ADVERTISEMENT

ಸಂಗತ: ವಿಜ್ಞಾನ–ದೇಶಪ್ರೇಮದ ಅಪೂರ್ವ ಮಾದರಿ

‘ರಾಮನ್‌ ಎಫೆಕ್ಟ್‌’ಗೆ ನೂರು ತುಂಬಲು ಎರಡು ವರ್ಷವಷ್ಟೇ ಬಾಕಿ. ವೈಜ್ಞಾನಿಕ ಸಾಧನೆಯ ಜೊತೆಗೆ ದೇಶಪ್ರೇಮದ ಕಾರಣದಿಂದಲೂ ರಾಮನ್‌ ಸ್ಮರಣೀಯರು.

ಗುರುರಾಜ್ ಎಸ್.ದಾವಣಗೆರೆ
Published 27 ಫೆಬ್ರುವರಿ 2026, 23:30 IST
Last Updated 27 ಫೆಬ್ರುವರಿ 2026, 23:30 IST
   

ಡಿಸೆಂಬರ್ 10, 1930. ಸ್ವೀಡನ್ ದೇಶದ ಸ್ಟಾಕ್‌ಹೋಮ್‌ನ ಆ ಭವ್ಯ ಸಭಾಂಗಣದಲ್ಲಿ ಭಾರತದ ವಿಜ್ಞಾನಿಯೊಬ್ಬರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಡೀ ಸಭೆ ಎದ್ದು ನಿಂತುಚಪ್ಪಾಳೆ ತಟ್ಟಿತು. ಆ ಕ್ಷಣದಲ್ಲಿ ವಿಜ್ಞಾನಿಯ ಕಣ್ಣುಗಳು ತೇವವಾಗಿದ್ದವು. ನೊಬೆಲ್ ಬಹುಮಾನ ಗಳಿಸಿದ ಆ ಭಾರತೀಯ ವಿಜ್ಞಾನಿಯೇ, ಸಿ.ವಿ. ರಾಮನ್‌ ಎಂದು ಖ್ಯಾತರಾದ ಚಂದ್ರಶೇಖರ ವೆಂಕಟ್ ರಾಮನ್. ಪ್ರಪಂಚದ ಅತಿದೊಡ್ಡ ಗೌರವ ಸಿಕ್ಕಾಗ ಅವರ ಕಣ್ಣುಗಳೇಕೆ ಒದ್ದೆಯಾಗಿದ್ದವು. ಅದಕ್ಕೆ ಅವರು ನೀಡಿರುವ ಕಾರಣ:

‘ನಾನು ಪ್ರಶಸ್ತಿ ಸ್ವೀಕರಿಸಿ ಸುತ್ತಲೂ ನೋಡಿದಾಗ, ಅಲ್ಲಿ ಹಾರಾಡುತ್ತಿದ್ದುದು ಬ್ರಿಟಿಷರ ಯೂನಿಯನ್ ಜಾಕ್ ಧ್ವಜ. ನನ್ನ ದೇಶಕ್ಕೆ ತನ್ನದೇ ಆದ ಧ್ವಜವಿಲ್ಲವಲ್ಲ, ನಾನಿನ್ನೂ ಸ್ವಾತಂತ್ರ್ಯ ಪಡೆಯದ ದೇಶದ ಪ್ರಜೆಯಾಗಿ ಇಲ್ಲಿ ನಿಂತಿದ್ದೇನಲ್ಲ ಎಂಬ ನೋವು ನನ್ನನ್ನು ಕಣ್ಣೀರು ಹಾಕುವಂತೆ ಮಾಡಿತು’. ರಾಮನ್‌ ಅವರ ಬಗ್ಗೆ ಹೆಮ್ಮೆ ಮೂಡಲು ಇನ್ನೇನು ಬೇಕು.

