
ಭ್ರಷ್ಟಾಚಾರವೇ ‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’ ಆಗಿರುವ ಪಕ್ಷಗಳಿಂದ ಜನಹಿತ ಅಸಾಧ್ಯ. ರಾಜ್ಯದ ಹಿತಕ್ಕಾಗಿ ‘ಪರ್ಯಾಯ ರಾಜಕಾರಣ’ ಈ ಹೊತ್ತಿನ ಅಗತ್ಯ.
ಪರ್ಯಾಯ ರಾಜಕಾರಣವೋ ಅಥವಾ ರಾಜಕೀಯ ಪರ್ಯಾಯವೋ ಎಂಬ ಚರ್ಚೆ ತಾತ್ತ್ವಿಕವಾದದ್ದು. ಪರ್ಯಾಯ ರಾಜಕಾರಣ ಎಂಬುದು ಜನರನ್ನು ಕೇಂದ್ರವಾಗುಳ್ಳ ರಾಜಕೀಯ ಸಂಕಥನ. ಇದರಲ್ಲಿ, ಚುನಾವಣೆಗಳಲ್ಲಿ ಗೆಲ್ಲುವುದು ಒಂದು ಅಂಶವಾದರೂ, ಅದೇ ಎಲ್ಲವೂ ಅಲ್ಲ. ಪ್ರಧಾನವಾದ ರಾಜಕೀಯ ಆಳ್ವಿಕೆಯನ್ನು, ಆಳುವ ವರ್ಗಗಳ ಯಜಮಾನಿಕೆಯನ್ನು, ಬುಡ ಮಟ್ಟದಿಂದ ಎದುರಿಸುವ, ಅಧಿಕಾರ ಮತ್ತು ಸಂಪತ್ತನ್ನು ಜನತೆಯ ಕೈಯಲ್ಲಿರಿಸುವ, ಸಾಮಾಜಿಕ ಸಮಾನತೆಗಾಗಿ ಸೆಣಸಾಡುವ ತಳಮಟ್ಟದ ಜನ ಚಳವಳಿಗಳ ಚಿಂತನೆಯಿದು.
ಇದುವರೆಗೂ ರಾಜ್ಯದಲ್ಲಿ ಆಡಳಿತ ಮಾಡಿರುವ ಯಾವುದಾದರೂ ರಾಜಕೀಯ ಪಕ್ಷ ಇಂತಹ ಪರ್ಯಾಯ
ವನ್ನು ಪ್ರತಿಪಾದಿಸಿದೆಯೆ? ರಾಜ್ಯದಲ್ಲಿ ಕಾಂಗ್ರೆಸ್ ದೀರ್ಘಕಾಲ ಆಳ್ವಿಕೆ ನಡೆಸಿದೆ. ತುರ್ತು ಪರಿಸ್ಥಿತಿಯ ನಂತರ ರಾಜ್ಯದಲ್ಲಿ ತಡವಾಗಿ ಆಳ್ವಿಕೆಗೆ ಬಂದ ಜನತಾ ಪಕ್ಷ ಅಥವಾ ಜನತಾದಳ, ನಂತರ ಸಮ್ಮಿಶ್ರ ನೆಲೆಯಲ್ಲಿ ಆಳ್ವಿಕೆ ನಡೆಸಿದ ಬಿಜೆಪಿ ರಾಜಕೀಯ ಪರ್ಯಾಯವಾಗಿ ಆಧಿಕಾರ ಹಿಡಿದವೇ ಹೊರತು, ಪರ್ಯಾಯ ರಾಜಕಾರಣವನ್ನು ಪ್ರತಿಪಾದಿಸಲಿಲ್ಲ. ಬಿಜೆಪಿಯ ಆಳ್ವಿಕೆಯನ್ನು ಪರ್ಯಾಯ ರಾಜಕಾರಣದ ನೆಲೆಯಲ್ಲಿ ಕೆಲವರು ನೋಡಬಯಸುತ್ತಾರೆ. ಆದರೆ, ಇದಕ್ಕೆ ಮತೀಯ ಕೋಮುವಾದಿ ನೆಲೆಗಟ್ಟಿನ ಆಯಾಮವಲ್ಲದೆ ಪರ್ಯಾಯವೇನೂ ಇಲ್ಲ.
