ADVERTISEMENT

ದೀಪಾವಳಿ ಹಬ್ಬದ ಪ್ರಯುಕ್ತ...

ವಿಡಂಬನೆ

ಪ್ರಕಾಶ ಶೆಟ್ಟಿ
Published 25 ಅಕ್ಟೋಬರ್ 2019, 18:30 IST
Last Updated 25 ಅಕ್ಟೋಬರ್ 2019, 18:30 IST
   

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ದೀಪಾವಳಿ ಪ್ರಯುಕ್ತ ಸ್ಫೋಟಕ ವಾರ್ತೆಗಳು. ಓದುತ್ತಿರುವವರು ನೀವು. ದೀಪಾವಳಿ ಬಂತೆಂದರೆ ಎಲ್ಲೆಡೆ ವಿಶೇಷ ಮಾರಾಟದ ಭರಾಟೆ. ನಮ್ಮ ಕೇಂದ್ರ ವಿತ್ತ ಸಚಿವೆಗಂತೂ ಕೊಂಡುಕೊಳ್ಳುವಿಕೆ ಏಕ್ ದಂ ಚೇತರಿಸಿ
ಕೊಳ್ಳುತ್ತದೆ ಎಂಬ ಆಶಾಭಾವನೆ ಹುಟ್ಟಿದೆ. ಪ್ರಧಾನಮಂತ್ರಿ ಅವರಂತೂ ‘ಮಿತ್ರೋಂ... ದೇಶದ ಆರ್ಥಿಕ ಸ್ಥಿತಿಗೆ ಏನೂ ಆಗಿಲ್ಲ! ಜನತೆ ಕ್ವಿಂಟಲ್‌ಗಟ್ಟಲೆ ಸಿಹಿತಿಂಡಿಗಳನ್ನು, ಬಟ್ಟೆಬರೆಗಳನ್ನು ಕೊಂಡುಕೊಂಡಿದ್ದಾರೆ. ಅದರಲ್ಲೂ ಹಣಕಾಸಿನ ಬಗ್ಗೆ ಕ್ಯಾರೇ ಎನ್ನದೆ ಮನಬಂದಂತೆ ಪಟಾಕಿಗಳನ್ನು ಸುಡುತ್ತಿದ್ದಾರೆ...’ ಎಂದು ದೀಪಾವಳಿಯ ಮಧ್ಯರಾತ್ರಿ ಠೀ(ಟಿ)ವಿಯಲ್ಲಿ ಸ್ಫೋಟಕ ಸುದ್ದಿಯನ್ನು ಬಿತ್ತರಿಸುವುದಕ್ಕೆ ಸನ್ನದ್ಧರಾಗಿದ್ದಾರೆ.

ದೀಪಾವಳಿ ಪ್ರಯುಕ್ತ ಅನೇಕ ಸ್ಫೋಟಕ ಸುದ್ದಿಗಳು ಬರಲಾರಂಭಿಸಿವೆ. ರೈಲು ನಿಲ್ದಾಣದಲ್ಲಿ ಅಥವಾ ಕಾಶ್ಮೀರದ ಗಡಿಯಲ್ಲಿ ನಡೆಯುವಂತಹ ಸ್ಫೋಟಕ ಸುದ್ದಿಗಳೆಂದು ತಪ್ಪು ಭಾವಿಸಬೇಡಿ. ಈ ಸ್ಫೋಟಕ ಸುದ್ದಿ ಕೇಳಿದರೆ ನೀವು ಖಂಡಿತ ಕಿವಿ ಮುಚ್ಚಿಕೊಂಡು ‘ಶಾಂತಂ ಪಾಪಂ, ಶಾಂತಂ ಪಾಪಂ’ ಅನ್ನುತ್ತೀರೋ ಇಲ್ಲವೋ ನೋಡಿ! ಈ ವರ್ಷ ಜೋಕ್ ಸಭೆಗೆ ಹೋಗಿರುವ ಸಂಸಾಧ್ವಿ ಎಂಬುವರು ನಾಥೂರಾಂ ಗೋಡ್ಸೆಗೆ ‘ಭಾರತರತ್ನ’ ನೀಡಲೇಬೇಕು. ಇಲ್ಲದಿದ್ದರೆ ಉಪವಾಸ ಮುಷ್ಕರ ಹೂಡುತ್ತೇನೆ ಎಂದು ಹಟ ತೊಟ್ಟಿದ್ದಾರೆ. ಹೊಸ ಇತಿಹಾಸ ಬರೆಯುವ ಸಮಯ ಬಂದಿದೆ ಎಂದು ಕೆಲ ದಿನಗಳ ಹಿಂದೆಯಷ್ಟೇ ಹೇಳಿಕೆ ನೀಡಿದ್ದ ಕೇಂದ್ರದ ಅಹಂ ಮಿನಿಸ್ಟ್ರು ಆಗಲೇ ‘ಭಾರತದ ಇತಿಹಾಸ’ದ ಮೊದಲ ಭಾಗ ಬರೆದು ಮುಗಿಸಿದ್ದಾರೆ. ಇದರಲ್ಲಿ ಕಾಶ್ಮೀರ ಯಾವತ್ತೂ ಪಾಕ್ ಆಕ್ರಮಿತ ಪ್ರದೇಶವಾಗಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಅನೇಕ ಪುಟಗಳನ್ನು, ಮಾಜಿ ಪ್ರಧಾನಮಂತ್ರಿ ನೆಹರೂ ಅವರನ್ನು ಹಿಗ್ಗಾಮುಗ್ಗಾ ತೆಗಳುವುದಕ್ಕೇ ಇಟ್ಟಿದ್ದಾರೆ ಮತ್ತು ಸರ್ದಾರ್ ಅವರನ್ನು ಆಕಾಶಕ್ಕೆ ಏರಿಸುವ ಪ್ರಯತ್ನ ಮಾಡಿದ್ದಾರೆ. ತಾಜ್‌ಮಹಲ್ ಕಟ್ಟುವುದಕ್ಕೂ ಹಿಂದೆ ಅದು ಸೀತೆ ಹುಟ್ಟಿದ ಸ್ಥಳವಾಗಿತ್ತು... ಇಂತಹ ಅನೇಕ ಹೊಸ ಹೊಸ ವಿಷಯಗಳು ಸದ್ದು ಮಾಡಲಿವೆ.

