ADVERTISEMENT

ಸಂಗತ | ಕುಲಪಂಚಾಯಿತಿ: ಬೇಕು ನಿಯಂತ್ರಣ

ಕಾನೂನಿನ ಕಣ್ಣಿಗೆ ಮಣ್ಣೆರಚಿ ಕುಲಪಂಚಾಯಿತಿಗಳಿಂದ ಬಾಲ್ಯವಿವಾಹಕ್ಕೆ ಕುಮ್ಮಕ್ಕು

ಡಾ.ಸಿ.ಎಸ್.ದ್ವಾರಕಾನಾಥ್
Published 10 ಜೂನ್ 2025, 0:24 IST
Last Updated 10 ಜೂನ್ 2025, 0:24 IST
.
.   

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೆಡ್ಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಾಲ್ಯವಿವಾಹದ ಪ್ರಯತ್ನ ನಡೆದಿದೆ. ಅಸಹಾಯಕ ಬಾಲಕಿ ‘ದಯವಿಟ್ಟು ನನ್ನನ್ನು ಕಾಪಾಡಿ... ಈ ಮದುವೆ ಬೇಡ’ ಎಂದು ನೆಲದ ಮೇಲೆ ಬಿದ್ದು ಹೊರಳಾಡಿ ಪ್ರತಿಭಟಿಸುತ್ತಿದ್ದರೂ ಬಿಡದೆ, ಬಾಲಕಿಯ ಕುಟುಂಬದವರು ಮತ್ತು ಬಂಧುಗಳು ಬಲವಂತವಾಗಿ ತಾಳಿ ಕಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಎಂಟನೇ ತರಗತಿ ವಿದ್ಯಾರ್ಥಿನಿಗೆ ಮದುವೆ ಮಾಡಲು ಮುಂದಾಗಿ, ಆಕೆ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖ
ಲಿಸಿಕೊಂಡಿರುವ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿದೆ.

ಬಾಲ್ಯವಿವಾಹಗಳನ್ನು ತಡೆಗಟ್ಟಲು ‘ಬಾಲ್ಯವಿವಾಹ ನಿಷೇಧ ಕಾಯ್ದೆ’ ಜಾರಿಯಲ್ಲಿದೆ. ಈ ಕಾಯ್ದೆಯಡಿ ಬಾಲ್ಯ
ವಿವಾಹವು ಜಾಮೀನುರಹಿತ ಅಪರಾಧ. ಮಕ್ಕಳನ್ನು ಮದುವೆಯಾಗುವ ಯಾವುದೇ ವಯಸ್ಕ ವ್ಯಕ್ತಿ, ಬಾಲ್ಯ
ವಿವಾಹವನ್ನು ಏರ್ಪಡಿಸುವ, ನೆರವೇರಿಸುವ ಮತ್ತು ಕುಮ್ಮಕ್ಕು ನೀಡುವ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಕಾಯ್ದೆಯಡಿ ತಪ್ಪಿತಸ್ಥರಾಗುತ್ತಾರೆ. ಮಗುವನ್ನು ಹೆತ್ತವರು, ಪೋಷಕರು ಅಥವಾ ಸಂರಕ್ಷಕರು ಮಾತ್ರವಲ್ಲದೆ ಬಾಲ್ಯವಿವಾಹವನ್ನು ತಡೆಯಲು ವಿಫಲರಾದವರು, ಬಾಲ್ಯವಿವಾಹದಲ್ಲಿ ಭಾಗವಹಿಸುವವರೂ ತಪ್ಪಿತಸ್ಥರಾಗುತ್ತಾರೆ.

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 8,998 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಬಾಲ್ಯವಿವಾಹ ನೆರವೇರಿಸಲು ಮುಂದಾಗಿದ್ದ 1,303 ಜನರ ವಿರುದ್ಧ ದೂರು ದಾಖಲಾಗಿದೆ. ಈ ಪೈಕಿ 8 ಜನರಿಗೆ ಶಿಕ್ಷೆಯಾಗಿದೆ. ಇಷ್ಟಾದರೂ ಬಾಲ್ಯವಿವಾಹಗಳು ನಡೆಯುತ್ತಲೇ ಇವೆ.

