ADVERTISEMENT

ಅಭಿವೃದ್ಧಿಗೆ ಮುಖ್ಯಮಂತ್ರಿ ಮಗನೇ ಸಂಸದನಾಗಬೇಕೆ? ಸುಮಲತಾ ಅಂಬರೀಷ್

ಸಂದರ್ಶನ

ಎಂ.ಎನ್.ಯೋಗೇಶ್‌
Published 2 ಮೇ 2019, 11:22 IST
Last Updated 2 ಮೇ 2019, 11:22 IST
ಸುಮಲತಾ ಅಂಬರೀಷ್‌
ಸುಮಲತಾ ಅಂಬರೀಷ್‌   

*ಬಿಜೆಪಿ ಬೆಂಬಲದಿಂದ ಅಲ್ಪಸಂಖ್ಯಾತರ ಮತಗಳು ನಿಮ್ಮಿಂದ ದೂರವಾಗುವುದಿಲ್ಲವೆ?

ಜನಾಭಿಪ್ರಾಯದಂತೆ ನಾನು ಪಕ್ಷೇತರ ಅಭ್ಯರ್ಥಿ. ಬಿಜೆಪಿ ಬೆಂಬಲ ನೀಡಿದೆ ಎಂಬ ಮಾತ್ರಕ್ಕೆ ಅಲ್ಪಸಂಖ್ಯಾ
ತರ ಮತಗಳು ದೂರವಾಗುವುದಿಲ್ಲ. ರೈತಸಂಘವೂ ಬೆಂಬಲ ನೀಡಿದೆ. ಕಾಂಗ್ರೆಸ್‌, ಜೆಡಿಎಸ್‌ ಅತೃಪ್ತರೂ ನನ್ನ ಜೊತೆ ಇದ್ದಾರೆ.

*ಜೆಡಿಎಸ್‌ ಭದ್ರಕೋಟೆಯನ್ನು ಹೇಗೆ ಭೇದಿಸುತ್ತೀರಿ?

ADVERTISEMENT

ಸದ್ಯ ಮಂಡ್ಯ ಕ್ಷೇತ್ರ ಜೆಡಿಎಸ್‌ ಭದ್ರಕೋಟೆಯಾಗಿ ಉಳಿದಿಲ್ಲ. ಕಳೆದೊಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಅಂಬರೀಷ್‌ ಸಂಸದರಾಗಿದ್ದಾಗ ಮಾತ್ರ ಸಂಸದರ ನಿಧಿ ಸದ್ಬಳಕೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ₹ 5 ಸಾವಿರ ಕೋಟಿ ಅನುದಾನದ ವಿಷಯ ಹೇಳಿದರೆ ಜನ ನಂಬುವುದಿಲ್ಲ. ಜನರ ಮುಗ್ಧತೆಯ ಲಾಭ ಪಡೆಯಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರ
ಸ್ವಾಮಿ ತಮ್ಮ ಮಗನನ್ನು ತಂದು ನಿಲ್ಲಿಸಿದ್ದಾರೆ. ಜಿಲ್ಲೆಯ ಸಮಸ್ಯೆ ಬಗೆಹರಿಸಲು ಮಗನನ್ನು ಗೆಲ್ಲಿಸಿಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ನೀವೇನು ಮಾಡುತ್ತಿದ್ದೀರಿ? ಮಂತ್ರಿಗಳು, ಶಾಸಕರು ಏನು ಮಾಡುತ್ತಿದ್ದಾರೆ? ಜಿಲ್ಲೆಯ ಅಭಿವೃದ್ಧಿಗೆ ಮಗನೇ ಬರಬೇಕಾ? ನಿಮಗೆ ಆ ಸಾಮರ್ಥ್ಯ ಇಲ್ಲವೇ?

*ಅಂಬರೀಷ್‌ ಆಪ್ತರಲ್ಲಿ ಕೆಲವರು ಈಗ ಜೆಡಿಎಸ್‌ ಜೊತೆಯಲ್ಲಿದ್ದಾರೆ?

ಅಂಬರೀಷ್‌ ಜೊತೆ ಎಲ್ಲಾ ಪಕ್ಷಗಳ ಮುಖಂಡರೂ ಚೆನ್ನಾಗಿದ್ದರು. ವಸತಿ ಸಚಿವರಾಗಿದ್ದಾಗ ಬೇರೆ ಪಕ್ಷದ ಶಾಸಕರ ಕ್ಷೇತ್ರಗಳಿಗೂ ಮನೆ ಕಟ್ಟಿಸಿಕೊಟ್ಟಿದ್ದಾರೆ. ಅವರು ಬಿಳಿ ಅಂಗಿ ತೊಟ್ಟು ರಾಜಕಾರಣ ಮಾಡಿದವರಲ್ಲ. ಬಣ್ಣದ ಅಂಗಿಯ ರಾಜಕೀಯ, ಕಲರ್‌ಫುಲ್‌ ಜೀವನ ಅವರದ್ದು. ಅವರಿಂದ ಲಾಭ ಪಡೆದ ಕೆಲವರು ಜೆಡಿಎಸ್‌ ಜೊತೆಗಿದ್ದಾರೆ. ಸ್ವಾರ್ಥಕ್ಕೆ ಮದ್ದಿಲ್ಲ.

