ADVERTISEMENT

ಸಂಗತ: ‘ನೈಟ್‌ಹುಡ್ ಪೆಂಗ್ವಿನ್‌’ಗೆ ಸೇನಾ ಸಮ್ಮಾನ

ಗುರುರಾಜ್ ಎಸ್.ದಾವಣಗೆರೆ
Published 19 ಜನವರಿ 2026, 23:30 IST
Last Updated 19 ಜನವರಿ 2026, 23:30 IST
ಸಂಗತ
ಸಂಗತ   

​ಅದು ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್ ಮೃಗಾಲಯ. 160ಕ್ಕೂಹೆಚ್ಚು ನಾರ್ವೇಜಿಯನ್ ರಾಯಲ್ ಗಾರ್ಡ್ಸ್ ಸೈನಿಕರು ಸಾಲಾಗಿ ನಿಂತಿದ್ದಾರೆ. ಎಲ್ಲರ ಕಣ್ಣುಗಳು ಒಂದೇ ದಿಕ್ಕಿನತ್ತ ನೆಟ್ಟಿವೆ. ಅಷ್ಟರಲ್ಲಿ ಒಬ್ಬ ‘ಅಧಿಕಾರಿ’ ಅತ್ಯಂತ ಗಾಂಭೀರ್ಯ ದಿಂದ ಹೆಜ್ಜೆ ಹಾಕುತ್ತಾ ಬರುತ್ತಾನೆ. ಕಪ್ಪು–ಬಿಳಿ ಬಣ್ಣದ ಕೋಟು ಧರಿಸಿದಂತೆ ಕಾಣುವ ಆ ಅಧಿಕಾರಿ, ಸೈನಿಕರ ಸಾಲನ್ನು ತಪಾಸಣೆ ಮಾಡುತ್ತಾ ಮುಂದೆ ಸಾಗುತ್ತಾನೆ. ಸೈನಿಕರ ಗೌರವವಂದನೆ ಸ್ವೀಕರಿಸುತ್ತಾನೆ. ಆ ಅಧಿಕಾರಿ ಮನುಷ್ಯನಲ್ಲ, ಪೆಂಗ್ವಿನ್!

​ಸರ್ ನಿಲ್ಸ್ ಓಲಾವ್ III ಹೆಸರಿನ ಈ ಪೆಂಗ್ವಿನ್‌, ‘ನೈಟ್‌ಹುಡ್‌’ ಪದವಿ ಪಡೆದ ಹಾಗೂ ‘ಮೇಜರ್ ಸ್ಥಾನಕ್ಕೆ ಸಂದಿರುವ ವಿಶ್ವದ ಏಕೈಕ ಹಕ್ಕಿ. ಇದರ ಬೆಳವಣಿಗೆಯನ್ನು ಶೂನ್ಯದಿಂದ ಶಿಖರದವರೆಗಿನ ಅಸಾಮಾನ್ಯ ಪಯಣ ಎಂದು ಕೆಲವರು ವರ್ಣಿಸುತ್ತಾರೆ. ‘ಈ ಭಾಗ್ಯ ನಮಗಿಲ್ಲವಲ್ಲ’ ಎಂದು ಸೈನಿಕರು ಕರುಬುತ್ತಾರೆ. ಹಕ್ಕಿಯೊಂದಕ್ಕೆ ಅಸಾಮಾನ್ಯ ಗೌರವ ನೀಡಿರುವ ದೇಶ ನಮ್ಮದು ಎಂದು ದೇಶದ ಜನ ಬೀಗುತ್ತಾರೆ.

​1972ರಲ್ಲಿ ನಾರ್ವೆಯ ಸೈನ್ಯವು ತನ್ನ ಮಹಾರಾಜ ಓಲಾವ್ ಅವರೊಂದಿಗೆ ಎಡಿನ್‌ಬರ್ಗ್ ಮೃಗಾಲಯಕ್ಕೆ ಭೇಟಿ ನೀಡಿತ್ತು. ಅಂದು ಸೇನಾಧಿಕಾರಿ ಮೇಜರ್ ನಿಲ್ಸ್ ಎಗೆಲಿಯನ್ ಮೃಗಾಲಯದ ಒಂದು ಕಿಂಗ್ ಪೆಂಗ್ವಿನ್ ಅನ್ನು ದತ್ತು ಪಡೆದು, ಸೈನ್ಯದ ಲಾಂಛನವನ್ನಾಗಿ ಮಾಡಿಕೊಂಡರು. ನಾರ್ವೆಯ ಸೈನ್ಯದ ಮೇಜರ್ ನಿಲ್ಸ್ ಮತ್ತು ರಾಜ ಓಲಾವ್, ಇಬ್ಬರ ಹೆಸರನ್ನೂ ಸೇರಿಸಿ ಪೆಂಗ್ವಿನ್‌ಗೆ ‘ನಿಲ್ಸ್ ಓಲಾವ್’ ಎಂದು ಹೆಸರಿಡಲಾಯಿತು. ಅಂದಿನಿಂದ ಇಂದಿನವರೆಗೆ ಈ ಪೆಂಗ್ವಿನ್ ಮತ್ತದರ ಸಂತತಿಯು ಸಾಧಿಸಿದ ಪ್ರಗತಿ ಊಹೆಗೂ ಮೀರಿದ್ದಾಗಿದೆ.

