
ದಟ್ಟವಾದ ಕಾಡೊಂದರಲ್ಲಿ ಗೂಬೆಯೊಂದಿತ್ತು. ಅದರ ಹೆಸರು ಚಿಂಕು. ಗೂಬೆಗಳು ಸಾಧಾರಣವಾಗಿ ಬೇರೆ ಪಕ್ಷಿಗಳು ಬಿಟ್ಟುಹೋದ ಗೂಡುಗಳಲ್ಲೋ ಅಥವಾ ಮರದ ಪೊಟರೆಯಲ್ಲೋ ವಾಸಿಸುತ್ತವೆ. ಚಿಂಕು ಕೂಡ ಹದ್ದೊಂದು ಕಟ್ಟಿದ್ದ ಹಳೆಯ ಗೂಡೊಂದರಲ್ಲಿ ವಾಸವಾಗಿತ್ತು. ಆದರೆ ತಾನೇ ಒಂದು ಹೊಸ ಸುಭದ್ರ ಗೂಡು ಕಟ್ಟಿಕೊಳ್ಳಬೇಕೆಂಬ ಆಸೆ ಚಿಂಕುಗೆ ಯಾವಾಗಲೂ ಇತ್ತು.
ಆಸೆಯೇನೋ ಸರಿ. ಆದರೆ ಚಿಂಕುವಿಗೆ ಒಂದು ಕೆಟ್ಟ ಸ್ವಭಾವವಿತ್ತು. ಅದೆಂದರೆ ಅದರ ಪ್ರೀತಿಯ ಪದ ನಾಳೆ ಎಂಬುದಾಗಿತ್ತು. ನಾನು ನಾಳೆ ಗೂಡು ಕಟ್ಟಲು ಶುರು ಮಾಡುತ್ತೇನೆ, ನಾಳೆ ಸ್ವಲ್ಪ ಜಾಸ್ತಿ ಆಹಾರ ತಂದು ಕೂಡಿಡುತ್ತೇನೆ, ನಾಳೆ ಸ್ನೇಹಿತರನ್ನು ಭೇಟಿಯಾಗುತ್ತೇನೆ ಎಂದು ಪ್ರತೀ ಕೆಲಸವನ್ನೂ ಮುಂದೂಡುತ್ತಲೇ ಇರುತ್ತಿತ್ತು. ನಾಳೆ ಅನ್ನುವ ಪದವೇ ಹಾಗೆ. ಅದು ಬಹಳ ಸುಂದರ ಪದ, ನಾಳೆ ಎಂದುಕೊಂಡಾಗಲೆಲ್ಲ ಸದ್ಯದ ತಲ್ಲಣಗಳು ಮಾಯವಾಗುತ್ತವೆ. ನಾಳೆ ಅನ್ನುವುದು ಹಿತಕರ ಅನುಭವ ನೀಡುವುದರಿಂದ ನಾವು ಬಹಳಷ್ಟು ಕೆಲಸವನ್ನು ದಿನವೂ ನಾಳೆಗೆ ಮುಂದೂಡುತ್ತಿರುತ್ತೇವೆ. ಚಿಂಕು ಕೂಡ ಇದೇ ಅಭ್ಯಾಸ ಮಾಡಿಕೊಂಡಿತ್ತು
ಚಿಂಕುವಿನ ಮುರುಕು ಗೂಡಿರುವ ಮರದ ಹತ್ತಿರವೇ ಸೋನು ಎಂಬ ಅಳಿಲು ವಾಸಿಸುತ್ತಿತ್ತು. ಅದು ಯಾವಾಗಲೂ ಏನಾದರೂ ಮಾಡುತ್ತಿರುತ್ತಿತ್ತು. ಬೀಜಗಳನ್ನು ಸಂಗ್ರಹಿಸುವುದು, ಗೂಡನ್ನು ಸರಿಮಾಡಿಕೊಳ್ಳುವುದು, ಗೆಳೆಯರನ್ನು ಭೇಟಿಯಾಗುವುದು ಯಾವುದನ್ನೂ ಮುಂದೂಡುತ್ತಿರಲಿಲ್ಲ. ಒಂದು ದಿನ ಏಪ್ರಿಲ್ ತಿಂಗಳ ಬಿರುಬೇಸಿಗೆಯಲ್ಲಿ ಇದ್ದಕ್ಕಿದ್ದಂತೆ ಮೋಡಗಳು ದಟ್ಟವಾಗತೊಡಗಿದವು. ಗಾಳಿ ಜೋರಾಗುವ ಲಕ್ಷಣಗಳು ಕಾಣಿಸಿಕೊಂಡವು. ಸೋನು ತನ್ನ ಗುಡಿಸಲನ್ನು ಭದ್ರಪಡಿಸಿಕೊಂಡಿತು. ಮೊಲಗಳು ತಮ್ಮ ಬಿಲದೊಳಗೆ ಓಡಿದವು. ಕರಡಿ ಕೂಡ ನಿಧಾನಕ್ಕೆ ತನ್ನ ಗುಹೆಯತ್ತ ತೆರಳಿತು.
