ಬೆಳಗಿನ ಚಹಾ ನಾನೇ ಮಾಡಿಕೊಳ್ಳುತ್ತೇನೆ. ನನಗೆ ಬೇಕೆನಿಸಿದಷ್ಟು ಸಕ್ಕರೆ, ಟೀ ಪುಡಿ, ಹಾಲು ಹಾಕಿಕೊಳ್ಳುತ್ತೇನೆ. ಚೆನ್ನಾಗಿ ಕುದಿಯುವಾಗ ತುಳಸಿಯ ಒಂದೆರಡು ಎಲೆಗಳನ್ನು ಹಾಕುತ್ತೇನೆ. ನಿಧಾನಕ್ಕೆ ಮಾಡಿಕೊಂಡ ಚಹಾ ಬಹಳ ಸ್ವಾದಿಷ್ಟ. ಅದೇ ಹೊತ್ತಿಗೆ ಎದ್ದು, ಮುಖ ತೊಳೆದುಕೊಂಡು ಬರುವ ಮೊಮ್ಮಗನಿಗೂ ಒಂದು ಕಪ್ ಚಹಾ ಕೊಡುತ್ತೇನೆ. ಅವನ ಮುಖ ಅರಳುತ್ತದೆ. ಸ್ವತಃ ಮಾಡಿಕೊಳ್ಳುವ ಚಹಾದ ಖುಷಿ ಬಹಳ ದೊಡ್ಡದು!
ಮನೆಯಲ್ಲಿ ಮಹಿಳೆಯರೇ ಚಹಾ, ಕಾಫಿ ಮಾಡಬೇಕು; ಊಟ, ಉಪಾಹಾರ ಸಿದ್ಧಪಡಿಸಬೇಕು ಎನ್ನುವುದು ಸರಿಯಲ್ಲ. ಪುರುಷರೂ ಅಡುಗೆ ಮಾಡುವುದನ್ನು ಆಸಕ್ತಿಯಿಂದ ಕಲಿತುಕೊಳ್ಳಬೇಕು, ಅವಶ್ಯವಿದ್ದಾಗ ಸಂತೋಷದಿಂದ ಅಡುಗೆ ಮಾಡಬೇಕು. ಇದರಿಂದ ಕುಟುಂಬದ ನೆಮ್ಮದಿಗೆ ಸಹಾಯವಾಗುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರು ಉದ್ಯೋಗ, ವ್ಯವಹಾರ ಹಾಗೂ ಸಾಮಾಜಿಕ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ತಮ್ಮ ಕೆಲಸಗಳಿಗೆ ಹೋಗುವ ಧಾವಂತ ಅವರಿಗೂ ಇರುತ್ತದೆ. ಶಾಲೆಗೆ ಹೋಗುವ ಮಕ್ಕಳಿಗೆ, ದುಡಿಯಲು ಹೋಗುವ ಪತಿಗೆ, ಮನೆಯಲ್ಲಿ ಇರುವ ಹಿರಿಯರಿಗೆ ಊಟ, ಉಪಾಹಾರ ಸಿದ್ಧಪಡಿಸುವುದಕ್ಕೆ ಅವರು ಹೆಣಗಬೇಕಾಗುತ್ತದೆ. ಅದು ಒತ್ತಡಗಳಿಗೂ ಕಾರಣವಾಗುತ್ತದೆ. ಕಲಹಗಳು ಹುಟ್ಟಿಕೊಳ್ಳಬಹುದು. ಇದರಿಂದ ಕುಟುಂಬದ ನೆಮ್ಮದಿಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.
ಗುಣಮಟ್ಟದ ತಾಜಾ ಆಹಾರ ಸೇವಿಸಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದು ಸಾಧ್ಯವಾಗಬೇಕಾದರೆ ಮನೆಯಲ್ಲಿಯೇ ಸಿದ್ಧಪಡಿಸಿದ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಅಡುಗೆ ಕಲೆ ಬದುಕುವ ಕಲೆ. ಇದನ್ನು ಸ್ತ್ರೀ-ಪುರುಷ ಎಂಬ ಭೇದವಿಲ್ಲದೆ ಕಲಿಯಲೇಬೇಕು. ಪತಿ, ಬೆಳೆದ ಮಕ್ಕಳು ಒಂದು ವಾರ ಗಮನಕೊಟ್ಟು ಕಲಿತರೆ ಚಪಾತಿ, ರೊಟ್ಟಿ, ಪಲ್ಯ, ಅನ್ನ, ಸಾರು, ಆಮ್ಲೆಟ್ ಮುಂತಾದವುಗಳನ್ನು ತಾವೇ ಮಾಡಿಕೊಳ್ಳಬಹುದು.
