ADVERTISEMENT

ನುಡಿ ಬೆಳಗು: ಗುರುವಿನ ಪಾಲಿನ ಹಣತೆ ಯಾವುದು?

ಡಾ.ದಾದಾಪೀರ್ ನವಿಲೇಹಾಳ್
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಅವರು ತರಗತಿಯ ಒಳಗಿನಿಂದ ಬಸ್ ನಿಲ್ದಾಣದ ಕಡೆ ಕಣ್ಣು ಹಾಯಿಸಿದರು. ಅಲ್ಲಿದ್ದ ಮೂರು ನಾಲ್ಕು ಹುಡುಗರು ತಮ್ಮದೇ ಶಾಲೆಯವರೆಂದು ಅನಿಸಿತು. ಬಸ್ ಸ್ಟ್ಯಾಂಡ್‌ನಲ್ಲಿ ಅವರಿವರ ಸಹವಾಸ ಮಾಡಿ ಕೆಟ್ಟು ಹೋಗುತ್ತವೆ ಎಂದುಕೊಂಡು ತರಗತಿಯನ್ನು ಮಾನಿಟರ್ ಉಸ್ತುವಾರಿಗೆ ವಹಿಸಿ ಧಾವಿಸಿದರು. ‘ಕತ್ತೆಗಳಾ, ಇಲ್ಲೇನು ಮಾಡ್ತೀರಿ? ಇದಕ್ಕೇನಾ ಅಪ್ಪ ಅಮ್ಮ ಕಳ್ಸೋದು’ ಅಂತ ಗದರಿಸಿ ತರಗತಿಗೆ ಕಳಿಸಿದರು. ಶಾಲೆಯ ಕಾಂಪೌಂಡ್ ಒಳಗೆ ಬಂದ ಹುಡುಗರು ತರಗತಿಗೆ ಹೋಗದೆ ಬೇಲಿಯನ್ನು ನುಸುಳಿಕೊಂಡು ಮತ್ತೆ ಬಸ್ ಸ್ಟ್ಯಾಂಡ್‌ಗೆ ಬಂದುದನ್ನು ಗಮನಿಸಿ ಸುಮ್ಮನಾದರು. 

ಮರುದಿನ ಬೆಳಿಗ್ಗೆ ಅವರದೇ ತರಗತಿ. ನಿನ್ನೆ ಕಂಡ ನಾಲ್ಕೂ ಹುಡುಗರು ಹಿಂದಿನ ಸಾಲಿನಲ್ಲಿ ಕುಳಿತಿದ್ದರು. ಮೇಷ್ಟ್ರು ಆ ನಾಲ್ಕೂ ಹುಡುಗರತ್ತ ಕೈ ತೋರಿಸಿ ‘ನೀವು ಎದ್ದು ನಿಲ್ಲಿ’ ಎಂದರು. ಅವರು ನಿಂತರು. ಉಳಿದ ವಿದ್ಯಾರ್ಥಿಗಳಿಗೆಲ್ಲ ‘ನೀವೆಲ್ಲಾ ಅವರನ್ನೊಮ್ಮೆ ಹಿಂತಿರುಗಿ ನೋಡಿ’ ಎಂದರು. ಎಲ್ಲರೂ ನೋಡಿದರು. ನಿಂತಿದ್ದ ಹುಡುಗರನ್ನು ಕುಳಿತುಕೊಳ್ಳಲು ಹೇಳಿ ಪಾಠ ಶುರುಮಾಡಿದರು. ಆ ಹುಡುಗರಿಗೆ ಆಗಬಾರದ ಅವಮಾನವಾಯಿತು. ಇಡೀ ತರಗತಿಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ತಮ್ಮ ಬಗ್ಗೆ ಏನೇನು ಅನುಮಾನ ಹುಟ್ಟಿರಬಹುದು? ಅವರು ಏನೆಲ್ಲಾ ಕಲ್ಪಿಸಿಕೊಂಡಿರಬಹುದು? ‘ನಿನ್ನೆ ಯಾಕೆ ಹಾಗೆ ಮಾಡಿದಿರಿ? ಎಲ್ಲಿಗೆ ಹೋಗಿದ್ದಿರಿ? ಅಂತ ಕೇಳಲಿಲ್ಲ. ಬಯ್ಯಲಿಲ್ಲ. ಹೊಡಿಯಲಿಲ್ಲ’ ಮೇಷ್ಟ್ರು ಹಾಗೇನಾದ್ರೂ ಮಾಡಿದ್ದರೆ ಚೆನ್ನಾಗಿತ್ತು. ಸ್ವಲ್ಪ ಹೊತ್ತಿಗೆ ಎಲ್ಲ ಮರೆಯುತ್ತಿತ್ತು. ಆದರೆ, ಅವರು ಕೊಟ್ಟ ಈ ಶಿಕ್ಷೆಯಿಂದ ಈ ಹುಡುಗರು ತಮ್ಮ ಜೀವಮಾನದಲ್ಲೆಂದೂ ತಪ್ಪು ಮಾಡಲಿಲ್ಲ. ಓದುವ ಮಕ್ಕಳು ತರಗತಿಯ ಒಳಗಡೆ ಮಾತ್ರವಲ್ಲ, ಹೊರಗೆ ಎಲ್ಲಿ ತಪ್ಪು ಮಾಡಿದರೂ ಮೇಷ್ಟ್ರು ದಂಡಿಸುತ್ತಿದ್ದರು. ಯಾರದೋ ಹೊಲದಲ್ಲಿ ಕಬ್ಬು ಮುರಿದು ಸಿಕ್ಕುಬಿದ್ದರೆ ಅದೇ ಕಬ್ಬಿನಿಂದ ಬಾರಿಸಿ ಬುದ್ದಿ ಹೇಳುತ್ತಿದ್ದರು. ಅವರ ತಂದೆ ತಾಯಿಗೂ ಹೇಳಿ ಆ ಮಕ್ಕಳಿಗೆ ಇನ್ನಷ್ಟು ಪೆಟ್ಟು ಬೀಳುವಂತೆ ಮಾಡುತ್ತಿದ್ದರು.