ದಿಕೆಛೀ ಅವರಿಗೆ ಗಣೇಶ ಚತುರ್ಥಿ ನಂತರ, ನೂರೈವತ್ತನೆಯ ಗಾಂಧಿ ಜಯಂತಿ ಆಚರಿಸುವುದಕ್ಕೂ ಬಿಡದ ಕೋರ್ಟ್, ಈಗ ದಿವಾಳಿ ಆಚರಿಸುವುದಕ್ಕೆ ಜಾಮೀನು ನೀಡಿರುವುದು ನಮಗೆಲ್ಲರಿಗೂ ಗೊತ್ತು. ಆದರೆ ಅವರು ಈ ವರ್ಷದಿಂದ ಲಕ್ಷ್ಮಿ ಪೂಜೆಯನ್ನು ಬಹಿಷ್ಕರಿಸುತ್ತಾರೆ ಎಂಬ ಸುದ್ದಿ ಇದೀಗ ಸ್ಫೋಟಗೊಂಡಿದೆ. ಧನರಾಶಿಯೇ ಕಾರಾಗೃಹಕ್ಕೆ ಮೂಲ ಎಂಬ ಸತ್ಯ ಅವರಿಗೆ ಎಷ್ಟು ಭಯ ಹುಟ್ಟಿಸಿದೆಯೆಂದರೆ, ಹತ್ತು ರೂಪಾಯಿ ನೋಟು ನೋಡಿದರೂ ಗರಬಡಿದಂತೆ ಕೂತುಬಿಡುತ್ತಾರೆ ಎನ್ನಲಾಗಿದೆ.

ADVERTISEMENT

ಮೊನ್ನೆಯಷ್ಟೇ ಸಚಿವ ಸೀಟಿ ಊದಪ್ಪ ಕಿವಿಗಡಚಿಕ್ಕುವಂತೆ ಹಿಂದಿನ ಜೋಕಾಡಮಿ ಅಧ್ಯಕ್ಷರನ್ನು ಉದ್ದೇಶಿಸಿ ‘ಮನೆಹಾಳರು’ ಎಂದು ಕರೆದಿದ್ದರು. ‘ಹಾಗಾದರೆ ಈಗಿನ ಅಧ್ಯಕ್ಷರುಗಳನ್ನು ಏನೆಂದು ಕರೆಯುತ್ತೀರಿ’ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಥಟ್ಟನೆ ಸೀಟಿ ಊದಿ ಹೇಳಿದ್ದು- ‘ಮನೆಯಾಳುಗಳು’ ಎಂದು! ಸಚಿವರು ಕೊಟ್ಟ ಬಿರುದಿನಿಂದ ಹೊಸ ಅಧ್ಯಕ್ಷರುಗಳಲ್ಲಿ ತೀವ್ರ ಬೇಸರ ಸ್ಫೋಟಗೊಂಡಿದೆ.

