ADVERTISEMENT

ನುಡಿ ಬೆಳಗು: ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ

ರೇಣುಕಾ ನಿಡಗುಂದಿ
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
   

ಅವರು ದೊಡ್ಡ ಶ್ರೀಮಂತರು. ಹತ್ತಾರು ಕಾರ್ಖಾನೆಗಳು, ಅಪಾರ ಆಸ್ತಿ ಸಂಪತ್ತುಳ್ಳವರು. ಅವರ ಕಾರ್ಖಾನೆ, ಆಫೀಸುಗಳಲ್ಲಿ ಹತ್ತಾರು ಸಾವಿರ ಜನ ದುಡಿಯುತ್ತಾರೆ. ನೌಕರರು ನಿರಂತರ ಅವರ ಸೇವೆಯಲ್ಲಿರುತ್ತಾರೆ. ಅವರ ಮನೆಯಲ್ಲಿ ನೌಕರರಿಗೆ ಬೇರೆ ಅಡುಗೆ, ಮಾಲೀಕರಿಗೆ ಬೇರೆ ಅಡುಗೆ. ಮಾಲೀಕರಿಗೆ ಅತ್ಯುತ್ತಮ ಗುಣಮಟ್ಟದ ಬಾಸುಮತಿ ಅಕ್ಕಿ, ನೌಕರರಿಗೆ ಕಡಿಮೆ ಬೆಲೆಯ ಅಕ್ಕಿ. ಅಲ್ಲಿನ ಅಂಗಡಿಗಳಲ್ಲಿ ಸರ್ವೆಂಟುಗಳ ಅಕ್ಕಿ ಕೊಡಿ ಅಂದರೆ ಅವರು ಕೊಡುತ್ತಾರೆ. ಹಲವು ರೋಗಗಳು, ಹಾರ್ಟು ಸಮಸ್ಯೆ, ಬಿ.ಪಿ ಅಂತೆಲ್ಲ ನೂರೆಂಟು ಮಾತ್ರೆಗಳನ್ನು ನುಂಗುವ ಶ್ರೀಮಂತನಿಗೆ ತಿನ್ನುವುದಕ್ಕೆ ಪಂಚಭಕ್ಷ್ಯಗಳಿದ್ದರೂ ಆತ ಉಣ್ಣುವುದು ಒಂದು ರೊಟ್ಟಿ. ಸದಾ ವೈದ್ಯರ ನಿಗಾವಣೆಯಲ್ಲಿಯೇ ಇರಬೇಕು. ಮೈಮುರಿದು ದುಡಿಯುವವರಿಗೆ ಹಸಿವು ಹೆಚ್ಚು. ಒಂದೆರಡು ರೊಟ್ಟಿಯಿಂದ ಹೊಟ್ಟೆ ತುಂಬೀತೆ? ಅಡುಗೆ ಪದಾರ್ಥಗಳ ಲೆಕ್ಕ ಕೇಳುವವರ ಮನೆಗಳಲ್ಲಿ ಕೆಲಸ ಮಾಡುವವರು ಯಾರೂ ಸಂತೋಷವಾಗಿರುವುದಿಲ್ಲ.

ಕೆಲಸದ ಸಹಾಯಕರನ್ನು ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಣುಗಳಿಂದ ಕಾಯುವ ಜನ ಹೊರಗೆ ಗುರುದ್ವಾರ, ದೇವಸ್ಥಾನಗಳಿಗೆ ಅನ್ನದಾನಕ್ಕಾಗಿ ಧಾರಾಳವಾಗಿ ಕ್ವಿಂಟಲ್‌ಗಟ್ಟಲೆ ಹಿಟ್ಟು ತುಪ್ಪ ಸಕ್ಕರೆ ಒದಗಿಸುತ್ತಾರೆ. ಹಗಲು ರಾತ್ರಿ ತಮ್ಮ ಸೇವೆ ಮಾಡುವವರ ಬಗ್ಗೆ, ಅವರು ಅದಕ್ಕಾಗಿಯೇ ಹುಟ್ಟಿದವರು, ಅವರ ಕರ್ಮದ ಫಲವನ್ನು ಅನುಭವಿಸುತ್ತಿದ್ದಾರೆ ನಾವೇನು ಮಾಡೋಣ ಎನ್ನುವ ಧೋರಣೆ, ಅಹಂಕಾರ ಅವರ ವರ್ತನೆಯಲ್ಲಿರುತ್ತದೆ.

