ADVERTISEMENT

ಸಂಗತ| ಬಾಪೂ ಪಾಠವಾದರಷ್ಟೇ ಸಾಲದು

ಕಾಲ, ದೇಶದ ಗಡಿ ಮೀರಿದ ಅವರ ತತ್ವಾದರ್ಶಗಳು ನಮ್ಮ ಬದುಕಾಗಬೇಕು

ಯೋಗಾನಂದ
Published 29 ಜನವರಿ 2021, 19:30 IST
Last Updated 29 ಜನವರಿ 2021, 19:30 IST
gandhi
gandhi   

ಬಲಿಷ್ಠನಿಗೆ ಇರುವ ಅವಕಾಶವೇ ದುರ್ಬಲನಿಗೂ ಇರಬೇಕು ಎನ್ನುವುದು ಗಾಂಧೀಜಿಗಿದ್ದ, ಬಹು ಸರಳವಾದರೂ ಪ್ರಖರವಾದ ಪ್ರಜಾಪ್ರಭುತ್ವದ ಪರಿಕಲ್ಪನೆ. ಅಹಿಂಸೆಯೇ ಪರಮ ಧರ್ಮವೆಂದು ಸಾರಿದ ಬಾಪೂ ಧರ್ಮಾಂಧತೆಗೆ ಬಲಿಯಾಗಿದ್ದು ಇತಿಹಾಸ ಎಂದೂ ಕ್ಷಮಿಸದ ದುರಂತ. ಅಖಂಡ ಮನುಜಕೋಟಿಯ ಅಭ್ಯುದಯವು ತ್ಯಾಗದ ಹಾದಿಯಿಂದ ಮಾತ್ರ ಸಾಧ್ಯವೇ ಹೊರತು ಭೋಗದಿಂದಲ್ಲ ಎಂದು ಅಕ್ಷರಶಃ ಪ್ರತಿಪಾದಿಸಿದ ಧೀಮಂತ ಗಾಂಧೀಜಿ. ಅವರು ಹುತಾತ್ಮರಾದ ದಿನವಾದ ಇಂದು (ಜ. 30) ಅವರ ಸಿದ್ಧಾಂತಗಳನ್ನು ಮೆಲುಕು ಹಾಕುವುದು ಸಂದರ್ಭೋಚಿತ.

ಗಾಂಧಿಯವರ ತತ್ವಾದರ್ಶಗಳು ಕಾಲ, ದೇಶದ ಗಡಿ ಮೀರಿದವು. ಅವರು, ಸತ್ಯವೆಂದರೆ ಅಂತರ್ವಾಣಿ ಎಂದರು. ನಮ್ಮ ಕೆಲಸ ಕಾರ್ಯಗಳನ್ನು ಸರಿ ಅಥವಾ ತಪ್ಪು ಎಂದು ಕರಾರುವಾಕ್ಕಾಗಿ ನಿರ್ದೇಶಿಸಿ ನಿರ್ವಚಿಸುವುದು ನಮ್ಮ ಅಂತರಂಗ ಅಥವಾ ಮನಸ್ಸಾಕ್ಷಿಯೇ. ಸತ್ಯಾಗ್ರಹದ ಗುರಿ ಅಧಿಕಾರ ಆಗಿರ
ಕೂಡದು ಎಂದ ಬಾಪೂ ಸತ್ಯ ಮತ್ತು ಅಹಿಂಸೆಯನ್ನು ಸಾತ್ವಿಕ ಬದುಕಿನ ಯಾನಕ್ಕೆ ಹೊರಟ ಗಾಡಿಯ ಜೋಡಿ ಚಕ್ರಗಳಿಗೆ ಹೋಲಿಸಿದರು. ಒಂಟಿಯಾಗಿದ್ದರೂ ಸರಿಯೆ ಸತ್ಯದ ಪರವಾಗಿದ್ದರೆ ಅದೇ ಬಹುಮತ ಎಂದರು. ಸತ್ಯವು ವರ್ಣರಂಜಿತವಲ್ಲ, ಅದಕ್ಕೆ ಬಣ್ಣ ಬೇಕೂ ಇಲ್ಲ, ಹಾಗಾಗಿ ಅದು ಸಪ್ಪೆ ಎನ್ನುತ್ತಿದ್ದರು ಮಾರ್ಮಿಕವಾಗಿ ಗಾಂಧೀಜಿ.

ಹೇಡಿತನ ಎನ್ನುವುದು ಒಂದು ಬಗೆಯ ಗೂಢವಾದ ಹಿಂಸೆ ಎನ್ನುವುದು ಅವರ ದೃಢ ನಿಲುವಾಗಿತ್ತು. ಅವರ ವಿನೋದ ಬಲು ಗಂಭೀರವಾಗಿರುತ್ತಿತ್ತು. ಅದರ ಹಿಂದೆ ಏನಾದರೊಂದು ನೀತಿ ಇರುತ್ತಿತ್ತು. ಬಾಪೂ ತಮ್ಮ ಆತ್ಮಕಥೆಯಲ್ಲಿ ‘ನನಗೆ ಹಾಸ್ಯ ಪ್ರವೃತ್ತಿಯಿಲ್ಲದಿದ್ದರೆ ಎಂದೋ ಆತ್ಮಹತ್ಯೆಗೆ ಶರಣಾಗಿಬಿಡುತ್ತಿದ್ದೆ’ ಎಂದಿದ್ದಾರೆ.

