
ಕಾರು ಕೊಂಡವರೆಲ್ಲ ಬಡವರ ಶೋಷಕರು ಎಂದು ಭಾವಿಸಿದ್ದ ಹಸಿಹಸಿ ಚಿಂತನೆಗಳ ವ್ಯಕ್ತಿಯೊಬ್ಬ ದಿನ ಬೆಳಗಾದರೆ ದೀನದಲಿತರ ಪರವಾಗಿ ಕಂಡಕಂಡವರ ಜೊತೆಗೆ ವಾಗ್ವಾದ ನಡೆಸುತ್ತಿದ್ದ. ಇವನ ಬಡವರ ಪರ ಕಾಳಜಿಯನ್ನು ಅನೇಕರು ಇಷ್ಟಪಡುತ್ತಿದ್ದರು. ಇನ್ನು ಕೆಲವರು ಇದೆಲ್ಲ ಎಷ್ಟು ದಿನ ನಡೆಯುತ್ತೆ ನೋಡೋಣ ಅಂತ ಆಡಿಕೊಳ್ಳುತ್ತಿದ್ದರು. ಒಂದಿಷ್ಟು ಅದೂ ಇದೂ ಓದಿಕೊಂಡಿದ್ದ ಈ ಮನುಷ್ಯನಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಇಪ್ಪತ್ತು ಎಕರೆ ಅಡಿಕೆ ತೋಟವಿತ್ತು. ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರನ್ನು ಯಾವ ಭೇದವೂ ಇಲ್ಲದಂತೆ ಮುಟ್ಟಿ, ಹೆಗಲ ಮೇಲೆ ಕೈಯಿಟ್ಟು ತಿನ್ನಿಸಿ ಕುಡಿಸಿ ಚೆನ್ನಾಗಿ ನೋಡಿಕೊಂಡಿದ್ದ.
ಕ್ರಮೇಣ ಅಡಿಕೆಗೆ ವಿಪರೀತ ಬೆಲೆ ಬಂದು ತಾನೂ ಒಂದು ಕಾರನ್ನು ಕೊಂಡುಕೊಂಡ. ಬರುಬರುತ್ತಾ ದೊಡ್ಡ ನಗರಗಳ ಜೀವನ ಶೈಲಿಯನ್ನು ಕಂಡು ತಾನೂ ಹಾಗೆ ಬದುಕುವ ಕನಸು ಕಂಡ. ನಗರದ ಸುಖಜೀವನಕ್ಕೆ ಆಡಂಬರದ ಖಯಾಲಿಗಳಿಗೆ ಬೇಕಾದ ದುಡ್ಡು ಕಾಸಿಗೆ ಯಾವ ಕೊರತೆಯೂ ಇರಲಿಲ್ಲ. ಬರುಬರುತ್ತಾ ಒಬ್ಬ ಡ್ರೈವರನನ್ನು ನೇಮಿಸಿಕೊಂಡ. ತಾನು ಉಡುವ ಬಟ್ಟೆ, ತೊಡುವ ಚಪ್ಪಲಿ– ಶೂ, ತಿನ್ನಲು ಬಾದಾಮಿ, ಪಿಸ್ತಾ, ಗೋಡಂಬಿ ಮುಂತಾದವನ್ನೆಲ್ಲ ಮುತುವರ್ಜಿಯಿಂದ ಕಾರಿನಲ್ಲಿ ಇಟ್ಟಿರುವಂತೆ ನಿಗಾವಹಿಸುತ್ತಿದ್ದ. ಮೊದಲೆಲ್ಲ ಹಳ್ಳಿ ಮನೆಯ ನೀರನ್ನೇ ಕುಡಿಯುತ್ತಿದ್ದವನಿಗೆ ನಗರದಲ್ಲಿ ದೊರೆಯುವ ಮಿನರಲ್ ವಾಟರ್ ಬೇಕಾಯ್ತು. ಮನೆಗೆ ದೊಡ್ಡವನೆಂದು ಹೆದರುತ್ತಿದ್ದ ತಮ್ಮ ತಂಗಿಯರನ್ನು ಕೆಲಸದವರಂತೆ ಭಾವಿಸಿದ. ಕೂಲಿಯವರನ್ನು ಮೊದಲಿನ ಸಲುಗೆಯಿಂದ ಮಾತಾಡಿಸದೆ ಅಂತರ ಕಾಯ್ದುಕೊಳ್ಳತೊಡಗಿದ. ಅವರು ತಮ್ಮ ಸಾಹುಕಾರರಲ್ಲಿ ಏನೋ ಬದಲಾವಣೆ ಆಗುತ್ತಿರುವುದನ್ನು ಗಮನಿಸಿ ಕೆಲವರು ಬಿಟ್ಟುಹೋದರು. ಐಷಾರಾಮದ ಶೋಕಿಯ ಜೀವನಶೈಲಿ ಇಷ್ಟವಾದಂತೆ ಅವನನ್ನು ಹೊಗಳುವವರು ಸ್ನೇಹಿತರಾದರು. ಅವರಲ್ಲಿ ಕೆಲವರು ಭಟ್ಟಂಗಿಗಳೇ ಆದರು. ಆಟವಾಡಲು ಸುಂದರವಾದ ಬೆಕ್ಕೊಂದನ್ನು ಕೇಳಿದರೆ ಇವರು ತರುಣಿಯನ್ನು ತಂದು ನಿಲ್ಲಿಸಿದರು. ಅವನಿಗೆ ಒಂದೊಂದೇ ಮದ ಹೆಚ್ಚಾಗಿ ತನ್ನ ಸಿರಿವಂತಿಕೆಯ ಕಾಲಿಗೆ ಬಿದ್ದವರು ಗುಲಾಮರಂತೆ ಕಾಣತೊಡಗಿದ. ಸ್ನೇಹ ಸಲುಗೆಯು ಸತ್ತು ದರ್ಪ ಮತ್ತು ಠೇಂಕಾರದ ದನಿ ಚಿಗುರಿತು. ತಾನು ಇವರಿಗೆಲ್ಲ ಬಾಸ್ ಎಂಬ ಅಹಂಕಾರದ ಜೊತೆಗೆ ಬರಬಾರದ ರೋಗಗಳೆಲ್ಲ ತಗುಲಿಕೊಂಡು ತೀರಿಹೋದ.
