ಸಂಗತ.
ಕಿರಿದಾದ ರಸ್ತೆಯಲ್ಲಿ ಎರಡು ಟ್ರ್ಯಾಕ್ಟರ್‌ಗಳು ನಿಧಾನವಾಗಿ ಸಾಗುತ್ತಿದ್ದರೆ, ಅವುಗಳ ಬದಿ ಮತ್ತು ಎದುರು ಬೈಕ್‌ಗಳು ಜೊತೆಗೆ ಬರುತ್ತಿದ್ದವು. ಒಂದು ಟ್ರ್ಯಾಕ್ಟರ್‌ನಲ್ಲಿ ಚಾಲಕನ ಜೊತೆ ಐದಕ್ಕೂ ಹೆಚ್ಚು ಮಂದಿ ಕೂತಿದ್ದರು. ಅವರ ಹಿಂಬದಿ ಟ್ರಾಲಿಯ ಮೇಲೆ ಕಿವಿಯ ಪದರು ಹರಿಯುವಷ್ಟು ಸಂಗೀತ ಅಬ್ಬರಿಸುತ್ತಿದ್ದ ಭಾರೀ ಗಾತ್ರದ ಧ್ವನಿವರ್ಧಕಗಳು (ಡಿಜೆ) ಇದ್ದವು. ಈ ಟ್ರ್ಯಾಕ್ಟರ್ ಎದುರು ಮೂವತ್ತಕ್ಕೂ ಹೆಚ್ಚು ಯುವಕರಿಂದ ಮನಸೋಇಚ್ಛೆ ಕುಣಿತ, ಕೇಕೆ, ಶಿಳ್ಳೆ ಎಲ್ಲವೂ ಇತ್ತು. ಇದರ ಜೊತೆಗೆ ಝಗಮಗಿಸುವ ದೀಪಗಳ ಅಲಂಕಾರ, ಕಣ್ಣುಗಳಿಗೆ ಕುಕ್ಕುವ ಲೇಸರ್ ಬೆಳಕು. ಅಲ್ಲಲ್ಲಿ ಪಟಾಕಿಗಳ ಸದ್ದು ಮುಂದುವರಿದಿತ್ತು.
ಆದರೆ, ಈ ಎಲ್ಲದರ ಹಿಂದಿನ ಟ್ರ್ಯಾಕ್ಟರ್‌ನಲ್ಲಿ ಮಾತ್ರ ಸಂಪೂರ್ಣ ಶಾಂತಸ್ಥಿತಿ. ಒಬ್ಬ ಚಾಲಕ, ಇಬ್ಬರು ಹುಡುಗರು ಮತ್ತು ಟ್ರಾಲಿಯಲ್ಲಿ ಬೃಹತ್ ಆಕಾರದ ಗಣೇಶನ ಮೂರ್ತಿ ಹೊರತುಪಡಿಸಿದರೆ ಮತ್ತ್ಯಾವ ಸಂಭ್ರಮವೂ ಇರಲಿಲ್ಲ. ಮೂರ್ತಿಯ ಅಕ್ಕಪಕ್ಕ ನಿಲ್ಲುವುದಿರಲಿ, ಅಪ್ಪಿತಪ್ಪಿ ಅವಘಡ ಸಂಭವಿಸಿದರೆ, ಯಾರು ಹೊಣೆ ಎಂದು ಯೋಚಿಸುವವರು ಕೂಡ ಅಲ್ಲಿ ಇರಲಿಲ್ಲ. ಅಷ್ಟು ನಿರ್ಲಿಪ್ತವಾಗಿ ಅದು ಸಾಗುತ್ತಿತ್ತು.
ಹುಬ್ಬಳ್ಳಿ-ಧಾರವಾಡದ ಬಹುತೇಕ ಕಡೆ ಕಾಣಸಿಕ್ಕ ಗಣೇಶ ಹಬ್ಬದ ಆಚರಣೆಯ ಬಗೆಯಿದು. ಯಾವುದೇ ಪ್ರಮುಖ ಹಬ್ಬ, ಮಹನೀಯರ ಜಯಂತಿ ಅಥವಾ ಉತ್ಸವವೇ ಇರಲಿ, ಇತ್ತೀಚಿನ ವರ್ಷಗಳಲ್ಲಿ ಅಬ್ಬರದ ಸಂಗೀತ (ಡಿಜೆ), ಮೈಮರೆಯುವಷ್ಟು ಕುಣಿತ ಮತ್ತು ಪ್ರತಿಷ್ಠೆಯ ಪ್ರದರ್ಶನ ಇಲ್ಲದಿದ್ದರೆ, ಆ ಆಚರಣೆ ಪರಿಪೂರ್ಣ ಆಗುವುದಿಲ್ಲ ಎಂಬ ಮನಃಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂಪಾಯಿ ಹಣ ಖರ್ಚಾಗಲಿ, ವಿದ್ಯುತ್ ಮತ್ತು ಇಂಧನ ವ್ಯಯವಾಗಲಿ, ‘ತೋರಿಕೆ’ಗಾದರೂ ಹೀಗೆ ಖರ್ಚು ಮಾಡಲೇಬೇಕು ಎಂಬ ಧೋರಣೆ ಹಲವರಲ್ಲಿದೆ.
