ಇಂದಿನ ಸಮಕಾಲೀನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಬತ್ತಿ ಹೋಗುತ್ತಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಅವುಗಳನ್ನು ಕಲಿಸಬೇಕಾದ ತುರ್ತಿದೆ ಎಂದು ಸಾಮಾಜಿಕ ಕಳಕಳಿಯುಳ್ಳ ಹಿರಿಯರೊಬ್ಬರು ಹೇಳುತ್ತಿದ್ದರು. ವಿಜ್ಞಾನ, ಗಣಿತ, ಸಮಾಜವಿಜ್ಞಾನ, ಭಾಷಾ ವಿಷಯಗಳ ರೀತಿಯಲ್ಲಿ ‘ಮಾನವೀಯ ಮೌಲ್ಯ’ ಎಂಬ ವಿಷಯದ ಕಲಿಕೆಯನ್ನೂ ಕಡ್ಡಾಯ ಮಾಡಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು.
ಪರಿಸರ ನಾಶ, ವಾಯು–ಜಲಮಾಲಿನ್ಯ, ಹವಾಮಾನ ವೈಪರೀತ್ಯದಂತಹ ಪ್ರಪಂಚದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಎಂದರೆ, ಅವುಗಳನ್ನು ವಿದ್ಯಾರ್ಥಿಗಳು ಕಲಿಯುವ ವಿಷಯಗಳನ್ನಾಗಿ ಅಳವಡಿಸುವುದು ಎಂಬ ಚಿಂತನೆಯನ್ನು ಕೆಲವರು ಹೊಂದಿ ದ್ದಾರೆ. ಸಾಮಾಜಿಕ ಹಿತಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಇರಬೇಕು ಎಂಬ ಕಾರಣದಿಂದ, ಅದಕ್ಕೆ ಪೂರಕವಾದ ಸಂಗತಿಗಳನ್ನು ಪಠ್ಯಪುಸ್ತಕಗಳಲ್ಲಿ ಹೊಸದಾಗಿ ಅಳವಡಿಸಬೇಕು ಎಂಬ ಅಭಿಪ್ರಾಯ ಮಾಧ್ಯಮಗಳಲ್ಲಿ ಆಗಾಗ್ಗೆ ಪ್ರಕಟವಾಗುತ್ತಿರುತ್ತದೆ. ಇಂತಹ ಒತ್ತಡಗಳ ಪರಿಣಾಮವೋ ಎಂಬಂತೆ ನಮ್ಮ ಶಾಲಾ ಪಠ್ಯಪುಸ್ತಕಗಳು ವರ್ಷದಿಂದ ವರ್ಷಕ್ಕೆ ತಮ್ಮ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತಲೇ ಇವೆ.
ಪಠ್ಯಪುಸ್ತಕದಲ್ಲಿ ಈಗಾಗಲೇ ಪಾಠಗಳಾಗಿ ಅಳವಡಿಕೆಯಾಗಿರುವ ವಿಷಯಗಳನ್ನು ಮಕ್ಕಳು ಪರೀಕ್ಷೆಗಾಗಿ ಓದಿ, ನಂತರ ಮರೆತು ಹಗುರಾಗಿ, ಮುಂದಿನ ವರ್ಷದ ಪಾಠಗಳನ್ನು ‘ಕಲಿಯಲು’ ಮತ್ತೆ ಸಿದ್ಧರಾಗುತ್ತಾರೆ. ಪಠ್ಯಪುಸ್ತಕಗಳಲ್ಲಿ ಇರುವ ಇಂತಹ ಹೆಚ್ಚಿನ ವಿಷಯಗಳು ‘ಕಲಿಕೆ’ಯಾಗಿ ಎಷ್ಟರಮಟ್ಟಿಗೆ ಮಾರ್ಪಡುತ್ತಿವೆ ಎಂಬುದು ಚಿಂತನಾರ್ಹ ಮತ್ತು ಶೋಧಿಸಬೇಕಾದ ಸಂಗತಿಯಾಗಿದೆ. ಶಿಕ್ಷಣವು ಮಾಹಿತಿ ಸಂಗ್ರಹಕ್ಕಷ್ಟೇ ಒತ್ತು ನೀಡದೆ, ಮಾನವೀಯ ಮೌಲ್ಯ ಗಳಿಗೆ ಪ್ರಾಮುಖ್ಯ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸುವಂತೆ ಇರಬೇಕು ಎಂದು ಸ್ವಾಮಿ ವಿವೇಕಾನಂದರು ಕರೆ ನೀಡಿದ್ದಾರೆ. ಶಾಲಾ ಪಠ್ಯಪುಸ್ತಕಗಳಲ್ಲಿ ಮಾನವೀಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಅಂತರ್ಗತವಾಗಿಸಿ ಕಲಿಸುವುದು ಉತ್ತಮವಾದ ಕ್ರಮ.
