
ನುಡಿ ಬೆಳಗು
ಬೆಂಕಿ ನೀರು ಬಾಣಲೆ ಪಾತ್ರೆ ಯಾವುದೂ ಬದಲಾಗೊಲ್ಲ. ಅದರ ಸಂಗಕ್ಕೆ ಬಿದ್ದು ಕುದ್ದು ಹೋಗುವ ವಸ್ತುಗಳೆ ಬದಲಾಗುತ್ತವೆ ಎಂಬ ಅನೇಕ ಉದಾಹರಣೆಗಳು ನಮ್ಮನ್ನು ಇನ್ನೆಲ್ಲೋ ಕೊಂಡೊಯ್ದುಬಿಡುತ್ತವೆ. ಇಂಥದ್ದೇ ಒಂದು ಯೋಚನೆಯನ್ನು ಒಬ್ಬ ಝೆನ್ ಗುರು ಕರೆದು ತೋರಿಸಿದ ಸಂಗತಿ ಇದು. ಒಂದೇ ಬಗೆಯ ಒಲೆ, ಒಂದೇ ಬಗೆಯ ಪಾತ್ರೆ ಮತ್ತು ಒಂದೇ ಮಟ್ಟದ ನೀರು. ಮೂರು ಪಾತ್ರೆಗಳಲ್ಲಿ ಒಂದೊಂದು ವಸ್ತುವನ್ನು ಹಾಕಿ ತೋರಿಸಲಾಗುತ್ತದೆ. ಒಂದು ಪಾತ್ರೆಯಲ್ಲಿ ಕ್ಯಾರೆಟ್, ಇನ್ನೊಂದರಲ್ಲಿ ಮೊಟ್ಟೆ, ಮತ್ತೊಂದರಲ್ಲಿ ಚಹಾ ಪುಡಿ ಹಾಕಲಾಗುತ್ತದೆ. ನೀರು ಕೊತ ಕೊತ ಕುದಿಯಲು ತೊಡಗಿದಾಗ ಗಡಸು ಕ್ಯಾರೆಟ್ ಮೃದುವಾದರೆ, ಮೊಟ್ಟೆ ಒಳಗಿನ ದ್ರವ ಗಟ್ಟಿಯಾಗುತ್ತದೆ. ಚಹಾ ನೀರಿನ ಬಣ್ಣ ಮತ್ತು ವಾಸನೆಯನ್ನೇ ಬದಲಾಯಿಸಿಬಿಟ್ಟಿರುತ್ತದೆ. ಎದುರಾಗುವ ಸವಾಲುಗಳು ವಸ್ತುವನ್ನು ಬದಲಾಯಿಸುವ ಪರಿ ಇದು.
ಕ್ಯಾರೆಟ್ ನೀರಿನ ಕುದಿಯನ್ನು ಸಹಿಸಲಾರದೆ ಮೆದುವಾದರೆ, ಕುದಿತಕ್ಕೆ ಮೈಗೊಟ್ಟು ಮೊಟ್ಟೆಯ ಒಳದ್ರವ ಗಟ್ಟಿಯಾಗುತ್ತದೆ. ಆದರೆ, ಚಹಾ ತನ್ನ ಇರುವಿಕೆಯನ್ನೇ ಬದಲಾಯಿಸಿಕೊಂಡು ನೀರನ್ನೂ ಬದಲಾಯಿಸಿ ಕಂಪನ್ನು ಬೀರಲು ಶುರುಮಾಡುತ್ತದೆ. ಯಾರಿಗಿಲ್ಲ ನೋವು ಇಲ್ಲಿ? ಒಂದಿಲ್ಲೊಂದು ಸಮಸ್ಯೆಗಳ ಉರಿಯಲ್ಲಿ ಜೀವದ ಬಟ್ಟಲು ಕಾದು ನೀರನ್ನು ಕುದಿಸಿ ಜೀವವನ್ನು ಕಾಡುತ್ತದೆ. ಕೆಲವರು ತಾಳಲಾರದೆ ಕುಗ್ಗಿ ಮೃದುವಾಗಿ ಬಿಡುತ್ತಾರೆ. ಕೆಲವರು ಕವಚವನ್ನು ಬಲಪಡಿಸಿಕೊಂಡು ಗಡಸುನಿಷ್ಠುರರಾಗಿ ಬಿಡುತ್ತಾರೆ. ಇನ್ನು ಕೆಲವರು ರೂಪಾಂತರ ಹೊಂದಿ ಜೀವನದ ಅರ್ಥವನ್ನೇ ಬದಲಾಯಿಸಿಬಿಡುತ್ತಾರೆ. ಚಹಾದಂತೆ ತನ್ನನ್ನು ತಾನು ಬದಲಾಯಿಸಿಕೊಂಡು ಎದುರಾದ ಬಾಳಿನ ಸ್ವರೂಪವನ್ನೇ ಬದಲಾಯಿಸಿ ಭಿನ್ನವಾದ ರುಚಿ ಮತ್ತು ಪರಿಮಳವನ್ನೇ ಹೊದ್ದುಕೊಂಡು ಅನನ್ಯರಾಗುತ್ತಾರೆ. ಚಹಾದ ಥರ ಸುತ್ತಲಿನ ಮನಸ್ಸುಗಳನ್ನೂ ಪ್ರಫುಲ್ಲಗೊಳಿಸಿಬಿಡುತ್ತಾರೆ. ಅದೇ ಹಗಲು ಅದೇ ಇರುಳು ಅದೇ ಲಯ ಅದೇ ತಾಳ ಅದೇ ಬಾಳಿನ ಸರಿದಾಟವಾದರೂ ಎದುರಾಗುವ ಸಮಸ್ಯೆ ಮತ್ತು ಸವಾಲುಗಳನ್ನು ಬಹಳ ಭಿನ್ನವಾಗಿ ಸ್ವೀಕರಿಸಿ ನಕ್ಕು ಮುನ್ನಡೆಯುತ್ತಾರೆ. ಸಂತರು, ಶರಣರು, ಚಿಂತಕರು, ಕಲಾವಿದ, ಸಾಹಿತಿಗಳು ಹೀಗೇ. ಜೀವನಶೈಲಿಯನ್ನೇ ಬದಲಾಯಿಕೊಂಡು ಗಂಧ ಬೀರುತ್ತ ಸಾಗುತ್ತಾರೆ.
ಈ ಬಾಳು ಕೂಡಾ ಹಾಗೆಯೇ; ತೀರಾ ಮೃದುವಾದರೆ ಶೋಷಣೆ ಮಾಡುತ್ತದೆ, ತೀರಾ ಒರಟಾದರೆ ಹುಂಬ ಎಂದು ಏನನ್ನೂ ಕಲಿಸಲಾರದು. ಈ ಎರಡರ ನಡುವಿನ ಒಂದು ನಿಲುವು ಇದೆ ನೋಡಿ, ಅದು ರೂಪಾಂತರ. ತನ್ನನ್ನು ತಾನೇ ಹೊಸ ರೂಪದಲ್ಲಿ ಬದಲಾಯಿಸಿಕೊಳ್ಳುವುದು ಅದು ಇಲ್ಲಿನ ಒಳ ಮಾತು.
ಬೆಂಕಿ ನೀರು ಬಟ್ಟಲು ಯಾವುದೂ ಬದಲಾಗದೇ ಇದ್ದರೂ ಅವು ನಮ್ಮನ್ನು ಬದಲಾಯಿಸುತ್ತವೆ. ಸಾವಿರಾರು ಸಲ ಒಗ್ಗರಣೆಗೆ ತನ್ನನ್ನು ತಾನು ಸುಟ್ಟುಕೊಂಡ ಸೌಟು ಬದಲಾಗೋದೇ ಇಲ್ಲ. ಆದರೆ ಅದರಾಚೆ ಸವಿದ ರುಚಿಯ ಮೂಲಕ ನಾವು ಬದಲಾಗುತ್ತಲೇ ಇರುತ್ತೇವೆ. ಸದಾ ನಮ್ಮ ಸಂಯಮವನ್ನು ಪರೀಕ್ಷೆ ಮಾಡಲು ಎದುರಾಗುವ ಸನ್ನಿವೇಶಗಳು ಕೊನೆಗೂ ನಮ್ಮಿಂದ ಬಯಸೋದಾದರೂ ಏನು? ಅದೇ ಹೊಂದಿಕೊಂಡು ಸಾಗುವ ಚಹಾಪುಡಿಯ ಅನನ್ಯ ಸೊಬಗೇ ಅಲ್ಲವೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.