ADVERTISEMENT

ಸಂಗತ: ಜ್ಞಾನ ದೇಗುಲ ಮತ್ತು ಶಿಷ್ಯವೃಂದ

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಮನದಲ್ಲಿಟ್ಟು ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಶಿಕ್ಷಣದಿಂದ ವಿಮುಖರಾಗಲಿರುವವರ ಸಂಖ್ಯೆ ಹೆಚ್ಚಲಿರುವುದು ವಾಸ್ತವ

ಎಚ್.ಕೆ.ಶರತ್
Published 8 ಡಿಸೆಂಬರ್ 2020, 19:30 IST
Last Updated 8 ಡಿಸೆಂಬರ್ 2020, 19:30 IST
ಸಂಗತ
ಸಂಗತ   

ಮಗನ ವಿದ್ಯಾಭ್ಯಾಸದ ಕುರಿತು ತಮ್ಮಲ್ಲಿ ಮೂಡಿದ್ದ ಗೊಂದಲಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಕಾಲೇಜಿಗೆ ಬಂದಿದ್ದ ವ್ಯಕ್ತಿಯೊಬ್ಬರು, ಯಾರ ಬಳಿ ವಿಚಾರಿಸುವುದು ಎಂದು ತಿಳಿಯದೆ ಕಾಲೇಜು ಕಟ್ಟಡದ ಕಾರಿಡಾರ್‌ನಲ್ಲಿ ನಿಂತು ಸುತ್ತಮುತ್ತ ನೋಡುತ್ತಿದ್ದರು. ಅವರಿಗೆ ಎದುರಾದ ನನ್ನನ್ನು ಕರೆದು, ತಾವು ಕಾಲೇಜಿಗೆ ಬಂದಿರುವುದು ಏಕೆಂದು ವಿವರಿಸಿದರು.

ಮೂರೂವರೆ ವರ್ಷಗಳ ಹಿಂದೆ ಮಗನೊಂದಿಗೆ ಕಾಲೇಜಿಗೆ ಬಂದು ಅವನನ್ನು ಎಂಜಿನಿಯರಿಂಗ್ ಪದವಿಗೆ ಸೇರಿಸಿ ಹೋಗಿದ್ದ ಅವರಿಗೆ, ಈಗ ಅವನು ಯಾವ ಬ್ರ್ಯಾಂಚ್‍ನಲ್ಲಿ ಮತ್ತು ಎಷ್ಟನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾನೆ ಎಂಬುದು ಕೂಡ ತಿಳಿದಿರಲಿಲ್ಲ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಗ್ರಾಮವೊಂದರ ಅನಕ್ಷರಸ್ಥರಾದ ಅವರಿಗೆ, ತಮ್ಮ ಮಗ ಎಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿ ತಮ್ಮಂತೆ ಹಳ್ಳಿಯಲ್ಲೇ ಉಳಿದುಬಿಡುತ್ತಾನೋ ಎನ್ನುವ ಆತಂಕ ಮೂಡಿದೆ. ಹಾಗಾಗಿ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತರಗತಿಗಳು ಪ್ರಾರಂಭವಾದ ಸುದ್ದಿಯನ್ನು ಟಿ.ವಿ.ಯಲ್ಲಿ ಗಮನಿಸಿದ್ದ ಅವರು, ಕಾಲೇಜಿಗೆ ತೆರಳದೆ ಊರಲ್ಲೇ ಇದ್ದು, ‘ಮೊಬೈಲ್‍ನಲ್ಲೇ ಪಾಠ ಕೇಳ್ತಿದ್ದೀನಿ’ ಅಂತ ಹೇಳುವ ಮಗನ ಮಾತಿನ ಮೇಲೆ ಪೂರ್ಣ ವಿಶ್ವಾಸ ಮೂಡದೆ, ಖುದ್ದು ವಿಚಾರಿಸಲೆಂದು ಕಾಲೇಜಿಗೆ ಬಂದಿದ್ದರು.

