
ನುಡಿ ಬೆಳಗು
ಗಂಗಾತೀರದಲ್ಲಿ ಒಬ್ಬ ಸಂತರು ತಮ್ಮ ಶಿಷ್ಯರಿಗೆ ಬೋಧಿಸುತ್ತಿದ್ದರು. ಆಗ ಒಬ್ಬ ಶಿಷ್ಯ ಕೇಳುತ್ತಾನೆ: ‘ಗುರುಗಳೇ, ನಾವು ಏನಾದರೂ ಹೊಸತನ್ನು, ಒಳ್ಳೆಯ ಕಾರ್ಯವನ್ನು ಮಾಡಹೊರಟರೆ ಸಮಾಜ ಅದನ್ನು ವಿರೋಧಿಸುತ್ತದೆ. ಆಗ ನಾವೇನು ಮಾಡಬೇಕು?’
ಗುರು ಸ್ವಲ್ಪ ಯೋಚಿಸಿ, ಈ ಪ್ರಶ್ನೆಗೆ ಉತ್ತರವನ್ನು ನಾಳೆ ಕೊಡುವುದಾಗಿ ಹೇಳುತ್ತಾರೆ.
ಮರುದಿನ ಎಲ್ಲಾ ಶಿಷ್ಯಂದಿರು ನದಿಯ ತಟದಲ್ಲಿ ಸೇರುತ್ತಾರೆ. ಗುರು ಹೇಳುತ್ತಾರೆ: ‘ನಾವು ಇಂದು ಒಂದು ಪ್ರಯೋಗವನ್ನು ಮಾಡೋಣ. ಮೀನಿಗೆ ಗಾಳ ಹಾಕುವ ಈ ಮೂರು ಕೋಲುಗಳನ್ನು ನೋಡಿರಿ. ಇವು ಒಂದೇ ಗಳುವಿನಿಂದ ಮಾಡಿದವು, ಒಂದೇ ಆಕಾರದವು’. ಬಳಿಕ ಗುರು ಪ್ರಶ್ನೆ ಮಾಡಿದ ಶಿಷ್ಯನನ್ನು ಮುಂದೆ ಕರೆದು, ‘ಮಗೂ ಈ ಗಾಳ ತಗೋ, ಮೀನು ಹಿಡಿ’ ಎಂದು ಆದೇಶಿಸುತ್ತಾರೆ.
ಶಿಷ್ಯನು ಗಾಳಕ್ಕೆ ಸಿಕ್ಕಿಸಿದ ಕೊಕ್ಕೆಗೆ ಎರೆಹುಳು ಚುಚ್ಚಿ ನೀರಲ್ಲಿ ಗಾಳಹಾಕುತ್ತಾನೆ. ತಕ್ಷಣ ಒಂದು ದೊಡ್ಡ ಮೀನು ಸಿಕ್ಕಿಕೊಳ್ಳುತ್ತದೆ. ‘ಬೇಗ.. ನಿನ್ನ ಶಕ್ತಿಯನ್ನೆಲ್ಲ ಪ್ರಯೋಗಿಸಿ ಗಾಳವನ್ನು ಹಿಂದಕ್ಕೆಳೆದುಕೋ’ ಎಂದು ಗುರು ಹೇಳುತ್ತಾರೆ.
ಶಿಷ್ಯ ಹಾಗೆಯೇ ಮಾಡಿದ. ಮೀನೂ ಅಷ್ಟೇ ಬಲವಾಗಿ ಬಿಡಿಸಿಕೊಂಡು ಓಡಲು ಪ್ರಯತ್ನಿಸಿತು. ಪರಿಣಾಮವಾಗಿ ಕೋಲು ಮುರಿದುಹೋಯಿತು.
‘ಪರವಾಗಿಲ್ಲ, ಈ ಎರಡನೇ ಗಾಳವನ್ನು ತಗೋ, ಮತ್ತೆ ಪ್ರಯತ್ನಿಸು’. ಶಿಷ್ಯ ಮತ್ತೆ ಗಾಳ ಹಾಕುತ್ತಾನೆ. ಈ ಬಾರಿಯೂ ಮೀನು ಸಿಕ್ಕಿಕೊಳ್ಳುತ್ತದೆ. ಆಗ ಗುರು, ‘ನಿಧಾನ, ಹಗುರವಾಗಿ ಗಾಳವನ್ನು ಎಳೆ’ ಎಂದರು. ಶಿಷ್ಯ ಹಾಗೇ ಮಾಡಿದ. ಆದರೆ, ಮೀನು ಎಷ್ಟು ಬಲವಾಗಿ ಎಳೆಯಿತೆಂದರೆ, ಕೈಯಿಂದ ಗಾಳವೇ ಬಿದ್ದುಹೋಯ್ತು.