ಪರಿಚಯದ ಒಬ್ಬರು ದೇವಸ್ಥಾನದ ಜೀರ್ಣೊದ್ಧಾರಕ್ಕೆ ಐವತ್ತು ಸಾವಿರ ದೇಣಿಗೆ ನೀಡಿದ್ದರು. ಆ ಸಮಾಜ ಅವರನ್ನು ಶಾಲು ಹೊದಿಸಿ ಸನ್ಮಾನಿಸಿತು. ಅದೇ ವ್ಯಕ್ತಿ ಹಸಿದು ಬಾಗಿಲಿಗೆ ಬಂದ ಭಿಕ್ಷುಕನನ್ನು ‘ಏನು ಇಷ್ಟು ಕೊಬ್ಬಿದ ಕೋಣನಂತಿದೀಯ, ದುಡಿದು ತಿನ್ನಲಿಕ್ಕೇನು ಧಾಡಿ’ ಎಂದು ಬಯ್ಯುತ್ತಿದ್ದರು.

ADVERTISEMENT

ತೋರಿಕೆಯ ಪ್ರತಿಷ್ಠೆಗಾಗಿ ಜನ ಏನೆಲ್ಲ ಮಾಡುತ್ತಾರೆ. ದೇಣಿಗೆ, ಅನ್ನ ಸಂತರ್ಪಣೆ ಮಾಡುವ ಜನರು, ‘ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ’ ಎಂದು ಸೋಜಿಗವಾಗುತ್ತದೆ. ಕೆಲವರ ಆಷಾಢಭೂತಿತನಕ್ಕೆ ಮನಸ್ಸು ಬೇಸರಗೊಳ್ಳುತ್ತದೆ.

ಉಣ್ಣದ ಲಿಂಗಕ್ಕೆ ಎಡೆ ಹಿಡಿಯುವುದು, ಬಡ ಜಂಗಮರು ಹಸಿದು ಬಂದರೆ ಮುಂದಕ್ಕೆ ಹೋಗು ಎನ್ನುವುದು. ಈ ವೈರುಧ್ಯಗಳು ನಮ್ಮ ಜೀವನದ ವೈರುಧ್ಯಗಳನ್ನು ಪ್ರತಿಬಿಂಬಿಸುತ್ತವೆ. ಮನುಷ್ಯನ ಸಣ್ಣತನಗಳನ್ನು ಒರೆಗೆ ಹಚ್ಚುತ್ತವೆ.

ತಮಗಿಂತ ದುರ್ಬಲರ ಮೇಲೆ, ತಮಗಾಗಿ ಜೀವ ತೇಯುವ ಜನಗಳ ಮೇಲೆ ಒಂಚೂರು ಕರುಣೆ ಔದಾರ್ಯ ತೋರುವುದಿಲ್ಲ. ಕೈಯೆತ್ತಿ ಏನನ್ನೂ ನೀಡುವುದಿಲ್ಲ, ಕಷ್ಟ ಸುಖ ಕೇಳುವುದಿಲ್ಲ. ನೊಂದಿರಾ ಬೆಂದಿರಾ ಉಂಡಿರಾ ಎಂದೂ ವಿಚಾರಿಸಲಾರರು. ಬದಲಾಗಿ ಉಣ್ಣದ ಲಿಂಗಕ್ಕೆ ನೈವೇದ್ಯ ನೀಡುತ್ತಾರೆ. ಗುಡಿ ಗುಂಡಾರಗಳಲ್ಲಿನ ಕಲ್ಲು ದೇವರಿಗೆ, ನಿರ್ಜೀವ ವಸ್ತುಗಳಿಗೆ ಸುರಿದು ಪೋಲು ಮಾಡುವ ಬದಲು ಹಸಿದವರಿಗೆ ನೀಡಿ ಅದನ್ನು ಸದ್ವಿನಿಯೋಗ ಮಾಡಿರಿ ಎನ್ನುತ್ತಾರೆ ಬಸವಣ್ಣ.

ದೊಡ್ಡ ಕಂಪನಿಗಳಲ್ಲಿ, ಕಾರ್ಖಾನೆಗಳಲ್ಲಿ ಕೂಡ ಕೂಲಿಕಾರ್ಮಿಕರ ಕಣ್ಗಾವಲಿಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳಿರುತ್ತವೆ. ಅವರು ಮಾಡುವ ಕೆಲಸವನ್ನು ಶ್ಲಾಘಿಸದ ಅಧಿಕಾರಿಗಳು ಆ ಕಾರ್ಮಿಕ ದಣಿದು ಅರೆಕ್ಷಣ ಕಾಲುಚಾಚಿ ಕುಳಿತಿದ್ದರೂ ಶಿಕ್ಷಿಸುತ್ತಾರೆ. ಶ್ರೀಮಂತ ಅತೀ ಶ್ರೀಮಂತರೂ ಬಡವ ಕಡುಬಡವನೂ ಆಗುತ್ತಿರುವ ಕಾಲದಲ್ಲಿ ಬಡವರಿಗೆ ಅಸ್ತಿತ್ವವೇ ಇಲ್ಲ. ಅವರೂ ಮನುಷ್ಯರು ಎಂದು ಪರಿಗಣಿಸುವುದು ಯಾವಾಗ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.