ADVERTISEMENT

ಹತ್ತು ಎಕರೆಯಷ್ಟು ವಿಸ್ತೀರ್ಣದ ಮೈದಾನದ ಸುತ್ತ ತಂತಿ ಬೇಲಿ. ಮುಂಭಾಗದಲ್ಲಿ ಶಾಲೆಯ ಕಟ್ಟಡ. ಒಂದಿಷ್ಟು ಕಾಂಪೌಂಡು, ಗೇಟು. ಪ್ರತಿದಿನ ಬೆಳಿಗ್ಗೆ ಐದು ಗಂಟೆಗೇ ಎದ್ದು ತಂತಿ ಬೇಲಿ ಸುತ್ತ ಟಾರ್ಚ್ ಹಿಡಿದು ಓಡಾಡುತ್ತಾ ‘ಇದು ನಿಮ್ಮ ಮುದ್ದು ಮಕ್ಕಳು ಓದುವ ಶಾಲಾಮಂದಿರ. ಯಾರೂ ಪಾಯಿಖಾನೆ ಮಾಡಬೇಡಿ’ ಅಂತ ಕೂಗಿ ಹೇಳುತ್ತಿದ್ದರು. ಅಷ್ಟಕ್ಕೂ ಯಾರಾದರೂ ಸಿಕ್ಕಿಬಿದ್ದರೆ ಅವರ ಕೈಯಿಂದಲೇ ತೆಗೆಸುತ್ತಿದ್ದರು. ಹಾಗೆ ಮಾಡುವುದಕ್ಕೆ ಅವರು ಹಿಂಜರಿದರೆ ತೆಗೆಯಲು ತಾವೇ ಕೈ ಹಾಕುತ್ತಿದ್ದರು.
ಅಧ್ಯಾಪಕರು ಮತ್ತು ಸಮಾಜದ ನಡುವಿನ ಭಾವನಾತ್ಮಕ ಬೆಸುಗೆ ಶಿಥಿಲಗೊಂಡಿರುವ ಹೊತ್ತಿನಲ್ಲಿ ಈ ಸಂಗತಿಗಳು ಅವಾಸ್ತವವಾಗಿ ಕಾಣಬಹುದು. ತಾನು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆ ಕಾಲೇಜು, ಊರು, ಜನ ಮತ್ತು ಮಕ್ಕಳು ಈ ಯಾವುದೂ ತನಗೆ ಸಂಬಂಧಿಸಿದ್ದಲ್ಲ ಅಂತ ಅಧ್ಯಾಪಕನಿಗೆ ಅನಿಸಬಾರದು. ‘ಅನ್ಯ’ ಭಾವವಿಲ್ಲದಿರುವುದೇ ಗುರುವಿಗೆ ಭೂಷಣ. ತರಗತಿಯ ಒಳಗಡೆ ಮಾತ್ರ ತನ್ನ ಕೆಲಸ ಅಂದುಕೊಂಡರೆ ಅದು ದೌರ್ಬಲ್ಯವಾಗುತ್ತದೆ. ಹೊರಗನ್ನು ಒಳಗೊಳ್ಳುತ್ತಾ ತನ್ನ ಕಾರ್ಯದ ಪ್ರತಿಫಲಗಳನ್ನು ಅವಲೋಕಿಸುವ ಪರಿಶೀಲನಾ ಪ್ರಜ್ಞೆ ಕೂಡ ಅಧ್ಯಾಪಕನ ನೈತಿಕತೆಯ ಭಾಗವೇ ಆಗಿದೆ. ಹಿಂದಿನ ಕಾಲದ ಉಪಾಧ್ಯಾಯರ ಆದರ್ಶಗಳನ್ನು ಜೀವಂತವಾಗಿಡುವ ಪ್ರಯತ್ನವೇ ಅವರಂತೆ ಆಗಬೇಕು ಎನ್ನುವ ದರ್ದನ್ನು ಹುಟ್ಟಿಸಬೇಕು. ಸ್ವತಃ ಅಧ್ಯಾಪಕರು ತಮ್ಮ ತರಗತಿಯ ಒಳಗನ್ನು ಸಾಮಾಜಿಕ ಮೌಲ್ಯಗಳ ಪ್ರಯೋಗಾಲಯವೆಂದು ಭಾವಿಸಿ ಕಾರ್ಯಪ್ರವೃತ್ತರಾಗಬೇಕು. ಸತ್ಯ ಮತ್ತು ಸದಾಚಾರಗಳನ್ನು ಒಳಗೆ ಬಿತ್ತಿದರೆ ಹೊರಗೆ ಅದರ ಮೊಳಕೆ ಚಿಗುರೊಡೆದು ಸಮಾಜ ಮಾನವೀಯವಾಗುತ್ತದೆ.

