ADVERTISEMENT

ಸಂಗತ: ರೋಗಿಗಳ ಸುಲಿಗೆಗೆ ‘ಚಿಕಿತ್ಸೆ’ ಬೇಡವೆ?

ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ದಾಳಿ ನಡೆಸುತ್ತಿದೆ. ರೋಗಿಗಳನ್ನು ಶೋಷಿಸುವವರ ಮೇಲೂ ಕ್ರಮ ಜರುಗಿಸುವುದು ಅಗತ್ಯ

ಸಿದ್ದಯ್ಯ ಹಿರೇಮಠ
Published 10 ಸೆಪ್ಟೆಂಬರ್ 2025, 23:30 IST
Last Updated 10 ಸೆಪ್ಟೆಂಬರ್ 2025, 23:30 IST
.
.   

ಹುಬ್ಬಳ್ಳಿಗೆ 10 ಕಿ.ಮೀ. ದೂರವಿರುವ ನಮ್ಮೂರಿನಲ್ಲಿ 20,000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ನಗರಗಳಂತೆಯೇ ಬೆಳೆಯುತ್ತಿರುವ ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಇಲ್ಲ. ಅನೇಕ ವರ್ಷಗಳಿಂದ ಮನವಿ ಮಾಡಿದರೂ ಇಲ್ಲೊಂದು ಪಿಎಚ್‌ಸಿ ಸ್ಥಾಪಿಸಲು ಸರ್ಕಾರ ಮುಂದಾಗುತ್ತಿಲ್ಲ.

ಬ್ಯಾಹಟ್ಟಿ ಪಿಎಚ್‌ಸಿ ವ್ಯಾಪ್ತಿಗೆ ಒಳಪಟ್ಟಿರುವ ಈ ಊರಲ್ಲಿ ಆರೋಗ್ಯ ಉಪಕೇಂದ್ರವಿದೆ. ಅಲ್ಲಿ ವೈದ್ಯರ ಬದಲಿಗೆ, ನಿತ್ಯವೂ ಆರೋಗ್ಯ ಸಹಾಯಕಿಯರು ಬಂದು ಗರ್ಭಿಣಿಯರು, ಬಾಣಂತಿಯರು ಮತ್ತು ಚಿಕ್ಕಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಮಧ್ಯಾಹ್ನ ಹಿಂದಿರುಗುತ್ತಾರೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವವರಿಗೆ ಪಿಎಚ್‌ಸಿಗೆ ಅಥವಾ ಹುಬ್ಬಳ್ಳಿಯಲ್ಲಿನ ಕೆಎಂಸಿ (ಕರ್ನಾಟಕ ಮೆಡಿಕಲ್‌ ಕಾಲೇಜು) ಆಸ್ಪತ್ರೆಗೆ ಹೋಗುವಂತೆ ಹೇಳುತ್ತಾರೆ.

ಗ್ರಾಮದಲ್ಲಿ ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ಓದಿದ ವೈದ್ಯರ ಎಂಟ್ಹತ್ತು ಕ್ಲಿನಿಕ್‌ಗಳಿವೆ. ಇವರು ಜ್ವರ, ಕೆಮ್ಮು, ಶೀತ, ನೆಗಡಿ ಮತ್ತು ಚಿಕ್ಕಮಕ್ಕಳಲ್ಲಿ ಕಂಡುಬರುವ ಅತಿಸಾರ, ಜಂತು ಮತ್ತಿತರ ಚಿಕ್ಕಪುಟ್ಟ ಕಾಯಿಲೆಗೆ ಅಲೋಪತಿ ಮಾತ್ರೆ ಕೊಟ್ಟು ಚುಚ್ಚುಮದ್ದೂ ಕೊಡುತ್ತಾರೆ.

ADVERTISEMENT

ಮೇಲೆ ತಿಳಿಸಿದ ಕಾಯಿಲೆಗಳಿಗೆ ಈ ವೈದ್ಯರು ಒಬ್ಬ ರೋಗಿಯಿಂದ ಗರಿಷ್ಠ ₹100 ಪಡೆಯುತ್ತಾರೆ. ಗಂಭೀರ ಸಮಸ್ಯೆ ಎಂದು ಕಂಡುಬಂದರೆ, ಹುಬ್ಬಳ್ಳಿಯಲ್ಲಿರುವ ಖಾಸಗಿ ನರ್ಸಿಂಗ್‌ ಹೋಂಗಳಿಗೆ ಕಳುಹಿಸುತ್ತಾರೆ. ಬಡವರಾದರೆ ಸರ್ಕಾರದ ಕೆಎಂಸಿ ಆಸ್ಪತ್ರೆಗೆ ಹೋಗುವಂತೆ ಹೇಳುತ್ತಾರೆ.

