
ಬಣ್ಣಗಳಿಗೂ ಒಂದು ಹಬ್ಬವಿದೆ ಎಂಬ ಮಾತೇ ವಿಸ್ಮಯ. ಇದು ಈ ನೆಲದ ಒನಪು. ಗೊತ್ತಾಗುತ್ತಿಲ್ಲ ಬಣ್ಣ ಕಣ್ಣಿನ ಒಳಗೆ ಇದೆಯೋ ಹೊರಗೆ ಇದೆಯೋ. ಬೆಳಕಿನ ವಕ್ರೀಭವನ ಪಾಠದಲ್ಲಿ ಪಟ್ಟಕದ್ದೇ ಪ್ರಾಬಲ್ಯ. ಬಿಳಿ ಬೆಳಕು ಪಟ್ಟಕವನ್ನು ಹೊಕ್ಕಿದಾಗ ಅಚೆ ಬೀಳುವ ಗೆರೆಗಳೇ ಬಾಳಿನ ತುಂಬಾ ಆವರಿಸುತ್ತವೆ. ಕಲಾವಿದ ಹರಸಾಹಸ ಪಟ್ಟು ಏನೆಲ್ಲಾ ಮಿಶ್ರಣ ಮಾಡಿ ಯಥಾವತ್ತಾಗಿ ಬಿದ್ದ, ಕಂಡ ಬಣ್ಣದ ಹೂ ಎಲೆ ಪಕ್ಷಿ ಪ್ರಾಣಿ ರೆಕ್ಕೆ ಪುಕ್ಕ ನದಿ ಆಕಾಶ ಏನೆಲ್ಲವನ್ನೂ ಕ್ಯಾನ್ವಾಸಿನೊಳಗೆ ತರಲು ಯತ್ನಿಸಿ ಸೋಲುತ್ತಾನೆ. ನವದುರ್ಗೆ ಒಂಬತ್ತು ದಿನ ಒಂಬತ್ತು ಬಣ್ಣದ ಸೀರೆಯುಟ್ಟು ಚಿತ್ರಗಳಲ್ಲಿ ಜೀವಂತಗೊಳ್ಳುತಾಳೆ.
ಯಾವ ಸೆರಗಿಗೆ ಯಾವ ಬಣ್ಣದ ಅಂಚು ಎಂದು ಮಾನಿನಿಯರು ಪೇಟೆ ಪೇಟೆಗಳನ್ನು ಮಗುಚಿ ಹಾಕುತ್ತಾರೆ. ದಟ್ಟ ಬಿರುಬಿಸಿಲ ಕಾಲದಲ್ಲೂ ಗುಲ್‌ಮೊಹರ್ ಬೇರಿನ ಆಳ ಕಡು ಕೆಂಪು ಬಣ್ಣವನ್ನು ಮೆತ್ತಿಕೊಂಡು, ದುಂಡು ಮಲ್ಲಿಗೆ ಬೆಳ್ಳನೆ ಹೊಳೆಯುತ್ತ ಪರಿಮಳವನ್ನು ಚೆಲ್ಲುತ್ತದೆ. ಒಂದು ಬಿಂದಿಗೆ ನೀರಿಗೂ ಜನ ತತ್ವಾರ ಪಡುತ್ತಿರುವಾಗ ಕಲ್ಲಂಗಡಿ ಮೈದುಂಬಿ ಕೆಂಪು ತುಳುಕುತ್ತದೆ. ತೆಂಗಿನ ಮರದ ತುದಿ ಗೊನೆಗೆ ಗಟ್ಟಿ ಕವಚದ ಒಳಗೆ ಎಳನೀರು ಸರಬರಾಜು ಮಾಡುತ್ತದೆ. ತಿಳಿ ಬಣ್ಣದ ಕತೆ ಇದು.
