋಗದವರು ಒಂದು ಸಭೆಯನ್ನೂ ನಡೆಸಿದ್ದಾರೆ. ಶೀಘ್ರದಲ್ಲಿ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ದತ್ತಾಂಶ‌ಗಳೊಂದಿಗೆ ವಾದ ಮುಂದಿಡಲಿ. ಕರ್ನಾಟಕ ಸರ್ಕಾರವು ಆಯೋಗ ಬರುವ ತನಕ ಕಾಯಬಹುದಿತ್ತು. ಆದರೆ, ಲೋಕಸಭಾ ಚುನಾವಣೆಯ ಕಾರಣಕ್ಕೆ ತೆರಿಗೆ ಅನ್ಯಾಯದ ಗದ್ದಲ ಎಬ್ಬಿಸಿದೆ. ರಾಜ್ಯಗಳ ಜತೆಗೆ ಸಮಾಲೋಚಿಸಿದ ಬಳಿಕ ಆಯೋಗವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಲಿದೆ. ವ್ಯಾಪ್ತಿ ಮೀರಿ ಆಯೋಗವು ಶಿಫಾರಸುಗಳನ್ನು ಮಾಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ.

* ಕರ್ನಾಟಕ ರಾಜ್ಯಕ್ಕೆ ₹5,900 ಕೋಟಿ ವಿಶೇಷ ಅನುದಾನ ನೀಡಲು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಆದರೆ, ನಿರ್ಮಲಾ ಸೀತಾರಾಮನ್‌ ಅವರು ಈ ಅನುದಾನ ತಡೆ ಹಿಡಿದರು ಎಂದು ಕಾಂಗ್ರೆಸ್‌ ನಾಯಕರು ಆರೋಪ ಮಾಡುತ್ತಿದ್ದಾರಲ್ಲ?

ನಿರ್ಮಲಾ: ರಾಜ್ಯಕ್ಕೆ ವಿಶೇಷ ಅನುದಾನ ನೀಡಲು 15ನೇ ಹಣಕಾಸು ಆಯೋಗವು ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿದ್ದು ನಿಜ. ಆದರೆ, ಅಂತಿಮ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ನಾನು ಮಧ್ಯಂತರ ವರದಿಯನ್ನು ಒಪ್ಪಬೇಕಾ ಅಥವಾ ಅಂತಿಮ ವರದಿಯನ್ನು ಒಪ್ಪಬೇಕಾ ಎಂಬುದನ್ನು ನೀವೇ ಹೇಳಿ.

ಆಯೋಗದ ಶಿಫಾರಸಿನ ‍ಪ್ರಕಾರವೇ ರಾಜ್ಯಕ್ಕೆ ತೆರಿಗೆ ಪಾಲು ನೀಡಲಾಗಿದೆ. ಅದರಲ್ಲಿ ಯಾವುದೇ ಅನ್ಯಾಯವಾಗಿಲ್ಲ. ನಯಾಪೈಸೆ ಬಾಕಿ ಇಲ್ಲ. ಜಿಎಸ್‌ಟಿ ಪರಿಹಾರವನ್ನು ಐದು ವರ್ಷ ನೀಡಲಾಗಿದೆ. ಐದು ವರ್ಷಗಳ ನಂತರ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಕೋವಿಡ್‌ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯದ ವರಮಾನ ಸೊನ್ನೆ ಆಗಿತ್ತು. ಆ ಸಂದರ್ಭದಲ್ಲಿ ಆಯೋಗದ ಶಿಫಾರಸುಗಳನ್ನು ಮೀರಿ ರಾಜ್ಯಗಳಿಗೆ ವಿಶೇಷ ನೆರವು ನೀಡಲಾಗಿದೆ. ವಿಶೇಷ ನೆರವಿನ ರೂಪದಲ್ಲಿ 50 ವರ್ಷಗಳ ಬಡ್ಡಿ ರಹಿತ ಸಾಲ ನೀಡಲಾಗಿದೆ. ಕರ್ನಾಟಕಕ್ಕೆ ₹6,200 ಕೋಟಿ ವಿಶೇಷ ಅನುದಾನ ಸಿಕ್ಕಿದೆ. 

