ಕ್ರಿಕೆಟ್ ಸಜ್ಜನರ ಆಟವಾಗಿ ಈಗ ಉಳಿದಂತಿಲ್ಲ. ಪಾಕಿಸ್ತಾನದ ಆಟಗಾರರ ಉದ್ಧಟತನದ ನಡವಳಿಕೆಯಲ್ಲಂತೂ ಕ್ರೀಡಾಸ್ಫೂರ್ತಿಯ ಲವಲೇಶವೂ ಇಲ್ಲ.
1980ರ ದಶಕದಲ್ಲಿ ವೆಸ್ಟ್‌ಇಂಡೀಸ್ ಹಾಗೂ ಪಾಕಿಸ್ತಾನದ ನಡುವಿನ ಟೆಸ್ಟ್ ಪಂದ್ಯದಲ್ಲಿ ವಿವಿಯನ್ ರಿಚರ್ಡ್ಸ್ ಅವರಿಗೆ ವಸೀಂ ಅಕ್ರಮ್ ಬೌನ್ಸರ್ ಹಾಕಿದರು. ಚೆಂಡು ಅಪ್ಪಳಿಸಿ ರಿಚರ್ಡ್ಸ್ ತೊಟ್ಟಿದ್ದ ಟೋಪಿ ಕೆಳಗೆ ಬಿತ್ತು. ವಸೀಂ ಆಗಿನ್ನೂ ಯುವಕ. ಹರುಕುಮುರುಕು ಇಂಗ್ಲಿಷ್‌ನಲ್ಲಿ ಏನೋ ಗೊಣಗುಟ್ಟಿದರು. ತಕ್ಷಣವೇ ರಿಚರ್ಡ್ಸ್ ತಮ್ಮ ತಂಟೆಗೆ ಬಂದರೆ ಕೊಂದುಬಿಡುವುದಾಗಿ ಖಡಕ್ಕಾಗಿ ಹೇಳಿದರು.
ದಿನದಾಟ ಮುಗಿದ ಮೇಲೆ ಡ್ರೆಸಿಂಗ್ ಕೋಣೆಯ ಕದ ಬಡಿದ ಸದ್ದು. ಹೋಗಿ ತೆಗೆದರೆ, ಎದುರಲ್ಲಿ ಅಂಗಿಯನ್ನೇ ಹಾಕದೆ ಅರೆನಗ್ನವಾಗಿ ನಿಂತಿದ್ದ ರಿಚರ್ಡ್ಸ್. ಕದ ತೆರೆದ ವಸೀಂ ಎದೆಬಡಿತ ಜೋರಾಯಿತು. ಆದರೆ, ನಡೆದದ್ದೇ ಬೇರೆ. ವಸೀಂ ಎಸೆತದ ಸಹಜ ವೇಗವನ್ನು ವೆಸ್ಟ್‌ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ ಬಾಯಿತುಂಬಾ ಹೊಗಳಿದರು. ವಸೀಂಗೆ ಹೋದ ಜೀವ ಮರಳಿದಂತಾಯಿತು.
ಕ್ರಿಕೆಟ್ ಸಜ್ಜನರ ಆಟ ಎಂದು ಹೆಸರಾಗಿರುವುದು ಯಾಕೆ ಎನ್ನುವುದಕ್ಕೆ ಇಂತಹ ಅಸಂಖ್ಯ ಉದಾಹರಣೆಗಳಿವೆ. ಆದರೆ, ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಗಳಲ್ಲಿ ಸನ್ನಡತೆಗೆ ಹುಡುಕಾಡಬೇಕಾದ ಪರಿಸ್ಥಿತಿ ಬಂದಿದೆ. ಅದರಲ್ಲೂ ಮೊದಲೇ ಅಸ್ತವ್ಯಸ್ತವಾಗಿರುವಂತೆ ಕಾಣುತ್ತಿರುವ ಪಾಕಿಸ್ತಾನದ ಆಟಗಾರರು ಹೊಣೆಗೇಡಿಗಳಂತೆ ವರ್ತಿಸುತ್ತಿದ್ದಾರೆ.
