ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 2ಬಿಯಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಿರುವುದರ ಕುರಿತ ಚರ್ಚೆ ಸಂಸತ್ತಿನವರೆಗೂ ವ್ಯಾಪಿಸಿದೆ. 1994ರಿಂದ ಜಾರಿಯಲ್ಲಿರುವ ಈ ಮೀಸಲಾತಿಗೆ ಸಂವಿಧಾನದ ಮಾನ್ಯತೆ ಇಲ್ಲವೇ? ಇದು ಚರ್ಚೆಯ ಮೂಲಧಾತು.
ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷಗಳು ಒಂದೊಂದು ತುದಿಯಲ್ಲಿ ನಿಂತು ಚರ್ಚೆಗೆ ಇಳಿದಿವೆ. ತಮಗೆ ಆ ಸಮುದಾಯದ ವೋಟೇ ಬೇಡ ಎಂಬ ನಕಾರಾತ್ಮಕ ನಿಲುವಿನ ಬಿಜೆಪಿ ಒಂದೆಡೆಯಾದರೆ, ಇಡಿಯಾಗಿ ದಕ್ಕುವ ಸಗಟು ಮತಗಳಿಗಾಗಿ ಏನೂ ಮಾಡಲು ಸಿದ್ಧವಿರುವ ಕಾಂಗ್ರೆಸ್ ಇನ್ನೊಂದೆಡೆ.
ಮುಸ್ಲಿಮರನ್ನು ಹಿಂದುಳಿದ ವರ್ಗವಾಗಿ ಗುರುತಿಸುವ ಕುರಿತ ಚರ್ಚೆ ಮೊದಲಾದದ್ದು 1953ರಲ್ಲಿ. ಆಗ ಕೇಂದ್ರ ಸರ್ಕಾರ ರಚಿಸಿದ್ದ ಕಾಕಾ ಕಾಲೇಲ್ಕರ್ ಹಿಂದುಳಿದ ವರ್ಗಗಳ ಆಯೋಗವು ಮುಸ್ಲಿಂ ಸಮಾಜವನ್ನು ಇಡಿಯಾಗಿ ಹಿಂದುಳಿದ ವರ್ಗ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಒಬಿಸಿ ಮೀಸಲಾತಿ ವಿಷಯದಲ್ಲಿ ಮಂಡಲ್ ಆಯೋಗದ ವರದಿಯನ್ನು ಐತಿಹಾಸಿಕ ಎಂದೇ ಗುರುತಿಸಲಾಗುತ್ತದೆ. ಮಂಡಲ್ ಆಯೋಗವೂ ದೇಶದ ಮಟ್ಟದಲ್ಲಿ ಮುಸ್ಲಿಮರ 82 ಉಪಜಾತಿಗಳನ್ನು ಹಿಂದುಳಿದವರ ಪಟ್ಟಿಯಲ್ಲಿ ಗುರುತಿಸಿತು. ಆದರೆ ಇಡಿಯಾಗಿ ಮುಸ್ಲಿಮರನ್ನು ಒಬಿಸಿ ಎಂದು ಗುರುತಿಸಲು ನಿರಾಕರಿಸಿತು. ಕೇಂದ್ರದ ಒಬಿಸಿ ಪಟ್ಟಿಯು ಈಗಲೂ ಮಂಡಲ್ ಆಯೋಗದ ನಿರ್ದೇಶನದಂತೆಯೇ ಇದೆ.
2010ರಲ್ಲಿ ಯುಪಿಎ ಸರ್ಕಾರದ ಆದೇಶದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ‘ಕಚ್ಚಿ ಮೆಮನ್, ನವಾಯತ್, ಬೊಹ್ರಾ, ಸಯ್ಯದ್, ಶೇಖ್, ಪಠಾನ್, ಮೊಘಲ್, ಮಹಮದೀಯ, ಕೊಂಕಣಿ ಜಮಾಯತಿ- ಈ ಉಪಜಾತಿಗಳನ್ನು ಬಿಟ್ಟು ಉಳಿದ ಉಪಜಾತಿಗಳು ಒಬಿಸಿ ಪಟ್ಟಿಯಲ್ಲಿ ಇರುತ್ತವೆ’ ಎಂದು ಹೇಳಲಾಗಿದೆ.