ಸ್ವಾತಂತ್ರ್ಯೋತ್ತರ ಭರವಸೆಯ ಕಾಲಘಟ್ಟದಲ್ಲಿ (ಬ್ರಿಟಿಷರ ವಸಾಹತು ರಾಜಕಾರಣಕ್ಕೆ) ಪರ್ಯಾಯ ರಾಜ
ಕಾರಣದ ಸೆಲೆ ಸ್ವಲ್ಪ ಮಟ್ಟಿಗೆ ಕೆಲಸ ಮಾಡಿತು. ಶಿಕ್ಷಣ, ಆರೋಗ್ಯ, ಸಾರ್ವಜನಿಕ ಉದ್ಯಮ–ಸೇವೆ, ವಸತಿ, ಆಹಾರ, ವಿದ್ಯುತ್, ನೀರಾವರಿ, ಹೀಗೆ ಸಾರ್ವಜನಿಕ ಹಿತಾಸಕ್ತಿಯ ಆಳ್ವಿಕೆಗೆ ಅವಕಾಶವಿತ್ತು. ಇದಕ್ಕೆ ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟದ ಮತ್ತು ಜನ ಚಳವಳಿಗಳ ಒತ್ತಾಸೆಯಿತ್ತು. 1970ರ ದಶಕದಲ್ಲಿ ಈ ಭರವಸೆಯ ಕುಸಿತವು ಆರಂಭವಾಗಿ, 1991ರ ‘ಎಲ್‌ಪಿಜಿ’ ಕಾಲಘಟ್ಟದಲ್ಲಿ ಬೇರೊಂದು ಮಜಲನ್ನು ತಲುಪಿತು. ಜನ ಕೇಂದ್ರಿತ ಹಿತಾಸಕ್ತಿಯ ಜಾಗದಲ್ಲಿ ಕಾರ್ಪೊರೇಟ್ ಹಿತಾಸಕ್ತಿ ನೆಲೆಯೂರಿತು. ಕೃಷಿ, ಭೂಮಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ರಸ್ತೆ, ನೀರು, ವಸತಿ, ಸಾರಿಗೆ, ಸೇವೆ, ಮಾಧ್ಯಮ, ನ್ಯಾಯ, ಹೀಗೆ ಎಲ್ಲವೂ ಉಳ್ಳವರ ಪಾಲಾಗಲು ಆರಂಭಿಸಿತು. ಸರ್ಕಾರಗಳ ನೀತಿಗಳಲ್ಲಿ ಸಂಪೂರ್ಣವಾದ ಪಲ್ಲಟ ಸಂಭವಿಸಿತು. ಇಂತಹ ಪಲ್ಲಟಗಳ ಭಾಗವಾಗಿಯೇ ಸಮಾಜದಲ್ಲಿ ಜಾತಿವಾದ ಮತ್ತು ಕೋಮುವಾದ ಆಳ್ವಿಕೆ ಮಾಡುವ ಪಕ್ಷಗಳ ಅಸ್ಮಿತೆಗಳಾದವು. ವಿಭಜನೆಯ ಅಸ್ತ್ರಗಳಾದವು.