ಪಾಕಿಸ್ತಾನದ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಭಾರತದ ಎದುರು ಅರ್ಧಶತಕ ಹೊಡೆದದ್ದು ಮೆಚ್ಚತಕ್ಕದ್ದು. ಆ ಸಾಧನೆ ಮಾಡಿದ ನಂತರ ಅವರು ಬ್ಯಾಟನ್ನು ಎಕೆ–47 ರೀತಿಯಲ್ಲಿ ಹಿಡಿದು, ಗುಂಡಿನ ಮೊರೆತಗೈಯುವಂತಹ ಸಂಜ್ಞೆ ಮಾಡಿದ್ದು ಉದ್ಧಟತನ. ಅದು ಟ್ರೋಲ್‌ಗೆ ಒಳಗಾದ ಮೇಲೂ, ತಾವು ಸಹಜವಾಗಿ ಹಾಗೆ ಸೆಲೆಬ್ರೇಟ್ ಮಾಡಿದ್ದೇ ವಿನಾ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಂತೂ ಕ್ರೀಡಾಸ್ಫೂರ್ತಿ ಅವರಲ್ಲಿ ಮಣ್ಣು ಪಾಲಾಗಿದೆ ಎನ್ನುವುದಕ್ಕೆ ಸಾಕ್ಷಿ.
ಬೌಂಡರಿ ಗೆರೆಯ ಬಳಿ ನಿಂತಿದ್ದ ಹ್ಯಾರಿಸ್ ರವೂಫ್ ಅವರನ್ನು ನೋಡಿಕೊಂಡು ಕೆಲವು ಅಭಿಮಾನಿಗಳು ‘ಕೊಹ್ಲಿ ಕೊಹ್ಲಿ’ ಎಂದು ಚೀರಿದಾಗ ಅವರಿಂದ ಬಂದ ಪ್ರತಿಕ್ರಿಯೆ ಇನ್ನೂ ಆತಂಕಕಾರಿಯಾಗಿತ್ತು. ಅವರು ‘ಆರು’ ಹಾಗೂ ‘ಸೊನ್ನೆ’ ಎಂದು ಬೆರಳುಗಳಿಂದ ಇಶಾರೆ ಮಾಡಿ ತೋರಿದರು. ‘ಪಹಲ್ಗಾಮ್ ದಾಳಿಯ ನಂತರ ನಡೆದ ಸಂಘರ್ಷದಲ್ಲಿ ಪಾಕಿಸ್ತಾನವು ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತು, ಭಾರತ ಉರುಳಿಸಿದ್ದು ಸೊನ್ನೆ ಎನ್ನುವುದನ್ನು ರವೂಫ್ ಆ ರೀತಿ ವ್ಯಕ್ತಪಡಿಸಿದ್ದಾರೆ’ ಎಂದು ಅನೇಕರು ಅದನ್ನು ಬಗೆದು ನೋಡಿದರು.
ಏಷ್ಯಾ ಕಪ್‌ನ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನವು ಜಸ್‌ಪ್ರೀತ್ ಬೂಮ್ರಾ ಅವರನ್ನು ಆತ್ಮವಿಶ್ವಾಸದಿಂದ ದಂಡಿಸಿತು. ಸಾಹಿಬ್‌ಜಾದಾ ಅವರಂತೂ ಭಾರತದ ದಿಗ್ಗಜ ಬೌಲರ್‌ಗೆ ದೊಡ್ಡ ಹೊಡೆತಗಳ ಮೂಲಕವೇ ಉತ್ತರ ಕೊಟ್ಟರು. ಆದರೆ, ಶಿವಂ ದುಬೆ ಅವರಂತಹ ಆಲ್‌ರೌಂಡರ್ ಹಾಕಿದ ಎಸೆತಗಳಿಗೆ ಆ ತಂಡದ ಬ್ಯಾಟ್ಸ್‌ಮನ್‌ಗಳು ಸಜ್ಜಾಗಿರಲಿಲ್ಲ ಎನ್ನುವುದು ಎದ್ದುಕಂಡಿತು.
ಬೌಲಿಂಗ್ ವಿಭಾಗದಲ್ಲಂತೂ ಪಾಕಿಸ್ತಾನ ಬಸವಳಿದಂತೆ ಕಾಣುತ್ತಿದೆ. ಶಾಹೀನ್ ಶಾ ಆಫ್ರಿದಿ ಅವರ ಮೊದಲ ಎಸೆತವನ್ನೇ ಅಭಿಷೇಕ್ ಶರ್ಮಾ ಸಿಕ್ಸರ್‌ಗೆ ಎತ್ತಿದ ನಂತರ ಅವರು ಲಯ ತಪ್ಪಿದಂತೆ ಬೌಲಿಂಗ್ ಮಾಡಿದ್ದು ಸ್ಪಷ್ಟ. ಏಷ್ಯಾ ಕಪ್‌ನಿಂದ ಹೊರನಡೆಯುವುದಾಗಿ ಬೆದರಿಸುವುದೂ ಸೇರಿದಂತೆ ಕ್ರಿಕೆಟೇತರ ಕಾರಣಗಳಿಂದಾಗಿಯೇ ಪಾಕಿಸ್ತಾನ ಸುದ್ದಿಯಾಗುತ್ತಿರುವುದು ಕ್ರೀಡಾಪ್ರೇಮಿಗಳಿಗಂತೂ ಸ್ವೀಕಾರಾರ್ಹ ವಿದ್ಯಮಾನವಲ್ಲ.
