ADVERTISEMENT

ಸಂಗತ | ಜಾತಿವಿನಾಶ ಚಳವಳಿ: ಜಾತಿವಿಕಾಸಕ್ಕೆ ಬಲಿ!

ಚಂದ್ರಕಾಂತ ವಡ್ಡು
Published 25 ಸೆಪ್ಟೆಂಬರ್ 2025, 0:30 IST
Last Updated 25 ಸೆಪ್ಟೆಂಬರ್ 2025, 0:30 IST
   
‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಸಾಮಾಜಿಕ ನ್ಯಾಯದ ಜೊತೆಗೆ, ಜಾತಿರೋಗದಿಂದ ಮುಕ್ತರಾಗಲು ಬಯಸುವವರಿಗೆ ಬೆಳಕಿಂಡಿ ಆಗುವ ಸಾಧ್ಯತೆಯೂ ಇದೆ.

ಜಾತಿ ಈ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಕಟು ವಾಸ್ತವ. ಹಾಗಾಗಿ, ಅದರ ಇರುವಿಕೆಯನ್ನು ಗಮನದಲ್ಲಿಟ್ಟುಕೊಂಡೇ ಮೀರುವಿಕೆಯ ಗುರಿಯತ್ತ ಸಮತೋಲನದ ಹೆಜ್ಜೆ ರೂಢಿಸಿಕೊಳ್ಳುವುದು ಸಮಕಾಲೀನ ಸಂದರ್ಭದ ಅಗತ್ಯ ಮತ್ತು ಅನಿವಾರ್ಯತೆ. ಈ ಬೆಳಕಿನಲ್ಲಿ ಪ್ರಸಕ್ತ ಸಂದರ್ಭ ಎದುರಿಗಿರಿಸಿರುವ ಜಾತಿ ಬಿಕ್ಕಟ್ಟುಗಳನ್ನು ಅವಲೋಕಿಸಬೇಕಿದೆ.

ಎಚ್. ಕಾಂತರಾಜು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯು ಅಂತಿಮ ಹಂತದಲ್ಲಿ ತೆರೆಮರೆಗೆ ಸರಿದ ನಂತರ ಇದೀಗ ಮತ್ತೊಂದು ಸುತ್ತಿನ ಸಮೀಕ್ಷೆಗೆ ಚಾಲನೆ ಸಿಕ್ಕಿದೆ. ಜಾತಿ ಮಾಹಿತಿಯ ಜೊತೆಗೆ ಜನರ ಬದುಕಿನ ಸ್ಥಿತಿಗತಿಯ ವಿವರಗಳನ್ನು ಸಂಗ್ರಹಿಸಿ, ಅವಕಾಶ ವಂಚಿತರಿಗೆ ನೆರವಾಗುವುದು ಸಮೀಕ್ಷೆಯ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಮೀಕ್ಷೆಯ ನಿರ್ಧಾರ ಹೊರಬಿದ್ದದ್ದೇ ತಡ, ಸಮಾಜದ ಸಕಲ ಜಾತಿ–ಧರ್ಮಗಳೂ ಜಾಗೃತಗೊಂಡು ಪೈಪೋಟಿಗಿಳಿದಿವೆ. ಈ ಜಂಜಾಟದಲ್ಲಿ ರಾಜಕೀಯ ಪಕ್ಷಗಳೇನೂ ಹಿಂದೆ ಬಿದ್ದಿಲ್ಲ. ವರ್ತಮಾನದ ವಿದ್ಯಮಾನಗಳ ವಿಕಾರಗಳನ್ನು ನೋಡಿದರೆ ಭವಿಷ್ಯದ ಸಮಾಜದಲ್ಲಿ ಅನಾವರಣಗೊಳ್ಳಲಿರುವ ಅರಾಜಕತೆಯ ಸುಳಿವು ಸುಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ನಾಡು ಕನಸಿದ ಜಾತಿವಿನಾಶ ಚಳವಳಿ, ಪ್ರಸಕ್ತ ಜಾತಿಜಾಗೃತಿ ಅವಿವೇಕಕ್ಕೆ ಬಲಿಯಾಯಿತೇ ಎಂಬ ಸಂಶಯ ಕಾಡುತ್ತದೆ.

ADVERTISEMENT

ಸಮಾನತೆಯ ಸಾಧನೆಗಾಗಿ ಶೋಷಿತ ಸಮುದಾಯಗಳು ಸಂಘಟಿತವಾಗುವುದಕ್ಕೆ ಅರ್ಥ, ಅಗತ್ಯ ಮತ್ತು ಸಮರ್ಥನೆ ಖಂಡಿತಾ ಇದೆ. ಆದರೆ, ಶೋಷಕ ಚರಿತ್ರೆಯ ಪ್ರಬಲ ಸಮುದಾಯಗಳು ಜಾತಿಯ ಅಸ್ಮಿತೆ, ಸಂಸ್ಕೃತಿ ಅಥವಾ ಇನ್ನಾವುದೇ ನೆಪದಲ್ಲಿ ಒಗ್ಗೂಡುವ ಪ್ರಯತ್ನಗಳು ಸಾಮಾಜಿಕ ಸಾಮರಸ್ಯಕ್ಕೆ ತಂದೊಡ್ಡುವ ಅಪಾಯ ಸಣ್ಣದಲ್ಲ. ಈ ವ್ಯತ್ಯಾಸ ಅರಿಯುವ ಗುಣಸ್ವಭಾವ ಸಾಮಾಜಿಕ ಪ್ರಜ್ಞೆಯ ಭಾಗವಾಗಬೇಕಿದೆ.