ಅಸಾಧಾರಣ ಪ್ರತಿಭೆ ಮತ್ತು ಅಪ್ಪಟ ದೇಶಭಕ್ತಿಯ ಸಾಕಾರದಂತಿದ್ದ ರಾಮನ್, ‘ವಿಜ್ಞಾನವೆಂದರೆ ಬರೀ ಅಂಕಿ–ಅಂಶಗಳಲ್ಲ, ಅದು ಹಗಲಿರುಳು ಕಾಣುವ ಒಂದು ಕನಸು’ ಎಂದು ನಂಬಿದ್ದರು. ​ರಾಮನ್ ಅವರಿಗೆ ತಮ್ಮ ಸಂಶೋಧನೆಯ ಮೇಲೆ ಎಂತಹ ಅಚಲ ನಂಬಿಕೆಯಿತ್ತೆಂದರೆ, ನೊಬೆಲ್ ಪ್ರಶಸ್ತಿ ಘೋಷಣೆಯಾಗುವುದಕ್ಕೂ ಐದು ತಿಂಗಳು ಮೊದಲೇ, ಸ್ಟಾಕ್‌ ಹೋಮ್‌ಗೆ ಹೋಗಲು ಹಡಗಿನ ಟಿಕೆಟ್ ಕಾಯ್ದಿರಿಸಿದ್ದರು! ಪ್ರಶಸ್ತಿ ಬರುತ್ತದೆ ಎಂದು ಜಗತ್ತು ಹೇಳುವ ಮೊದಲೇ ಅವರ ಅಂತರಾತ್ಮ ಅದನ್ನು ಸಾರುತ್ತಿತ್ತು. ಅದು ಅಹಂಕಾರವಲ್ಲ, ಸತ್ಯವನ್ನು ಹುಡುಕಿದ ಒಬ್ಬ ಸಾಧಕ ನಿಗೆ ತನ್ನ ಶ್ರಮದ ಮೇಲಿದ್ದ ಅಪರಿಮಿತ ವಿಶ್ವಾಸ.

ADVERTISEMENT

ಆ ದಿನಗಳಲ್ಲಿ ರಾಮನ್ ಅವರು ಅಕೌಂಟೆಂಟ್ ಜನರಲ್ ಆಗಿ ಕೆಲಸ ಮಾಡುತ್ತಿದ್ದರು. ಹೊಟ್ಟೆಪಾಡಿಗಾಗಿ ಹಗಲಿಡೀ ಲೆಕ್ಕಪತ್ರಗಳ ಕೆಲಸ. ರಾತ್ರಿ ಆಗುತ್ತಿದ್ದಂತೆ ಅವರ ಕಾಲುಗಳು ಪ್ರಯೋಗಾಲಯದ ಕಡೆಗೆ. ಸಣ್ಣ ದೀಪದ ಬೆಳಕಿನಲ್ಲಿ, ಸರಳ ಉಪಕರಣಗಳನ್ನು ಬಳಸಿ ಕೊಂಡು ಅವರು ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸಲು ಹವಣಿಸುತ್ತಿದ್ದರು. ಅವರಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ಬೆಳಕು ಮತ್ತು ಬಣ್ಣಗಳ ಬಗ್ಗೆ ವಿಚಿತ್ರವಾದ ಅನುರಾಗವಿತ್ತು.

ವಿಜ್ಞಾನದ ಸೆಳೆತದ ಜೊತೆಗೆ ದೇಶಪ್ರೇಮದ ಕಿಚ್ಚು ಅವರ ಎದೆಯಲ್ಲಿತ್ತು. ಭಾರತೀಯ ವಿಜ್ಞಾನಿಗಳು ಪಾಶ್ಚಿಮಾತ್ಯರ ಆಡಂಬರ ಅನುಕರಿಸಬಾರದು; ನಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳಲ್ಲೇ ಜಗತ್ತನ್ನು ಗೆಲ್ಲಬೇಕು ಎಂಬುದು ಅವರ ಛಲವಾಗಿತ್ತು. 

