ADVERTISEMENT

ಸಂಗತ: ಟ್ರೋಲ್‌ಗೆ ಪಾಠ ಕಲಿಸುವ ಹೊತ್ತು!

ಪಿ.ಕುಸುಮಾ ಆಯರಹಳ್ಳಿ
Published 31 ಜುಲೈ 2025, 23:42 IST
Last Updated 31 ಜುಲೈ 2025, 23:42 IST
<div class="paragraphs"><p>ಸಂಗತ</p></div>

ಸಂಗತ

   

ನಟ ದರ್ಶನ್‌ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಕಮೆಂಟ್‌ಗಳನ್ನು ಮಾಡಿದ ಕಾರಣಕ್ಕೆ ನಟಿ ರಮ್ಯಾ ದೂರು ಕೊಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳ ದಾಳಿಕೋರರಿಂದ ಡಿಜಿಟಲ್‌ ದೌರ್ಜನ್ಯಕ್ಕೆ ಒಳಗಾಗುತ್ತಿರುವವರಲ್ಲಿ ರಮ್ಯಾ ಮೊದಲಿಗರಲ್ಲ. ಸಾಮಾನ್ಯರಿಂದ ಖ್ಯಾತನಾಮರವರೆಗೆ ಅನೇಕರು ನಿತ್ಯವೂ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ಈ ಹಿಂದೆ ನಟಿಯೊಬ್ಬರು ದಪ್ಪಗಾದಾಗ ಅವರ ದೇಹದ ಕುರಿತು ಅಪಹಾಸ್ಯ ಮಾಡಲಾಗಿತ್ತು; ಅಶ್ಲೀಲ ಕಾರಣಗಳನ್ನು ಬರೆದು ಅವರನ್ನು ನೋಯಿಸಲಾಗಿತ್ತು. ಇಂತಹ ಉದಾಹರಣೆಗಳು ನೂರಾರು ಇವೆ. ಹಾಗಾಗಿ, ಅಶ್ಲೀಲ ಕಮೆಂಟ್‌ಗಳನ್ನು ದರ್ಶನ್ ಅಭಿಮಾನಿಗಳು ಮಾತ್ರ ಮಾಡುತ್ತಿದ್ದಾರೆ ಎನ್ನಲಾಗದು. ಇದು ಚಿತ್ರರಂಗಕ್ಕೆ ಸಂಬಂಧಿಸಿದ ವಿದ್ಯಮಾನ ಮಾತ್ರವೂ ಅಲ್ಲ. ಸಾಮಾನ್ಯ ಹೆಣ್ಣುಮಕ್ಕಳಿಗೂ, ಭಿನ್ನ ಸಿದ್ಧಾಂತದ, ಅಭಿಪ್ರಾಯ ಭೇದವಿರುವ ಹೆಣ್ಣುಮಕ್ಕಳಿಗೂ, ರಾಜಕೀಯ ಕಾರಣಕ್ಕೂ, ಹೆಣ್ಣು–ಗಂಡೆಂಬ ಭೇದವಿರದೇ ಸೋಷಿಯಲ್‌ ಮೀಡಿಯಾ ದಾಳಿಕೋರರು ವ್ಯಕ್ತಿತ್ವಹರಣ ಮಾಡುತ್ತಲೇ ಇರುತ್ತಾರೆ. ಶಿಕ್ಷೆಯ ಭಯವಿಲ್ಲದೇ ಕುಹಕವಾಡಿ ನೋಯಿಸುತ್ತಿರುತ್ತಾರೆ. ಅದೆಲ್ಲವೂ ಖಂಡನೀಯವೇ. ಆದರೆ, ಹೆಣ್ಣುಮಕ್ಕಳ ವಿಷಯದಲ್ಲಿ ಬೇರೊಂದು ಸೂಕ್ಷ್ಮವಿದೆ.

ADVERTISEMENT

ಹೆಣ್ಣುಮಕ್ಕಳನ್ನು, ಅದರಲ್ಲೂ ಗಟ್ಟಿಧ್ವನಿ ಇರುವವರನ್ನು ಬಗ್ಗಿಸಲು, ಕುಗ್ಗಿಸಲು ಅಶ್ಲೀಲ ಮಾತುಗಳಾಡುವುದು, ಚಾರಿತ್ರ್ಯ ಕುರಿತು ಮಾತುಗಳನ್ನಾಡುವುದು, ಸೋಷಿಯಲ್‌ ಮೀಡಿಯಾ ಕಾಲಕ್ಕೂ ಮೊದಲಿನಿಂದಲೂ ಬಳಸಲಾಗುತ್ತಿರುವ ಅಸ್ತ್ರ. ವೈಯಕ್ತಿಕ ನಿಂದನೆ ಮಾಡಿದಾಗ ಹೆಣ್ಣುಮಕ್ಕಳು ಅವಮಾನದಿಂದ ಕುಗ್ಗಿಬಿಡುತ್ತಾರೆ; ಅವರನ್ನು ಮತ್ತೆ ಎಂದಿಗೂ ತಲೆ ಎತ್ತದಂತೆ ಮಣಿಸಿಬಿಡಬಹುದು ಎಂದು ಕೆಲವರು ಭಾವಿಸಿದ್ದಾರೆ. ಇದೇ ಸೂತ್ರ ಸಾಮಾಜಿಕ ಮಾಧ್ಯಮಗಳಲ್ಲೂ ಮುಂದುವರಿದಿದೆ.

