
ವರನಟ ರಾಜ್‌ಕುಮಾರ್ ಅವರು ಪ್ರೇಕ್ಷಕರನ್ನು ‘ಅಭಿಮಾನಿ ದೇವರುಗಳು’ ಎಂದರು. ಹಿರಿಯ ನಟ ರವಿಚಂದ್ರನ್ ಅವರ ಪಾಲಿಗೆ, ಪ್ರೇಕ್ಷಕರು ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು! ‘ಸಿನಿಮಾ ಚಿಕಿತ್ಸೆ’ ಕುರಿತ ಅವರ ಚಿಂತನೆ ಹೀಗಿದೆ:
‘ಪ್ರತಿ ಸಿನಿಮಾವನ್ನು ಚಿತ್ರಮಂದಿರಕ್ಕೆ ತರುವುದು ಹೆರಿಗೆ ನೋವಿನಂತೆಯೇ. ಆಪರೇಷನ್ ಮಾಡುವುದು ಪ್ರೇಕ್ಷಕರು. ಆಪರೇಷನ್ ಮಾಡದೇ ಇದ್ದರೆ ಸಿನಿಮಾಗಳು ಅಲ್ಲಲ್ಲೇ ಸತ್ತು ಹೋಗುತ್ತವೆ. ಮೊದಲು ಅವುಗಳನ್ನು ಬದುಕಿಸಿರಿ. ಪ್ರೇಕ್ಷಕರಾಗಿ ಸಿನಿಮಾಗೆ ಹೋಗಿ, ವಿಮರ್ಶೆ ಮಾಡಲು ಹೋಗಬೇಡಿ. ಸಿನಿಮಾ ಚೆನ್ನಾಗಿಲ್ಲ ಅಂದ್ರೆ ನೂರು ರೂಪಾಯಿ ನಷ್ಟ ಮಾಡಿಕೊಳ್ಳಿ, ಪರವಾಗಿಲ್ಲ. ಆಸೆ ಪಟ್ಟು ಸಿನಿಮಾ ಮಾಡುವವನಿಗೆ ನೂರು ರೂಪಾಯಿ ಕೊಡುವುದಕ್ಕೆ ಆಗುವುದಿಲ್ಲವೆ? ಒಂದಷ್ಟು ಸಿನಿಮಾಗಳನ್ನು ಗೆಲ್ಲಿಸಿ, ನಿಮ್ಮ ಗಂಟೇನೂ ಹೋಗುವುದಿಲ್ಲ...’
ಚಲನಚಿತ್ರವೊಂದರ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ರವಿಚಂದ್ರನ್ ಅವರು ಕೊಂಚ ಏರುದನಿಯಲ್ಲಿಯೇ ಆಡಿದ ಮಾತುಗಳು ಈ ಹೊತ್ತಿನ ಚಿತ್ರೋದ್ಯಮದ ಸ್ಥಿತಿ ಹಾಗೂ ಹತಾಶೆಯನ್ನು ಸೂಚಿಸುವಂತಿವೆ.
ಚಲನಚಿತ್ರ ನಿರ್ಮಾಣ ಮಾಡಿದವರೆಲ್ಲರೂ ಮಾಧ್ಯಮದ ಮೇಲಿನ ಪ್ರೀತಿ, ಕನಸು, ವ್ಯವಹಾರದ ದೃಷ್ಟಿಯಿಂದಲೇ ಸಿನಿಮಾ ಮಾಡಿರುತ್ತಾರೆ ಎನ್ನುವುದನ್ನು ಒಪ್ಪೋಣ. ಆದರೆ, ಉದ್ಯಮವನ್ನು ಉದ್ಧಾರ ಮಾಡಲಿಕ್ಕಾಗಿ ಪ್ರೇಕ್ಷಕ ಸಿನಿಮಾ ನೋಡಬೇಕೆಂದು ಬಯಸುವುದನ್ನು ಹೇಗೆ ಒಪ್ಪುವುದು? ತಾರ್ಕಿಕವಾಗಿ ಇದು ಅಸಾಧ್ಯವೂ ಹೌದು. ರವಿಚಂದ್ರನ್ ಅವರ ಮಾತು ಒಪ್ಪುವುದಾದರೆ, ಪ್ರೇಕ್ಷಕ ಬಿಡುಗಡೆ ಆಗುವ ಎಲ್ಲ ಸಿನಿಮಾ ನೋಡಬೇಕು. ಅದು ಸಾಧ್ಯವೆ?
