ADVERTISEMENT

ಅಕ್ಷತ ಅರಣ್ಯ ಮತ್ತು ಗಣಿಗಾರಿಕೆ

ಬಳ್ಳಾರಿಯೆಂದರೆ ಗಣಿಗಾರಿಕೆಗೆ ಮೀಸಲು ಎಂದು ಭಾವಿಸಿರುವ ರಾಜಕಾರಣಿ ಅಧಿಕಾರಶಾಹಿ ಕೂಟಕ್ಕೆ ಇಲ್ಲಿನ ಜನರೇ ತಕ್ಕ ಉತ್ತರ ಕೊಡಬೇಕಿದೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 20:00 IST
Last Updated 25 ಜೂನ್ 2019, 20:00 IST
.
.   

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ದೋಣಿಮಲೈ ಬ್ಲಾಕ್‍ನಲ್ಲಿರುವ 133.58 ಹೆಕ್ಟೇರ್ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ನೀಡಲು ರಾಜ್ಯ ಅರಣ್ಯ ಹಾಗೂ ಪರಿಸರ ಇಲಾಖೆಯ ಅನುಮತಿ ಆಧರಿಸಿ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.ಇದರಲ್ಲಿ 66.78 ಹೆಕ್ಟೇರ್ ಅಕ್ಷತ (virgin– ಮಾನವನ ಹಸ್ತಕ್ಷೇಪ ಇಲ್ಲದ) ಕಾಡಾಗಿರುತ್ತದೆ (ಪ್ರ.ವಾ., ಜೂನ್ 21). ಬಳ್ಳಾರಿಯ ಕಾನೂನುಬಾಹಿರ ಗಣಿಗಾರಿಕೆ ಕುಪ್ರಸಿದ್ಧವಾಗಿರುವಾಗ ಮತ್ತೆ ಅಲ್ಲಿ ಗಣಿಗಾರಿಕೆಗೆ ಅನುಮತಿಯೇ? ಯಾವ ಆಧಾರದ ಮೇಲೆ ಅರಣ್ಯ ಇಲಾಖೆ ಇದಕ್ಕೆ ಎನ್‍ಒಸಿ ನೀಡಿದೆ? ಬಳ್ಳಾರಿಯ ಅಕ್ಷತ ಕಾಡನ್ನು ಯಾದಗಿರಿ ಜಿಲ್ಲೆಯಲ್ಲಿ ಪುನರ್ ಸೃಷ್ಟಿ ಮಾಡುತ್ತೇವೆ ಎನ್ನುವ ಇವರ ಬೋಳೆತನಕ್ಕೂ ಮಿತಿ ಬೇಡವೇ?

ಒಂದು ಸಣ್ಣ ಭಾಗ ಕಾಡು ಮಾತ್ರ ಉಳಿದುಕೊಂಡಿರುವ ಬಳ್ಳಾರಿ ಪ್ರದೇಶ, ಪಾರಿಸರಿಕವಾಗಿ ಅತೀ ಸೂಕ್ಷ್ಮವಾದದ್ದು. ಇಂತಹ ಪ್ರದೇಶಕ್ಕೆ ಸಣ್ಣ ಗಾಸಿಯಾದರೂ ಪರಿಣಾಮ ಅಗಾಧವಾಗಿರುತ್ತದೆ. ಇನ್ನೂರು ಕೋಟಿ ವರ್ಷದ ಬಂಡೆಗಳಿಂದ ಉಂಟಾಗಿರುವ ಅಲ್ಲಿನ ಪ್ರೌಢ ಮಣ್ಣಿನಲ್ಲಿ ಸ್ವಾಭಾವಿಕವಾಗಿ ಬೆಳೆದ ಅಕ್ಷತ ಅರಣ್ಯ ಇದು. ಬಹಳ ಶ್ರೇಷ್ಠವಾದ ಶ್ರೀಗಂಧದ ಮರ ಈ ಕಾಡಿನಲ್ಲಿದ್ದು ಇದರ ಸುಗಂಧಕ್ಕೆ ಪ್ರಪಂಚವೇ ಮುಗಿಬೀಳುತ್ತದೆ. ಒಂದು ಶ್ರೀಗಂಧದ ಮರದ ಸುತ್ತಲೂ 150 ಬಗೆಯ ಸಸ್ಯಗಳು ಸಹಬಾಳ್ವೆಯಲ್ಲಿ ಬೆಳೆಯುತ್ತಾ ಜೀವವೈವಿಧ್ಯ ಮೆರೆಯುತ್ತವೆ. ನಿತ್ಯಹರಿದ್ವರ್ಣದ ಈ ಮರವು ಮಳೆ ನೀರನ್ನು ಹಿಡಿದಿಟ್ಟು ನೆಲ, ಜಲ ರಕ್ಷಿಸುವ ಕೆಲಸ ಮಾಡುತ್ತದೆ.