ADVERTISEMENT

ಈಗ ನಾರ್ವೆಯ ಜನ ಗೌರವಿಸುತ್ತಿರುವುದು ಸರ್ ನಿಲ್ಸ್ ಓಲಾವ್ III ಅವರನ್ನು. ಅಂದರೆ ಮೂರನೆಯ ತಲೆಮಾರಿನ ಪ್ರತಿನಿಧಿಯನ್ನು. 1972ರಲ್ಲಿ ಮೊದಲ ಬಾರಿಗೆ ಪೆಂಗ್ವಿನ್‌ಗೆ ಸೈನಿಕ ಮರ್ಯಾದೆ ನೀಡಲಾಯಿತು. ಅಂದು ಪ್ರಾರಂಭವಾಗಿ ಇಂದಿನವರೆಗೆ ಮೂರು ಪೆಂಗ್ವಿನ್‌ಗಳು ಈ ಹೆಸರನ್ನು ಹೊತ್ತು ತಲೆಮಾರುಗಳವರೆಗೆ ಈ ಸಂಪ್ರದಾಯವನ್ನು ಜೀವಂತವಾಗಿರಿಸಿವೆ. ಮೊದಲನೆಯ ನಿಲ್ಸ್ ಓಲಾವ್ ಮರಣಹೊಂದಿದಾಗ, ಪದವಿ ಮತ್ತು ಗೌರವ ಅದರ ಉತ್ತರಾಧಿಕಾರಿಗೆ ವರ್ಗಾವಣೆಯಾದವು. ಇಂದು ಈ ಹಕ್ಕಿಯು ನಾರ್ವೇಜಿಯನ್ ಸೈನ್ಯದ ಅನೇಕ ಮಾನವ ಸೈನಿಕರಿಗಿಂತಲೂ ಉನ್ನತ ಪದವಿಯಲ್ಲಿದೆ.

ಸರ್ ನಿಲ್ಸ್ ಓಲಾವ್‌ ಜೀವನವೇ ಒಂದು ಭೌಗೋಳಿಕ ವಿಸ್ಮಯದಂತಿದೆ. ಇದರ ಪೂರ್ವಜರು ಇದ್ದದ್ದು ಅಂಟಾರ್ಕ್ಟಿಕಾದ ಶೀತಲ ದ್ವೀಪಗಳಲ್ಲಿ. ಓಲಾವ್ ಹುಟ್ಟಿದ್ದು ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ. ಜೀವಮಾನವಿಡೀ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವುದು ನಾರ್ವೆ ದೇಶದ ಸೈನ್ಯಕ್ಕಾಗಿ! ಇದರ ಪೂರ್ಣ ಹೆಸರಿನಲ್ಲಿ ‘ಬ್ಯಾರನ್ ಆಫ್ ದಿ ಬೌವೆಟ್ ಐಲ್ಯಾಂಡ್ಸ್’ ಎಂಬ ಬಿರುದು ಸೇರಿದೆ. ಈ ಬೌವೆಟ್ ದ್ವೀಪವು ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿರುವ ನಾರ್ವೆಗೆ ಸೇರಿದ ಒಂದು ನಿರ್ಜನ ದ್ವೀಪವಾಗಿದೆ.

ಈ ‘ಅಧಿಕಾರಿ’ ಹಕ್ಕಿಯ ವಾಸ ಮೃಗಾಲಯದಲ್ಲಿ. ನಾರ್ವೆಗೆ ಬಂದ ಹತ್ತು ವರ್ಷಗಳ ನಂತರ 1982ರಲ್ಲಿ ಕಾರ್ಪೊರಲ್ ಆಗಿ ನೇಮಕ ಮಾಡಲಾಯಿತು. ನಂತರ 2008ರಲ್ಲಿ ನಾರ್ವೆಯ ರಾಜರಿಂದ ‘ನೈಟ್‌ಹುಡ್’ ಗೌರವ ಪಡೆದ ವಿಶ್ವದ ಮೊದಲ ಹಕ್ಕಿ ಎನಿಸಿಕೊಂಡಿತು. ಎಂಟು ವರ್ಷಗಳ ನಂತರ ಬ್ರಿಗೇಡಿಯರ್ ಆಗಿ, 2023ರಲ್ಲಿ ಸೈನ್ಯದ ಅತ್ಯುನ್ನತ ಪದವಿಗಳಲ್ಲಿ ಒಂದಾದ ‘ಮೇಜರ್ ಜನರಲ್’ ಆಗಿ ಪದೋನ್ನತಿ ಪಡೆಯಿತು.