ಸಾಮಾಜಿಕ ನ್ಯಾಯ ಪರಿಕಲ್ಪನೆಯ ಬುನಾದಿ ಮೇಲೆ ಮೀಸಲಾತಿ ಕಲ್ಪಿಸುವಾಗ ಪರಿಗಣಿಸಬೇಕಾದ ಅನೇಕ ಪ್ರಶ್ನೆಗಳು ಇನ್ನೂ ಸಮರ್ಪಕ ಉತ್ತರ ಕಂಡುಕೊಳ್ಳದೇ ಉಳಿದಿವೆ. ವಿಶಾಲವಾಗಿ ಅಬಲ ಮತ್ತು ಸಬಲ ಜಾತಿ ಸಮುದಾಯಗಳನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ದೊಡ್ಡ ಬಿಕ್ಕಟ್ಟೇನೂ ಉದ್ಭವಿಸಲಾರದು. ಆದರೆ, ಅಬಲರೊಳಗಿನ ಒಳವಿಂಗಡಣೆಯ ಹಲವು ಸ್ತರಗಳಲ್ಲಿ ಪ್ರಕಟವಾಗುವ ಸಮುದಾಯಗಳ ಹಿತಾಸಕ್ತಿಗಳು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿವೆ. ನಿದರ್ಶನಕ್ಕಾಗಿ ಒಂದೇ ಗುಂಪಿನಲ್ಲಿ ಸೇರಿಸಲಾದ ಸ್ಪೃಶ್ಯ ಮತ್ತು ಅಸ್ಪೃಶ್ಯ ಸಮುದಾಯಗಳ ತಾಕಲಾಟವನ್ನು ಗಮನಿಸಬಹುದು. ಕಟ್ಟಕಡೆಯ ಸ್ತರದ ಅಲೆಮಾರಿ ಸಮುದಾಯಗಳ ಅತಂತ್ರ ಸ್ಥಿತಿಯಂತೂ ದಾರುಣವಾಗಿದೆ. ಜೊತೆಗೆ, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದಲ್ಲಿ ಜೋಡಿಸುವ ಪ್ರಸ್ತಾವಕ್ಕೆ ವ್ಯಕ್ತವಾಗುತ್ತಿರುವ ಪರ–ವಿರೋಧದ ವಾದಗಳು, ವೀರಶೈವ–ಲಿಂಗಾಯತ ಸಂಘರ್ಷ ತಾರಕಕ್ಕೇರಿವೆ.

ಹಿಂದುಳಿದ ವರ್ಗಗಳ ಆಯೋಗದ ಪ್ರಕಟಣೆಯ ಪ್ರಕಾರ, ಕುಟುಂಬವನ್ನು ಒಂದು ಘಟಕವಾಗಿ ಪರಿಗಣಿಸಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಆದರೆ, ಹುಟ್ಟಿನಿಂದ ಒಂದು ಧರ್ಮ ಮತ್ತು ಜಾತಿಗೆ ಸೇರಿದ ಕುಟುಂಬದ ಯಾರಾದರೂ ಸದಸ್ಯರು ಸಮೀಕ್ಷೆಯಲ್ಲಿ ಬೇರೆಯದೇ ಧರ್ಮ–ಜಾತಿ ಅಥವಾ ನಾಸ್ತಿಕ ಎಂದು ಗುರುತಿಸಿಕೊಳ್ಳುವ ಅವಕಾಶ ನೀಡಿರುವುದು ಸಮೀಕ್ಷೆಯ ವಿಶೇಷ. ಈ ಅವಕಾಶ ಬಳಸಿಕೊಂಡು ಮೂಲ ಜಾತಿಯಿಂದ ಬೇರ್ಪಡುವ ವ್ಯಕ್ತಿಗತ ನಿರ್ಧಾರದಿಂದ ಆ ಕುಟುಂಬ ಒಳಪಡುವ ಜಾತಿಯ ಜನಸಂಖ್ಯೆಗೆ ಕಡಿತವಾಗುತ್ತದೆ. ಇದರಿಂದ ಜಾತಿ ಆಧಾರಿತವಾಗಿ ಕುಟುಂಬದ ಹಿಂದುಳಿಯುವಿಕೆಯನ್ನು ಗುರುತಿಸುವ ಸಮೀಕ್ಷೆಯ ಮೂಲ ಆಶಯಕ್ಕೆ ಹಿನ್ನಡೆಯಾಗಬಹುದೇ ಎಂಬ ಸಂಶಯ ಸಹಜ.