*ಮಂಡ್ಯ ಜಿಲ್ಲೆಯ ಸಮಸ್ಯೆಗಳ ಅರಿವು ಇಲ್ಲ ಎಂಬ ಆರೋಪ ಇದೆ?

ಕಾವೇರಿ ವಿಚಾರದಲ್ಲಿ ರೈತರಿಗಾಗಿ ಅಂಬರೀಷ್‌ ಕೇಂದ್ರ ಸಚಿವ ಸ್ಥಾನವನ್ನೇ ತೊರೆದರು. ಆ ತ್ಯಾಗವನ್ನು ದೇಶದ ಯಾವುದೇ ರಾಜಕಾರಣಿ ಮಾಡಿಲ್ಲ. ರೈತರ ಸಮಸ್ಯೆಗಳ ಅರಿವು ನನಗೂ ಇದೆ. ರೈತ ಸಂಘವು ರೈತರ ಸಮಸ್ಯೆಗಳ ಪಟ್ಟಿ ನೀಡಿದೆ. ಅವುಗಳನ್ನೂ ಅಧ್ಯಯನ ಮಾಡಿದ್ದೇನೆ.

*ಕಾಂಗ್ರೆಸ್‌, ಜೆಡಿಎಸ್‌ ಅತೃಪ್ತರು ಚುನಾವಣೆವರೆಗೂ ನಿಮ್ಮ ಜೊತೆ ಇರುತ್ತಾರಾ?

ಮೈತ್ರಿಯಿಂದಾಗಿ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಪರಿತಪಿಸುತ್ತಿದ್ದಾರೆ. ನನ್ನ ಸ್ಪರ್ಧೆ ಅವರಿಗೆ ಹೊಸ ಉತ್ಸಾಹ ನೀಡಿದೆ. ಎಲ್ಲೆಡೆ ಕಾಂಗ್ರೆಸ್‌ ಬಾವುಟಗಳು ಸ್ವಾಗತಿಸುತ್ತಿವೆ. ಕಾಂಗ್ರೆಸ್‌ ಹೈಕಮಾಂಡ್‌ ಎಲ್ಲರನ್ನೂ ಹೊರಹಾಕಲು ಸಾಧ್ಯವೇ? ಕುಟುಂಬ ರಾಜಕಾರಣಕ್ಕೆ ಬೇಸತ್ತು ಜೆಡಿಎಸ್‌ ಕಾರ್ಯಕರ್ತರೂ ಸ್ವಾಭಿಮಾನದಿಂದ ನನ್ನ ಜೊತೆ ನಿಂತಿದ್ದಾರೆ. ಸ್ವಾಭಿಮಾನದ ಪ್ರತೀಕ ಎಂದೇ ನನ್ನನ್ನು ಪರಿಗಣಿಸಿದ್ದಾರೆ. ಅವರು ಯಾವುದೇ ಆಮಿಷಗಳಿಗೆ ಬಲಿಯಾಗುವುದಿಲ್ಲ.

*ದರ್ಶನ್‌– ಯಶ್‌ ಆಕರ್ಷಣೆ ನಿಮ್ಮನ್ನು ಗೆಲ್ಲಿಸುವುದೇ?

ಈ ಅಮ್ಮನನ್ನು ಗೆಲ್ಲಿಸುವುದಕ್ಕಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ಮಂಡ್ಯಕ್ಕೆ ಚಿತ್ರನಟರ ಪ್ರಚಾರ ಹೊಸದಲ್ಲ. ಆದರೆ ಈ ಬಾರಿ ಅದು ಆಕರ್ಷಣೆಯಲ್ಲ, ಸ್ವಾಭಿಮಾನ.

*ಗೆದ್ದರೆ ಬಿಜೆಪಿ ಸೇರುತ್ತೀರಿ ಎಂಬ ಮಾತಿದೆಯಲ್ಲಾ?

ಅದೆಲ್ಲಾ ಅಪಪ್ರಚಾರ. ಬಿಜೆಪಿ ಯಾವ ಷರತ್ತು ವಿಧಿಸಿಲ್ಲ. ಮುಂದೆಯೂ ಜನಾಭಿಪ್ರಾಯದಂತೆ ಹೆಜ್ಜೆ ಇಡುತ್ತೇನೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.