ADVERTISEMENT

ಅವರು ವಾಸಿಸುತ್ತಿದ್ದ ಗುಡಿಸಿಲಿನ ಗೋಡೆಯ ಮೇಲೆ ಒಂದೂ ಚಿತ್ರವಿರಲಿಲ್ಲ. ಆಪ್ತರೊಬ್ಬರು ‘ನಿಮಗೆ ಕಲೆಯಲ್ಲಿ ಆಸಕ್ತಿಯಿಲ್ಲವೇ’ ಎಂದು ಪ್ರಶ್ನಿಸಿದರು. ಅದಕ್ಕೆ ಗಾಂಧೀಜಿ ನವಿರಾಗಿ ‘ಖಂಡಿತ ನಾನು ಕಲಾರಾಧಕ. ನಿಸರ್ಗಕ್ಕೂ ಮೀರಿದ ಸೌಂದರ್ಯ ಎಲ್ಲಿದೆ? ಆಗಸದ ನಕ್ಷತ್ರಗಳನ್ನು ವೀಕ್ಷಿಸಲು ಯಾರಾದರೂ ಗುಡಿಸಿಲಿನ ಮೇಲೆ ಚಾವಣಿ ಹಾಕುತ್ತಾರೆಯೇ?’ ಎಂದರಂತೆ. ಉದರ ಪೋಷಣೆಗಿಲ್ಲದೆ ಹಸಿದಿರುವ, ಉದ್ಯೋಗವಿಲ್ಲದೆ ವೃಥಾ ಸಮಯಹರಣ ಮಾಡುವ ಮಂದಿಗೆ ದೇವರು ಪ್ರತ್ಯಕ್ಷವಾಗುವ ರೂಪವೇ ಕಾಯಕ. ಗಾಂಧೀಜಿ ದುಡಿಮೆರಹಿತ ಸಂಪತ್ತು ಪಾಪ ಎಂದರು. ಹೌದು ‘ದುಡಿಮೆಯಿಲ್ಲದ ಸಂಪತ್ತು’ ಸಪ್ತ ಪಾಪಗಳಲ್ಲೊಂದು. ವಿಶ್ವಮಾನ್ಯ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ಬಾಪೂರವರನ್ನು ಅದೆಷ್ಟು ಮೆಚ್ಚಿಕೊಂಡಿದ್ದರೆನ್ನಲು ಅವರು ನುಡಿದ ಒಂದು ವಾಕ್ಯವೇ ಸಾಕು: ‘ಇಂತಹ ವ್ಯಕ್ತಿಯೊಬ್ಬ ದೇಹಧಾರಿಯಾಗಿ ಈ ನೆಲದ ಮೇಲೆ ನಡೆದಾಡಿದನೆಂಬುದನ್ನು ಮುಂದಿನ ಪೀಳಿಗೆಗಳು ನಂಬುವುದು ವಿರಳ’.

ಕವಿ ಪ್ರಭುಪ್ರಸಾದ್ ಅವರ ‘ನಿರ್ಭಯ’ ಕವನದ ಸಾಲೊಂದು ಹೀಗಿದೆ: ‘ಗುಂಡಿಟ್ಟು ಕೊಂದವಗೆ ನಗೆಯೆ ಬೀರಿ/ಕೈ ಮುಗಿದು ಹಾ! ರಾಮ ಕ್ಷಮಿಸೆಂದ/ ನಿನ್ನ ದಾರತೆಯೊಂದೆ/ ನಮಗೀಗ ಪರಮಾಶ್ರಯ’. ಕಾವ್ಯಾನಂದರು ಸಲ್ಲಿಸಿರುವ ನುಡಿ ನಮನ ವಿಶಿಷ್ಟವಾಗಿದೆ. ಬಾಪೂ ನಭಕ್ಕೆ ನೆಗೆದ ಹೊಸರವಿ ಎನ್ನುತ್ತಾರೆ ಅವರು: ‘ನುಡಿ ನುಡಿಯೊಳು ನೂರು ತೀರ್ಥ/ ನಡೆಯೆ ದಿವ್ಯ ಕ್ಷೇತ್ರವು/ ಗಾಂಧಿ ನಡೆದ ನೆಲವೆ ಅಲ್ಲ/ ಆಯ್ತು ಜಗವೆ ಪವಿತ್ರವು’.

