
‘ಗೆದ್ದವನು ಸೋತ, ಸೋತವನು ಸತ್ತ’ ಎನ್ನುವುದು ಯುದ್ಧದ ಭೀಕರ ಪರಿಣಾಮವನ್ನು ಹೇಳುವ ಜನಪ್ರಿಯ ಗಾದೆಮಾತು. ಇದು, ಬಹಳಷ್ಟು ಸಂದರ್ಭಗಳಲ್ಲಿ ಕಾನೂನು ಸಂಘರ್ಷಗಳಿಗೂ ಅನ್ವಯಿಸುವ ಮಾತು. ಕೆಲವು ದಾವೆಗಳಲ್ಲಿ ಪರಿಹಾರ ಕೋರಿ ಕಾನೂನಿನ ಮುಂದೆ ನಿಲ್ಲುವ ವಾದಿ, ಪ್ರತಿವಾದಿ ಇಬ್ಬರದ್ದೂ ಇದೇ ಪರಿಸ್ಥಿತಿ ಆಗಿರುತ್ತದೆ.
ಕೆಲವೊಮ್ಮೆ ಪರಿಸ್ಥಿತಿ ಎಷ್ಟು ಜಟಿಲವಾಗಿರುತ್ತದೆ ಎಂದರೆ, ಅದು ಕಾನೂನಿನ ಕೈಗೆ ಎಟಕುವುದೇ ಇಲ್ಲ. ಅಥವಾ ಎಲ್ಲಾ ಸಂದಿಗ್ಧಗಳಿಗೂ, ಜಟಿಲತೆಗಳಿಗೂ, ಸಮಸ್ಯೆಗಳಿಗೂ ಕಾನೂನಿನಲ್ಲಿ ಪರಿಹಾರ ಇದ್ದೇ ಇದೆ ಎಂದೂ ಹೇಳಲಾಗದು. ಕೆಲವೊಮ್ಮೆ ಹೊಸ ಸಮಸ್ಯೆ ಎದುರಾದಾಗ ಅದಕ್ಕೊಂದು ಹೊಸ ಕಾನೂನು, ವಿಶ್ಲೇಷಣೆ ಹುಟ್ಟಿಕೊಳ್ಳುತ್ತದೆ. ಒಂದು ಕಾನೂನು ಶಾಸನವಾಗಿ ಅದು ನಮಗೆ ಪರಿಹಾರ ಒದಗಿಸಲು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಸಮಸ್ಯೆ ಹಾಗೇ ನಿಲ್ಲುತ್ತದೆಯೆ? ಅಂತಹ ಸಂದರ್ಭದಲ್ಲಿ ‘ನ್ಯಾಯಾಂಗ ಕ್ರಿಯಾಶೀಲತೆ’ ನಮಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಂದ ಕರ್ನಾಟಕ ಹೈಕೋರ್ಟ್‌ನ ಒಂದು ತೀರ್ಪು ಗಮನಾರ್ಹ ಮತ್ತು ಸ್ವಾಗತಾರ್ಹ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಡಿಸೆಂಬರ್ 2, 2025ರಂದು ಒಂದು ಮಹತ್ವದ ತೀರ್ಪನ್ನು ನೀಡಿದರು. ಆ ತೀರ್ಪಿನ ಮೂಲಕ, ಭಾರತೀಯ ದಂಡ ಸಂಹಿತೆಯ ‘ಸೆಕ್ಷನ್ 498ಎ’ ಸಾಧ್ಯತೆಗಳಿಗೆ ಈ ಕಾಲಕ್ಕೆ ಅಗತ್ಯವಾದ ವಿಸ್ತಾರ ದೊರೆತಂತಾಯಿತು. ಅಂದರೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ (ಡೊಮೆಸ್ಟಿಕ್ ವಯಲೆನ್ಸ್ ಆ್ಯಕ್ಟ್) ಅನ್ನು ಲಿವ್–ಇನ್ ಸಂಬಂಧಗಳಿಗೂ ಅನ್ವಯವಾಗುತ್ತದೆಂದು ಹೇಳುವ ಮೂಲಕ, ಸಮಕಾಲೀನ ಸಮಾಜದ ಬಿಕ್ಕಟ್ಟುಗಳನ್ನೂ ಕಾಯ್ದೆಯಡಿ ವಿಶ್ಲೇಷಿಸಲು ಸಾಧ್ಯವಾಯಿತು.