ಅದು 1921ರ ಸಮಯ. ರಾಮನ್ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಮಾವೇಶ ಮುಗಿಸಿ ಹಡಗಿ
ನಲ್ಲಿ ಲಂಡನ್‌ನಿಂದ ಭಾರತಕ್ಕೆ ಮರಳುತ್ತಿದ್ದರು. ಮೆಡಿಟರೇನಿ ಯನ್ ಸಮುದ್ರದ ಮೇಲೆ ಸೂರ್ಯ ಪ್ರಕಾಶಿಸುತ್ತಿದ್ದ. ನೀಲಿ ಸಮುದ್ರದ ಸೌಂದರ್ಯವನ್ನು ಕಂಡು ರಾಮನ್ ಮಂತ್ರಮುಗ್ಧರಾದರು. ಸಮುದ್ರದ ಬಣ್ಣವೇಕೆ ನೀಲಿ ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಮೂಡಿತು. ​ಅಲ್ಲಿಯ ವರೆಗೆ ವಿಜ್ಞಾನಿಗಳು ‘ಸಮುದ್ರದ ನೀಲಿ ಬಣ್ಣವು ಆಕಾಶದ ಪ್ರತಿಬಿಂಬ’ ಎಂದು ನಂಬಿದ್ದರು. ರಾಮನ್ ಅವರು ತಕ್ಷಣ ತಮ್ಮ ಜೇಬಿನಲ್ಲಿದ್ದ ಒಂದು ಪುಟ್ಟ ಗಾಜಿನ ರೋಹಿತ (ಪ್ರಿಸಂ) ಹೊರತೆಗೆದು ಪರೀಕ್ಷಿಸಿದರು. ಸಮಾಧಾನದ ಉತ್ತರ ದೊರಕಲಿಲ್ಲ.

​ಭಾರತಕ್ಕೆ ಮರಳಿದ ನಂತರ ಪ್ರಯೋಗಾಲಯದಲ್ಲಿ ರಾಮನ್‌ರ ಪ್ರಯೋಗ ಮುಂದುವರಿಯಿತು. ಅವರು ಬಳಸಿದ್ದು ಇಂದಿನ ಕೋಟ್ಯಂತರ ರೂಪಾಯಿಗಳ ಲ್ಯಾಬ್ ಉಪಕರಣಗಳನ್ನಲ್ಲ! ಅವರ ಪ್ರಯೋಗದ ಮೂಲವಸ್ತು ಬೆಳಕು. ಆ ಬೆಳಕಿನ ಮೂಲ ಸಾಕ್ಷಾತ್ ಸೂರ್ಯನೇ ಆಗಿದ್ದ. ಬೆಳಕನ್ನು ಪಡೆಯಲು ಯಾವ ಖರ್ಚೂ ಇರಲಿಲ್ಲ. ಆ ಬೆಳಕಿನ ತೀವ್ರತೆ ಸಾಲದು ಎನ್ನಿಸಿದಾಗ ಅವರು ಅಲ್ಪದರದ ಪಾದರಸ
ದೀಪಗಳನ್ನು ಬಳಸಿದರು. ಅವರ ಪ್ರಯೋಗಗಳಿಗೆ ಬೇಕಾಗಿದ್ದ ಸ್ಪೆಕ್ಟ್ರೋಗ್ರಾಫ್‌ ಯಂತ್ರದ ಬೆಲೆ 500 ರೂಪಾಯಿ ಮೀರಿರಲಿಲ್ಲ. ರಾಮನ್ ಅವರು ಪ್ರಯೋಗ ಮಾಡುವಾಗ ಸೂರ್ಯನ ಬೆಳಕನ್ನು ಕೇಂದ್ರೀಕರಿಸಲು ಕೆಲವೊಮ್ಮೆ ತಮ್ಮ ವಿದ್ಯಾರ್ಥಿಗಳನ್ನು ಕನ್ನಡಿ ಹಿಡಿದು ನಿಲ್ಲುವಂತೆ ಹೇಳುತ್ತಿದ್ದ ರಂತೆ! ಅಷ್ಟು ಸರಳವಾಗಿತ್ತು ಅವರ ಸಂಶೋಧನಾ ವಿಧಾನ.