* ಸೆಸ್ ಮತ್ತು ಸರ್‌ಚಾರ್ಜ್‌ನಿಂದ ಸಂಗ್ರಹ ಆಗಿದ್ದ ತೆರಿಗೆಯಲ್ಲಿ ಒಂದು ರೂಪಾಯಿಯನ್ನೂ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕೊಡುವುದಿಲ್ಲ. ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ, ಕೇಂದ್ರಕ್ಕೆ ನೀಡುವ ಕರ್ನಾಟಕಕ್ಕೆ ಅನ್ಯಾಯ ಆಗುವುದನ್ನು ತಡೆಯಲು ಸಂವಿಧಾನ ತಿದ್ದುಪಡಿ ಮಾಡಿ ಸೆಸ್ ಮತ್ತು ಸರ್‌ಚಾರ್ಜ್‌ನಲ್ಲೂ ಪಾಲು ನೀಡಬೇಕು ಎಂದು ಸಿದ್ದರಾಮಯ್ಯ ಬೇಡಿಕೆ ಮುಂದಿಟ್ಟಿದ್ದಾರೆ. ಈ ಬಗ್ಗೆ ನಿಮ್ಮ ನಿಲುವು ಏನು? 

ನಿರ್ಮಲಾ: ರಾಷ್ಟ್ರೀಯ ಹೆದ್ದಾರಿ, ಬಂದರುಗಳು, ರೈಲು ಮಾರ್ಗ, ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹಣ ಕೊಡುತ್ತಿರುವುದು ಯಾರು ಸಿದ್ದರಾಮಯ್ಯ ಅವರೇ. ಬೆಂಗಳೂರು ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ಗೆ ಎಲ್ಲಿಂದ ಹಣ ಬಂತು ಎಂಬುದನ್ನು ಸ್ವಲ್ಪ ಹೇಳುತ್ತೀರಾ. ಯುಪಿಎ ಸರ್ಕಾರ ಇದ್ದಾಗಲೂ ಇದೇ ವ್ಯವಸ್ಥೆ ಇತ್ತಲ್ಲ. ಆಗ ಯಾಕೆ ಧ್ವನಿ ಎತ್ತಲಿಲ್ಲ ಸಿದ್ದರಾಮಯ್ಯ ಅವರೇ?

ಇತರೆ ಪ್ರಮುಖ ವಿಚಾರಗಳು..

‘ರಾಜ್ಯದಿಂದ ಸ್ಪರ್ಧೆ ಇಲ್ಲ’

ಕರ್ನಾಟಕದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸುದ್ದಿಯನ್ನು ನಿರ್ಮಲಾ ಸೀತಾರಾಮನ್‌ ತಳ್ಳಿ ಹಾಕಿದರು. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿರ್ಮಲಾ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇದು ಊಹಾಪೋಹವಷ್ಟೇ’ ಎಂದು ಸ್ಪಷ್ಟಪಡಿಸಿದರು.

‘ಹೂಡಿಕೆಗೆ ಉದ್ಯಮಿಗಳ ಹಿಂದೇಟು’

‘ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಅವರು ಪ್ರತಿನಿತ್ಯ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಅವರ ನಕಾರಾತ್ಮಕ ವರ್ತನೆಯಿಂದ ರಾಜ್ಯದ ಹೂಡಿಕೆ ಮೇಲೆ ಪರಿಣಾಮ ಬೀರಲಿದೆ. ಈ ರಾಜ್ಯದಲ್ಲಿ ಸಮಸ್ಯೆ ಇದೆ ಎಂದು ಭಾವಿಸಿ ಉದ್ಯಮಿಗಳು ಬೇರೆ ರಾಜ್ಯದ ಕಡೆಗೆ ವಲಸೆ ಹೋಗುತ್ತಾರೆ. ಇದರಿಂದ ರಾಜ್ಯದ ಇಮೇಜ್‌ಗೆ ಧಕ್ಕೆ ಆಗುತ್ತದೆ. ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಹೊರಟಿದ್ದೀರಾ ಅಥವಾ ಹಿಂದುಳಿದ ರಾಜ್ಯವನ್ನಾಗಿ ಮಾಡಲು ಹೊರಟಿದ್ದೀರಾ’ ಎಂದು ನಿರ್ಮಲಾ ಸೀತಾರಾಮನ್‌ ಪ್ರಶ್ನಿಸಿದರು.