ಡೊಮೆಸ್ಟಿಕ್ ವಯಲೆನ್ಸ್ ಆ್ಯಕ್ಟ್ ವೈವಾಹಿಕ ಸಂಬಂಧಗಳಲ್ಲಿ ಉಂಟಾಗಬಹುದಾದ ಕ್ರೌರ್ಯಕ್ಕೆ ಸಂಬಂಧಿಸಿದ ಕಾಯ್ದೆ. ವಿವಾಹ ಸ್ವರೂಪದ ಸಂಬಂಧ ಎನ್ನಬಹುದಾದ ಲಿವ್ ಇನ್ ರಿಲೇಶನ್‌ಶಿಪ್ ಮತ್ತು ಅಮಾನ್ಯ ಮತ್ತು ರದ್ದುಗೊಳಿಸಬಹುದಾದ ವಿವಾಹಗಳಿಗೂ ಡೊಮೆಸ್ಟಿಕ್ ವಯಲೆನ್ಸ್ ಆ್ಯಕ್ಟ್ ಅನ್ವಯವಾಗುತ್ತದೆ ಎಂದು ಹೇಳುವುದರ ಮೂಲಕ ಕಾಯ್ದೆಗೆ ಮಹತ್ವದ ತಾತ್ತ್ವಿಕ ಬೆಳವಣಿಗೆ ದೊರಕಿದಂತಾಗಿದೆ.
ಭಾರತೀಯ ಕೌಟುಂಬಿಕ ಕಾನೂನು, ಸಮಾಜದಲ್ಲಿ ಮಾನ್ಯಗೊಂಡ ವಿವಾಹ ಸಂಬಂಧಕ್ಕೆ ಮಾತ್ರ ಅನ್ವಯವಾಗು ತ್ತದೆ. ಮದುವೆಯ ಸಂಬಂಧದಿಂದ ಉದ್ಭವಿಸಿದ ಸಮಸ್ಯೆ ಅಥವಾ ಶೋಷಣೆಗೆ ಮಾತ್ರ ರಕ್ಷಣೆ ನೀಡುತ್ತದೆ. ಆದರೆ ನಮ್ಮ ಸಮಾಜ, ಸಂಬಂಧದ ಸ್ವರೂಪಗಳು ಕಾಲಕಾಲಕ್ಕೆ ಬದಲಾಗಿವೆ, ಆಗುತ್ತಿವೆ. ಮದುವೆ ಆಗದೆಯೇ ದಂಪತಿಯಂತೆ ಒಟ್ಟಿಗೆ ಬಾಳುವವರ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಈ ಬಗೆಯ ಸಂಬಂಧವನ್ನು ಸಮಾಜವೂ ನಿಧಾನವಾಗಿ ಒಪ್ಪಿಕೊಳ್ಳುತ್ತಿದೆ. ಆದರೆ, ಇಂಥ ಸಂಬಂಧಗಳಲ್ಲಿ ಸಮಸ್ಯೆ ಎದುರಾದಾಗ ಅದಕ್ಕೆ ಕಾನೂನಿನಿಂದ ಪರಿಹಾರ ದೊರೆಯುವುದು ಇಲ್ಲಿಯವರೆಗೆ ಕಷ್ಟದ ವಿಷಯವಾಗಿತ್ತು.
