ನುಡಿ ಬೆಳಗು
ನಮ್ಮ ಮನೆಯ ಹಿತ್ತಲಿನ ಸಣ್ಣ ಬಳ್ಳಿಯಲ್ಲಿ ಒಂದು ಹೂವು ಅರಳುತ್ತದೆ. ಹೂವಿನ ಆಯಷ್ಯ ಎಷ್ಟು ಹೇಳಿ? ಮನುಷ್ಯನ ಹಾಗೆ ಒಂದು ಹೂವು ನೂರು ವರ್ಷ ಬದುಕುವುದಿಲ್ಲ. ಹೂವಿನ ಆಯಷ್ಯ ಒಂದೇ ದಿನ. ಸೂರ್ಯೋದಯದಿಂದ ಆರಂಭವಾಗಿ ಸೂರ್ಯಾಸ್ತದಲ್ಲಿ ಮುಗಿದು ಹೋಗುತ್ತದೆ. ಮನುಷ್ಯ ನೂರು ವರ್ಷ ಬದುಕಿದ. ಆದರೆ ಒಂದೇ ಒಂದು ದಿನ ಬದುಕುವ ಹೂವಿನ ಬದುಕಿನ ಸಾರ್ಥಕತೆ ಎಷ್ಟು ಅದ್ಭುತ ಎಂದರೆ ತನ್ನನ್ನು ಯಾರು ನಿರ್ಮಾಣ ಮಾಡಿದ್ದಾರಲ್ಲ ಆ ದೇವನ ತಲೆಯ ಮೇಲೆ ಹೋಗಿ ಕುಳಿತು ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತದೆ.
ಮನುಷ್ಯ ಕೂಡ ಅಂತಹ ಸುಂದರ ಬದುಕು ಕಟ್ಟಿಕೊಳ್ಳಬೇಕು. ಏನು ಮಾಡಿ ಈ ಬದುಕಿನ ಋಣ, ಈ ಜಗತ್ತಿನ ಋಣ ತೀರಿಸಬೇಕು ಎಂದು ಆಲೋಚಿಸಬೇಕು. ‘ನಾನು ಇಲ್ಲಿಗೆ ಬರುವುದಕ್ಕೆ ಮೊದಲು ಮಣ್ಣು, ಕಲ್ಲು, ನೀರು, ಗಾಳಿ ಯಾವುದನ್ನೂ ನಿರ್ಮಾಣ ಮಾಡಲಿಲ್ಲ. ನಾನು ಹುಟ್ಟಿ ಬರುವುದಕ್ಕೆ ಮೊದಲೇ ನಿಸರ್ಗ ದೇವತೆ ನಾನು ಹುಟ್ಟಿ ವಿಕಾಸ ಆಗಲು ಏನೇನು ಬೇಕೋ ಅದೆಲ್ಲವನ್ನೂ ನಿರ್ಮಾಣ ಮಾಡಿ ಇಟ್ಟಿತ್ತು. ಈ ನಿಸರ್ಗಕ್ಕಾಗಿ ಮನುಷ್ಯ ಏನು ಕೊಟ್ಟಿದ್ದಾನೆ? ಅದಕ್ಕಾಗಿ ಮನುಷ್ಯ ಒಳ್ಳೆಯ ಕೆಲಸ ಮಾಡಬೇಕು. ಬೇಕಾದಷ್ಟು ಜನ ಈ ಜಗತ್ತು ನೆನಪಿನಲ್ಲಿ ಇಡುವಂತಹ ಕೆಲಸ ಮಾಡಿ ಹೋಗಿದ್ದಾರೆ. ಭಗತ್ ಸಿಂಗ್‌ನಂತಹ ರಾಷ್ಟ್ರಪ್ರೇಮಿಯನ್ನು ಈ ಜಗತ್ತು ಮರೆಯಲು ಸಾಧ್ಯವೇ? ಮನುಷ್ಯ ದೇಶಕ್ಕಾಗಿ, ಸಮಾಜಕ್ಕಾಗಿ, ನಿಸರ್ಗಕ್ಕಾಗಿ ಒಂದಿಷ್ಟು ಕೊಡುಗೆ ಕೊಟ್ಟು ಹೋಗಬೇಕಾಗುತ್ತದೆ. ಈ ಜಗತ್ತಿನಲ್ಲಿ ಯಾವುದೂ ನನ್ನದು ಎನ್ನುವುದಿಲ್ಲ. ಎಲ್ಲ ನಿಸರ್ಗ ಕೊಟ್ಟ ಪ್ರಸಾದ. ಜಗತ್ತಿನಲ್ಲಿ ಇರುವ ಎಲ್ಲ ವಸ್ತು ವಿಷಯಗಳ ಬಗ್ಗೆ ನನ್ನದು’ ಎಂಬ ಭಾವನೆ ಬಂದರೆ ಅದು ಪದಾರ್ಥವಾಗುತ್ತದೆ. ಇದು ದೇವರು ಕೊಟ್ಟಿದ್ದು ಎಂಬ ಭಾವನೆ ಬಂದರೆ ಈ ಬದುಕೇ ಪ್ರಸಾದವಾಗುತ್ತದೆ.