ಊರಿನ ವೈದ್ಯರ ಚೀಟಿ ಹಿಡಿದುಕೊಂಡು ಹೋದರೆ ಖಾಸಗಿ ಆಸ್ಪತ್ರೆಗಳಲ್ಲಿ ರಕ್ತ, ಮೂತ್ರ ಪರೀಕ್ಷೆ, ಸ್ಕ್ಯಾನಿಂಗ್‌ ತಪ್ಪದೆ ಮಾಡಿಸಿ ಸುಲಿಗೆ ಮಾಡಲಾಗುತ್ತದೆ. ಇವರು ಮಾಡುವ ಪರೀಕ್ಷೆಗಳ ವರದಿಯು ಸಾಮಾನ್ಯವಾಗಿ ‘ಸಾಮಾನ್ಯ’ (ನಾರ್ಮಲ್) ಎಂಬ ಫಲಿತಾಂಶವನ್ನೇ ನೀಡಿರುತ್ತದೆ (ಅಲ್ಲೊಂದು ಇಲ್ಲೊಂದು ಪ್ರಕರಣ ಹೊರತುಪಡಿಸಿ). ಆದರೂ, ರೋಗಿಗಳ ಸಾವಿರಾರು ರೂಪಾಯಿ ಆ ಆಸ್ಪತ್ರೆಯವರ ಜೇಬು ಸೇರುತ್ತದೆ.

ನಮ್ಮೂರು ಹುಬ್ಬಳ್ಳಿಗೆ ಹತ್ತಿರವಿದ್ದರೂ, ದೊಡ್ಡ ಜನಸಂಖ್ಯೆ ಹೊಂದಿದ್ದರೂ ಎಂಬಿಬಿಎಸ್‌ ಓದಿದ ಒಬ್ಬ ವೈದ್ಯನೂ ಈವರೆಗೆ ಖಾಸಗಿಯಾಗಿ ಕ್ಲಿನಿಕ್ ತೆರೆದಿಲ್ಲ. ‘ಹಳ್ಳಿಗರು ಕೇಳಿದಷ್ಟು ದುಡ್ಡು ಕೊಡಲು ನಿರಾಕರಿಸುತ್ತಾರೆ, ಇಲ್ಲಿ ಸೇವೆ (?) ಸಲ್ಲಿಸುವುದು ಲಾಭದಾಯಕವಲ್ಲ’ ಎಂಬ ಕಾರಣ ಇರಬಹುದು.

ಇದು ನಮ್ಮೂರಿನ ಕಥೆ ಮಾತ್ರವಲ್ಲ. ರಾಜ್ಯದ ಬಹುತೇಕ ಗ್ರಾಮೀಣ ಪ್ರದೇಶಗಳ ಕಥೆ ಮತ್ತು ಅಲ್ಲಿನ ನಿವಾಸಿಗಳ ವ್ಯಥೆ.

ನಮ್ಮೂರಲ್ಲಿ ಓದಿರುವ ವಿದ್ಯಾವಂತರಿಗೆ ‘ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ ಓದಿದವರು ಅಲೋಪತಿ ಔಷಧ ಕೊಡುವಂತಿಲ್ಲ’ ಎಂಬ ನಿಯಮ ತಿಳಿದಿದೆ. ಆದರೂ, ಅವರು ನಿಯಮಬಾಹಿರವಾಗಿ ಅಲೋಪತಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿಯೇ ಚಿಕಿತ್ಸೆಗೆ ಹೋಗುತ್ತಾರೆ. ನಗರ ಪ್ರದೇಶಗಳಲ್ಲಿರುವ ತಜ್ಞ (?) ವೈದ್ಯರು ಸುಲಿಗೆ ಮಾಡುವ ವಿಷಯ ತಿಳಿದಿರುವುದೇ ಇದಕ್ಕೆ ಕಾರಣ.

