
ಉಡಾಫೆ, ಠೇಂಕಾರದ ವ್ಯಕ್ತಿಯೊಬ್ಬ ಗುರುವಿನ ಬಳಿ ಬಂದು, ‘ಲೋಕ ನಿನ್ನ ಕೈಲಿ ಅಸಾಧ್ಯವಾದದ್ದು ಆಗುತ್ತದೆ ಎನ್ನುತ್ತದೆ. ಅದಕ್ಕೆ ನನಗೆ ಪ್ರಮಾಣ ಬೇಕು’ ಎಂದ. ಗುರು ನಕ್ಕು, ‘ಮಿತ್ರ, ನನ್ನಿಂದ ಏನನ್ನು ಬಯಸುತ್ತಿರುವೆ ಸ್ಪಷ್ಟವಾಗಿ ಹೇಳು?’ ಎಂದ. ‘ಸರ್ವಜ್ಞನಾದ ನಿನಗೆ ನನ್ನ ಮಾತೇ ಅರ್ಥವಾಗುತ್ತಿಲ್ಲ’ ವ್ಯಂಗ್ಯವಾಡುತ್ತಾನೆ ವ್ಯಕ್ತಿ. ಗುರು, ‘ನಿರ್ದಿಷ್ಟವಾಗಿ ಏನನ್ನಾದರೂ ಹೇಳಿದರೆ ನನ್ನಿಂದ ಆಗುತ್ತದೋ ಇಲ್ಲವೋ ಎಂದು ಹೇಳಬಹುದು’ ಎಂದ. ವ್ಯಕ್ತಿ ಮೊನಚಾಗಿ, ‘ಓ ಸರ್ವಶಕ್ತನಾದ ಗುರುವೇ, ದೂರದಲ್ಲಿ ಆ ಬೆಟ್ಟ ಕಾಣುತ್ತಿದೆಯಲ್ಲಾ, ಅದು ನನ್ನ ಕಾಲ ಕೆಳಗೆ ಇರುವಂತೆ ಮಾಡಲಿಕ್ಕೆ ಆಗುತ್ತದಾ?’ ಎನ್ನುತ್ತಾನೆ. ಗುರು ಬೆಟ್ಟವನ್ನು ನಿರುಕಿಸುತ್ತಾ, ‘ಆಗುತ್ತದೆ’ ಎಂದ. ವ್ಯಕ್ತಿಯು ‘ನೀನು ಏನು ಹೇಳುತ್ತಿದ್ದೀಯೆ ಅದರ ಗಾಂಭೀರ್ಯದ ಅರಿವಿದೆಯೇ?’ ಎಂದ. ಗುರು ಗಂಭೀರವಾಗಿ, ‘ಚೆನ್ನಾಗೇ ಅರಿವಿದೆ. ಅದಕ್ಕೆ ನೀನು ಮಾಡಬೇಕಾದ್ದಿಷ್ಟೇ: ನನ್ನ ಹಿಂಬಾಲಿಸುವುದು’ ಎಂದು ಉತ್ತರಕ್ಕೂ ಕಾಯದೇ ಎದ್ದು ಹೊರಟ.
ಕಡಿದಾದ ಬೆಟ್ಟವದು, ಬಿಸಿಲು ಬೇರೆ. ಗುರು ಯಾವ ಆಸರೆಯೂ ಇಲ್ಲದೇ ಹತ್ತುತ್ತಿದ್ದರೆ ಅವನನ್ನು ಪರೀಕ್ಷಿಸಲು ಬಂದ ವ್ಯಕ್ತಿ ಏದುಸಿರುಬಿಡುತ್ತಿದ್ದ. ಕೆಲ ಗಂಟೆಗಳ ನಂತರ ಇಬ್ಬರೂ ಬೆಟ್ಟದ ಮೇಲುಭಾಗಕ್ಕೆ ತಲುಪುತ್ತಾರೆ. ಕೋಪಗೊಂಡ ವ್ಯಕ್ತಿಯು ‘ಬೆಟ್ಟ ನನ್ನ ಕಾಲ ಕೆಳಗೆ ಬಿದ್ದಿರಬೇಕು ಅಂದೆನೇ ಹೊರತು ಬೆಟ್ಟವನ್ನು ಹತ್ತಿಸು ಎಂದಲ್ಲ’ ಎನ್ನುತ್ತಾ ನಿಂದಿಸಲು ಆರಂಭಿಸುತ್ತಾನೆ. ಗುರು ಶಾಂತಚಿತ್ತನಾಗಿ ‘ಯಾವುದಾದರೂ ಸರಿಯೆ, ಬಾ ಎಂದರೆ ನಮ್ಮ ಬಳಿಗೆ ಬರುವುದಿಲ್ಲ. ಅದರಲ್ಲೂ ಪ್ರಕೃತಿಯ ಮೇಲೆ ಹಿಡಿತ ಸಾಧಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಪರಿಶ್ರಮವೂ ಬೇಕು. ಪರಿಶ್ರಮವಿಲ್ಲದೆ ಪವಾಡ ನಡೆಯುವುದಿಲ್ಲ. ನೀನು ಆಶಿಸಿದೆ- ಅದೂ ಬಲವಾಗಿ. ಅದಕ್ಕೆ ನಾನು ನಿನಗೆ ದಾರಿ ತೋರಿಸಿದೆ. ಇಷ್ಟು ಹತ್ತಿ ಬಂದದ್ದರ ಆಯಾಸ ಇಷ್ಟು ಹೊತ್ತಿಗೆ ನಿನಗೆ ಮರೆತುಹೋಗಬೇಕಿತ್ತು. ಆದರೆ, ನಿನ್ನ ಜೀವನದಲ್ಲಿ ಏನು ನಡೆದಿದೆ ಎನ್ನುವುದರ ಅರಿವೇ ನಿನಗಾಗಿಲ್ಲ’ ಎನ್ನುತ್ತಾನೆ. ವ್ಯಕ್ತಿಗೆ ಇನ್ನಷ್ಟು ಕೋಪ, ‘ನೀರಡಿಕೆ, ಆಯಾಸ ಮತ್ತು ಹಸಿವು ಅಷ್ಟು ಬಿಟ್ಟರೆ ಇನ್ನೇನೂ ಆಗಲಿಲ್ಲ’ ಎನ್ನುತ್ತಾನೆ. ಗುರು ಎಂದ, ‘ಮೂರ್ಖ, ಬೆಟ್ಟ ಈಗ ನಿನ್ನ ಕಾಲ ಕೆಳಗೆ ಇದೆ. ಅದನ್ನು ನೀನು ಹತ್ತಿದ್ದೀಯೆ ಮತ್ತು ನಿನ್ನ ಅಪೇಕ್ಷೆಯ ಪ್ರಕಾರ ಗೆದ್ದಿದ್ದೀಯೆ. ಇದು ಮಹತ್ವದ್ದಲ್ಲವೇ?’. ಗುರುವಿನ ಮಾತುಗಳಿಂದ ವ್ಯಕ್ತಿಯ ಅಹಂಕಾರ ಒಡೆದು, ತಪ್ಪಾಯಿತೆಂದು ಕಾಲಿಗೆರಗಿದ.
ಮತ್ತೆ ಗುರುವೆಂದ: ‘ನಿಜ, ಬೆಟ್ಟ ತಾನಾಗೇ ನಮ್ಮ ಕಾಲ ಕೆಳಗೆ ಬಂದು ಬೀಳುವುದು ಅಸಾಧ್ಯ. ಆದರೆ, ನಮ್ಮ ಸಾಧನೆಯಿಂದ ಬೆಟ್ಟವನ್ನು ಹತ್ತಬಲ್ಲೆವು. ಹಾಗೆ ಹತ್ತಿದ ಮೇಲೆ, ಅದಕ್ಕಾಗಿ ಪಟ್ಟ ಕಷ್ಟ ಮರೆಯುತ್ತದೆ; ಸಾಧನೆಯ ಸಾರ್ಥಕತೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಗೆಲ್ಲುವುದು ಎಂದರೆ ಯಾವುದನ್ನೋ ಕಾಲಕೆಳಗೆ ಹಾಕಿ ತುಳಿಯುವುದೆಂದುಕೊಳ್ಳಬೇಡ. ನಮ್ಮ ಆಲೋಚನೆಯಲ್ಲಿ ಸಣ್ಣ ಬದಲಾವಣೆ ಬೇಕು. ಆಗ ನಮ್ಮನ್ನು ಅದು ಮಹತ್ವದ ಕಡೆಗೆ ಕರೆದೊಯ್ಯುತ್ತದೆ’.
ನಮ್ಮ ಆಲೋಚನೆಗಳನ್ನು ಅಹಂ ಇಲ್ಲದೆ ಕ್ರಿಯಾತ್ಮಕವಾಗಿಸಿಕೊಂಡರೆ ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.