ಓಲಾವ್ ಹೆಸರಿಗಷ್ಟೇ ಅಧಿಕಾರಿಯಲ್ಲ. ನಾರ್ವೆಯ ಸೈನಿಕರು ಮೃಗಾಲಯಕ್ಕೆ ಬಂದಾಗ ಅದು ವರ್ತಿಸುವ ರೀತಿ ಸಿನಿಮಾದ ದೃಶ್ಯದಂತಿರುತ್ತದೆ. ಕೆಂಪು ಹಾಸಿನ ಮೇಲೆ ನಡೆಯುವಾಗ ಮೃಗಾಲಯದ ಇತರ ಪೆಂಗ್ವಿನ್‌ಗಳಂತೆ ಅತ್ತಿತ್ತ ಓಡುವುದಿಲ್ಲ. ಬದಲಾಗಿ, ತಲೆ ಎತ್ತಿ ಪ್ರತಿ ಸೈನಿಕನ ಮುಖವನ್ನೊಮ್ಮೆ ದಿಟ್ಟಿಸಿ ನೋಡುತ್ತದೆ. ಇದನ್ನು ಸೈನಿಕರು ‘ಸೇನಾ ತಪಾಸಣೆ’ ಎಂದೇ ಕರೆಯುತ್ತಾರೆ.

ನಿಲ್ಸ್ ಓಲಾವ್ ಸೈನಿಕರ ಸಮವಸ್ತ್ರ ಮತ್ತು ಬ್ಯಾಂಡ್‌ನ ಶಬ್ದವನ್ನು ತಕ್ಷಣವೇ ಗುರುತಿಸುತ್ತದೆ. ಈ ಪೆಂಗ್ವಿನ್ ಸ್ಕಾಟ್ಲೆಂಡ್ ಮತ್ತು ನಾರ್ವೆ ನಡುವಿನ ಅನ್ಯೋನ್ಯ ರಾಜತಾಂತ್ರಿಕ ಬಾಂಧವ್ಯದ ಜೀವಂತ ಸಾಕ್ಷಿಯಾಗಿದೆ. ನಾರ್ವೆಯ ಸೈನಿಕರು ಪ್ರತಿ ವರ್ಷವೂ ನಿಲ್ಸ್‌ಗೆ ಕ್ರಿಸ್‌ಮಸ್ ಕಾರ್ಡ್‌ಗಳನ್ನು ಮತ್ತು ತಾಜಾ ಮೀನುಗಳನ್ನು ಉಡುಗೊರೆಯಾಗಿ ಕಳುಹಿಸುತ್ತಾರೆ. ಎತ್ತರದ ಹಿಮದ ಬೆಟ್ಟಗಳ ಮೇಲೆ ರಾಜನಂತೆ ಮೆರೆಯ ಬೇಕಿದ್ದ ಈ ಕಿಂಗ್ ಪೆಂಗ್ವಿನ್, ಪ್ರಸ್ತುತ ಪ್ರಕೃತಿ ಮತ್ತು ಮಾನವ ಸಂಸ್ಕೃತಿಯ ಅದ್ಭುತ ಸಮ್ಮಿಲನದ ಸಂಕೇತ ಎನಿಸಿದೆ.

ಓಲಾವ್‌ಗೆ ಇರುವ ರಕ್ಷಣೆ ಇತರ ಪೆಂಗ್ವಿನ್‌ಗಳಿಗೆ ಇಲ್ಲ. ವಾಯುಗುಣ ಬದಲಾವಣೆಯಿಂದಾಗಿ ಹಿಮಖಂಡಗಳು ಕರಗುತ್ತಿವೆ. ಪ್ಲಾಸ್ಟಿಕ್ ಕಸ, ತೈಲ ಸೋರಿಕೆ, ಸಾಗರ ನೀರಿನ ಬಿಸಿಏರಿಕೆ, ಹೆಲಿಕಾಪ್ಟರ್ ಹಾರಾಟ, ಅತಿಯಾದ ಮೀನುಗಾರಿಕೆಯಿಂದ ಪೆಂಗ್ವಿನ್‌ಗಳ ಆವಾಸ ಹದಗೆಡುತ್ತಿದೆ. ಇರುವ 18 ಪ್ರಭೇದಗಳಲ್ಲಿ ಐದು ವಿನಾಶದ ಭೀತಿ ಎದುರಿಸುತ್ತಿವೆ ಎಂದು ‘ಅಂತರರಾಷ್ಟ್ರೀಯ ಸಂರಕ್ಷಣಾ ಒಕ್ಕೂಟ’ ಹೇಳಿದೆ. ಭೂಮಿಯ ಕ್ಷೇಮಕ್ಕಾಗಿ ಪೆಂಗ್ವಿನ್‌ಗಳು ಉಳಿಯಲೇಬೇಕಿದೆ.

‘ವಿಶ್ವ ಪೆಂಗ್ವಿನ್‌ ದಿನಾಚರಣೆ’ (ಜ. 20) ಸಂದರ್ಭದಲ್ಲಿ ಓಲಾವ್‌ ಬಗ್ಗೆ ಹೆಮ್ಮೆಪಡುತ್ತಾ, ಪೆಂಗ್ವಿನ್‌ಗಳ ಯೋಗಕ್ಷೇಮದ ಬಗ್ಗೆ ಯೋಚಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.