ಚಿನ್ನಪ ರೆಡ್ಡಿ ಆಯೋಗದ ವರದಿಯ ತರುವಾಯ 1994ರಲ್ಲಿ ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಒಬಿಸಿಯೊಳಗೆ ಪ್ರವೇಶಿಸಿತು. ಒಬಿಸಿ ಚಹರೆಯ ಮುಸ್ಲಿಂ ಉಪಜಾತಿಗಳಾದ ಪಿಂಜಾರ, ನದಾಫ್, ಲದಾಫ್, ಕಸಬ್, ಕಸಾಯಿ, ಕಾಟಿಕ್, ಒಟಾರಿ, ನಾಲ್ಬಂದ್, ಬಾಜಿಗಾರ್, ಜೋಹರಿ, ದರ್ಜಿ, ಫುಲ್ ಮಾಲಿ, ಚಪ್ಪರ್ ಬಂದ್, ದರ್ವೇಶಿಯಂತಹ 20 ಉಪಜಾತಿಗಳು ಪ್ರವರ್ಗ 1 ಮತ್ತು 2ಎಯಲ್ಲಿ ಮೀಸಲಾತಿ ಪಡೆಯುತ್ತಿವೆ. ಇದಲ್ಲದೇ 2ಬಿಯಲ್ಲಿ ಮುಖ್ಯಧಾರೆಯ ಮುಸ್ಲಿಂ ಉಪಜಾತಿಗಳಿಗೆ ಶೇ 4ರಷ್ಟು ಮೀಸಲಾತಿ ಕೊಡಲಾಗಿದೆ. ಈ 2ಬಿಯಲ್ಲಿ ನೀಡಿರುವ ಶೇ 4ರಷ್ಟು ಮೀಸಲಾತಿಯೇ ಈಗ ವಿವಾದದ ಕೇಂದ್ರಬಿಂದು.
ಉತ್ತರಪ್ರದೇಶ, ಬಿಹಾರ, ತಮಿಳುನಾಡು, ಕೇರಳ ಈ ರಾಜ್ಯಗಳು ಒಬಿಸಿ ಚಹರೆಯ ಮುಸ್ಲಿಂ ಉಪಜಾತಿಗಳನ್ನು ಗುರುತಿಸಿ ಮೀಸಲಾತಿ ನೀಡಿವೆ. ಕಾಂಗ್ರೆಸ್ ನೇತೃತ್ವದ ಸರ್ಕಾರವು ಅವಿಭಜಿತ ಆಂಧ್ರ ಪ್ರದೇಶದಲ್ಲಿ 2004ರಲ್ಲಿ ಮುಸ್ಲಿಂ ಸಮುದಾಯಕ್ಕೆ ಇಡಿಯಾಗಿ ಶೇ 5ರಷ್ಟು ಮೀಸಲಾತಿ ಘೋಷಿಸಿತು. ಆದರೆ ಅಲ್ಲಿನ ಹೈಕೋರ್ಟ್ ಅದನ್ನು ರದ್ದು ಮಾಡಿತು. ಹಟಕ್ಕೆ ಬಿದ್ದ ಸರ್ಕಾರ, ಸುಗ್ರೀವಾಜ್ಞೆ ಮೂಲಕ ಮೀಸಲಾತಿಯನ್ನು ಜಾರಿ ಮಾಡಿತು. ಐವರು ನ್ಯಾಯ ಮೂರ್ತಿಗಳ ಹೈಕೋರ್ಟ್ ಪೀಠ ಇದನ್ನೂ ರದ್ದುಪಡಿಸಿ, ಇಡಿಯಾಗಿ ಮುಸ್ಲಿಮರಿಗೆ ಮೀಸಲಾತಿ ಕೊಡುವುದು ಅಸಾಂವಿಧಾನಿಕ ಎಂದು ಘೋಷಿಸಿತು. ಕೊನೆಗೆ ಸರ್ಕಾರವು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿತು. ಈ ನಡುವೆ ಪಶ್ಚಿಮ ಬಂಗಾಳ ಸರ್ಕಾರ 77 ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಿತು. ಅದರಲ್ಲಿ 75 ಮುಸ್ಲಿಂ ಉಪಜಾತಿಗಳೇ ಇದ್ದವು. ಈ ಪ್ರಕರಣವೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. 2024ರ ಡಿಸೆಂಬರ್‌ನಲ್ಲಿ ದ್ವಿಸದಸ್ಯ ಪೀಠವು ಇಡಿಯಾಗಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಡಲಾಗದು, ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ತೀರ್ಪು ನೀಡಿತು.