ಇದು ದೇವರನ್ನು ಆರಾಧಿಸುವ ಭಕ್ತಿಯ ಸ್ವರೂಪವೇ ಅಥವಾ ಸಮಾಜದ ಏಳ್ಗೆಗೆ ಮಹನೀಯರನ್ನು ಸ್ಮರಿಸುವ ವಿಧಾನವೇ?
ಅಬ್ಬರದ ಸಂಗೀತದಲ್ಲಿ ‘ಐಟಂ ಸಾಂಗ್’ ಎಂದು ಕರೆಯಲಾಗುವ ಪ್ರಚೋದಕ ಹಾಡುಗಳು ಪ್ರಧಾನ ಆಗಿರುತ್ತವೆಯೇ ಹೊರತು ಭಕ್ತಿಗೀತೆಗಳು ಖಂಡಿತ ಇರುವುದಿಲ್ಲ. ಗೀತೆಯ ಸಾರ ಅರ್ಥವಾಗಲಿ ಅಥವಾ ಬಿಡಲಿ, ಹಬ್ಬಕ್ಕೆ ಸಂಬಂಧಪಡಲಿ ಅಥವಾ ಸಂಬಂಧಪಡದಿರಲಿ, ನಶೆ ಏರಿದಂತೆ ಒಬ್ಬರ ಮೇಲೆ ಒಬ್ಬರು ಬಿದ್ದು, ಎದ್ದು ಮತ್ತು ಹೆಗಲ ಮೇಲೆ ಕೂತು ಕುಣಿಯುವುದಷ್ಟೇ ಆ ಸಂದರ್ಭಕ್ಕೆ ಮುಖ್ಯ ಆಗಿರುತ್ತದೆ. ಮಿತಿ ಮೀರಿದ ಅಬ್ಬರದ ಸಂಗೀತದಿಂದ ಪುಟಾಣಿ ಮಕ್ಕಳು ಸೇರಿ ಹಿರಿಯರು ಶ್ರವಣಶಕ್ತಿ ಕಳೆದುಕೊಂಡರೂ ಪರವಾಗಿಲ್ಲ, ಹೇಗಾದರೂ ಮಾಡಿ, ಭಕ್ತಿಯ ಪರಾಕಾಷ್ಠೆ ತಲುಪಬೇಕು ಎಂಬುದಷ್ಟೇ ಗುರಿ ಆಗಿರುತ್ತದೆ.
ಇದು ಎಲ್ಲವೂ ಅರ್ಧ ಗಂಟೆ ಅಥವಾ ಒಂದು ಗಂಟೆಯಲ್ಲಿ ಮುಗಿಯುವಂತಹದ್ದು ಅಲ್ಲ. ಎಲ್ಲಿಂದ ಮೆರವಣಿಗೆ ಶುರುವಾಗುತ್ತದೋ, ನಿಗದಿತ ಸ್ಥಳ ತಲುಪುವವರೆಗೆ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳಲಾಗುತ್ತದೆ. ಅಲ್ಲಲ್ಲಿ ನಿಲ್ಲಿಸಿ, ಮೆರವಣಿಗೆ ನಡೆಸಲು ಕಾರಣರಾದವರ, ಸಮಾಜಸೇವಕರ ಅಥವಾ ನಾಯಕರ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಆ ವ್ಯಕ್ತಿಯು ಆ ಕ್ಷಣಕ್ಕೆ ದೇವರಿಗಿಂತ ಪ್ರಮುಖನಾಗಿ ಗೋಚರಿಸುತ್ತಾನೆ. ಆತನ ಕುರಿತು ಗುಣಗಾನವನ್ನು ಅಲ್ಲಿನ ಜನರು, ಆ ಗೌಜುಗದ್ದಲದ ಮಧ್ಯೆಯೇ ಆಲಿಸಬೇಕು. ಈ ಎಲ್ಲದಕ್ಕೂ ಯಾರಾದರೂ ಸ್ವಲ್ಪ ಆಕ್ಷೇಪಣೆ ತೆಗೆದರೆ, ಅಲ್ಲಿನ ಚಿತ್ರಣವೇ ಬೇರೆ ಆಗುತ್ತದೆ. ‘ವರ್ಷಕ್ಕೊಮ್ಮೆ ಹುಡುಗರು ಹೀಗೆ ಕುಣಿಯುತ್ತಾರೆ ಬಿಡ್ರಿ. ಇವರು ಖುಷಿಯಿಂದ ಕುಣಿದರೆ, ನಿಮಗೆ ಕಿರಿಕಿರಿ ಆಗುತ್ತಾ’ ಎಂಬ ಪ್ರಶ್ನೆಯನ್ನು ಹಿರಿಯರೇ ಕೇಳುತ್ತಾರೆ.
