
ಬಾಲ್ಯದ ಶಿಕ್ಷಣ ಮಕ್ಕಳ ಭವಿಷ್ಯವನ್ನು ರೂಪಿಸಬಲ್ಲುದು. ಹಾಗಾಗಿ, ಕರ್ನಾಟಕದ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ದೊರೆಯಬೇಕೆನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ. ಏಳನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ತಮಗೆ ಬೇಕಾದ ಮಾಧ್ಯಮದಲ್ಲಿ ಓದಬಹುದು. ಆಗಲೂ ಕನ್ನಡವನ್ನು ಒಂದು ಭಾಷೆಯನ್ನಾಗಿ ಎಲ್ಲ ತರಗತಿಗಳಲ್ಲೂ ಕಲಿಯುವುದು ಕಡ್ಡಾಯವಾಗಬೇಕು.
2019ರಿಂದ 2025ರ ನಡುವೆ ತೆರೆದಿರುವ ದ್ವಿಭಾಷಾ ಶಾಲೆಗಳಲ್ಲಿನ 6 ಮತ್ತು 7ನೇ ತರಗತಿಗೆ ಯಾವ ಭಾಷಾ ಮಾಧ್ಯಮದಲ್ಲಿ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಇತ್ತೀಚೆಗೆ ನಿರ್ದೇಶನ ನೀಡಿದ್ದಾರೆ. ಅವರ ನಿರ್ದೇಶನದಂತೆ 4,134 ದ್ವಿಭಾಷಾ ಶಾಲೆಗಳ ವಿದ್ಯಾರ್ಥಿಗಳು ಆಂಗ್ಲಮಾಧ್ಯಮದ ಪಠ್ಯಪುಸ್ತಕಗಳನ್ನು ಕಡ್ಡಾಯವಾಗಿ ತರಿಸಿಕೊಂಡು ಓದಬೇಕಾಗಿದೆ. ಇದು ಪೋಷಕರ ಮತ್ತು ವಿದ್ಯಾರ್ಥಿಗಳ ಆಂಗ್ಲಭಾಷಾ ವ್ಯಾಮೋಹವನ್ನು ತೃಪ್ತಿಪಡಿಸುವಂತೆ ಕಂಡರೂ, ವಿದ್ಯಾರ್ಥಿಗಳ ಮನೋವಿಕಾಸ ಮತ್ತು ಕನ್ನಡ ಮಾಧ್ಯಮದ ಅಸ್ತಿತ್ವಕ್ಕೆ ದೊಡ್ಡ ಪೆಟ್ಟು ಕೊಡುತ್ತದೆ ಎನ್ನುವುದು ಸುಳ್ಳಲ್ಲ. ಐದು ಮತ್ತು ಆರನೆಯ ತರಗತಿಯವರೆಗೆ ಕನ್ನಡಮಾಧ್ಯಮದಲ್ಲೇ ಓದಿದ ವಿದ್ಯಾರ್ಥಿಗಳು ಒಮ್ಮೆಲೇ ಆಂಗ್ಲ ಭಾಷೆಯಲ್ಲಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಇತ್ಯಾದಿ ವಿಷಯಗಳನ್ನು ಅರಗಿಸಿಕೊಳ್ಳಲು ಸಾಧ್ಯವೆ?
ಗ್ರಾಮೀಣ ಪ್ರದೇಶದ ಜನರ ಮನೆಗಳಲ್ಲಿ ಇಂಗ್ಲಿಷ್ ಪರಿಸರ ಇರುವುದಿಲ್ಲ. ಜೊತೆಗೆ, ಆಯಾ ಶಾಲೆಗಳಲ್ಲೂ ಸ್ಪಷ್ಟವಾಗಿ ಆಂಗ್ಲ ಭಾಷೆಯಲ್ಲಿ ಬೋಧಿಸುವ ಪರಿಣತಿಯುಳ್ಳ ಶಿಕ್ಷಕರ ಕೊರತೆ ಇರುತ್ತದೆ. ಇದರಿಂದ ಗ್ರಾಮೀಣ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುವುದಿಲ್ಲವೆ? ವಿಷಯ ಜ್ಞಾನಕ್ಕಿಂತ ಭಾಷೆಯನ್ನು ಕಲಿಯುವಲ್ಲೇ ಮಕ್ಕಳ ಶ್ರಮ, ಶಕ್ತಿ ವ್ಯಯವಾಗಿ ಅವರಲ್ಲಿ ಸೃಜನಶೀಲತೆ ಕುಂಠಿತವಾಗುವುದಿಲ್ಲವೆ?