‘ಅಡುಗೆ ಕಲಿತವರಿಗೆ ತಮಗೆ ಇಷ್ಟವಾಗುವ ಆಹಾರ ಸಿದ್ಧಪಡಿಸಿ ಸೇವಿಸುವ ಭಾಗ್ಯ ದೊರೆಯುತ್ತದೆ’ ಎಂದು ಸಾಹಿತಿ ಸತ್ಯಕಾಮ ಹೇಳುತ್ತಿದ್ದರು. ಅವರು ಚೆನ್ನಾಗಿ ಅಡುಗೆ ಮಾಡುತ್ತಿದ್ದರು. ಅವರು ಮಾಡುವ ತೆಳ್ಳಗಿನ, ಬೆಳ್ಳಗಿನ ಬಿಳಿ ಜೋಳದ ರೊಟ್ಟಿ ಸ್ನೇಹಿತರ ವಲಯದಲ್ಲಿ ಪ್ರಸಿದ್ಧವಾಗಿತ್ತು. ಆಪ್ತರ ಮನೆಗೆ ಹೋದಾಗ ತಾವೇ ‘ಭಕ್ತರಿ’ ಸಿದ್ಧಪಡಿಸುತ್ತಿದ್ದರು. ‘ಅಡುಗೆ ಕಲಿತದ್ದರಿಂದ ಹಿಮಾಲಯ ಮತ್ತು ಬೇರೆ ಬೇರೆ ಕಡೆಗಳಲ್ಲಿ ವಾಸಿಸುವುದಕ್ಕೆ ಅನುಕೂಲವಾಯಿತು’ ಎಂದು ಹೇಳುತ್ತಿದ್ದರು.
ಹಿಂದುಸ್ತಾನಿ ಗಾಯಕ ಪಂಡಿತ್ ಬಸವರಾಜ ರಾಜಗುರು ಅವರು ಬಾಗಲಕೋಟೆ ಜಿಲ್ಲೆಯ ಹುನ್ನೂರು ಗ್ರಾಮದಲ್ಲಿ ನಡೆದ ಸಂಗೀತ ಕಾರ್ಯಕ್ರಮಕ್ಕೆ ಒಮ್ಮೆ ಬಂದಿದ್ದರು. ಅವರು ತಮ್ಮ ವಾಹನದಲ್ಲಿ ಆಹಾರ ಸಾಮಗ್ರಿಗಳ ಪೆಟ್ಟಿಗೆ ತಂದಿದ್ದರು. ತಾವೇ ಅಡುಗೆ ಮಾಡಿಕೊಂಡು ಊಟ ಮಾಡಿದರು. ತಮ್ಮ ಧ್ವನಿ ಮತ್ತು ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಈ ವಿಧಾನ ಅನುಸರಿಸುತ್ತಿದ್ದರು. ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಕೂಡ ಈ ಮಾದರಿ ಪಾಲಿಸುತ್ತಿದ್ದರು. ಅವರು ತಮ್ಮ ಸಂಗೀತ ಯಾತ್ರೆಯನ್ನು ‘ರಸಯಾತ್ರೆ’ ಎಂದು ಕರೆಯುತ್ತಿದ್ದರು.
ಈಗಿನ ಶಾಲಾ ವಿದ್ಯಾರ್ಥಿಗಳ ಬುತ್ತಿಯನ್ನು ನೋಡಿದರೆ ಗಾಬರಿಯಾಗುತ್ತದೆ. ಬಹಳಷ್ಟು ಮಕ್ಕಳು ಹೋಟೆಲ್‌ಗಳಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥಗಳು ಮತ್ತು ಜಂಕ್ ಫುಡ್ ತಂದಿರುತ್ತಾರೆ. ಅಪೌಷ್ಟಿಕ ಆಹಾರವು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅವರ ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ಬೆಳೆಯುವ ಮಕ್ಕಳಿಗೆ ಮನೆಯಲ್ಲಿಯೇ ಪೌಷ್ಟಿಕ ಆಹಾರ ತಯಾರಿಸಿ ಕೊಡುವುದು ಬಹಳ ಅವಶ್ಯ. ಮಕ್ಕಳಿಗೆ ಅಡುಗೆ ಮಾಡುವುದು ತಾಯಿಗೆ ಸಾಧ್ಯವಾಗದೇ ಇದ್ದಾಗ ಆ ಕೆಲಸವನ್ನು ತಂದೆ ಸಮರ್ಥವಾಗಿ ಮಾಡಬೇಕು. ಇದರಿಂದ ಹೊರಗಿನ ಆಹಾರ ಸೇವನೆ ನಿಲ್ಲುತ್ತದೆ. ಖರ್ಚು ಕಡಿಮೆಯಾಗುತ್ತದೆ.