ಬಹುಸಂಸ್ಕೃತಿ, ವೈವಿಧ್ಯಮಯ ಆಚಾರ–ವಿಚಾರ, ವಿಭಿನ್ನವಾದ ಜೀವನಶೈಲಿಯುಳ್ಳ ಭಾರತದಲ್ಲಿ ಯಾವುದೇ ಹಬ್ಬ ಅಥವಾ ಉತ್ಸವ ಆಚರಿಸಿದರೂ, ಅದಕ್ಕೆ ಬಹುತ್ವದ ತಳಪಾಯವಿದೆ ಎಂಬ ವಿಷಯದ ಅರಿವು ಇತ್ತೀಚಿನ ದಿನಗಳಲ್ಲಿ ಮಸುಕಾಗುತ್ತಿದೆ. ಇನ್ನೊಬ್ಬರ ಮೇಲೆ ಬಲ ಪ್ರದರ್ಶನ, ವೈಭವದ ದರ್ಶನ ಮಾಡಿಸಲು ಹೋಗಿ, ಆಯಾ ಹಬ್ಬಗಳ ಮಹತ್ವ ಕಳೆಗುಂದುತ್ತಿದೆ. ಅರ್ಥಪೂರ್ಣ ಆಚರಣೆಗಿಂತ ಅನಗತ್ಯ ಅದ್ದೂರಿ ಪ್ರದರ್ಶನ ಮತ್ತು ಹಲವು ಸ್ವರೂಪದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಅಬ್ಬರದ ಸಂಗೀತಕ್ಕೆ ಕಡಿವಾಣ ಹಾಕಲು ಅಥವಾ ಕೆಲವಷ್ಟು ನಿಯಮಗಳ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಪೊಲೀಸರು ತಿಳಿ ಹೇಳಲು ಪ್ರಯತ್ನಿಸಿದರೆ, ಅವರ ವಿರುದ್ಧ ಆಯಾ ಕ್ಷೇತ್ರದ ಜನಪ್ರತಿನಿಧಿಗಳೇ ತಿರುಗಿ ಬೀಳುತ್ತಾರೆ. ನೇರವಾಗಿ ಆಡಳಿತಸೌಧದ ವಿಷಯ ಪ್ರಸ್ತಾಪಿಸಿ, ‘ಈ ಪಕ್ಷದ ಸರ್ಕಾರದಲ್ಲಿ ಯಾವಾಗಲೂ ಇದು ಇದ್ದಿದ್ದೇ’ ಎಂದು ಸಿಟ್ಟಿಗೇಳುತ್ತಾರೆ. ‘ಹುಡುಗರು ತಮಗೆ ಅನ್ನಿಸಿದಂತೆ ಹಬ್ಬ ಆಚರಿಸುತ್ತಾರೆ. ಅವರಿಗೆ ಅಡ್ಡಿಪಡಿಸಿದರೆ, ಹುಷಾರ್’ ಎಂಬ ಎಚ್ಚರಿಕೆಯೂ ನೀಡುತ್ತಾರೆ. ಅಲ್ಲಿಗೆ ‘ಎಲ್ಲವೂ’ ಗೌಣವಾಗುತ್ತದೆ.
ಹಬ್ಬಗಳು ಮನಸ್ಸುಗಳನ್ನು ಬೆಸೆಯಬೇಕು. ಮಾನಸಿಕ ನೆಮ್ಮದಿ ಹೆಚ್ಚಿಸಬೇಕು. ಮನಸ್ಸುಗಳನ್ನು ಮುರಿಯುವಂತಾದರೆ, ಮಾನಸ ಸರೋವರದಲ್ಲಿ ಗದ್ದಲದ ಕಂಪನಗಳನ್ನು ಎಬ್ಬಿಸುವಂತಾದರೆ ಹಬ್ಬ ಎನ್ನುವುದು ಹಬ್ಬವಾಗಿ ಉಳಿದೀತೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.