ಕಾಲೇಜು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ್ದರೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾರದ್ದರಿಂದ ಆನ್‍ಲೈನ್‍ನಲ್ಲೇ ಪಾಠ ಮುಂದುವರಿಸಿರುವುದನ್ನು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ. ‘ಸಾರ್, ಹೇಗೊ ಮಗ ಇನ್ನೇನು ಇಂಜಿನಿಯರ್ ಆಗ್ತಾನೆ ಅಂದ್ಕೊಂಡಿದ್ದೆ. ಆದ್ರೆ ಈಗ ನೋಡಿದ್ರೆ ಅವರಿವರ ತೋಟಕ್ಕೆ ತೆಂಗಿನ ಕಾಯಿ ಕೀಳೊ ಕೆಲಸಕ್ಕೆ ಹೋಗ್ತಾನೆ. ದಿನಕ್ಕೆ ಸಾವ್ರ ದುಡ್ಡು ಸಿಗುತ್ತೆ. ಕೇಳಿದ್ರೆ ಬೆಳಿಗ್ಗೆ ಎಂಟೂವರೆಯಿಂದ ಹತ್ತು ಗಂಟೆವರ್ಗೆ ಮಾತ್ರ ಮೊಬೈಲ್‍ನಲ್ಲಿ ಕ್ಲಾಸ್ ಇರೋದು ಅಂತಾನೆ. ದುಡ್ಡಿನ ಆಸೆಗೆ ಬಿದ್ದು ಎಲ್ಲಿ ಕಾಲೇಜಿಗೆ ಹೋಗೋದು ಬಿಟ್ನೋ ಅನ್ನೋ ಚಿಂತೆ ಕಾಡ್ತಾ ಇದೆ’ ಅಂದ್ರು.

ADVERTISEMENT

‘ಯಾವುದಕ್ಕೂ ಒಮ್ಮೆ ನಿಮ್ಮ ಮಗ ಓದುವ ವಿಭಾಗಕ್ಕೆ ಹೋಗಿ ಅವನ ಹೆಸರು, ಯೂನಿವರ್ಸಿಟಿ ಸೀಟ್ ನಂಬರ್ ಹೇಳಿ ವಿಚಾರಿಸಿ’ ಅಂದೆ. ‘ಅವ್ನು ಯಾವ ಬ್ರ್ಯಾಂಚ್ ಅನ್ನೋದೂ ನಂಗೆ ತಿಳಿದಿಲ್ಲ. ಅವ್ನ ಸೀಟ್ ನಂಬರ್‍ರೂ ಗೊತ್ತಿಲ್ಲ. ಈಗ ಅವನನ್ನೇ ಕೇಳೋಕೆ ಹೋದ್ರೆ, ನಂಗೆ ಗೊತ್ತಿಲ್ದೆ ಕಾಲೇಜಿಗೆ ವಿಚಾರ್ಸೋಕೆ ಹೋಗಿದ್ಯ ಅಂತ ಬೈತಾನೆ. ಇರ್ಲಿ ಬಿಡಿ ಸಾರ್’ ಅಂತೇಳಿ ಹೋದ್ರು.

ನಾನಾ ರೀತಿಯ ಸಂಕಷ್ಟಗಳ ನಡುವೆಯೂ ಓದಿನತ್ತ ಮುಖ ಮಾಡಿದ್ದ ವಿದ್ಯಾರ್ಥಿಗಳ ಮೇಲೆ ಆನ್‍ಲೈನ್ ಶಿಕ್ಷಣವೆಂಬ ಮರೀಚಿಕೆ ಹೇರತೊಡಗಿರುವ ಒತ್ತಡ ಮತ್ತು ಅವರಲ್ಲಿ ಸೃಷ್ಟಿಸಿರುವ ಆತಂಕವನ್ನು ನಿವಾರಿಸಲು ಸರ್ಕಾರ ಹೆಚ್ಚಿನ ಮುತುವರ್ಜಿ ತೋರಬೇಕಿದೆ. ನೆಟ್‍ವರ್ಕ್ ಸಮಸ್ಯೆ, ಆರ್ಥಿಕ ಬಿಕ್ಕಟ್ಟು, ಕೌಟುಂಬಿಕ ಕಲಹ ಹೀಗೆ ನಾನಾ ರೀತಿಯ ಸವಾಲುಗಳ ನಡುವೆಯೂ ಓದು ಮುಂದುವರಿಸುವ ಬಯಕೆ ಹೊಂದಿರುವ ಎಷ್ಟೋ ವಿದ್ಯಾರ್ಥಿಗಳನ್ನುಕೊರೊನಾಗಿಂತ ತೀವ್ರವಾಗಿ ಶಾಲಾ-ಕಾಲೇಜುಗಳು ಮತ್ತು ಹಾಸ್ಟೆಲ್‍ಗಳು ಮುಚ್ಚಿರುವುದು ಬಾಧಿಸತೊಡಗಿದೆ.