ಸಮಾಜದಲ್ಲಿ ಜಾತಿ–ಧರ್ಮ ನಿರ್ಧಾರವಾಗುವುದು ಹುಟ್ಟಿನಿಂದ; ಆಚರಣೆಯಿಂದಲ್ಲ. ಆಚರಣೆ ವಿಚಾರದಲ್ಲಿ ಜಾತಿ–ಧರ್ಮ ತೊರೆದ, ಬದಲಾಯಿಸಿದ ಮಾತ್ರಕ್ಕೆ ಹುಟ್ಟಿನಿಂದ ಪ್ರಾಪ್ತವಾದ ಸಾಮಾಜಿಕ ಸ್ಥಾನಮಾನದಲ್ಲಿ ಗಮನಾರ್ಹ ವ್ಯತ್ಯಾಸವಾಗುವುದಿಲ್ಲ. ಇದರಿಂದ ಬಹುಸಂಖ್ಯಾತ ಧರ್ಮ ಮತ್ತು ಬಲಾಢ್ಯ ಜಾತಿಗಳಿಗೆ ಸಂಬಂಧಿಸಿದಂತೆ ಸಮೀಕ್ಷೆಯ ಮೂಲೋದ್ದೇಶಕ್ಕೆ ಸಹಜವಾಗಿ ವ್ಯತ್ಯಯವಾಗುವುದಿಲ್ಲ. ಆದರೆ, ದುರ್ಬಲ ಜಾತಿಗಳ ಸಂಖ್ಯೆಯಲ್ಲಾಗುವ ಈ ರೀತಿಯ ಕಡಿತದ ಪರಿಣಾಮವಾಗಿ, ಜನಸಂಖ್ಯಾಧಾರಿತ ಸೌಲಭ್ಯಗಳ ನಿರ್ಧಾರದಲ್ಲಿ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಈ ಸಮಸ್ಯೆ ನಿವಾರಣೆಯ ದಿಸೆಯಲ್ಲಿ ಚೌಕಟ್ಟಿನಿಂದ ಹೊರಬಂದು ಮುಕ್ತವಾಗಿ ಯೋಚಿಸುವುದು ಅನಿವಾರ್ಯ.

ಜಾತಿ ಮತ್ತು ಧರ್ಮ ನಮೂದಿಸುವ ಅಂಕಣದಲ್ಲಿ ಹುಟ್ಟಿನಿಂದ ಮತ್ತು ಆಚರಣೆಯಿಂದ ಎಂದು ಎರಡು ವಿಧದಲ್ಲಿ ವಿಭಾಗಿಸಿ ಮಾಹಿತಿ ಪಡೆಯಬಹುದು. ಹುಟ್ಟಿನಿಂದಲೇ ಗುರುತಿಸಲಾಗುವ ಜಾತಿ–ಧರ್ಮಗಳನ್ನು ಉಲ್ಲೇಖಿಸುವುದರ ಜೊತೆಗೆ, ಬದಲಾಯಿಸಿದ/ತೊರೆದ ದಾಖಲೆಯನ್ನೂ ಸಂಗ್ರಹಿಸುವ ಅವಕಾಶವಿದು. ಇದರಿಂದ ಜಾತಿ ವ್ಯವಸ್ಥೆಯ ಸಿಕ್ಕುಗಳಿಂದ ಬಿಡುಗಡೆಯಾಗುವ ಪ್ರಯತ್ನದಲ್ಲಿರುವ ವೈಚಾರಿಕ ಮನಸ್ಸುಗಳಿಗೆ ಆ ದಿಕ್ಕಿನಲ್ಲಿ ಅಧಿಕೃತವಾಗಿ ಹೆಜ್ಜೆಯೂರುವ ಐತಿಹಾಸಿಕ ಆಯ್ಕೆ ಒದಗಿಸಿದಂತಾಗುತ್ತದೆ. ಧರ್ಮ–ಜಾತಿ ತೊರೆದು ಮನುಷ್ಯರೆಂದಷ್ಟೇ ಮೊದಲ ಬಾರಿಗೆ ಗುರುತಿಸಿಕೊಂಡವರ ಮುಂದಿನ ಪೀಳಿಗೆಯು, ಹುಟ್ಟಿನಿಂದ ತಗಲುವ ಜಾತಿರೋಗದಿಂದ ಮುಕ್ತವಾಗಲೂ ಸಾಧ್ಯ.

ಅಂತಿಮವಾಗಿ, ವೈಜ್ಞಾನಿಕವಾಗಿ ರೂಪುಗೊಂಡ ಸಮೀಕ್ಷೆ ಹೊರಬರುತ್ತದೆ ಎಂದುಕೊಳ್ಳೋಣ. ಅದಕ್ಕೆ ಕಾಂತರಾಜು ಆಯೋಗದ ವರದಿಯ ಗತಿ ಒದಗುವುದಿಲ್ಲ ಎಂಬ ಭರವಸೆ ಯಾರಿಗಾದರೂ ಇದೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.