ಯಜಮಾನಿಕೆ ಅನ್ನುವುದೊಂದು ದಾಳಿಕೋರನ ಅಸಹನೆ. ತಾನು ಬಯಸಿದ್ದು ಸಲೀಸಾಗಿ ದೊರೆಯದೇ ಇದ್ದರೆ ದಾಳಿಮಾಡಿ ದಕ್ಕಿಸಿಕೊಳ್ಳುವ ದರ್ಪಿಷ್ಟನ ದೌರ್ಬಲ್ಯ. ಅದು ವೈಭೋಗದಲ್ಲಿ ಹುಟ್ಟುವುದಿಲ್ಲ. ದರ್ಪ ತೋರುವುದು ಯಜಮಾನನ ಲಕ್ಷಣವೂ ಅಲ್ಲ.
ವಂದಿಮಾಗಧರ ಭಜನೆಯಿಂದ ಯಜಮಾನನಾಗಲು ಸಾಧ್ಯವಿಲ್ಲ. ಸಂಕಟದಲ್ಲಿರುವ ಸಮಾಜಕ್ಕೆ ಬೇಕಾಗಿರುವುದು ದೂರದ ನಂಟನಲ್ಲ, ಹತ್ತಿರದ ಜೊತೆಗಾರ. ಅವನು ಸುಖದುಃಖಗಳ ಸಮಾನ ಪಾಲುದಾರನಾಗಬೇಕು. ಆಗಲೇ ಅವನ ಇರುವಿಕೆಗೊಂದು ಘನತೆ. ಅವನು ಯಾವಾಗಲೋ ಬಂದು ಯಾರದೋ ಬೆವರಿನ ಬೆಳೆಯನ್ನು ಒಕ್ಕಲು ಮಾಡಿಕೊಂಡು ಮೆರೆದರೆ ಅದು ಕೇವಲ ಸ್ವಾರ್ಥ.
ದಯೆಯಿಲ್ಲದ ಯಜಮಾನಿಕೆ ದುಡಿಯುವವರನ್ನೂ ದೇವರನ್ನೂ ದೂರವಿಡುತ್ತ ಒಂಟಿಯಾಗುತ್ತದೆ. ಕ್ರೂರ ದಾಳಿಯಿಂದ ಬಂದ ಸಂಪತ್ತನ್ನು ಅನುಭವಿಸಲೂ ಆಗದಂತಹ ದುರಂತ ಎದುರಾಗುತ್ತದೆ. ಎಲ್ಲರ ಚರಿತ್ರೆ ತೆರೆದುಕೊಂಡು ಯಾವುದೂ ಸ್ಥಿರವಲ್ಲ ಅನಿಸುತ್ತದೆ. ನಿರಂತರ ಏಳುಬೀಳುಗಳ ಅಲೆಯಲ್ಲಿ ಮೇಲಿದ್ದವನು ಮುಳುಗುವುದಿಲ್ಲ ಎಂಬ ಭರವಸೆಗೆ ಆಧಾರವಿಲ್ಲ. ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ. ಅಲ್ಪರ ಅರ್ಧರಾತ್ರಿಯಲ್ಲಿ ಯಾರ ದಾರಿ ಹೇಗೆ ಸಾಗುವುದೋ ನೋಡಬೇಕು. ಯಜಮಾನಿಕೆ ಅಳಿದು ಸ್ನೇಹ ಸಲುಗೆ ಸಹನೆಗಳು ಉಳಿಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.