ಪಾಕಿಸ್ತಾನವು ಭಾರತದ ಪಾಲಿಗೆ ಹೇಳಿಕೊಳ್ಳುವಂತಹ ಸ್ಪರ್ಧಿ ಅಲ್ಲವೇ ಅಲ್ಲ ಎಂದು ಸೂರ್ಯಕುಮಾರ್ ಯಾದವ್ ಹೇಳಿರುವುದಾಗಲೀ, ‘ಫೈನಲ್‌ನಲ್ಲಿ ಭಾರತವನ್ನು ನೋಡಿಕೊಳ್ಳುತ್ತೇವೆ’ ಎಂದು ರೌಫ್ ಆಡಿರುವ ವೀರಾವೇಶದ ಮಾತಾಗಲೀ ಕ್ರೀಡಾಪಟುಗಳ ಘನತೆಗೆ ತಕ್ಕುದಲ್ಲ.
ಟಾಸ್ ಹಾಕಿದ ನಂತರ ಭಾರತ– ಪಾಕಿಸ್ತಾನ ತಂಡಗಳ ನಾಯಕರು ಕೈಕುಲುಕುವುದಿಲ್ಲ. ಪಂದ್ಯ ಮುಗಿದ ನಂತರವೂ ಹಸ್ತಲಾಘವದ ಮಾತಿಲ್ಲ. ಆದರೆ, ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ವಸೀಂ ಅಕ್ರಮ್ ಎದುರಾದರೆ, ಅವರನ್ನು ಮಾತನಾಡಿಸಿ ಅಭಿಷೇಕ್ ಶರ್ಮಾ ಪುಲಕಗೊಳ್ಳುತ್ತಾರೆ. ಭಾರತದ ಸಹವರ್ತಿಗಳ ಜೊತೆ ಕುಳಿತು ಅದೇ ವಸೀಂ ಅಕ್ರಮ್ ಪಂದ್ಯದ ಸೂಕ್ಷ್ಮಗಳ ಕುರಿತು ತಲಸ್ಪರ್ಶಿಯಾಗಿ ಮಾತನಾಡುತ್ತಾರೆ.
ಕ್ರಿಕೆಟ್ ಎನ್ನುವುದೀಗ ಮಾರುಕಟ್ಟೆ ಪ್ರಣೀತ ಆಗಿರುವಾಗ, ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವುದಿಲ್ಲ ಎಂಬ ಘೋಷವಾಕ್ಯ ಈಗ ದೇಶಭಕ್ತಿಯ ಢೋಂಗಿ ಮುಖವಾಡದಂತೆ ಕಾಣುತ್ತಿದೆ. ಆಡುತ್ತಿರುವುದೇ ನಿಜ ಎಂದ ಮೇಲೆ ಹಸ್ತಲಾಘವಕ್ಕೇಕೆ ಬಿಗುಮಾನ?
ಆತ್ಮವಿಶ್ವಾಸವೇ ಮಣ್ಣಲ್ಲಿ ಹೂತಂತೆ ಕಾಣುತ್ತಿರುವ ತಂಡವನ್ನು ಮೇಲೆತ್ತಲು ಅಗತ್ಯವಿರುವ ಸೂಕ್ಷ್ಮಗ್ರಾಹಿ ಒಳನೋಟವನ್ನು ಬಿಟ್ಟು, ಉಢಾಳರಂತೆ ಶಸ್ತ್ರಾಸ್ತ್ರ, ವಿಮಾನ ಪತನದ ಸಂಜ್ಞೆಗಳನ್ನು ಮಾಡುವ ಆಟಗಾರರ ಮನಃಸ್ಥಿತಿ ನೋಡಿದರೆ ‘ವಿಕೃತಿ’ ಎನ್ನದೇ ವಿಧಿಯಿಲ್ಲ.
‘ಐ ವಿಲ್ ಕಿಲ್ ಯೂ’ ಎಂದು ಮೈದಾನದಲ್ಲಿ ಕೆಕ್ಕರಿಸಿ ನೋಡಿ, ಆಮೇಲೆ ‘ಶಹಬ್ಬಾಸ್ ಹುಡುಗನೇ’ ಎಂದು ವಸೀಂ ಅಕ್ರಮ್ ಬೆನ್ನುತಟ್ಟಿದ್ದ ರಿಚರ್ಡ್ಸ್ ಅವರಂತಹ ದಿಗ್ಗಜರೆಲ್ಲಿ, ಈ ಕಾಲದ ತುಡುಗು ಬುದ್ಧಿಯ ಆಟಗಾರರೆಲ್ಲಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.