ಚುಟುಕು ಕವಿ ದಿನಕರ ದೇಸಾಯಿ, ಗಾಂಧೀಜಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಪರಿ ಗಮನಾರ್ಹವಾಗಿದೆ: ‘ನಿನ್ನ ಪ್ರತಿಮೆಯ ನಿಲಿಸಿ/ನಾವು ಮೆರೆವುದು ವ್ಯರ್ಥ/ ನಮ್ಮ ಹೃದಯದೊಳಿರಲಿ/ ನಿಮ್ಮ ಮರಣದ ಅರ್ಥ’. ನಮ್ರತೆ, ಸಾತ್ವಿಕತೆ ಮತ್ತು ಅಹಿಂಸೆ- ಈ ಮೂರೂ ಮೌಲ್ಯಗಳನ್ನಾಧರಿಸಿದ ಸಮಾಜದಿಂದ ಮಾತ್ರವೇ ಸರ್ವೋದಯ ಎಂದು ಬೇರೆ ಹೇಳಬೇಕಿಲ್ಲ.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಬರಮತಿ ಆಶ್ರಮದಲ್ಲಿದ್ದಾಗಿನ ತಮ್ಮ ಅನುಭವವನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಅಲ್ಲಿ ಪ್ರಾರ್ಥನೆಗೆ ಯಾರನ್ನೂ ಒತ್ತಾಯಿಸುತ್ತಿರಲಿಲ್ಲ. ಪ್ರಾರ್ಥನೆಗೆ ಯಾರಾದರೂ ಇಷ್ಟಪಡುತ್ತಿಲ್ಲವಾದರೆ ಅಂತಹವರು ಹಾಜರಾಗಬೇಕಿಲ್ಲ ಎನ್ನುತ್ತಿದ್ದರು ಬಾಪೂ. ಆದರೂ ಆಶ್ರಮವಾಸಿಗಳೆಲ್ಲರೂ ಹಾಜರಿರುತ್ತಿದ್ದರಂತೆ. ಒಬ್ಬ ನಿವಾಸಿ ಜ್ವರದಿಂದ ಬಳಲುತ್ತಿದ್ದ. ವೈದ್ಯರು ಕಾಫಿ ಕೂಡದೆಂದು ಕಟ್ಟಪ್ಪಣೆ ಮಾಡಿದ್ದರೂ ಅವನದು ಅದೇ ಹಟ. ಕಾಫಿ ಬೇಕು ಬೇಕು ಎನ್ನುತ್ತಿದ್ದ. ಗಾಂಧೀಜಿಗೆ ವಿಷಯ ತಿಳಿಯಿತು. ಅವರು ಮಾಡಿದ ಉಪಾಯವೇ ಬೇರೆ. ಮರುದಿನ ಬೆಳಗ್ಗೆಯೇ ಒಂದು ಲೋಟ ಕಾಫಿಯನ್ನು ಅವನಲ್ಲಿಗೆ ಒಯ್ದಿದ್ದರು! ‘ತಮ್ಮಾ, ಒಂದೆರಡು ದಿನ ವೈದ್ಯರು ಹೇಳಿದಂತೆ ನಡೆ, ನೀನು ಇನ್ನೂ ಬೇಗ ಗುಣವಾಗುತ್ತಿ’ ಅಂತ ಹೇಳಿ ಅವನ ಮನಸ್ಸನ್ನು ಗೆದ್ದರಂತೆ.

ಕವಿ ನಿಸಾರರು ಗಾಂಧಿಯವರ ಶ್ರೇಷ್ಠತೆಯನ್ನು ಹೀಗೆ ಕಂಡಿದ್ದಾರೆ: ‘ನಿನಗಿಂತ ಹಿರಿಯರನು ಕಾಣೆ ಮಹಾತ್ಮ/ ಮಿತಿಮೀರಿ ಏರಿರುವೆ/ ಎಂದೆ ಬಾಳಿಗೆ ದಕ್ಕದೆ ಮೀರಿರುವೆ/ ವಾಸ್ತವತೆಗೆ ನಾನು, ಆದರ್ಶ ನೀನು’.

ಬಾಪೂ ಶಿಕ್ಷಣತಜ್ಞರಾದರು, ಸಾಹಿತಿಯಾದರು, ಸಂಗೀತಪ್ರಿಯರಾದರು. ತಮ್ಮ 76ನೇ ವಯಸ್ಸಿನಲ್ಲೂ ಬಂಗಾಲಿ ಕಲಿತ ಲವಲವಿಕೆ ಅವರದು. ‘ವಿಶ್ವ ಪಥ, ಮನುಜ ಮತ’ ದರ್ಶನಕ್ಕೆ ನಿದರ್ಶನವಾದ ಬಾಪೂ ಗೋಡೆಗೆ ಅಲಂಕಾರವಾದರೆ, ಪಠ್ಯಪುಸ್ತಕದಲ್ಲಿ ಪಾಠವಾದರೆ ಸಾಲದು. ಅವರು ಸತ್ಯದ ಧಾರೆಯಾಗಿ, ಬೆಳಕಿನ ತಾರೆಯಾಗಿ ನಮ್ಮ ಬದುಕಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.