2023ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರ ಚುನಾವಣೆಯ ಹೊಸ್ತಿಲಲ್ಲಿ 2ಬಿ ಮೀಸಲಾತಿಯನ್ನು ರದ್ದುಪಡಿಸಿತು. ಇದೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ವಿಚಾರಣೆಯ ಸಂದರ್ಭದಲ್ಲಿ, ಚುನಾವಣೆಯಲ್ಲಿ ಮತದಾರರನ್ನು ಪ್ರಲೋಭಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ವಾದ ಬಂದಾಗ, ರಾಜ್ಯ ಸರ್ಕಾರವು ಅಫಿಡವಿಟ್ ಸಲ್ಲಿಸಿ, ಚುನಾವಣೆಯ ತರುವಾಯ ಆದೇಶ ಜಾರಿ ಮಾಡುವುದಾಗಿ ಹೇಳಿತು. ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಏರಿದ್ದರಿಂದ 2ಬಿ ಮೀಸಲಾತಿ ಯಥಾಸ್ಥಿತಿಯಲ್ಲಿದೆ.
ರಾಜ್ಯ ಸರ್ಕಾರವು ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಸರ್ಕಾರಿ ಗುತ್ತಿಗೆ ಹಂಚಿಕೆಯಲ್ಲಿ ಜಾರಿ ಮಾಡಿತ್ತು. ಈ ಹಂಚಿಕೆಯನ್ನು ಒಬಿಸಿ ಗುಂಪುಗಳಿಗೆ ವಿಸ್ತರಿಸಿತು. ಪ್ರವರ್ಗ 1 ಮತ್ತು 2ಎ ಗುಂಪಿನಲ್ಲಿರುವ 19 ನೈಜ ಮುಸ್ಲಿಂ ಹಿಂದುಳಿದ ಜಾತಿಗಳಿಗೆ ಗುತ್ತಿಗೆ ಮೀಸಲಾತಿ ಹಂಚಿಕೆಯ ಬಗ್ಗೆ ತಕರಾರಿಲ್ಲ. ಆದರೆ 2ಬಿಯಲ್ಲಿ ಬರುವ ಮುಖ್ಯಧಾರೆಯ ಮುಸ್ಲಿಮರನ್ನು ಒಬಿಸಿ ಎಂದು ಗುರುತಿಸುವುದು ತಕರಾರಿಗೆ ಕಾರಣವಾಗಿದೆ. ಹಾಗಾದರೆ ಮುಖ್ಯಧಾರೆಯ ಮುಸ್ಲಿಮರು ಮೀಸಲಾತಿಯಿಂದಲೇ ಹೊರಗುಳಿಯುತ್ತಾರೆಯೇ ಎಂಬ ಪ್ರಶ್ನೆ ಬರುತ್ತದೆ. ಹಾಗೇನಿಲ್ಲ, 2018ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ಶೇ 10ರ ಇಡಬ್ಲ್ಯುಎಸ್ ಮೀಸಲಾತಿಯು ಎಸ್‌ಸಿ, ಎಸ್‌ಟಿ, ಒಬಿಸಿ ಅಲ್ಲದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಮುಸ್ಲಿಮರೂ ಸೇರಿದಂತೆ ಎಲ್ಲ ಅಲ್ಪಸಂಖ್ಯಾತರನ್ನೂ ಒಳಗೊಳ್ಳುತ್ತದೆ. ಕರ್ನಾಟಕದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ 2ಬಿ ಮಾತ್ರವಲ್ಲ 3ಎ, 3ಬಿಯಲ್ಲಿರುವ ಎಲ್ಲ ಜಾತಿಗಳೂ ನೈಜ ಒಬಿಸಿ ಜಾತಿಗಳಲ್ಲ. ಹೀಗಾಗಿ, ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಸಿಗುತ್ತಿರುವ ಶೇ 32ರಷ್ಟು ಮೀಸಲಾತಿಯಲ್ಲಿ ನೈಜ ಒಬಿಸಿಗಳಿಗೆ ಸಿಗುತ್ತಿರುವುದು ಶೇ 19ರಷ್ಟು ಪಾಲು ಮಾತ್ರ ಎನ್ನುವುದನ್ನೂ ಅರ್ಥ ಮಾಡಿಕೊಳ್ಳಬೇಕು.
ಲೇಖಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.