ಖಾಸಗಿ ಶಾಲೆಗಳವರು ಕನ್ನಡ ಮಾಧ್ಯಮದ ಬದಲು ಆಂಗ್ಲ ಮಾಧ್ಯಮದಲ್ಲೇ ಬೋಧನೆ ಮಾಡುತ್ತಿರುವುದರಿಂದ, ಅಲ್ಲಿ ಓದುವ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲು ಬಂದರೂ ಬರೆಯಲು, ಓದಲು ಬರುವುದಿಲ್ಲ. ಸರ್ಕಾರಿ ಶಾಲೆಗಳು ಸಹ ಕನ್ನಡದ ಕತ್ತು ಕೊಯ್ಯುವ ನೆಲೆಯಲ್ಲೇ ಆಂಗ್ಲಮಾಧ್ಯಮಕ್ಕೆ ಮುದ್ರೆ ಒತ್ತುತ್ತಿರುವುದು ಏನನ್ನು ತೋರಿಸುತ್ತಿದೆ? ಮುಂದೆ ನಮ್ಮ ಕನ್ನಡತನ ಮತ್ತು ಕರ್ನಾಟಕದ ಸಾಂಸ್ಕೃತಿಕ ಬೇರುಗಳನ್ನೇ ನಾಶ ಮಾಡುವ ದುರಂತ ಇದರ ಹಿಂದಿದೆ ಎನಿಸುವುದಿಲ್ಲವೇ?
ಒಂದು ಹಂತದವರೆಗೆ ಇಂಗ್ಲಿಷನ್ನು ಸಂವಹನ ಭಾಷೆ ಆಗಿ ಕಲಿಸುವುದರಲ್ಲಿ ತಪ್ಪಿಲ್ಲ. ಆದರೆ, ಅದನ್ನೇ ಮಾಧ್ಯಮ ಮಾಡಿದರೆ ಗ್ರಾಮೀಣ ಪ್ರತಿಭೆಗಳ ಬದುಕಿಗೆ ಬೆಂಕಿ ಇಟ್ಟಂತೆ. ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಪುನರ್‌ಪರಿಶೀಲಿಸಿ ಏಳನೆಯ ತರಗತಿಯವರೆಗೆ ಎಲ್ಲ ಪಠ್ಯಪುಸ್ತಕಗಳು ಕನ್ನಡದಲ್ಲೇ ಇರುವಂತೆ, ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯುವಂತೆ ಆದೇಶ ಮಾಡಬೇಕು. ಬದಲಾಗಿ, ಕನ್ನಡವನ್ನೇ ಒಂದು ಭಾಷೆಯಾಗಿಸಿ, ಇಂಗ್ಲಿಷನ್ನು ಮಾಧ್ಯಮವಾಗಿಸುವುದು ‘ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ’.
ಕನ್ನಡವನ್ನು ಬರೀ ಭಾಷಣದ ಸರಕಾಗಿ ಉಳಿಸದೆ ಶಿಕ್ಷಣದ ಮಾಧ್ಯಮವನ್ನಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಸರ್ಕಾರದ ಮತ್ತು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಹಾಗಾಗಿ ಕನ್ನಡಪರ ಸಂಘಟನೆಗಳು ಎಚ್ಚತ್ತುಕೊಂಡು ಸರ್ಕಾರದ ಈ ನೀತಿಯನ್ನು ಪ್ರತಿಭಟಿಸಬೇಕಾಗಿದೆ. ಕನ್ನಡದ ಅಸ್ಮಿತೆಗೆ ಬಂದಿರುವ ಆಪತ್ತನ್ನು ತಕ್ಷಣ ಪರಿಹರಿಸುವ ಕಾರ್ಯವನ್ನು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಮಾಡಬೇಕಿದೆ. ಖಾಸಗಿ ಶಾಲೆಗಳ ಪೈಪೋಟಿಯನ್ನು ಎದುರಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರಬಹುದು. ಇದರಿಂದ ಕನ್ನಡ ಮಾಧ್ಯಮ ಇರುವ ಬಹುತೇಕ ಖಾಸಗಿ ಪ್ರೌಢಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವಂತಾಗಬಹುದು.
ಈಗಾಗಲೇ, ಕೆಪಿಎಸ್ ಸ್ಕೂಲ್‌ಗಳನ್ನು ತೆರೆಯುತ್ತಿರುವುದು ಕನ್ನಡ ಭಾಷೆಗೆ ಕುಂದು ತರುವಂತಹುದೇ ಆಗಿದೆ. ಮುಂದೆ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಸಹ ಮುಚ್ಚುತ್ತಾರೆ ಎನ್ನುವ ಸುದ್ದಿ ಇದೆ. ಯಾವ ಶಾಲೆಗಳನ್ನೂ ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವರು ಹೇಳಿದ್ದನ್ನು ಮಾಧ್ಯಮಗಳ ಮೂಲಕ ಕೇಳಿದ್ದೇವೆ.
ಸಾಣೇಹಳ್ಳಿಯ ಸುತ್ತಮುತ್ತ 1ರಿಂದ 5ನೆಯ ತರಗತಿವರೆಗೆ ಇರುವ ಶಾಲೆಗಳಲ್ಲಿರುವ ಶಿಕ್ಷಕರ ಸಂಖ್ಯೆಯನ್ನು ನೋಡಿ: ಆದರಕಟ್ಟೆ–2, ದಾಸೇನಹಳ್ಳಿ–1, ಗೊಲ್ಲರಹಟ್ಟಿ–2, ಕುಂಬಾರಗಟ್ಟ ಗಡಿ–2. ಈ ಎಲ್ಲ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. 5ರಿಂದ 7ನೆಯ ತರಗತಿವರೆಗೆ ಇರುವ ಶಾಲೆಗಳ ಶಿಕ್ಷಕರ ಸಂಖ್ಯೆ ಹೀಗಿದೆ: ಮಾರಬಗಟ್ಟ–4, ನೀರಗುಂದ-3, ಸಾಣೇಹಳ್ಳಿ-4, ಸೆಟ್ಟಿಹಳ್ಳಿ-3, ಅಹಮದ್ ನಗರ-4.
ಸಾಣೇಹಳ್ಳಿಯ ಸುತ್ತಮುತ್ತಲ ಶಾಲೆಗಳ ಸ್ಥಿತಿಯೇ ರಾಜ್ಯದ ಬಹುತೇಕ ಭಾಗಗಳಲ್ಲಿದೆ. ಒಂದು ತರಗತಿಗೆ ಒಬ್ಬರಾದರೂ ಶಿಕ್ಷಕರಿರಬೇಕು. ಇರುವ ಶಿಕ್ಷಕರೇ ಪ್ರತಿದಿನ ಇಲಾಖೆಯ ಕೆಲಸ, ಬಿಸಿಯೂಟದ ಜವಾಬ್ದಾರಿ ಇತ್ಯಾದಿ ಜೊತೆಗೆ ಇಡೀ ದಿನ ಪಾಠ ಮಾಡಲು ಸಾಧ್ಯವೆ? ಇದರಿಂದ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೇಗೆ ಸುಧಾರಿಸಲು ಸಾಧ್ಯ? ಈ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ. ಕಲಿಕೆಯ ಮಾಧ್ಯಮ ಕನ್ನಡ ಆಗಿರುವುದು ನುಡಿಯ ಬೆಳವಣಿಗೆಯ ಜೊತೆಗೆ ನಾಡಿನ ನಾಳೆಗಳಿಗೂ ಮುಖ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.