ಮಹಿಳೆಯರು ಅನುಭವಿಸುವ ಭಾವನಾತ್ಮಕ ಹಿಂಸೆ, ಆರ್ಥಿಕ ವಂಚನೆ, ಮಾನಸಿಕ ವೇದನೆ,ದೈಹಿಕ ಶೋಷಣೆ, ಲೈಂಗಿಕ ಶೋಷಣೆ, ಮುಂತಾದ ದೌರ್ಜನ್ಯಗಳು ವಿವಾಹೇತರ, ವಿವಾಹಿತ ಅಥವಾ ಅವಿವಾಹಿತ ಸಂಬಂಧಗಳಲ್ಲಿ ಸಾಮಾನ್ಯವಾಗಿದ್ದು ಯಾವುದೇ ವ್ಯತ್ಯಾಸ ಇರುವುದಿಲ್ಲ. ಎಷ್ಟೋ ಮಹಿಳೆಯರು ಶೋಷಿತರಾಗಿದ್ದರೂ ಸಹ, ವಿವಾಹದ ಮಾನ್ಯತೆಯನ್ನು ರುಜುವಾತು ಪಡಿಸಲು ಸಾಧ್ಯವಿಲ್ಲ ಎನ್ನುವ ಒಂದೇ ಕಾರಣದಿಂದಾಗಿ, ನ್ಯಾಯಾಲಯದಿಂದ ಪರಿಹಾರ ಸಿಗದೆ ವಂಚಿತರಾಗುತ್ತಾರೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳು, ಸಿಂಧುತ್ವದ ವಿವಾಹ ಇಲ್ಲದ ಸಂಬಂಧಗಳ ಸಂದರ್ಭದಲ್ಲಿ ತಮ್ಮಿಂದ ಘಟಿಸಿದ್ದು ದೌರ್ಜನ್ಯವೇ ಅಲ್ಲ ಎಂಬ ವಾದ ಮುಂದಿಟ್ಟು, ಹೊಣೆಗಾರಿಕೆ ಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇಂತಹ ಸಂಕುಚಿತ ವ್ಯಾಖ್ಯಾನಕ್ಕೆ ಅವಕಾಶ ಕಲ್ಪಿಸದೆ, ಸಮಾನತೆಯೊಂದಿಗೆ ಸಂವಿಧಾನಾತ್ಮಕ ನೈತಿಕತೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ತೀರ್ಪು ಎತ್ತಿ ಹಿಡಿದಿದೆ.
ಡೊಮೆಸ್ಟಿಕ್ ವಯಲೆನ್ಸ್ ಆ್ಯಕ್ಟ್‌ಗೆ ಸಂಬಂಧಿಸಿದಂತೆ ವಿಸ್ತರಿಸಲಾಗಿರುವ ವ್ಯಾಖ್ಯಾನವನ್ನು ದುರುಪಯೋಗ ಮಾಡಿ ಕೊಳ್ಳಬಹುದಾದ ಸಾಧ್ಯತೆಗಳೂ ಇವೆ. ಈ ಸಾಧ್ಯತೆಗಳು ಮತ್ತು ಆತಂಕವನ್ನು ಮನಗಂಡಿರುವ ನ್ಯಾಯಮೂರ್ತಿ ಅವರು, ತಮ್ಮ ತೀರ್ಪಿನಲ್ಲಿ ಅದಕ್ಕೂ ಪರಿಹಾರ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ, ಒಟ್ಟಿಗೆ ಬಾಳುವ ಸಂಬಂಧದ ಅಸ್ತಿತ್ವ ರುಜುವಾತು ಪಡಿಸುವುದಷ್ಟೇ ಅಲ್ಲದೇ, ಆರೋಪಿಯ ಕ್ರೌರ್ಯದ ವರ್ತನೆಯನ್ನೂ ಸಾಬೀತುಪಡಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹಾಗೆಯೇ, ತೀರ್ಪು ನೀಡುವ ನ್ಯಾಯಾಲಯಗಳು ಸಂಬಂಧದ ಸ್ವಭಾವ, ಅವಧಿ ಹಾಗೂ ಇತರ ಮುಖ್ಯ ವಿಷಯಗಳನ್ನು ಮೌಲ್ಯಮಾಪನ ಮಾಡಬೇಕು ಎಂಬ ಮಾರ್ಗದರ್ಶಿ ಸೂತ್ರ ಅಥವಾ ಎಚ್ಚರಿಕೆಯ ಮಾತನ್ನೂ ಹೇಳಿದೆ.
ಸಾಂಗತ್ಯದಲ್ಲಿ ವಂಚನೆಗೊಳಗಾಗುವ ಸಂತ್ರಸ್ತ ಹೆಣ್ಣಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ನೀಡಿರುವ ತೀರ್ಪು ಹೊಸ ಕಾಲದ ತವಕತಲ್ಲಣಗಳಿಗೆ ಸ್ಪಂದಿಸುವ ಸೂಕ್ಷ್ಮ ಸಂವೇದನೆಯ ಸಂಕೇತವಾಗಿದೆ ಹಾಗೂ ಸಾಮಾಜಿಕ ಮಹತ್ವ ವನ್ನೂ ಒಳಗೊಂಡಿದೆ. ಕಾನೂನು ಬರೀ ವಿಧಿಗಳಿಗಷ್ಟೇ ಕಣ್ಣಾಗದೆ ನೋವಿಗೂ ಕಿವಿಗೊಡಬೇಕು ಎನ್ನುವುದನ್ನೂ ಈ ತೀರ್ಪು ಧ್ವನಿಸುವಂತಿದೆ.
ಲೇಖಕಿ: ವಕೀಲರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.