ಜನರ ಬದುಕನ್ನು ಹಿಂಡಿ ಹಿಪ್ಪೆ ಮಾಡುವ ನವ-ಉದಾರವಾದಿ ಆರ್ಥಿಕ ನೀತಿಗಳನ್ನು ಜಾರಿ ಮಾಡುವ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಇತರೆ ಪ್ರಾದೇಶಿಕ ಬಂಡವಾಳಶಾಹಿ ಪಕ್ಷಗಳ ನಡುವೆ ವ್ಯತ್ಯಾಸವೇನಿಲ್ಲ, ಬದಲಿಗೆ ಕಾರ್ಪೊರೇಟ್ ಪರವಾದ ನೀತಿಗಳ ಜಾರಿಯಲ್ಲಿ ಪೈಪೋಟಿ ಕಾಣಬಹುದು. ಉದಾಹರಣೆಗೆ, ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುವ ಕರ್ನಾಟಕದ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿದ್ದು ಬಿಜೆಪಿ; ಅದನ್ನು ಪಟ್ಟು ಹಿಡಿದು ಜಾರಿ ಮಾಡುತ್ತಿರುವುದು ಕಾಂಗ್ರೆಸ್. ಈ ವಿಷಯದಲ್ಲಿ ಜೆಡಿಎಸ್ ಭಿನ್ನವಾಗಿಲ್ಲ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಿಸಲು ಕೇಂದ್ರದ ಬಿಜೆಪಿ ಸರ್ಕಾರ ‘ರಾಷ್ಟ್ರೀಯ ನಗದೀಕರಣ ಯೋಜನೆ’ ಜಾರಿಗೊಳಿಸಿದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇಡೀ ಸರ್ಕಾರಿ ಸ್ವತ್ತುಗಳನ್ನು ಖಾಸಗೀಕರಿಸಲು ‘ನಗದೀಕರಣ ಸಮಿತಿ’ಯನ್ನೇ ರಚಿಸಿದೆ. ಜೆಡಿಎಸ್ ಇದರ ಪರವಾಗಿದೆ. ಶಿಕ್ಷಣ ಮತ್ತು ಆರೋಗ್ಯದ ಖಾಸಗೀಕರಣದ ವಿಷಯದಲ್ಲಿ ಈ ಮೂರೂ ಪಕ್ಷಗಳಲ್ಲಿ ವ್ಯತ್ಯಾಸವಿಲ್ಲ. ಭ್ರಷ್ಟಾಚಾರದಲ್ಲಿ ಈ ಪಕ್ಷಗಳ ನಡುವೆ ಏನಾದರೂ ವ್ಯತ್ಯಾಸವನ್ನು ಯಾರಾದರೂ ಕಾಣಲು ಸಾಧ್ಯ ಇದೆಯೇ? ಇಂತಹ ಯಾವುದೇ ವಿಷಯಗಳಲ್ಲಿ ಜನರ ಜೀವನಕ್ಕೆ ಸಹಾಯಕವಾಗುವ ‘ಪರ್ಯಾಯ ರಾಜಕಾರಣ’ದ ವಾಸನೆಯೂ ಇಲ್ಲವೆಂಬುದೇ ವಾಸ್ತವ.
ಪರ್ಯಾಯ ರಾಜಕಾರಣವೆಂದರೆ, ಅಧಿಕಾರದಲ್ಲಿ ಪಕ್ಷಗಳ ಬದಲಾವಣೆಯ ಪ್ರಶ್ನೆ ಮಾತ್ರವಲ್ಲ, ನೀತಿಗಳ ಬದಲಾವಣೆ. ಮೂಲಭೂತವಾಗಿ ಸಾಂಪ್ರದಾಯಿಕವಾದ ಬಂಡವಾಳಶಾಹಿ ಮತ್ತು ಶ್ರೀಮಂತ ವರ್ಗಗಳ ಪರವಾದ ಪಕ್ಷಗಳು ಮತ್ತು ಜನ ಚಳವಳಿಗಳನ್ನು ಕೇಂದ್ರವಾಗುಳ್ಳ ಕಮ್ಯುನಿಸ್ಟ್, ಪ್ರಗತಿಪರ, ಇತ್ಯಾದಿ ಪಕ್ಷಗಳ ನಡುವಿನ ವ್ಯತ್ಯಾಸ ಇಲ್ಲೇ ಇರುವುದು. ‘ನೇತಾಗಳ ಬದಲಾವಣೆಯಲ್ಲ, ನೀತಿಗಳ ಬದಲಾವಣೆ’ಗೆ ಸಂಬಂಧಿಸಿದ ವಿಷಯವಿದು. ಕರ್ನಾಟಕದಲ್ಲಿ ಭೂರಹಿತರ ಸಂಖ್ಯೆ ಹೆಚ್ಚುತ್ತಿದೆ, ಅದರಲ್ಲೂ ದಲಿತರಲ್ಲಿ ಭೂ
ಹೀನತೆ ಹೆಚ್ಚುತ್ತಿದೆ. ಬಡವ– ಶ್ರೀಮಂತರ ಅಂತರ ಹೆಚ್ಚುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಅಪೌಷ್ಟಿಕತೆ, ಹಸಿವಿನ ಸೂಚ್ಯಂಕ ಏರುತ್ತಿದೆ. ಶಿಕ್ಷಣ, ಆರೋಗ್ಯ, ಇತರೆ ಸೇವೆಗಳು ಹಣವುಳ್ಳವರ ಸರಕಾಗುತ್ತಿವೆ. ಭ್ರಷ್ಟಾಚಾರ ಅಳತೆ ಮೀರಿದೆ. ಇವೆಲ್ಲವುಗಳ ದುಃಸ್ಥಿತಿಗೆ ಈ ಮೂರು ಪಕ್ಷಗಳ ನೀತಿಗಳೇ ಕಾರಣ. ಹೀಗಾಗಿಯೇ ಪರ್ಯಾಯ ರಾಜಕಾರಣ ಆಗಬೇಕಾಗಿದೆ. ಅದು ನೀತಿಗಳ ಬದಲಾವಣೆಯಲ್ಲಿ ಬರಬೇಕಾಗಿದೆ.