ಇಪ್ಪತ್ತೆಂಟು ದಿನಗಳಿರುವ ಈ ಫೆಬ್ರುವರಿಯ ಕಳೆದ ಮೂರು ಶುಕ್ರವಾರಗಳಲ್ಲಿ 26 ಸಿನಿಮಾಗಳು ತೆರೆಕಂಡಿವೆ. ಫೆ. 27ರಂದು ಮತ್ತೆ ಐದಾರು ಸಿನಿಮಾ ತೆರೆಕಾಣುತ್ತಿವೆ. ಅಂದರೆ, ಫೆಬ್ರುವರಿಯಲ್ಲಿ ದಿನಗಳ ಸಂಖ್ಯೆಗಿಂತ ತೆರೆಕಂಡ ಸಿನಿಮಾಗಳೇ ಹೆಚ್ಚು. ರವಿಚಂದ್ರನ್ ಅವರ ಮಾತನ್ನು ಅನುಸರಿಸಿದರೆ, ಇಷ್ಟು ಸಿನಿಮಾಗಳನ್ನು ನೋಡಲು ಪ್ರೇಕ್ಷಕ ಕನಿಷ್ಠ ₹3,000 ಎತ್ತಿಡಬೇಕು. (ನೂರು ರೂಪಾಯಿಗೆ ಸಿನಿಮಾ ನೋಡಿ ಬರಲು ಸಾಧ್ಯವಿಲ್ಲ ಎನ್ನುವುದು ಬೇರೆ ಮಾತು). ಜೊತೆಗೆ ತಿಂಗಳಿಗೆ 70–80 ಗಂಟೆಗಳನ್ನು ಸಿನಿಮಾ ನೋಡಲು ಮೀಸಲಿಡಬೇಕು. ವರ್ಷಕ್ಕೆ ಕನಿಷ್ಠ 200–210 ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಷ್ಟೂ ಸಿನಿಮಾ ನೋಡದೇ ಹೋದರೆ, ರವಿಚಂದ್ರನ್ ಅವರ ಮಾತಿನ ಇಂಗಿತದಂತೆ ‘ಶಿಶು ಹತ್ಯೆ’ಯ ಪಾಪ ತಟ್ಟುತ್ತದೆ!
ಸಿನಿಮಾ ಹಸಿವೆ ಇದ್ದಂತೆ. ಹೋಟೆಲ್‌ನ ಬಿಲ್‌ಕೌಂಟರ್ ಪಕ್ಕದಲ್ಲಿ ತಟ್ಟೆಗಳಲ್ಲಿ ತಿಂಡಿಗಳನ್ನು ಇರಿಸಿ ಪ್ಲಾಸ್ಟಿಕ್ ಹಾಳೆಯಲ್ಲಿ ಮುಚ್ಚಿಡಲಾಗಿರುತ್ತದೆ. ಆ ದಿನದ ವಿಶೇಷ ತಿನಿಸುಗಳವು. ಅವುಗಳನ್ನು ನೋಡಿದ ಗ್ರಾಹಕರು ತಮ್ಮಿಷ್ಟದ ಖಾದ್ಯ ಖರೀದಿಸಬಹುದು, ಖರೀದಿಸದೆಯೂ ಇರಬಹುದು. ಅದು ಅವನ ಹಸಿವೆ, ರುಚಿಪ್ರಜ್ಞೆ ಹಾಗೂ ಕೊಳ್ಳುವ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು. ಸಿನಿಮಾ ಕೂಡ ಹೀಗೆಯೇ. ಪ್ರೇಕ್ಷಕನೊಬ್ಬ ಚಿತ್ರಮಂದಿರಕ್ಕೆ ಹೋಗುವ ಮೊದಲು ಹತ್ತಾರು ಬಾರಿ ಯೋಚಿಸುತ್ತಾನೆ. ಹೀರೊ–ನಿರ್ದೇಶಕ ಯಾರು? ಕಥೆ ಹೇಗಿದೆ? ಟೀಸರ್–ಟ್ರೇಲರ್ ಹೇಗಿದೆ? ನೋಡಿ ಬಂದವರ ಅಭಿಪ್ರಾಯವೇನು? ಹೀಗೆ ಎಲ್ಲವನ್ನೂ ಗಮನಿಸಿಯೇ ಚಿತ್ರಮಂದಿರಕ್ಕೆ ಹೆಜ್ಜೆ ಇಡುತ್ತಾನೆ. ಒಟಿಟಿ ಎಂಬ ಆನ್‌ಲೈನ್ ಅಡುಗೆಕೋಣೆಯಲ್ಲಿ ಬಹುತೇಕ ಎಲ್ಲಾ ಪದಾರ್ಥಗಳ ರುಚಿ ನೋಡಿರುವ ಪ್ರೇಕ್ಷಕ ಚಿತ್ರಮಂದಿರದೊಳಗೆ ಹೆಜ್ಜೆ ಇಟ್ಟಾಗ ಹೊಸ ರುಚಿ ಬಯಸುತ್ತಾನೆ. ಹಳೆಯದನ್ನೇ ಬಡಿಸಿದರೆ ಕಮೆಂಟ್, ಡಿಸ್‌ಲೈಕ್ ಮಾಡದೆ ಆತ ಮತ್ತಿನ್ನೇನು ಮಾಡಲು ಸಾಧ್ಯ. ರುಚಿ ಇಲ್ಲದ ತಿಂಡಿ–ಊಟವನ್ನು ಉಚಿತವಾಗಿಯೂ ಗಂಟಲಿಗಿಳಿಸಿಕೊಳ್ಳಲಾರ. ಜೇಬಲ್ಲಿ ನೂರು ರೂಪಾಯಿ ಇದೆ ಎಂದು ಸುಮ್ಮನೆ ಸಿನಿಮಾಗೆ ಹೋಗುವ ಕಾಲವೂ ಇದಲ್ಲ.