ಮನೆಯಿಂದ ಹೊರಡುವಾಗ ಬಾಳೆಹಣ್ಣು ತೆಗೆದುಕೊಂಡು ಹೋಗುತ್ತೀವಿ. ಗುಡಿಗೆ ಹೋಗಿ ನೈವೇದ್ಯ ಮಾಡಿ ಬಂದ ನಂತರ ಪ್ರಸಾದ ತೆಗೆದುಕೊಳ್ಳಿ ಅಂತೀವಿ. ಬಾಳೆಹಣ್ಣು ಬದಲಾಗಿಲ್ಲ. ಹಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಹಾಗೆಯೇ ಈ ಬದುಕನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ನಾವು ಈ ಜಗತ್ತಿಗೆ ಅತಿಥಿಗಳಾಗಿ ಬಂದಿದ್ದೇವೆ. ಇಲ್ಲಿ ಯಾರೂ ಕಾಯಂ ಇರೋದಿಲ್ಲ. ಈ ಜಗತ್ತಿಗೆ ನಾವು ಕಲಾವಿದರಾಗಿ ಬಂದಿದ್ದೇವೆ. ಇಲ್ಲಿ ನಮ್ಮ ಕಲೆಯನ್ನು ಸರಿಯಾಗಿ ಪ್ರದರ್ಶಿಸಬೇಕು. ಮನುಷ್ಯ ಎಷ್ಟು ಬೆರಕಿ ಎಂದರೆ ಯಾವಾಗಲೂ ತನ್ನ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಮನೆ ಬಹಳ ಕಾಡತೈತ್ರಿ ಅಂತಾನೆ. ಕೈಗೆ ಬಂದ ಹಣ ನಿಲ್ಲೋದಿಲ್ಲ ಅಂತಾನೆ. ವಾಸ್ತು ದೋಷ ಅನ್ನುತ್ತಾನೆ. ಜ್ಯೋತಿಷಿಗಳು ಅಥವಾ ಮಠಾಧೀಶರ ಬಳಿಗೆ ಹೋಗುತ್ತಾನೆ. ಅವರೂ ಇಂತಹ ಜನ ಬರಲಿ ಎಂದು ಕಾಯುತ್ತಾ ಕುಳಿತಿರುತ್ತಾರೆ. ಮನೆಯ ಬಾಗಿಲು ಬದಲಾಯಿಸು, ಅಡುಗೆ ಮನೆ, ದೇವರ ಮನೆ ಎಲ್ಲ ಬದಲಾಯಿಸು ಅಂತಾರೆ. ಇವನೂ ಹಾಗೆಯೇ ಮಾಡುತ್ತಾನೆ. ಆಗ ಮನೆ ಹೇಳುತ್ತದೆ. ‘ಮನೆ ಬದಲಾಯಿಸಿದೆ. ಆದರೆ ನೀನೇ ಬದಲಾಗಲಿಲ್ಲ’ ಅಂತ. ಮನೆಯನ್ನು ವಾಸ್ತು ಪ್ರಕಾರ ಕಟ್ಟುವುದಲ್ಲ. ಮನೆಯಲ್ಲಿರುವ ಮನಸ್ಸುಗಳನ್ನು ವಾಸ್ತು ಪ್ರಕಾರ ಕಟ್ಟಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.