ರಾಮನ್‌ರ ಪ್ರಯೋಗದ ಪ್ರಕಾರ, ಬೆಳಕು ಯಾವುದಾದರೂ ಒಂದು ವಸ್ತುವಿನ ಮೇಲೆ ಬಿದ್ದಾಗ, ಅದು ಚದುರುತ್ತದೆ. ಈ ರೀತಿ ಚದುರಿದ ಬೆಳಕಿನ ಬಣ್ಣ (ತರಂಗಾಂತರ) ಸ್ವಲ್ಪ ಬದಲಾಗುತ್ತದೆ. ಇದನ್ನೇ ‘ರಾಮನ್ ಪರಿಣಾಮ’ ಎನ್ನಲಾಗುತ್ತದೆ. ಇದು ಅಣುಗಳ ‘ಬೆರಳಚ್ಚು’ ಇದ್ದಂತೆ. ಇಂದು ಈ ತಂತ್ರಜ್ಞಾನವನ್ನು ಬಳಸಿ ಕ್ಯಾನ್ಸರ್ ಪತ್ತೆಯಿಂದ ಹಿಡಿದು, ಮಂಗಳ ಗ್ರಹದ ಮೇಲಿರುವ ಖನಿಜಗಳ ವರೆಗೆ ಎಲ್ಲವನ್ನೂ ಪತ್ತೆಹಚ್ಚಲಾಗುತ್ತಿದೆ!

‘ವಿಜ್ಞಾನವು ದುಬಾರಿ ಉಪಕರಣಗಳಲ್ಲಿಲ್ಲ, ಅದನ್ನು ನೋಡುವ ಕಣ್ಣು ಮತ್ತು ಯೋಚಿಸುವ ಮೆದುಳಿನಲ್ಲಿದೆ’ ಎನ್ನುವುದು ರಾಮನ್‌ರ ನಂಬಿಕೆಯಾಗಿತ್ತು. ಆ ವಿವೇಕ ದಿಂದಲೇ ಅವರು ಅಪರೂಪದ ಸಂಶೋಧನೆ ಕೈಗೊಂಡು, ವಿಶ್ವ ವಿಜ್ಞಾನ ಭೂಪಟದಲ್ಲಿ ಭಾರತದ ಸ್ಥಾನವನ್ನು ಶಾಶ್ವತ ಗೊಳಿಸಿದರು. ಇನ್ನೆರಡು ವರ್ಷ ಕಳೆದರೆ ರಾಮನ್‌ರ ಸಂಶೋಧನೆಗೆ (1928) ನೂರು ವರ್ಷ! ವಿಜ್ಞಾನ ರಂಗದ ಸಾಧನೆಗೆ ಇನ್ನೊಂದು ನೊಬೆಲ್ ಬಹುಮಾನ ಗಳಿಸಲು ಈ ದೇಶ ಇನ್ನೆಷ್ಟು ವರ್ಷ ಕಾಯಬೇಕು?

‘ರಾಮನ್‌ ಪರಿಣಾಮ’ ಆವಿಷ್ಕಾರಗೊಂಡದ್ದು 1928ರ ಫೆಬ್ರುವರಿ 28ರಂದು. ಆ ಸವಿನೆನಪಿಗಾಗಿ ಭಾರತದಲ್ಲಿ ಪ್ರತಿ ವರ್ಷ ಫೆ. 28ನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ವಿಜ್ಞಾನ ಹಾಗೂ ದೇಶಪ್ರೇಮದ ನೈಜ ಸಂಕೇತದ ರೂಪದಲ್ಲಿ ರಾಮನ್‌ ನೆನಪಿನ ‘ವಿಜ್ಞಾನ ದಿನ’ ನಮಗೆ ಒದಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.