ADVERTISEMENT

ಬಾಲ್ಯವಿವಾಹಗಳು ಹೆಚ್ಚು ನಡೆಯುತ್ತಿರುವುದು ಅಲೆಮಾರಿ ಮತ್ತು ಆದಿವಾಸಿ ಬುಡಕಟ್ಟುಗಳಲ್ಲಿ. ಇದಕ್ಕೆ ಮೂಲ ಕಾರಣ ಕುಲಪಂಚಾಯಿತಿಗಳು. ಕಾನೂನಿನ ಭಯವಿಲ್ಲದೆ ಬಾಲ್ಯವಿವಾಹಗಳನ್ನು ಪೋಷಿಸುತ್ತಿ
ರುವ ಕುಲಪಂಚಾಯಿತಿಗಳು, ತಮ್ಮ ಪ್ರಯತ್ನಕ್ಕೆ ಅಡ್ಡಬಂದವರನ್ನು ಕುಲದಿಂದ ಹೊರಗಿಡುತ್ತಿವೆ ಹಾಗೂ ಲಕ್ಷಾಂತರ ರೂಪಾಯಿ ದಂಡ ಹಾಕುತ್ತಿವೆ. ಅಸಹಾಯಕರಿಂದ ವಸೂಲಿ ಮಾಡಿದ ಹಣವನ್ನು ಕುಲಪಂಚಾಯಿತಿದಾರರು ಮೋಜು ಮಾಡಿ ಉಡಾಯಿಸುತ್ತಿದ್ದಾರೆ! ಈ ಕುರಿತ ರಾಯಚೂರು, ಬಾಗಲಕೋಟೆ, ಗದಗ, ಗೋಕಾಕ್‌ನಿಂದ ಹಿಡಿದು ಬೆಂಗಳೂರು ಬಳಿ ಇರುವ ಆನೇಕಲ್, ರಾಜರಾಜೇಶ್ವರಿ ನಗರದವರೆಗೂ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಅಲೆಮಾರಿ ಆದಿವಾಸಿ ಬುಡಕಟ್ಟುಗಳಲ್ಲಿ ಮೊದಲಿನಿಂದಲೂ ‘ಕುಲಪಂಚಾಯಿತಿ’, ‘ಕುಲಸಭಾ’ಗಳು ಅಸ್ತಿತ್ವದಲ್ಲಿವೆ. ನ್ಯಾಯಾಲಯಗಳು ಇಲ್ಲದ ಕಾಲದಲ್ಲಿ ಕುಲಪಂಚಾಯಿತಿಗಳು ಕುಲಸ್ಥರ ನಡುವಿನ ಜಗಳ, ವೈಷಮ್ಯಗಳ ವಿಚಾರಣೆ ಮಾಡಿ ನ್ಯಾಯದಾನ ನೀಡುತ್ತಿದ್ದವು. ತಪ್ಪಿತಸ್ಥರಿಗೆ ನ್ಯಾಯಬದ್ಧವಾಗಿ ದಂಡ ಹಾಕುತ್ತಿದ್ದವು. ಈ ಕುಲಪಂಚಾಯಿತಿಗಳ ಹಿರಿಯರು ನೈತಿಕತೆ ಕಾಪಾಡಿಕೊಂಡಿರುತ್ತಿದ್ದರು.

ಸ್ವಾತಂತ್ರ್ಯಾನಂತರ ಕುಲಪಂಚಾಯಿತಿಗಳು ನಿಧಾನವಾಗಿ ಅಸ್ತಿತ್ವ ಕಳೆದುಕೊಂಡು, ಅದರ ಜಾಗದಲ್ಲಿ ಭಾರತೀಯ ಕಾನೂನುಗಳು‌ ಅಸ್ತಿತ್ವಕ್ಕೆ ಬಂದವು. ಕಾನೂನುಬದ್ಧವಾಗಿಯೂ ಕುಲಪಂಚಾಯಿತಿಗಳನ್ನು ರದ್ದುಪಡಿಸಲಾಯಿತು. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕುಲಪಂಚಾಯಿತಿಗಳನ್ನು ಗುಪ್ತವಾಗಿ ನಡೆಸುತ್ತ, ಅಸಹಾಯಕ ಮತ್ತು ಮುಗ್ಧ ಅಲೆಮಾರಿ ಆದಿವಾಸಿಗಳನ್ನು ಶೋಷಿಸತೊಡಗಿವೆ. ಆ ಸುಲಿಗೆ ಇನ್ನೂ ನಿಂತಿಲ್ಲ!

ಇತ್ತೀಚೆಗೆ ಕುಲಪಂಚಾಯಿತಿದಾರರೆಂಬ ಸುಲಿಗೆದಾರರ ಕಾಟ ವಿಪರೀತವಾಗುತ್ತಿದೆ. ಈ ಕುಲಪಂಚಾ
ಯಿತಿಗಳ ಕುಮ್ಮಕ್ಕಿನಿಂದಲೇ ಬಾಲ್ಯವಿವಾಹಗಳು‌ ನಿರಾತಂಕವಾಗಿ ನಡೆಯುತ್ತಿವೆ. ಸುಡುಗಾಡುಸಿದ್ದರು, ಕಾಡುಗೊಲ್ಲರು, ಬುಡ್ಗಜಂಗಮರು, ಬುಡಬುಡಕಿ, ಹಕ್ಕಿಪಿಕ್ಕಿ, ಸಿಂದೊಳ್ಳು, ಶಿಳ್ಳೇಕ್ಯಾತರು, ಗಂಟಿಚೋರ್, ದಕ್ಕಲಿಗ, ಕೋಲೆಬಸವ ಮುಂತಾದ ಸಮುದಾಯಗಳಲ್ಲಿ ಕುಲಪಂಚಾಯಿತಿ ಪದ್ಧತಿ ಇನ್ನೂ ಆಚರಣೆಯಲ್ಲಿದೆ.