ಗುರು, ‘ಓಹೋ ಮೀನು ನುಣುಚಿಕೊಂಡಿತು. ಈ ಕೊನೆಯ ಗಾಳವನ್ನು ತಗೊಂಡು ಮತ್ತೆ ಪ್ರಯತ್ನಿಸು’ ಎನ್ನುತ್ತಾರೆ. ಶಿಷ್ಯ ಹಾಗೇ ಮಾಡಿದ. ಈ ಬಾರಿಯೂ ಮೀನು ಸಿಕ್ಕಿಕೊಳ್ಳುತ್ತದೆ. ಆಗ ಗುರು, ‘ನಿಧಾನವಾಗಿ, ಈ ಸಲ ಹೆಚ್ಚಿನ ಬಲವನ್ನೂ ಹಾಕಬೇಡ, ಕಡಿಮೆ ಬಲವನ್ನೂ ಹಾಕಬೇಡ. ಮೀನು ಯಾವ ಶಕ್ತಿ ಬಲದಿಂದ ಗಾಳವನ್ನು ಒಳಕ್ಕೆಳೆಯುತ್ತದೋ ಅಷ್ಟೇ ಪ್ರಮಾಣದ ಬಲದಿಂದ ಗಾಳವನ್ನು ಹೊರಗೆಳೆ’ ಎಂದರು. ಶಿಷ್ಯ ಹಾಗೇ ಮಾಡಿದ. ಈ ಬಾರಿ ಮೀನು ತಪ್ಪಿಸಿಕೊಳ್ಳಲಾಗದೇ ಗಾಳಕ್ಕೆ ಸಿಕ್ಕಿಬೀಳುತ್ತದೆ.
ಗುರು ಶಿಷ್ಯರನ್ನು ಕೇಳುತ್ತಾರೆ: ‘ಇದರಿಂದ ಏನನ್ನು ಕಲಿತಿರಿ? ಈ ಮೀನುಗಳು ನಮ್ಮ ಸಮಾಜವಿದ್ದಂತೆ. ನೀವು ಮಾಡುವ ಕೆಲಸಗಳಿಗೆ ವಿರೋಧವುಂಟುಮಾಡುತ್ತವೆ. ಒಂದು ವೇಳೆ ನೀವು ಅದರ ವಿರುದ್ಧ ಅಧಿಕ ಶಕ್ತಿಪ್ರಯೋಗ ಮಾಡಿದರೆ ನೀವು ಕುಸಿಯುತ್ತೀರಿ, ಅದೇ ರೀತಿ ಕಡಿಮೆ ಒತ್ತಡ ಹಾಕಿದಾಗ ಸಮಾಜ ನಿಮ್ಮನ್ನು ಹಾಗೂ ನಿಮ್ಮ ಯೋಜನೆಗಳನ್ನು ನಷ್ಟಗೊಳಿಸುತ್ತದೆ. ಆದರೆ ನೀವು ಅದರ ವಿರೋಧದ ಪ್ರಮಾಣದಷ್ಟೇ ನಿಮ್ಮ ಬಲವನ್ನು ಪ್ರಯೋಗಿಸತೊಡಗಿದಾಗ, ಅದು ನಿಧಾನವಾಗಿ ದಣಿಯುತ್ತದೆ, ಮಣಿಯುತ್ತದೆ. ತನ್ನ ಸೋಲನ್ನು ಒಪ್ಪಿಕೊಳ್ಳುತ್ತದೆ. ಆಗ ನೀವು ಗೆಲ್ಲುತ್ತೀರಿ. ಆದ್ದರಿಂದ ಸಮಾಜಕ್ಕೆ ಪ್ರಯೋಜನವಾಗುವಂತಹ ಕಾರ್ಯಗಳನ್ನು ಮಾಡಲುಹೊರಟಾಗ ಸಮಾಜ ನಿಮ್ಮನ್ನು ವಿರೋಧಿಸಿದರೆ ಸಮಾನ ಬಲ ಪ್ರಯೋಗದ ಸಿದ್ಧಾಂತವನ್ನು ಅನುಸರಿಸಿರಿ, ಆಗ ನೀವು ಯಶಸ್ವಿಯಾಗುತ್ತೀರಿ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.