ಇದುವರೆಗಿನ ಆಳ್ವಿಕೆ ಮಾಡಿದ ಪಕ್ಷಗಳ ಶ್ರೀಮಂತರ ಪರವಾದ ನೀತಿಗಳಿಂದಾಗಿ ಸಾಮಾನ್ಯ ಜನರಲ್ಲಿ ಅತೃಪ್ತಿ, ಅಸಮಾಧಾನ, ಸಿಟ್ಟು ಹೆಚ್ಚಾಗುತ್ತಿದೆ. ಇದು ಜನತೆಯ ಸಹಜವಾದ ಪ್ರಜಾಸತ್ತಾತ್ಮಕ ಅಭಿವ್ಯಕ್ತಿಯಾಗಿದೆ. ಇವುಗಳಿಗೆ ಸ್ಪಷ್ಟವಾದ ಮತ್ತು ನೀತಿಗಳ ಆಧಾರದ ಪರಿಹಾರವನ್ನು ಕಾಣಬೇಕಾಗಿದೆ. ಆದರೆ, ಅಂತಹ ಸಾಧ್ಯತೆ ಕಡಿಮೆ. ಇದರಿಂದಾಗಿಯೇ ಆಳ್ವಿಕೆ ಮಾಡುವ ಶ್ರೀಮಂತ ವರ್ಗಗಳು ಜನರಲ್ಲಿ ಜಾತಿ ವಿಭಜನೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಮತ–ಧರ್ಮದ ವಿಭಜನೆಗಳನ್ನು ತೀವ್ರಗೊಳಿಸುತ್ತಿದ್ದಾರೆ. ಒಂದು ನೈಜ ಜನಪರ ಪರ್ಯಾಯ ಸಾಧ್ಯವೇ ಇಲ್ಲವೆನ್ನು
ವಂತಹ ಅಸಹಾಯಕತೆ ಸೃಷ್ಟಿಸಲಾಗುತ್ತಿದೆ.
ಜನರ ಸಮಸ್ಯೆಗಳಿಗೆ ಸ್ಪಷ್ಟವಾದ ಪರಿಹಾರ, ಜನರ ನಡುವೆ ಸಹಬಾಳ್ವೆ ಮತ್ತು ಸೌಹಾರ್ದ ಬೆಳೆಸುವುದು, ಸಮಾಜದಲ್ಲಿ ಅಸಮಾನತೆಯನ್ನು ಕೊನೆಗಾಣಿಸುವುದು, ಮುಂತಾದವು ಈ ಹೊತ್ತಿಗೆ ಅಗತ್ಯವಾದ ನೈಜ ಪರ್ಯಾಯಗಳಾಗಿವೆ. ಕಮ್ಯುನಿಸ್ಟ್ ಪಕ್ಷಗಳು, ಪ್ರಜಾಪ್ರಭುತ್ವ ಪಕ್ಷಗಳು ಸೇರಿದಂತೆ ಜನಪರ ಧೋರಣೆಯ ವ್ಯಕ್ತಿಗಳು, ಸಂಘ–ಸಂಸ್ಥೆಗಳು ಸೇರಿದಂತೆ ರಾಜ್ಯದಲ್ಲಿ ಒಂದು ನೈಜವಾದ ರಾಜಕೀಯ ಪರ್ಯಾಯವನ್ನು ರೂಪಿಸಲು ಇದು ಸಕಾಲವಾಗಿದೆ.
ಲೇಖಕ: ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.