ಸಾಕಷ್ಟು ಹೆಣ್ಣುಮಕ್ಕಳ ವಿಷಯದಲ್ಲಿ ಇದು ನಿಜವೂ ಆಗುತ್ತದೆ. ಅವರು ನೊಂದು, ಅತ್ತು ಸುಮ್ಮನಾಗಿಬಿಡುತ್ತಾರೆ. ಡಿಜಿಟಲ್‌ ದೌರ್ಜನ್ಯಕ್ಕೆ ಹೆದರಿ ಹೊರನಡೆದೂ ಬಿಡುತ್ತಾರೆ. ಕೆಲವರು ಹಾಗಲ್ಲ. ಎಸೆದ ಕಲ್ಲುಗಳ ಪೆಟ್ಟಿಗೆ ಹೆದರುವುದಿಲ್ಲ. ಕಲ್ಲೆಸೆದ ಕೈಗಳ ಪಕ್ಕಾ ಲೆಕ್ಕವಿಡುತ್ತಾರೆ. ಎಲ್ಲ ಒಟ್ಟು ಸೇರಿಸಿಕೊಂಡು ಧೈರ್ಯವಾಗಿ ನುಗ್ಗಿ, ತಿರುಗಿ ಕೊಡುತ್ತಾರೆ. ರಮ್ಯಾ ಅವರು ಈಗ ಮಾಡಿರುವುದು ಅಂತಹ ಧೈರ್ಯದ ಕೆಲಸ. ತಮ್ಮ ವಿರುದ್ಧ ಕೊಳಕು ಮಾತುಗಳನ್ನು ಆಡಿದವರ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇದು ಡಿಜಿಟಲ್‌ ಸಂತ್ರಸ್ತರೆಲ್ಲರ ಪರವಾಗಿ ಕೊಟ್ಟಿರುವ ಪ್ರಾತಿನಿಧಿಕ ದೂರು ಅನ್ನಬಹುದು. ಹಾಗಾಗಿಯೇ ರಮ್ಯಾ ಪರ ನಿಲ್ಲುವುದು ಸಂತ್ರಸ್ತರ ಪರವಾದ ನಡೆ.

ಡಿಜಿಟಲ್‌ ಜಗತ್ತೊಂದು ಗೋಡೆಗಳ ಜಾತ್ರೆ. ಅಲ್ಲಿ ಯಾರು ಬೇಕಾದರೂ ಯಾವ ಗೋಡೆಯ ಮೇಲಾದರೂ ಏನನ್ನಾದರೂ ಬರೆದು ಹೋಗಿಬಿಡಬಹುದು. ಹಾಗೆ ಬರೆಯುವವರು ತಮ್ಮ ನಿಜವಾದ ಗುರುತು ತೋರಿಸಬಹುದು. ತೋರಿಸದೆಯೂ ಇರಬಹುದು. ಅಲ್ಲಿ ಉತ್ತರದಾಯಿತ್ವ ಇಲ್ಲವಾದ್ದರಿಂದ ಮಾತುಗಳು ಸುಲಭ ಮತ್ತು ಅಗ್ಗ. ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಮಾತಾಡಿದ್ದೂ ಈ ಕಾರಣದಿಂದಲೇ. ಯಾರು, ಯಾರ ಬಗ್ಗೆ ಬೇಕಾದರೂ, ಅವರ ಪರಿಚಯವೇ ಇರದಿದ್ದರೂ, ಒಮ್ಮೆಯೂ ಭೇಟಿಯಾಗದಿದ್ದರೂ, ಏನೂ ಗೊತ್ತಿಲ್ಲದಿದ್ದರೂ ಹಗುರವಾಗಿ, ಹೀನಾಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಬಹುದು. ನಿಜವಾಗಿ ಅಂತಹವರು ತಮ್ಮ ಕಮೆಂಟುಗಳ ಮೂಲಕ ಯಾರ ಬಗ್ಗೆಯೋ ಮಾತನಾಡುತ್ತಿರುವುದಿಲ್ಲ, ಬದಲಾಗಿ ತಮ್ಮ ಬಗ್ಗೆ ತಾವೇ ಮಾತನಾಡುತ್ತಾರೆ. ಇನ್ನೊಬ್ಬರ ವ್ಯಕ್ತಿತ್ವ ಹನನ ಮಾಡಿದ ವಿಕೃತ ಸಂತೋಷ ಅನುಭವಿಸುತ್ತಲೇ ತಮ್ಮ ವ್ಯಕ್ತಿತ್ವದ ವಿಕೃತಿ ಅನಾವರಣಗೊಳಿಸಿರುತ್ತಾರೆ.