ಈ ಭೂಮಿ ಬಣ್ಣದ ಬುಗುರಿ ಎಂದು ಹಾಡುತ್ತಲೇ ಶಿವನೆಂಬ ಚಾಟಿಯ ಎಚ್ಚರ. ಬಣ್ಣದ ಬುಗುರಿಯನ್ನು ಸುತ್ತಿ ತಿರುಗಿಸುವ ಚಾಟಿ ಕೂಡಾ ಬಣ್ಣದ ಹೆಣಿಗೆಯೇ. ಬೆಳ್ಳನೆಯ ಅಕ್ಕಿಯನ್ನು ಕೇರುವ ಮೊರ ಕೂಡಾ ಬಣ್ಣದ ಚೌಕವೇ. ಬದುಕೇ ಬಣ್ಣವಾಗಿರುವಾಗ ಭಾವಗಳು ಕೂಡಾ ಬಣ್ಣ ಮೆತ್ತಿಕೊಳ್ಳುತ್ತವೆ. ಮುನಿಸಿಗೆ ಕೆಂಪು, ಶೋಕಕ್ಕೆ ಕಪ್ಪು, ಸಮೃದ್ದಿಗೆ ಹಸಿರು, ಶಾಂತಿಗೆ ಬಿಳಿ, ಬಯಕೆಗೆ ನೀಲಿ, ಒಲವಿಗೆ ಗುಲಾಬಿ, ಕ್ರಾಂತಿಗೆ ಕೇಸರಿ ಹೀಗೇ ಒಂದಿಲ್ಲ ಒಂದು ಬಣ್ಣ ಅರ್ಥ ಪಡೆದುಕೊಳ್ಳುತ್ತದೆ. ಇದರ ಮಧ್ಯೆ ನವಿಲು ಯಾರ ಜಪ್ತಿಗೂ ಸಿಗದೇ ಹಾರುತ್ತದೆ. ಊರು ಗಮ್ಯ ಯಾವುದೇ ಇರಲಿ ಕಪ್ಪು ದಾರಿ, ಹೆದ್ದಾರಿಗಳನ್ನೇ ದಾಟಿ ಹೋಗಬೇಕು. ಅಗಾಧ ಜ್ಞಾನಿಗಳೂ ಕಪ್ಪು ಹಲಗೆಯ ಮೇಲಿನ ಬಿಳಿ ಬಣ್ಣದ ಮೂಲಕವೇ ಮೂಡಿ ಬಂದವರು.
ಯಂಡಮೂರಿ ವೀರೆಂದ್ರನಾಥರ ‘ಕಪ್ಪಂಚು ಬಿಳಿಸೀರೆ’ ಕಾದಂಬರಿ ಲೋಕದ ಸೀರೆ ಮಾರುಕಟ್ಟೆಯನ್ನು ತೆರೆದಿಟ್ಟರೆ, ಡಾ.ರಾಜ್ ಅವರ ಸಿನಿಮಾ ‘ಕಾಮನಬಿಲ್ಲು’ ಇದ್ದು, ಮರೆಯಾಗುವ ಸುಖ ಸಂತಸದ ನಶ್ವರತೆಯನ್ನು ಬಿಂಬಿಸುತ್ತದೆ. ಒಲವಿನ ಬಣ್ಣದ ಹಾಡು ನೂರೊಂದು ನೆನಪಿಗೆ ಕೆಡವುತ್ತದೆ. ಹೋಳಿ ಹಬ್ಬ ಮನ್ಮಥನ ಕಾಮನೆಗಳನ್ನು ಹರವುತ್ತದೆ. ಪುಡಿ ಬಣ್ಣವಾದರೆ ಅದು ಗಾಳಿಯ ಕೂಡ, ತೇವದ ಬಣ್ಣವಾದರೆ ಇಳೆಯು ಕೂಡ ಕರಗುತ್ತದೆ. ಹೊಸ ಬಿಳಿವಸ್ತ್ರಗಳನ್ನು ಅಳಿಸದ ಬಣ್ಣಗಳಲ್ಲಿ ಅಂದಗೊಳಿಸುತ್ತೇವೆ. ಬಿಳಿ ಬಟ್ಟೆಯಂತಹ ಶುದ್ಧ ಬಾಳಿನಲ್ಲಿ ಕಪ್ಪು ಚುಕ್ಕೆ ಅಂಟದ ಹಾಗೆ ಎಚ್ಚರ ವಹಿಸುತ್ತೇವೆ. ಮುದ್ದು ಮಗುವಿನ ಕೆನ್ನೆ ಹುಬ್ಬಿನ ಮೇಲೆ ಕಾಡಿಗೆ ಕಪ್ಪು ಬಳಿದರೆ ಅದರ ಅರ್ಥವೇ ಬೇರೆ. ಇಡೀ ಲೋಕ ಅದರದ್ದೇ ಆದ ಬಣ್ಣ ಬೆರಗುಗಳಲ್ಲಿ ಕಂಗೊಳಿಸುವಾಗ ಬಣ್ಣ ಬಳಿಯುವ, ಬಣ್ಣ ಹಚ್ಚುವ, ಬಣ್ಣ ಬಯಲಾಗಿಸುವ ಮಾತುಗಳು ಇನ್ನಷ್ಟು ವಿವರಗಳನ್ನು ಬಯಸುತ್ತದೆ. ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲೂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.