ಚಿಂಕು ಗಡಿಬಿಡಿಯಿಂದ ತನ್ನ ಗೂಡಿನತ್ತ ಹೋಯಿತು. ಗೂಡಿಗೆ ಚಿಂಕು ಜೋತು ಬೀಳುತ್ತಿದ್ದಂತೆ ಗಾಳಿ ಮಳೆಗೆ ಈಗಾಗಲೇ ಸಿಲುಕಿದ್ದ ಗೂಡು ಉದುರಿಬಿದ್ದಿತು. ಬೇರೆ ದಾರಿ ಇಲ್ಲದೇ ಮಳೆಯಲ್ಲೇ ಹಾರಿ ಯಾವುದೋ ಒಂದು ಮರದ ಪೊಟರೆಯೊಳಗೆ ಕುಳಿತಿತು ಚಿಂಕು.
ಮಳೆ ಗಾಳಿ ನಿಂತ ಮಾರನೇ ದಿನ ಕಾಡು ಮೊದಲಿನಂತಿರಲಿಲ್ಲ. ಎಲ್ಲಿ ನೋಡಿದರೂ ಮುರಿದು ಬಿದ್ದ ಮರಗಳು, ರಾಶಿ ಬಿದ್ದ ಎಲೆಗಳು. ಬೇರೆಯವರ ಗೂಡುಗಳಿಗೆ ಅಲ್ಪಸ್ವಲ್ಪ ಹಾನಿಯಾಗಿತ್ತು. ಆದರೆ ಚಿಂಕುವಿನ ಗೂಡಿನಂತೆ ಪೂರ್ತಿ ಹಾಳಾಗಿರಲಿಲ್ಲ. ವಾಪಸ್ ಬಂದ ಚಿಂಕುವನ್ನು ನೋಡಿ ಅಳಿಲು ಹೇಳಿತು: ‘ಸದ್ಯ ಚಿಂಕು ನಿನಗೇನು ಆಗಲಿಲ್ಲವಲ್ಲ. ಆದರೆ ಒಂದು ಸಂಗತಿ ನೆನಪಿಡು, ಬಿರುಗಾಳಿ ನಾಳೆಗಾಗಿ ಕಾಯುವುದಿಲ್ಲ’.
ಪುಟ್ಟ ಅಳಿಲಿನ ಮಾತು ಕೇಳಿ ಚಿಂಕು ನಾಚಿಕೆಯಿಂದ ತಲೆತಗ್ಗಿಸಿತು. ತಕ್ಷಣವೇ ಗೂಡು ಕಟ್ಟಲು ಗಟ್ಟಿಯಾದ ಮರದ ಪುಟ್ಟ ಪುಟ್ಟ ಗೆಲ್ಲುಗಳನ್ನು ತಂದಿತು. ಹುಲ್ಲನ್ನು ತಂದಿತು. ಹಂತಹಂತವಾಗಿ ಗೂಡು ನಿರ್ಮಾಣವಾಯಿತು. ನಂತರ ಆಹಾರವನ್ನು ಸಂಗ್ರಹಿಸುವ ಸರದಿ. ಅದಾದ ಮೇಲೆ ಬಹಳ ದಿನಗಳಿಂದ ಸಿಗದ ತನ್ನ ಸ್ನೇಹಿತ ರೋನಿ ಮೊಲವನ್ನು ಭೇಟಿಯಾಗಿ ಬಂತು.
ನಾಳೆ ಎಂಬ ಪದವನ್ನು ಉಪಯೋಗಿಸುವುದಕ್ಕಿಂತ ಇಂದು ಕಾರ್ಯತತ್ಪರವಾಗುವುದು ಮುಖ್ಯ ಎಂದು ಗೂಬೆ ಅರಿತುಕೊಂಡಿತು. ನಾಳೆ ಎಂಬುದು ಕನಸು ಮತ್ತು ಇಂದಿನ ದಿನವೇ ವಾಸ್ತವ ಎಂಬ ಪಾಠವನ್ನು ಅದು ಕಾಡಿನ ಗೆಳೆಯರಿಗೆ ತನ್ನದೇ ಉದಾಹರಣೆ ಕೊಟ್ಟು ಹೇಳಲಾರಂಭಿಸಿತು. ಇಂದಿನ ಕೆಲಸವನ್ನು ಎಂದಿಗೂ ಮುಂದೂಡಬಾರದು. ಯಾರಿಗೆ ಗೊತ್ತು, ನಾಳೆ ಎನ್ನುವುದು ಬಿರುಗಾಳಿಯನ್ನೇ ತನ್ನೊಂದಿಗೆ ತರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.