ಚರ್ಚೆಗಳು, ವಾದಗಳು, ಪರ– ವಿರೋಧಗಳು ಸಮಾಜದಲ್ಲಿ ಇರುವಂತಹವೇ. ಆ ಕಾರಣಕ್ಕೆ ಯಾರ ಬಗ್ಗೆಯೇ ಆಗಲಿ ಕೊಳಕು ಭಾಷೆ ಬಳಸಿ, ನಿಂದಿಸಿ ಕಮೆಂಟ್‌ ಮಾಡುವುದು ಸರಿಯಲ್ಲ. ಆ ಡಿಜಿಟಲ್‌ ಧಾಷ್ಟ್ಯಕ್ಕೆ ಕಾನೂನಿನ ತಡೆ ಬೇಕಾಗಿದೆ.  

ಈ ದಾಳಿ ಪ್ರತಿದಾಳಿ ನಡೆಯುತ್ತಿರುವುದು ಕೇವಲ ಅಕ್ಷರಗಳ ಮೂಲಕ. ಶಿಕ್ಷಿತರು ಹೀಗೆಲ್ಲಾ ವರ್ತಿಸುತ್ತಿರುವುದು, ನಮ್ಮ ಶಿಕ್ಷಣಕ್ಕೂ, ಕನಿಷ್ಠ ನಾಗರಿಕ ವರ್ತನೆಗೂ ಯಾವುದೇ ಸಂಬಂಧ ಇಲ್ಲದಂತಾಗಿರುವುದಕ್ಕೆ ಸಾಕ್ಷಿ. ಸಹ ಮನುಷ್ಯರನ್ನು ನೋಯಿಸಲು, ನಿಂದಿಸಲು, ಕುಹಕವಾಡಲು ಅಕ್ಷರಗಳನ್ನು ಅಸ್ತ್ರ ಮಾಡಿಕೊಳ್ಳುವುದು ದುರಂತ. ತಾವು ಯಾರಿಗೂ ಕಾಣುವುದಿಲ್ಲ, ಕಂಡರೂ ಏನೂ ಮಾಡಲಾಗುವುದಿಲ್ಲ ಎಂಬುದು ಡಿಜಿಟಲ್‌ ದಾಳಿಕೋರರ ಧೈರ್ಯ ಪ್ರದರ್ಶನಕ್ಕೆ, ವಿಕೃತಿಗೆ ಕಾರಣ. ಈಗ ರಮ್ಯಾ ಅವರ ದೂರಿನನುಸಾರ ಡಿಜಿಟಲ್‌ ವಿಳಾಸದ ಆಧಾರದಿಂದ ಅವರನ್ನು ಪತ್ತೆಹಚ್ಚಿ ಹಿಡಿದು, ಕಾನೂನಿನ ಪ್ರಕಾರ ಶಿಕ್ಷಿಸಬಹುದು ಎಂಬುದು ಈ ಪ್ರಕರಣದಲ್ಲಿ ಸಾಬೀತಾದರೆ, ಡಿಜಿಟಲ್‌ ದೌರ್ಜನ್ಯಕ್ಕೊಳಗಾದ ಅನೇಕರಿಗೆ ಮಾನಸಿಕ ನೆಮ್ಮದಿ ಸಿಗಬಹುದು. ಮುಂದೆ ಹಾಗೆ ಮಾಡುವವರಿಗೆ ಎಚ್ಚರಿಕೆಯೂ ಆಗಬಹುದು.

ರಮ್ಯಾ ದೂರು ಕೊಟ್ಟಿದ್ದರಿಂದ ಆಗುತ್ತಿರುವ ಲಾಭವೆಂದರೆ, ಬೇರೆ ಯಾರೂ ಇಂತಹ ಡಿಜಿಟಲ್‌ ದೌರ್ಜನ್ಯದ ದೂರು ಕೊಟ್ಟಿದ್ದರೂ ಆಗಬಹುದಾಗಿದ್ದರ ಎಷ್ಟೋ ಪಟ್ಟು ದೊಡ್ಡ ಸುದ್ದಿಯಾಗುತ್ತಿರುವುದು. ಇಷ್ಟು ದೊಡ್ಡ ಸುದ್ದಿ, ಅಧಿಕೃತ ದೂರು, ಇದೆಲ್ಲದರಿಂದಾಗಿ ಕೆಟ್ಟ ಕಮೆಂಟು ಕುಟ್ಟುವ ಮುನ್ನ ಒಮ್ಮೆಯಾದರೂ ಯೋಚಿಸುವಂತಾಗಿದೆ ಈಗ. ಅದಕ್ಕಾಗಿ ರಮ್ಯಾ ಅವರನ್ನು ಅಭಿನಂದಿಸಲೇಬೇಕು. ರಮ್ಯಾ ದೂರಿನಷ್ಟೇ ಮಹತ್ವ ಸಾಮಾನ್ಯರ ದೂರಿಗೂ ಸಿಕ್ಕರೆ, ಕಿರುಕುಳ ಅನುಭವಿಸಿ ಆತ್ಮಹತ್ಯೆಯವರೆಗೂ ಯೋಚಿಸುವವರು ನೆಮ್ಮದಿಯಿಂದ ಬದುಕಿಯಾರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.