ಮನೆ ಎಂಬುದು ಎಲ್ಲರ ಪಾಲಿಗೂ ಹಿತಕರ ತಾಣವಾಗಿರುವುದಿಲ್ಲ ಎನ್ನುವ ವಾಸ್ತವವನ್ನು ಅರಿಯುವ ಸಂಯಮವನ್ನು ಶಾಲಾ-ಕಾಲೇಜುಗಳಪುನರಾರಂಭದ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಇರುವವರು ತೋರಬೇಕಿದೆ. ಸದ್ಯ ಚಾಲ್ತಿಯಲ್ಲಿರುವ ಸೆಮಿಸ್ಟರ್‌ನ ಒಂದೇ ಒಂದು ಆನ್‍ಲೈನ್ ಕ್ಲಾಸ್‍ಗೂ ಹಾಜರಾಗದ ಎಂಜಿನಿಯರಿಂಗ್ ವಿದ್ಯಾರ್ಥಿಯ ಕುರಿತು ವಿಚಾರಿಸುವ ಸಲುವಾಗಿ ಆತನ ಪೋಷಕರಿಗೆ ಕರೆ ಮಾಡಿದ್ದೆ. ಕಾಲೇಜಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ನೀಡಿದ್ದ ಮಾಹಿತಿಯನ್ನು ಗಮನಿಸಿದಾಗ, ವಿದ್ಯಾರ್ಥಿಯ ತಂದೆ ನಿಧನರಾಗಿರುವುದು ತಿಳಿಯಿತು. ಕರೆ ಸ್ವೀಕರಿಸಿದ ತಾಯಿ, ತಮ್ಮೊಂದಿಗೆ ಮಗ ಜಗಳ ಆಡಿಕೊಂಡು ಅಜ್ಜಿ-ತಾತನ ಮನೆಗೆ ಹೋಗಿರುವುದಾಗಿಯೂ ತಾವು ಕರೆ ಮಾಡಿದರೆ ಅವನು ಮಾತನಾಡುವುದಿಲ್ಲವಾದ್ದರಿಂದ ನಾನೇ ಅವನೊಂದಿಗೆ ಮಾತನಾಡುವಂತೆ ತಿಳಿಸಿ, ಹುಡುಗನ ಅಜ್ಜನ ಮೊಬೈಲ್ ನಂಬರ್ ನೀಡಿದ್ದರು. ವಿದ್ಯಾರ್ಥಿಯ ಅಜ್ಜನಿಗೆ ಕರೆ ಮಾಡಿದರೆ, ಅವರು ಕೂಡ ಸಮರ್ಪಕ ಮಾಹಿತಿ ನೀಡಲೇ ಇಲ್ಲ.

ಇವರ ಮಾತುಗಳಿಗೆ ಕಿವಿಯಾದ ನನಗೆ, ಕೌಟುಂಬಿಕ ಸಮಸ್ಯೆ ತೀವ್ರವಾಗಿರುವ ಕಾರಣಕ್ಕೆ ವಿದ್ಯಾರ್ಥಿ ಓದಿನಿಂದ ವಿಮುಖನಾಗಿರುವುದು ಮನವರಿಕೆಯಾಯಿತು. ಎಸ್‍ಎಸ್‍ಎಲ್‍ಸಿಯಲ್ಲಿ ಶೇ 95 ಮತ್ತು ಪಿಯುಸಿಯಲ್ಲಿ ಶೇ 80 ಅಂಕ ಗಳಿಸಿದ್ದ ವಿದ್ಯಾರ್ಥಿಯ ಪ್ರಸ್ತುತ ಪರಿಸ್ಥಿತಿ ತಿಳಿದು ಬೇಸರವೂ ಆಯಿತು.

ಆನ್‍ಲೈನ್ ಶಿಕ್ಷಣದಿಂದ ತಾವು ಎಲ್ಲಿ ಓದಿನಿಂದ ಹಿಂದೆ ಬೀಳುತ್ತೇವೊ ಎನ್ನುವ ಆತಂಕವೂ ಹಲವರನ್ನು ಬಾಧಿಸುತ್ತಿದೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ನಾನಾ ರೀತಿಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ಸೂಕ್ತ ನಿರ್ಧಾರ ಕೈಗೊಳ್ಳದೇ ಹೋದಲ್ಲಿ, ಶಿಕ್ಷಣದಿಂದ ವಿಮುಖರಾಗಲಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಲಿದೆ ಎನ್ನುವ ವಾಸ್ತವಕ್ಕೆ ನೀತಿ ನಿರೂಪಕರು ಬೆನ್ನು ತೋರದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.