ಪಂಡಿತರೊಬ್ಬರು ನಾವೆಯಲ್ಲಿ ನದಿ ದಾಟುತ್ತಿದ್ದರು. ಅವರು ನಾವಿಕನಿಗೆ ‘ರಾಮಾಯಣ ಓದಿರುವೆಯಾ’ ಎಂದು ಕೇಳಿದರು. ನಾವಿಕ ‘ಇಲ್ಲ’ ಎಂದ. ‘ಹಾಗಾದರೆ ನಿನ್ನ ಕಾಲುಭಾಗ ಆಯುಷ್ಯ ವ್ಯರ್ಥವಾದಂತೆ’ ಎಂದು ಪಂಡಿತರು ಹೇಳುತ್ತಾರೆ. ‘ತೀರ್ಥಕ್ಷೇತ್ರಗಳಿಗಾದರೂ ಹೋಗಿ ಬಂದಿರುವೆಯಾ’ ಎಂದು ಮತ್ತೊಂದು ಪ್ರಶ್ನೆ ಕೇಳಿದರು. ನಾವಿಕ ಆ ಪ್ರಶ್ನೆಗೂ ‘ಇಲ್ಲ’ ಎಂದು ಉತ್ತರಿಸಿದ. ಹಾಗಾದರೆ ‘ನಿನ್ನ ಅರ್ಧ ಆಯುಷ್ಯ ಹಾಳಾಯಿತು’ ಎಂದು ಪಂಡಿತರು ಹೇಳುತ್ತಾರೆ. ಆ ಹೊತ್ತಿನಲ್ಲಿ ನಾವೆಯು ಬಿರುಗಾಳಿಗೆ ಅಲುಗಾಡುತ್ತದೆ. ಆಗ ನಾವಿಕ ಆತಂಕದಿಂದ ‘ಪಂಡಿತರೇ, ಈಜಲು ಕಲಿತಿದ್ದೀರಾ’ ಎಂದು ಕೇಳುತ್ತಾನೆ. ಗಾಬರಿಗೊಂಡ ಪಂಡಿತರು ‘ಇಲ್ಲ’ ಎನ್ನುತ್ತಾರೆ. ‘ನಿಮ್ಮ ಬದುಕಿನ ಕಥೆ ಮುಗಿದಂತೆ’ ಎಂದು ನಾವಿಕ ನಿಧಾನವಾಗಿ ಹೇಳುತ್ತಾನೆ. ಈ ಜಾನಪದ ಕಥೆಯು ಬದುಕುವ ವಿದ್ಯೆ ಕಲಿಯುವುದು ಮುಖ್ಯ ಎಂಬುದನ್ನು ಮಾರ್ಮಿಕವಾಗಿ ಹೇಳುತ್ತದೆ.
ರಾಜಸ್ಥಾನಿ ಯುವಕರು ಅಡುಗೆ ಕಲೆಯಲ್ಲಿ ಬಹಳ ಪ್ರವೀಣರು. ಅವರು ದೇಶದ ತುಂಬೆಲ್ಲ ಶ್ರೀಮಂತರ ಮನೆಗಳಲ್ಲಿ, ಅತಿಥಿ ಗೃಹಗಳಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಾರೆ. ಅವರನ್ನು ‘ಮಹಾರಾಜ್’ ಎಂದು ಗೌರವದಿಂದ ಕರೆಯಲಾಗುತ್ತದೆ. ಅಡುಗೆ ಕೋಣೆಯು ಮನೆಯ ಹೃದಯ ಭಾಗ ಇದ್ದಂತೆ. ಅಡುಗೆ ಮಾಡುವುದನ್ನು ಕಲಿತರೆ ಸಾಲದು, ಅಡುಗೆ ಮನೆಯ ಸುರಕ್ಷತೆ, ಅಲ್ಲಿ ನೈರ್ಮಲ್ಯ ಕಾಪಾಡುವುದಕ್ಕೆ ಗಮನ ಕೊಡಬೇಕು. ಆಹಾರ ಪದಾರ್ಥಗಳು ಕೆಡದಂತೆ ಕಾಪಾಡುವ ಮತ್ತು ಮಿತವ್ಯಯದ ವಿಧಾನಗಳನ್ನು ಅರಿತುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.