ಭದ್ರಾ ಮೇಲ್ದಂಡೆ: ನಿರ್ಮಲಾ ಅಭಯ

‘ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ನೀಡುವುದಾಗಿ ಕಳೆದ ಬಜೆಟ್‌ನಲ್ಲೇ ಘೋಷಿಸಲಾಗಿದೆ. ಈ ಹಣ ಬಿಡುಗಡೆಯಾಗಲಿದೆ. ಬೆಂಗಳೂರು ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆಗೆ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದೆ. ಇದರ ಪ್ರಕ್ರಿಯೆ ಸಹ ನಡೆಯುತ್ತಿದೆ. ಯಾವುದೇ ಯೋಜನೆಗೆ ಅನುದಾನ ನೀಡುವುದಾಗಿ ಪ್ರಕಟಿಸಿದ ಬಳಿಕ ಹಣದ ಬಗ್ಗೆ ಅನುಮಾನ ಬೇಡ. ನಾವು ಕೊಟ್ಟೇ ಕೊಡುತ್ತೇವೆ’ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

‘ಇದು ಜನರ ಚಳವಳಿಯಲ್ಲ’

‘ಬಾಲ್ಯದಲ್ಲಿ ನಾನು ಉಡುಪಿಯಲ್ಲಿದ್ದೆ. ಬೆಂಗಳೂರಿನಲ್ಲಿ ನನ್ನ ಸಂಬಂಧಿಕರಿದ್ದಾರೆ. ನನಗೆ ತಿಳಿದ ಮಟ್ಟಿಗೆ ಕರ್ನಾಟಕದ ಜನರು ತುಂಬಾ ಒಳ್ಳೆಯವರು, ಆತ್ಮೀಯರು ಹಾಗೂ ಅತಿಥಿ ಸತ್ಕಾರ ಮಾಡುವವರು. ತಾವು ಭಾರತೀಯರು ಎಂಬ ಹೆಮ್ಮೆ ಅವರಿಗಿದೆ. ಅವರು ನಮ್ಮ ರಾಷ್ಟ್ರಗೀತೆಯಷ್ಟೇ ಹೆಮ್ಮೆಯಿಂದ ನಾಡಗೀತೆಯನ್ನೂ ಹಾಡುತ್ತಾರೆ. ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆಯ ಬಗ್ಗೆ ಹೆಮ್ಮೆ ಪಡುತ್ತಾರೆ. ದೇಶಕ್ಕೆ ಬೆಂಗಳೂರಿನ ಕೊಡುಗೆ ಅಪಾರ. ಇನ್ಫೊಸಿಸ್‌ನಂತಹ ಕಂಪನಿಗಳು ಮತ್ತು ಈ ರಾಜ್ಯದ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ಜಗತ್ತಿಗೆ ತಿಳಿದಿದೆ’ ಎಂದು ನಿರ್ಮಲಾ ಹೇಳಿದರು. ‘ದೇಶದ ಪ್ರತಿಯೊಂದು ಪ್ರದೇಶವೂ ಅಭಿವೃದ್ಧಿ ಹೊಂದಬೇಕು ಎಂಬುದು ಕರ್ನಾಟಕದ ಜನತೆಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಜನರು ಈ ವಿಷಯವನ್ನು ಎತ್ತುತ್ತಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ರಾಜಕೀಯ ಕಾರಣಕ್ಕಾಗಿ ಮುಖ್ಯಮಂತ್ರಿ ಈ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇದು ಜನರ ಚಳವಳಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.