
ಗಾಂಧೀಜಿ ನೂಲುತ್ತಾ, ಭಗವದ್ಗೀತೆಯನ್ನು ಓದುತ್ತಾ ಕುಳಿತಿದ್ದರು. ಕುಸಿದ ಮನಸ್ಸಿನವನೊಬ್ಬ ಅಲ್ಲಿಗೆ ಬಂದ. ಗಾಂಧೀಜಿಯು ತದೇಕಚಿತ್ತರಾಗಿ ಪಠಣದಲ್ಲಿ ಇದ್ದುದರಿಂದ ವ್ಯಕ್ತಿ ಅವರನ್ನು ಮಾತನಾಡಿಸಲು ಕಾಯುತ್ತಾ ಕುಳಿತ. ಸ್ವಲ್ಪ ಸಮಯದ ನಂತರ ತಮ್ಮ ಕೆಲಸವನ್ನೂ, ಗೀತಾ ಪಠಣವನ್ನೂ ಮುಗಿಸಿ, ಬಂದ ವ್ಯಕ್ತಿಯ ಜೊತೆ ಮಾತನಾಡತೊಡಗಿದರು. ಆ ವ್ಯಕ್ತಿಯ ಮನಃಸ್ಥಿತಿ ಗಾಂಧಿಯವರಿಗೆ ಅರ್ಥವಾಗುತ್ತಾ ಬಂದಿತು. ಅವನೊಬ್ಬ ಸೋತ ಮನುಷ್ಯ. ತನ್ನ ಸೋಲಿನ ಕಾರಣವನ್ನು ಹುಡುಕಿಕೊಳ್ಳಲಾರದವನಾಗಿದ್ದ. ‘ನನಗೆ ದೈವ ಸಹಾಯವೂ ಇಲ್ಲ. ಬಡತನ ಬೆನ್ನುಬಿಟ್ಟಿಲ್ಲ. ಮನೆಯಲ್ಲಿ ಹೆಂಡತಿ ಮಕ್ಕಳ ಜವಾಬ್ದಾರಿ. ಹೀಗಿರುವಾಗ ನಾನೇನು ಮಾಡಬೇಕು ಹೇಳಿ?’ ಎಂದ. ಗಾಂಧೀಜಿ, ‘ನೀನು ಏನು ಕೆಲಸ ಮಾಡುತ್ತಿದ್ದೀಯಾ?’ ಎಂದರು. ‘ನನ್ನ ಸಮಸ್ಯೆ, ಏನು ಮಾಡಬೇಕೆನ್ನುವುದೇ ಗೊತ್ತಾಗದಿರುವುದು. ಏನು ಮಾಡಲಿ ಎಂದು ನಿಮ್ಮನ್ನು ಕೇಳಲು ಬಂದೆ’ ಎಂದ.
ಗಾಂಧೀಜಿಗೆ ಇನ್ನು ಯಾವ ಅನುಮಾನವೂ ಉಳಿಯಲಿಲ್ಲ; ಈ ಮನುಷ್ಯ ಪರಾವಲಂಬಿ, ತಾನಾಗಿ ಏನನ್ನೂ ಮಾಡಲಾರ, ಮಾಡಲಾರದ್ದಕ್ಕೆ ಕಾರಣಗಳನ್ನು ಹುಡುಕುತ್ತಿದ್ದಾನೆ ಎಂದು. ಅವನನ್ನು ಉದ್ದೇಶಿಸಿ ಗಾಂಧೀಜಿ, ‘ದೇವರನ್ನು ಪ್ರಾರ್ಥಿಸು, ನಾನೂ ಅದನ್ನೇ ಮಾಡುತ್ತಿರುವೆ’ ಎಂದರು. ‘ಪ್ರಾರ್ಥನೆ, ಅದೊಂದು ಮೂಢ ಸಂಪ್ರದಾಯ. ಅರ್ಥವಿಲ್ಲದ ಸುಳ್ಳು. ದೇವರನ್ನು ಪ್ರಾರ್ಥಿಸುತ್ತಿದ್ದೇನೆ ಎಂದಿರಲ್ಲಾ, ಈಗ ಹೇಳಿ ನಿಮ್ಮ ಪ್ರಾರ್ಥನೆ ಫಲ ಕೊಟ್ಟಿದ್ದಿದ್ದರೆ ಇಷ್ಟು ಹೊತ್ತಿಗೆ ನಮ್ಮ ದೇಶ ಸ್ವತಂತ್ರವಾಗಬೇಕಿತ್ತಲ್ಲ’ ಎಂದ ಬಂದವ. ಗಾಂಧೀಜಿ ನಕ್ಕರು. ‘ಹೌದು ಸಿಗಬೇಕಿತ್ತು’. ‘ಮತ್ತೆ ಪ್ರಾರ್ಥನೆಯ ಫಲಿತವೇನು? ಸುಮ್ಮನೆ ನೀವು ಕೇಳಿಕೊಳ್ಳುವುದು ಮಾತ್ರವಾ?’ ಎಂದವನಿಗೆ ಗಾಂಧೀಜಿ, ‘ಓಹೋ ನಿನಗೆ ಪ್ರಾರ್ಥನೆಯ ಅರ್ಥವೇ ಗೊತ್ತಿಲ್ಲವೆಂದಾಯಿತು’ ಎಂದರು. ಬಂದವನ ಅಹಂ ಕೆರಳಿತು. ‘ಗೊತ್ತಿಲ್ಲದೆ ಏನು? ನನಗೆ ಏನು ಬೇಕೋ ಅದನ್ನು ಕೇಳಿಕೊಳ್ಳುವುದು’ ಎಂದ. ಗಾಂಧೀಜಿ, ‘ಎಲ್ಲವೂ ಪ್ರಾರ್ಥನೆಯಿಂದಲೇ ಆಗುತ್ತದೆ, ದೇವರು ಎಲ್ಲವನ್ನೂ ಕೊಡಬೇಕು ಎನ್ನುವ ನಿರೀಕ್ಷೆ ನನ್ನದಲ್ಲ. ಪ್ರಾರ್ಥನೆಯ ಅರ್ಥವೂ ಅದಲ್ಲ. ದಿನವೂ ದೇಶಕ್ಕೆ ಸ್ವಾತಂತ್ರ್ಯ ಕೊಡು ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದುಕೊಂಡಿದ್ದೀಯಾ? ನಾನು ಕೇಳಿಕೊಳ್ಳುವುದು, ಈ ದೇಶವನ್ನು ಬ್ರಿಟಿಷರಿಂದ ವಿಮೋಚನೆಗೊಳಿಸಲು ನಾನು ಪ್ರಯತ್ನಿಸುವೆ, ನಿನ್ನ ಅನುಗ್ರಹವಿರಲಿ ಎಂದು. ಅಷ್ಟನ್ನು ಕೇಳಿ ಜನರನ್ನು ಸಂಘಟಿಸುತ್ತಿರುವೆ, ನಾಡಿನ ಉದ್ದಗಲಕ್ಕೂ ಓಡಾಡುತ್ತಿರುವೆ. ಚಿತ್ತಶುದ್ಧಿಯಿಂದ ಕೆಲಸವನ್ನು ಮಾಡುತ್ತಿರುವೆ. ಒಂದಲ್ಲಾ ಒಂದು ದಿನ ದೇಶ ಸ್ವತಂತ್ರವಾಗುತ್ತದೆ’ ಎಂದರು ದೃಢವಿಶ್ವಾಸದಿಂದ. ಬಂದವ ಮತ್ತಷ್ಟು ಖಿನ್ನನಾದ.
‘ದೇವರು ನನಗೆ ಈ ದೇಹವನ್ನು ಕೊಟ್ಟಿದ್ದಾನೆ, ಅದರಲ್ಲಿ ಕಸುವು ಇಟ್ಟಿದ್ದಾನೆ. ತಲೆಯಲ್ಲಿ ಬುದ್ಧಿಯನ್ನು ತುಂಬಿದ್ದಾನೆ. ಮನಸ್ಸಿನಲ್ಲಿ ಆಸೆ ಹುಟ್ಟಿಸಿದ್ದಾನೆ- ನಿನ್ನ ಕೆಲಸವನ್ನು ನೀನು ಮಾಡಿಕೊ ಎಂದು ಬಿಟ್ಟಿದ್ದಾನೆ. ನಾನು ನನಗೆ ಸರಿದೋರಿದ ಕೆಲಸವನ್ನು ಇನ್ನೊಬ್ಬರಿಗೆ ಕಷ್ಟ, ನೋವಾಗದ ದಾರಿಯಲ್ಲಿ ಮಾಡುವೆ. ಅದಕ್ಕಾಗಿ ನಿನ್ನ ಅನುಗ್ರಹವಿರಲಿ ಎಂದು ಬೇಡುವೆ’ ಎಂದರು ಗಾಂಧಿ.
ನಿಜ ಪ್ರಾರ್ಥನೆ ಎಂದರೆ ಬೇಡಿಕೆ ಅಲ್ಲ; ನಮ್ಮ ಸಂಕಲ್ಪಶಕ್ತಿಗೆ ವಿಶ್ವಶಕ್ತಿಯಿಂದ ಸಿಗುವ ಬೆಂಬಲ, ನಮ್ಮನ್ನು ಅಲ್ಪತ್ವದಿಂದ ಪಾರುಮಾಡುವ ಸಾಧನ ಮಾತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.