ನೈತಿಕ ಮೌಲ್ಯಗಳ ಕ್ರಿಯಾಶೂನ್ಯತೆ ವ್ಯಾಪಿಸಿರುವ ಸಂದರ್ಭದಲ್ಲಿ ಸಾಮಾಜಿಕ ಬೋಧನೆಯ ಹೊಣೆಗಾರಿಕೆಯನ್ನು ಹೊತ್ತ ಗುರುವು ತನ್ನ ಲಘುವಾದ ನಡವಳಿಕೆಗಳಿಂದ ಕಳಪೆಯಾಗಬಾರದು. ಅಲ್ಲಮ ಇಂಥ ಗುರುವಿನ ಬಗ್ಗೆ ಗಂಭೀರವಾಗುತ್ತಾನೆ. ಬೌದ್ಧಿಕವಾಗಿ ಕೈ ಹಿಡಿದು ಎತ್ತಬೇಕಾದ ಶ್ರೀಗುರುವು ಕೃತಯುಗದಲ್ಲಿ ಬಡಿದು, ತ್ರೇತಾಯುಗದಲ್ಲಿ ಬಯ್ದು, ದ್ವಾಪರದಲ್ಲಿ ಬೆದರಿಸಿ ಕಲಿಯುಗದಲ್ಲಿ ವಂದಿಸಿ ಬುದ್ಧಿ ಹೇಳಬೇಕಾದ ಅಧಃಪತನ ತಲುಪಿರುವ ಬಗ್ಗೆ ವಿಷಾದವೂ ಕಾಲನ ಕಲಿತನದ ಕುರಿತಾದ ಬೆರಗೂ ಅಲ್ಲಮನಿಗಿದೆ. ಬಹುಮಾಧ್ಯಮಗಳ ಬಯಲಿನಲ್ಲಿ ಒಳಿತು ಕೆಡಕುಗಳು ಕರಗಿ ತಾನು ಬದುಕಿದರೆ ಸಾಕು ಇತರರ ಪಾಡು ತನಗೇಕೆ ಎಂದು ಗುರುವಾದವನು ಯೋಚಿಸಲಾರ. ತನ್ನದಲ್ಲದ ಬವಣೆಯೇ ಗುರುವಿನ ಪಾಲಿನ ಹಣತೆಯಾಗಿ ತಾನಿರುವ ನೆಲವನ್ನು ಬೆಳಗಬೇಕು. ಪ್ರಶ್ನಿಸುವ ದನಿ ಅಡಗುತ್ತಿರುವ ಹೊತ್ತಿನಲ್ಲಿ ಗುರುವಾದವನು ‘ಅರಸು ರಾಕ್ಷಸ ಮಂತ್ರಿ ಮೊರೆವ ಹುಲಿ’ ಎಂದು ಹೇಳುವ ನಿತ್ಯವಿರೋಧದ ಪ್ರತಿನಿಧಿಯಾಗುವುದಕ್ಕೆ ಅಗತ್ಯವಾದ ಪ್ರಶ್ನಾತೀತ ನೈತಿಕ ಗಟ್ಟಿತನವನ್ನು ಮೆರೆಯಲು ಮುಂದಾಗಬೇಕು. ಇದು ಗುರುವಿನೊಳಗಿನ ಋಷಿಪ್ರಜ್ಞೆಗೂ ಸಾಕ್ಷಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.