‘ನಮ್ಮ ಪಕ್ಸದ ಅಧ್ಯಕ್ಷರಿಗಾಗಲಿ, ವಿರೋಧ ಪಕ್ಸದ ನಾಯಕರಿಗಾಗಲಿ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆಯೆಂದೇ ಗೊತ್ತಿಲ್ಲ. ಒಬ್ಬರು 32 ಅಂತಾರೆ. ಇನ್ನೊಬ್ಬರು 30 ಅಂತಾರೆ! ಎರಡೂ ತಪ್ಪು. ಕರ್ನಾಟಕ ರಾಜ್ಯದಲ್ಲಿರೋದು ಬರೀ 17 ಜಿಲ್ಲೆಗಳು!’ ಎಂದು ಎಮ್ಮೆಲ್ಲೆ ಕತ್ತೀಶ, ದೀಪಾವಳಿ ಪ್ರಯುಕ್ತ ಹೊಸ ಬಾಂಬ್ ಸಿಡಿಸಿದ್ದಾರೆ. ಅವರ ಲೆಕ್ಕಾಚಾರದ ಪ್ರಕಾರ, ಉಳಿದ 13 ಜಿಲ್ಲೆಗಳು ಉತ್ತರ ಕರ್ನಾಟಕ ರಾಜ್ಯಕ್ಕೆ ಸೇರಬೇಕು. 2020ರಲ್ಲಿ ಈ ಹೊಸ ರಾಜ್ಯ ಸ್ಥಾಪನೆಯಾಗಲಿದೆ ಮತ್ತು ತಾನು ಅದರ ಮುಖ್ಯಮಂತ್ರಿಯಾಗುತ್ತೇನೆ ಎಂಬುದು ಕತ್ತೀಶರ ಬಲವಾದ ನಂಬಿಕೆ. ಸಚಿವ ಸ್ಥಾನ ವಂಚಿತರಾಗಿರುವ ಅವರನ್ನು ಸಮಾಧಾನಪಡಿಸಲು ದಿಲ್ಲಿ ಕಮಾಂಡ್ ಈ ಭರವಸೆಕೊಟ್ಟು ಕಣ್ಣೀರು ಒರೆಸಿದೆ ಎನ್ನಲಾಗಿದೆ.

ಸ್ವಯಂಘೋಷಿತ ದೇವಮಾನವ ಗಲ್ಕಿ ಸುಮಾರು₹ 600 ಕೋಟಿ ಆಸ್ತಿಯನ್ನು ಸ್ವಯಂ ಘೋಷಣೆ ಮಾಡದೆ ಐ.ಟಿಯವರ ಬಲೆಗೆ ಬಿದ್ದದ್ದೇ ದೊಡ್ಡ ಸುದ್ದಿಯಾಗಿತ್ತು. ಈಗ ಆ ಆಶ್ರಮದಲ್ಲಿ ಅದಕ್ಕಿಂತಲೂ ದೊಡ್ಡ ಸುದ್ದಿ ಸ್ಫೋಟಗೊಂಡಿದೆ! ಐ.ಟಿ ಅಧಿಕಾರಿಗಳು ನಿನ್ನೆ ಗಲ್ಕಿ ಆಶ್ರಮಕ್ಕೆ ಹೋದಾಗ ಅವರೆಲ್ಲಾ ದಿಗ್ಭ್ರಾಂತರಾಗಿಬಿಟ್ಟರು. ಯಾಕೆಂದರೆ ದೇವಮಾನವ ಮಾಯವಾಗಿ ಪ್ರತಿಮೆಯಾಗಿ
ಬಿಟ್ಟಿದ್ದನ್ನು ಅವರು ಕಾಣಬೇಕಾಯಿತು! ಮಾಯವಾಗುವುದರಲ್ಲಿ ಮಲ್ಯ, ನೀರವ್‍ಗಳಿಗಿಂತಲೂ ಒಂದು ಕೈ ಮೇಲು ಎಂದು ಐ.ಟಿ ಮತ್ತು ಇ.ಡಿಯವರು ಮೂಗಿನೊಳಗೆ ಬೆರಳು ತೂರಿಸಿ ಅಚ್ಚರಿವ್ಯಕ್ತಪಡಿಸಿದ್ದಾರೆ.

ಪಾರ್ಟಿ ಅಂದಮೇಲೆ ಭಿನ್ನಮತ ಸ್ಫೋಟಗೊಳ್ಳುವುದು ಸರ್ವೇಸಾಮಾನ್ಯ. ಆದರೆ ಎಸ್ ಪಕ್ಷದ ಕಚೇರಿಯಲ್ಲಿ ನಿಜವಾದ ನಾಡಬಾಂಬ್ ಸ್ಫೋಟಗೊಂಡಿದೆ! ‘ಭಿನ್ನ ಉಗ್ರ ಹೋರಾಟ’ದ ನಾಯಕ ಹೋರಾಟಪ್ಪರು ಅದು ತಮ್ಮದೇ ಕೃತ್ಯವೆಂದು ಒಪ್ಪಿಕೊಂಡಿದ್ದಾರೆ. ‘ಪಾರ್ಟಿಯಲ್ಲಿ ಏನೇ ಭಿನ್ನಮತ ಸ್ಫೋಟಗೊಂಡರೂ ಎಷ್ಟೇ ಅಸಮಾಧಾನದ ಹೊಗೆ ತೋರಿಸಿದರೂ ಮುಖಂಡರು ಕಂಡೂ ಕೇಳದಂತಿ
ರುತ್ತಾರೆ ಎಂಬ ಕಾರಣಕ್ಕಾಗಿ ಬಾಂಬನ್ನೇ ಸಿಡಿಸಿದ್ದೇವೆ’ ಎಂದು ಅವರು ಬಿಡುಗಡೆ ಮಾಡಿದ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಇಲ್ಲಿಗೆ ಸ್ಫೋಟಕ ವಾರ್ತೆ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.