ಶಾಲೆಯು ಮಾನವೀಯ ಮೌಲ್ಯಗಳ ನೆಲೆ, ಸೆಲೆಯಾಗಿ ಕಾರ್ಯನಿರ್ವಹಿಸಬೇಕು. ತರಗತಿ ಬೋಧನೆ, ಶಾಲಾ ಪ್ರಾರ್ಥನಾ ಸಮಯ, ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನದಲ್ಲಿ ನಡೆಯುವ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಾನವೀಯ ಮೌಲ್ಯಗಳು ಬೆಸೆಯುವಂತೆ ಯೋಜನೆ ರೂಪಿಸಲು ಅವಕಾಶವಿದೆ. ಈ ದಿಸೆಯಲ್ಲಿ ತಮ್ಮದೇ ಆದ ವಿಧಾನದಲ್ಲಿ ಅನೇಕ ಶಿಕ್ಷಕರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಪಾಠ ಬೋಧನೆ, ನೀತಿ ನಿರೂಪಣೆಗಳ ಮೂಲಕವಷ್ಟೇ ಮೌಲ್ಯಗಳನ್ನು ಬೆಳೆಸುವ ಕಾರ್ಯವು ಗಿಡಗಳ ಬುಡಕ್ಕೆ ನೀರೆರೆಯದೆ ಎಲೆಗಳಿಗೆ ನೀರು ಸಿಂಪಡಿಸಿದಂತೆ ಆಗುತ್ತದೆ. ಮೌಲ್ಯಗಳ ಬಗ್ಗೆ ಶಿಕ್ಷಕರು ಮಾಡಿದ ಪಾಠದಿಂದ ವಿದ್ಯಾರ್ಥಿಗಳು ಕಿರು ಪರೀಕ್ಷೆ, ಪರೀಕ್ಷೆಯಲ್ಲಿ ಚೆಂದದ ಉತ್ತರ ಬರೆದು, ಹೆಚ್ಚಿನ ಅಂಕ ಗಳಿಸಬಹುದಷ್ಟೆ. ಆದರೆ ಮೌಲ್ಯಗಳನ್ನು ಮೈಗೂಡಿಸಿ ಕೊಳ್ಳಲು ವ್ಯಕ್ತಿಯ ಸುತ್ತಲಿನ ವಾತಾವರಣ ಪೂರಕ ಹಾಗೂ ಪ್ರೇರಕವಾಗಿ ಇರುವುದು ಅವಶ್ಯ.
ಶಿಕ್ಷಕರ ಜೊತೆ ವಿದ್ಯಾರ್ಥಿಗಳ ಒಡನಾಟ ನಿರಂತರ ವಾಗಿರುತ್ತದೆ. ಪ್ರೀತಿ, ಶಾಂತಿ, ಅಹಿಂಸೆ, ಪ್ರಾಮಾಣಿಕತೆ, ನ್ಯಾಯ, ಸಮಾನತೆ, ಕೃತಜ್ಞತೆ, ಅನುಭೂತಿ, ದಯೆ, ನ್ಯಾಯ, ಕರುಣೆ, ಸೂಕ್ಷ್ಮ ಮನೋಭಾವ, ಸಂವೇದನೆ, ಔದಾರ್ಯ, ಸಹಿಷ್ಣುತೆ, ಏಕತೆ, ಸಮಗ್ರತೆಯಂತಹ ಮೌಲ್ಯಗಳು ತಮ್ಮ ಜೊತೆಗಿನ ಒಡನಾಟದ ಸಂದರ್ಭಗಳಲ್ಲಿ ಹಾಗೂ ಇತರ ಎಲ್ಲ ಪ್ರಕ್ರಿಯೆಗಳಲ್ಲಿ ಮೇಳೈಸು ವಂತೆ ಶಿಕ್ಷಕರು ಅಗತ್ಯವಾದ ಚಟುವಟಿಕೆಗಳನ್ನು ರೂಪಿಸಲು ಸಾಧ್ಯವಿದೆ. ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಶಾಲೆಯ ಎಲ್ಲ ಸಿಬ್ಬಂದಿಯ ವ್ಯಕ್ತಿತ್ವವು ವಿದ್ಯಾರ್ಥಿಗಳ ಮೇಲೆ ಗಾಢ ಪರಿಣಾಮ ಬೀರುತ್ತದೆ. ಹೀಗಾಗಿ, ಅವರೆಲ್ಲರೂ ತಮ್ಮ ನಡವಳಿಕೆಗಳ ಬಗ್ಗೆ ಬಹಳಷ್ಟು ಎಚ್ಚರ ವಹಿಸಬೇಕಾದುದು ಅಗತ್ಯ.