ಎರಡು ವರ್ಷದ ಹಿಂದೆ ಗೋಕಾಕ್ ಬಳಿಯ ಘಟಪ್ರಭಾ ಪ್ರದೇಶದಲ್ಲಿ ನೆಲಸಿರುವ ಸುಡುಗಾಡುಸಿದ್ದರು ಲಕ್ಷಾಂತರ ರೂಪಾಯಿ ದಂಡ ಕಟ್ಟಲಾರದೆ, ಕುಲಪಂಚಾಯಿತಿಗಳ ಗೂಂಡಾಗಳಿಂದ ತೀವ್ರ ಹಲ್ಲೆಗೊಳಗಾಗಿ ಬೆಳಗಾವಿಯ ಆಸ್ಪತ್ರೆಯಲ್ಲಿ ಸಾಲುಸಾಲಾಗಿ ಮಲಗಿದ್ದರು. ಹಲ್ಲೆಯಿಂದ ತಪ್ಪಿಸಿಕೊಂಡವರು ರಕ್ಷಣೆಗಾಗಿ ಬೆಂಗಳೂರಿನ ಕಡೆ ಓಡಿ ಬಂದಿದ್ದರು. ಈ ಕುರಿತು ಸ್ಥಳೀಯ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಕಡೆಗೆ ‘ಅಲೆಮಾರಿ ಬುಡಕಟ್ಟು ಮಹಾಸಭಾ’ ಮೂಲಕ ಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋದಾಗ ಒಂದಷ್ಟು ಸಾಂತ್ವನ ಸಿಕ್ಕಿತು.

ಮಾನ್ವಿಯಲ್ಲಿ ಕುಲಪಂಚಾಯಿತಿದಾರರ ದೌರ್ಜನ್ಯಕ್ಕೆ ಸಿಕ್ಕ ಬುಡ್ಗಜಂಗಮ ಸಮುದಾಯದ ಸೋಮಣ್ಣ ಮೋತಿ ಕುಟುಂಬ ದಿಟ್ಟತನದಿಂದ ಮಾನ್ವಿ ಠಾಣೆಯಲ್ಲಿ ಎಫ್‌ಐಆರ್‌ ಮಾಡಿಸಿದರೂ ಪ್ರಯೋಜನವಾಗಲಿಲ್ಲ. ಗುಲ್ಬರ್ಗಾ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಹಾಕಿ ನಿರ್ದೇಶನ ಪಡೆದರೂ ಇಂದಿಗೂ ಕುಲಪಂಚಾಯಿತಿದಾರರ ದೌರ್ಜನ್ಯ ನಿಂತಿಲ್ಲ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ತೀರ್ಪುಗಳ ಬಿಸಿ ಕುಲಪಂಚಾಯಿತಿಗಳಿಗೆ ತಟ್ಟಿಲ್ಲ.

ಈ ಎರಡು ತಿಂಗಳಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಂಗಾರಪ್ಪ ಲೇಔಟ್‌
ನಲ್ಲಿ ಕನಿಷ್ಠ ಹತ್ತು ಬಾಲ್ಯವಿವಾಹಗಳು ಕುಲಪಂಚಾಯಿತಿದಾರರ ಸಮ್ಮುಖದಲ್ಲೇ ನಡೆದಿವೆ. ಇದರ ಬಗ್ಗೆ ದೂರು ನೀಡಿದ ಪರಿಣಾಮ, ಒಂದು ಜೋಡಿ ಬಾಲವಧುವರರನ್ನು ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಇರಿಸಿದ್ದಾರೆ‌. ಆದರೆ, ದೂರು ನೀಡಿದ ತಮಟಂ ಶ್ರೀನಿವಾಸ್ ಎನ್ನುವ ದೂರುದಾರನಿಗೆ ಕುಲಪಂಚಾಯಿತಿದಾರರು ₹50 ಸಾವಿರ ದಂಡ ಹಾಕಿದ್ದಾರೆ.

‘ಬಾಲ್ಯವಿವಾಹ ಸಹಿಸಲ್ಲ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಬಾಲ್ಯವಿವಾಹಗಳನ್ನು ಪೋಷಿಸುತ್ತಿ
ರುವ ಕುಲಪಂಚಾಯಿತಿಗಳನ್ನು ನಿಯಂತ್ರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.