ಇನ್ನೊಂದು, ಅಂಟು ಬರುವ ಜಾತಿಯ ಸಾಲಕ್ಕಿ ಮರ. ಇದರ ಅಂಟಿನಲ್ಲಿ ತಯಾರಿಸುವ ಒಂದು ಆಯಿಂಟ್‍ಮೆಂಟ್, ಕೀಲುನೋವು ನಿವಾರಣೆಗೆ ಜಗತ್ಪ್ರಸಿದ್ಧ. ಸುವಾಸಿತ ಪದಾರ್ಥವಾಗಿ ಕೂಡ ಇದು ಬಳಕೆಯಲ್ಲಿದೆ. ಹೀಗೆ ಬಳ್ಳಾರಿ ಕಾಡಿನಲ್ಲಿ 250ಕ್ಕೂ ಹೆಚ್ಚು ವಿಶೇಷ ಜಾತಿಯ ವಿವಿಧ ಮರಗಳನ್ನು, ನೂರಾರು ಜಾತಿಯ ಗಿಡಮೂಲಿಕೆಗಳನ್ನು, ಅಪಾರವಾದ ಗೆಡ್ಡೆಗೆಣಸುಗಳನ್ನು ಗುರುತಿಸಬಹುದು. ಕೇವಲ ಹಣಕ್ಕಾಗಿ ಇದನ್ನೆಲ್ಲಾ ಸರ್ವನಾಶ ಮಾಡುವುದೆಂದರೆ? ಅದೂ ಅಭಿವೃದ್ಧಿ, ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ!

ADVERTISEMENT

ಇನ್ನು ಸ್ಟೀಲಿನ ವಿಚಾರಕ್ಕೆ ಬಂದರೆ, ಅದರ ಕಚ್ಚಾ ಪದಾರ್ಥವನ್ನು ಸಂಸ್ಕರಿಸಲು ಬೇಕಾಗುವ ನೀರು ಮತ್ತು ಶಕ್ತಿಯ ಪ್ರಮಾಣ ಊಹಿಸಲು ಅಸಾಧ್ಯ. ಒಂದು ಟನ್ ಸ್ಟೀಲ್ ಉತ್ಪಾದಿಸಲು ಅದರ 60-70 ಪಟ್ಟು ನೀರು ಬೇಕು. ಇದೆಲ್ಲಾ ಬೇಕಾಗಿರುವುದು ತೀವ್ರ ನೀರಿನ ಕೊರತೆ ಇರುವ ಬಳ್ಳಾರಿಯಂತಹ ಪ್ರದೇಶದಲ್ಲಿ. ಸ್ಟೀಲ್ ಬಳಕೆಯಿಂದ ವಾತಾವರಣದಲ್ಲಿ ಶಾಖ ಏರುತ್ತದೆ. ಬೆಂಗಳೂರಿನಲ್ಲಿ ಶಾಖ ಯದ್ವಾತದ್ವಾ ಹೆಚ್ಚಾಗಲು ಅತಿಯಾದ ಸ್ಟೀಲ್ ಬಳಕೆ ಒಂದು ಮುಖ್ಯ ಕಾರಣ. ಭಾರತದ ನೀರಿನಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಾಗಿರುವುದಕ್ಕೆ, ಬಳಸಿ ಎಸೆದ ಸ್ಟೀಲ್ ಪದಾರ್ಥಗಳು ಮಣ್ಣಲ್ಲಿ ಬೆರೆತು ನೀರಲ್ಲಿ ಸೇರಿರುವುದೇ ಕಾರಣ.