ಆರೋಗ್ಯ ಇಲಾಖೆಯು ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸುತ್ತಿದೆ. ಅರ್ಹತೆ ಇಲ್ಲದವರು, ಪರವಾನಗಿ ಇಲ್ಲದವರನ್ನು ಗುರುತಿಸಿ ದಂಡ, ಶಿಕ್ಷೆ ವಿಧಿಸಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸದ ಹಾಗೂ ಅಗತ್ಯ ವಿದ್ಯಾರ್ಹತೆ ಇಲ್ಲದವರ ವಿರುದ್ಧ ಕ್ರಮ ಕೈಗೊಳ್ಳುವುದು ಸ್ವಾಗತಾರ್ಹ. ಆದರೆ, ಕಾನೂನುಬಾಹಿರವಾಗಿ ವೈದ್ಯ ವೃತ್ತಿ ಕೈಗೊಂಡವರನ್ನು ಪತ್ತೆ ಮಾಡುತ್ತಿರುವುದು ಮಾತ್ರ ಕಂಡುಬರುತ್ತಿಲ್ಲ. ರೋಗಿಗಳಿಂದ ಅಧಿಕ ಪ್ರಮಾಣದ ಹಣ ವಸೂಲಿ ಮಾಡುವುದು ಕಾನೂನುಬಾಹಿರ ಪ್ರಕ್ರಿಯೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅಂಥವರ ಮೇಲೆ ದಾಳಿ ನಡೆಸಿ, ಕ್ರಮ ಕೈಗೊಂಡ ಉದಾಹರಣೆ ಇಲ್ಲ.

ಕೆಲವು ವೈದ್ಯರು ಬರೆದುಕೊಡುವ ಔಷಧಗಳು ಅವರ ಆಸ್ಪತ್ರೆ ಆವರಣದಲ್ಲೇ ಇರುವ ಔಷಧ ಅಂಗಡಿಗಳಲ್ಲಿ ಮಾತ್ರ ದೊರೆಯುತ್ತವೆ. ಬೇರೆ ಅಂಗಡಿಗಳಿಗೆ ಹೋದರೆ, ‘ಅದೇ ಅಂಶವನ್ನು ಒಳಗೊಂಡ ಇನ್ನೊಂದು ಕಂಪನಿಯ ಔಷಧ ಇದೆ. ಅದರ ಬೆಲೆ ಕಡಿಮೆಯೂ ಇದೆ, ರಿಯಾಯಿತಿಯನ್ನೂ ಕೊಡುತ್ತೇವೆ’ ಎಂದು ಹೇಳುತ್ತಾರೆ. ಆದರೆ, ಆ ಔಷಧ ತೆಗೆದುಕೊಂಡರೆ, ‘ಬೇಗ ಗುಣ ಆಗದಿದ್ದರೆ ನಾನು ಜವಾಬ್ದಾರನಲ್ಲ’ ಎಂದು ಆ ವೈದ್ಯ ಬೆದರಿಸುತ್ತಾನೆ.

ಗ್ರಾಮೀಣ ಪ್ರದೇಶಗಳೂ ಒಳಗೊಂಡಂತೆ ಹಲವೆಡೆ ಆಸ್ಪತ್ರೆಗಳ ಮತ್ತು ವೈದ್ಯರ ಕೊರತೆ ಇದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರು ತಜ್ಞ ವೈದ್ಯರಿಂದ ಸುಲಿಗೆಗೆ ಒಳಗಾಗುವ ಭಯದಲ್ಲಿ ಕಡಿಮೆ ಶುಲ್ಕ ಪಡೆಯುವ ನಕಲಿ ಅಥವಾ ಅರ್ಹತೆ ಇಲ್ಲದ, ಪರವಾನಗಿ ಪಡೆಯದ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಅನಿವಾರ್ಯತೆಗೆ ಒಳಗಾಗಿದ್ದಾರೆ.

ನಕಲಿ ವೈದ್ಯರನ್ನು ಮಟ್ಟಹಾಕಲು ದಾಳಿ ನಡೆಸುತ್ತಿರುವ ಆರೋಗ್ಯ ಇಲಾಖೆಯು ದುಬಾರಿ ಶುಲ್ಕ ಹಾಗೂ ಅನಗತ್ಯ ಪರೀಕ್ಷೆಗಳಲ್ಲಿ ತೊಡಗಿ, ನಿಯಮಬಾಹಿರವಾಗಿ ಆಸ್ಪತ್ರೆ ನಡೆಸುತ್ತ ಜನರನ್ನು ಸುಲಿಗೆ ಮಾಡುತ್ತಿರುವ ತಜ್ಞ ವೈದ್ಯರನ್ನೂ ನಿಯಂತ್ರಿಸುವ ಕೆಲಸ ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.