ಪ್ರೇಕ್ಷಕರನ್ನು ಸಿನಿಮಾ ನೋಡಲು ಒತ್ತಾಯಿಸುವ ಬದಲು, ಸಿನಿಮಾಗಳ ಬಿಡುಗಡೆಯ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸುವುದು ಮುಖ್ಯ. ಸಿನಿಮಾ ಬಿಡುಗಡೆ ಸಂಖ್ಯೆಗೆ ಕಡಿವಾಣ ಹಾಕುವವರು ಯಾರು? ಯಾರ ಬಳಿಯೂ ಇದಕ್ಕೆ ಉತ್ತರವಿಲ್ಲ. ಎಲ್ಲರೂ ಸ್ವತಂತ್ರರು. ಅವರವರ ಇಷ್ಟ ಎನ್ನುತ್ತಾರೆ ಆಯಾ ಸಿನಿಮಾದ ನಿರ್ಮಾಪಕರು. ಹಾಗಿದ್ದಾಗ ಸಿನಿಮಾ ಸೋತಾಗ ಜನರತ್ತ ಬೊಟ್ಟು ಮಾಡಿ ಪ್ರಯೋಜನ ಏನು? ಜನರಿಗೆ ಸಿನಿಮಾ ನೋಡಿ ಎಂದು ಮನವಿ ಮಾಡಿ, ಏರುದನಿಯಲ್ಲಿ ಮಾತನಾಡಿ ಉಪಯೋಗವೇನು?
ತಾವು ಮಾಡಿದ್ದನ್ನು ನೋಡಬೇಕು ಎನ್ನುವ ಸಿನಿಮಾ ಮಂದಿಯ ಧೋರಣೆಯಲ್ಲಿ ಸಿನಿಮಾ ಪ್ರೀತಿಗಿಂತಲೂ ಪ್ರೇಕ್ಷಕರ ಬಗೆಗಿನ ತಿರಸ್ಕಾರವೇ ಎದ್ದು ಕಾಣಿಸುತ್ತದೆ. ಸಿನಿಮಾ ಮಾಡುವವರು ಯಾಕಾಗಿ ಸಿನಿಮಾ ಮಾಡುತ್ತಿದ್ದೇವೆ ಎಂದು ತಮ್ಮನ್ನು ಪ್ರಶ್ನಿಸಿಕೊಂಡರೆ, ಅರ್ಧ ಗೊಂದಲ ಬಗೆಹರಿದಂತೆ. ಸಿನಿಮಾ ಬಗೆಗಿನ ಟೀಕೆಟಿಪ್ಪಣಿಗಳು ಇಂದಿನ ಚಿತ್ರತಂಡಗಳಿಗೆ ಬೇಕಾಗಿಲ್ಲ. ವಿಮರ್ಶೆಗಳನ್ನು ಹತ್ತಿಕ್ಕಲು ಕೋರ್ಟ್ ಮೊರೆ ಹೋಗುವ ಚಿತ್ರತಂಡಗಳೂ ಇವೆ. ಸುದ್ದಿಗೋಷ್ಠಿಗಳಲ್ಲೂ ತಮ್ಮ ಸಿನಿಮಾ ಬಗ್ಗೆ ನಿರ್ಮಾಪಕರು ಹಾಗೂ ನಿರ್ದೇಶಕರು ಮಾತನಾಡುವುದು ಕಡಿಮೆ.
ಕನ್ನಡ ಚಿತ್ರರಂಗದ ಯಶಸ್ಸಿನ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಶೇ 2–3ಕ್ಕೆ ಕುಸಿದಿದೆ. ‘ಸಿನಿಮಾ ನೋಡಿ’ ಎಂದು ಜನರಿಗೆ ಮನವಿ ಮಾಡಿ ಪ್ರಯೋಜನವಿಲ್ಲ. ರುಚಿಯಾಗಿರುವ ಊಟ ಬಡಿಸಿದರೆ ನೂರಲ್ಲ, ₹200–₹300 ಕೊಟ್ಟಾದರೂ ಜನ ಸಿನಿಮಾ ನೋಡುತ್ತಾರೆ; ಇತರರನ್ನೂ ಸಿನಿಮಾ ನೋಡಲು ಪ್ರೇರೇಪಿಸುತ್ತಾರೆ. ಅದಕ್ಕೆ ಉದಾಹರಣೆಗಳು ನಮ್ಮಲ್ಲೇ ಎಷ್ಟಿಲ್ಲ? ಆಗಬೇಕಿರುವುದು ಪ್ರೇಕ್ಷಕರ ವಿಶ್ವಾಸ
ವನ್ನು ಮರಳಿ ಗಳಿಸಿಕೊಳ್ಳುವುದು. ಭಾವುಕತೆಯಿಂದ ಸಿನಿಮಾಗಳನ್ನು ಗೆಲ್ಲಿಸಿಕೊಳ್ಳಲಾಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.