ಮಾನವೀಯ ಮೌಲ್ಯಗಳಿಗೆ ಸವಾಲೆಸೆಯುವಂತಹ, ಅದಕ್ಕೆ ಧಕ್ಕೆಯಾಗುವಂತಹ ಪ್ರಕರಣಗಳು ಸಮಾಜದಲ್ಲಿ ಆಗಾಗ್ಗೆ ಸಂಭವಿಸುತ್ತಲೇ ಇರುತ್ತವೆ. ಇಂತಹ ವಿದ್ಯಮಾನಗಳು ಮಕ್ಕಳ ಗಮನಕ್ಕೆ ಬಂದಾಗ ಅವರಲ್ಲಿ ಸಹಜವಾಗಿ ಮಾನಸಿಕ ಸಂಘರ್ಷ, ಸಂದಿಗ್ಧ, ಗೊಂದಲ ಉಂಟಾಗುತ್ತವೆ. ಆಗ ಶಿಕ್ಷಕರು ಅವರೊಂದಿಗೆ ಚರ್ಚಿಸುವ ಮೂಲಕ ಮಾನವೀಯ ಮೌಲ್ಯಗಳ ಪ್ರಾಮುಖ್ಯವನ್ನು ಮುನ್ನೆಲೆಗೆ ತರಬಹುದು. ಮಾನವೀಯ ಮೌಲ್ಯಗಳು ಏಕೆ ಮತ್ತು ಹೇಗೆ ಅಗತ್ಯ ಎಂಬ ಬಗೆಗಿನ ಚಿಂತನೆಯನ್ನು ಪ್ರಸಂಗ, ಪಾತ್ರಾಭಿನಯದ ಮೂಲಕ ಮಕ್ಕಳಲ್ಲಿ ಹುಟ್ಟುಹಾಕಬೇಕು.
ಶಾಲೆ ಹಾಗೂ ಶಾಲೆಯಾಚೆ ನಡೆಯುವ ಎಷ್ಟೋ ಪ್ರಸಂಗಗಳಲ್ಲಿ ವಿದ್ಯಾರ್ಥಿಗಳು, ಕುಟುಂಬ ಸದಸ್ಯರು ಹಾಗೂ ಶಿಕ್ಷಕರು ಸದ್ವರ್ತನೆಯನ್ನು ತೋರಿರುತ್ತಾರೆ. ಇಂತಹ ಪ್ರಸಂಗಗಳನ್ನು ಉದಾಹರಣೆಯಾಗಿ ಪ್ರಸ್ತಾಪಿಸಿ, ಮಾನವೀಯ ಮೌಲ್ಯಗಳು ಹೇಗೆ ನಮ್ಮ ಸುತ್ತಲಿನ ಪರಿಸರದಲ್ಲಿ ಸಕ್ರಿಯವಾಗಿವೆ ಮತ್ತು ಜೀವಂತವಾಗಿವೆ ಎಂಬುದನ್ನು ವಿವರಿಸಿ, ಚರ್ಚಿಸುವುದು ಪರಿಣಾಮಕಾರಿ ಆಗಬಲ್ಲದು.
ತಂತ್ರಜ್ಞಾನದ ಅತಿಬಳಕೆಯು ಮಾನವನ ಸೂಕ್ಷ್ಮ ಭಾವನೆ ಹಾಗೂ ಸಂವೇದನೆಗಳನ್ನು ಕುಗ್ಗಿಸಬಲ್ಲದು. ಇದಕ್ಕೆ ಮಕ್ಕಳೂ ಹೊರತಲ್ಲ. ತಂತ್ರಜ್ಞಾನದ ಆಚೆ ನೇರ ಒಡನಾಟ, ಸಂವಹನಗಳಿಗೆ ಮಕ್ಕಳು ತೆರೆದು ಕೊಳ್ಳುವ ಅವಕಾಶಗಳನ್ನು ಸೃಷ್ಟಿಸಿ, ಅವುಗಳ ಮೂಲಕ ಮಾನವೀಯ ಮೌಲ್ಯಗಳ ಪ್ರಾಮುಖ್ಯವನ್ನು ಅವರಿಗೆ ಮನಗಾಣಿಸಬೇಕು. ಅಂತಹ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ದಿಸೆಯಲ್ಲಿ ಶಾಲಾ ಚಟುವಟಿಕೆಗಳನ್ನು ಸಕ್ರಿಯವಾಗಿಸುವ ಅಗತ್ಯ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.