ಬಳ್ಳಾರಿ ಪ್ರದೇಶದಲ್ಲಿ ಮಳೆ 500 ಮಿ.ಮೀ.ಗಿಂತಲೂ ಕಡಿಮೆಯಿದ್ದು, ಅದರ ಶೇ 50ರಷ್ಟು ಸಾಮಾನ್ಯವಾಗಿ ಒಂದೇ ತಿಂಗಳಲ್ಲಿ ಸುರಿದುಬಿಡುತ್ತದೆ. ತೆರೆದ ಗಣಿಗಾರಿಕೆಯಲ್ಲಿ ಆಳ ಪದರಗಳಿಂದ ಅಗೆದು ಹಾಕಿದ ಮಣ್ಣುಗುಡ್ಡೆಗಳು ಮಳೆಯ ರಭಸಕ್ಕೆ ಕರಗಿ, ಕಡುಕೆಂಪು ವರ್ಣದ ನೀರು ಹರಿದು ಜಲಾಶಯ, ಕಣಿವೆ, ಹೊಲಗದ್ದೆಗಳಿಗೆ ಸೇರುತ್ತದೆ. ತೀರಾ ನುಣುಪಾದ ಈ ಸತ್ತ ಮಣ್ಣು ಹೊಲಗಳಿಗೆ ಮೆತ್ತಿಕೊಂಡಾಗ ಭೂಮಿಗೆ ಉಸಿರುಕಟ್ಟುತ್ತದೆ. ಜಲಾಶಯಗಳಲ್ಲಿ ಸೇರಿ ಅವುಗಳ ನೀರು ಶೇಖರಣಾ ಸಾಮರ್ಥ್ಯ ಕುಗ್ಗುತ್ತದೆ. (ತುಂಗಭದ್ರಾ ಜಲಾಶಯದ ನೀರು ಶೇಖರಣಾ ಸಾಮರ್ಥ್ಯ ಶೇ 45ರಷ್ಟು ಕಡಿಮೆಯಾಗಿದ್ದು, ಸರ್ಕಾರ ಅದರ ಹೂಳೆತ್ತುವುದು ದುಸ್ಸಾಧ್ಯ ಎನ್ನುವ ತೀರ್ಮಾನಕ್ಕೆ ಬಂದಿದೆ). ನುಣುಪಾದ ದೂಳು ಆಕಾಶಕ್ಕೆ ಹಾರಿದಾಗ, ಘನೀಕರಣಗೊಳ್ಳಬೇಕಾದ ಮೋಡ ಚದುರಿಬಿಡುತ್ತದೆ. ಈ ದೂಳು ಸಸ್ಯಗಳ ಎಲೆಗಳಿಗೆ ಮೆತ್ತಿಕೊಂಡು ದ್ಯುತಿಸಂಶ್ಲೇಷಣೆಗೆ ಅಡ್ಡಿ ಉಂಟುಮಾಡುತ್ತದೆ. ಹೂವಿನ ಮೇಲೆ ದೂಳಿನ ಸಿಂಚನವಾಗಿ ಪರಾಗಸ್ಪರ್ಶಿಗಳಿಗೆ ಮಕರಂದ ಹೀರಲಾಗುವುದಿಲ್ಲ. ಮಾತ್ರವಲ್ಲ, ಅವುಗಳ ರೆಕ್ಕೆಗೆ ದೂಳು ಹತ್ತಿ ಹಾರಲಾರದೆ ಸಾಯುತ್ತವೆ. ಹೀಗೆ ಗಣಿಗಾರಿಕೆ ಪ್ರದೇಶದಲ್ಲಿ ಪ್ರಾಣಿ, ಪಕ್ಷಿ, ಸಸ್ಯಸಂಕುಲ ಸದ್ದಿಲ್ಲದೇ ವಿನಾಶ ಹೊಂದುತ್ತವೆ.

ಇಂತಹ ವಿನಾಶಕಾರಿ ಕೆಲಸಗಳಿಗೆ ಕೆಲವರು ಸೂತ್ರಧಾರರಂತೆ ಇರುತ್ತಾರೆ. ಭಾರಿ ಕೈಗಾರಿಕೆಗಳಿಗೆ ಅನುಮತಿ ಕೊಡುವಾಗ ಉನ್ನತ ಮಟ್ಟದ ಸಮಿತಿ ಇರುತ್ತದೆ. ಅದರಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿರುತ್ತಾರೆ. ಸಚಿವರು ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಗಳು ಸಾಮಾನ್ಯವಾಗಿ ಕಂಪನಿಗಳ ಪರವಾಗಿಯೇ ತೀರ್ಮಾನ ಕೈಗೊಳ್ಳುತ್ತವೆ. ಕೈಗಾರಿಕೆಯಿಂದ ಪರಿಸರ ಮತ್ತು ಜನಜೀವನದ ಮೇಲೆ ಉಂಟಾಗುವ ದುಷ್ಪರಿಣಾಮದ ಅಂದಾಜು ಮಾಡಬೇಕೆನ್ನುವಂಥವರ ಧ್ವನಿಯನ್ನು ಅವರು ಕ್ಷೀಣವಾಗಿಸಿ ಬಿಡುತ್ತಾರೆ.

ಬಳ್ಳಾರಿಯೆಂದರೆ ಗಣಿಗಾರಿಕೆಗೆ ಮೀಸಲು ಎಂದು ಭಾವಿಸಿರುವ ರಾಜಕಾರಣಿ- ಅಧಿಕಾರಶಾಹಿ ಕೂಟಕ್ಕೆ ಇಲ್ಲಿನ ಜನರೇ ತಕ್ಕ ಉತ್ತರ ಕೊಡಬೇಕಿದೆ. ಪಾರಂಪರಿಕ ಪದ್ಧತಿಗಳನ್ನು ಉಳಿಸಿಕೊಂಡು, ಮಳೆಯಾಶ್ರಿತ ಕೃಷಿಯಲ್ಲಿ ವೈವಿಧ್ಯಮಯ ಬೆಳೆ ತೆಗೆಯುವ ಇಲ್ಲಿನ ರೈತರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ತಮ್ಮ ಹೊಲಗಳ ಒಂದು ಭಾಗದಲ್ಲಿ ಮರಗಿಡ ಬೆಳೆಸಿ ಪರಿಸರಕ್ಕೆ ಕೊಡುಗೆ ನೀಡಲು ಹೆಣಗುತ್ತಿರುವ ಇವರು ಸರ್ಕಾರದ ಕಣ್ಣು ತೆರೆಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.