ADVERTISEMENT

ಸಂಗತ | ಎಲ್ಲರೂ ರೈತರ ಮಕ್ಕಳೇ, ಆದರೆ...

ಚನ್ನರಾಯಪಟ್ಟಣ ಹೋಬಳಿಯ ಗ್ರಾಮಗಳ ರೈತರ ಹೋರಾಟವನ್ನು ಸರ್ಕಾರ ಸಂಯಮ ಮತ್ತು ವಿವೇಕದಿಂದ ನೋಡಬೇಕಾಗಿದೆ.

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 23:43 IST
Last Updated 26 ಜೂನ್ 2025, 23:43 IST
   

ಭಾರತದ ರಾಜಕೀಯ ಸಂಕಥನಗಳಲ್ಲಿ ಪಕ್ಷಾತೀತವಾಗಿ ಕಾಣಬಹುದಾದ ಒಂದು ಸಮಾನ ಎಳೆ ರೈತರಿಗೆ ಸಂಬಂಧಿಸಿದ್ದು. ಆ ಸಮಾನ ಎಳೆ, ರೈತರನ್ನು ‘ಅನ್ನದಾತರು’ ಎಂದು ನೋಡುವ ಹೃದಯ ವೈಶಾಲ್ಯ ಮತ್ತು ‘ನಾವೂ ಮಣ್ಣಿನ ಮಕ್ಕಳೇ’ ಎಂದು ಬೆನ್ನುತಟ್ಟಿಕೊಳ್ಳುವ ಜಾಣ್ಮೆಗೆ ಸಂಬಂಧಿಸಿದ್ದು.

ಆದರೆ, 1980ರ ನರಗುಂದ, ನವಲಗುಂದ ಬಂಡಾಯದಿಂದ ಸದ್ಯದ ದೇವನಹಳ್ಳಿ–ಚನ್ನರಾಯಪಟ್ಟಣದವರೆಗೆ, ನವ ಉದಾರವಾದಿ ಆರ್ಥಿಕತೆಗೆ ಅನುಗುಣವಾಗಿ ಹಾಗೂ ಬೃಹತ್‌ ಉದ್ಯಮಗಳ ಏಳಿಗೆಗಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ, ತಮ್ಮ ಭೂಮಿಗಾಗಿ ಹೋರಾಡುವ ರೈತರ ವಿರುದ್ಧ ಕ್ರೂರ ದಬ್ಬಾಳಿಕೆ ನಡೆಸುವ ಒಂದು ಪರಂಪರೆಯನ್ನೇ ಗುರುತಿಸಬಹುದು.

ಪ್ರಸ್ತುತ, ಚನ್ನರಾಯಪಟ್ಟಣ ಭೂಸ್ವಾಧೀನ ಪ್ರಕ್ರಿಯೆಯ ಮೂಲ ಇರುವುದು ಕೇಂದ್ರ ರಕ್ಷಣಾ ಸಚಿವಾಲಯದ ವ್ಯಾಪ್ತಿಗೆ ಬರುವ ‘ಹೈಟೆಕ್‌ ಡಿಫೆನ್ಸ್‌ ಮತ್ತು ಏರೊಸ್ಪೇಸ್‌ ಪಾರ್ಕ್‌’ ನಿರ್ಮಿಸುವ ಯೋಜನೆಯಲ್ಲಿ. ಈ ಏರೊಸ್ಪೇಸ್‌ ಪಾರ್ಕ್‌ ನಿರ್ಮಾಣಕ್ಕೆ ಅಗತ್ಯವಾದ ಅತಿ ಎತ್ತರದ ಭೂಪ್ರದೇಶ ದಕ್ಷಿಣ ಭಾರತದ ಮತ್ತಾವುದೇ ರಾಜ್ಯದಲ್ಲಾಗಲೀ, ಕರ್ನಾಟಕದ ಇತರ ಭಾಗಗಳಲ್ಲಾಗಲೀ ಲಭ್ಯವಿಲ್ಲ ಎಂದು ಹೇಳಲಾಗುತ್ತದೆ.

ADVERTISEMENT

ಆದರೆ, 2021ರ ಅಧಿಸೂಚನೆ ಮೂಲಕ ಈ ಪ್ರದೇಶದ 13 ಗ್ರಾಮಗಳ 1,727 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಆದೇಶಕ್ಕೆ ರೈತ ಸಮುದಾಯ ಆರಂಭದಿಂದ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ತಮ್ಮ ಜೀವನೋಪಾಯಕ್ಕೆ ಆಧಾರವಾದ ಫಲವತ್ತಾದ ಭೂಮಿ ಕಳೆದುಕೊಂಡು, ಮುಂದೊಂದು ದಿನ ಅಲ್ಲಿಯೇ ನಿರ್ಮಾಣವಾಗುವ ಆಧುನಿಕ ನಗರ ನಾಗರಿಕತೆಯಲ್ಲಿ ತಮ್ಮ ಬದುಕು ಅತಂತ್ರವಾಗುವ ಆತಂಕ ರೈತರದ್ದಾಗಿದೆ.

ರೈತರ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ, ಯುಪಿಎ ಸರ್ಕಾರವು 2013ರಲ್ಲಿ ಜಾರಿಗೊಳಿಸಿರುವ ಭೂ ಸ್ವಾಧೀನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ಪರಿಸರದ ಗ್ರಾಮ ಮತ್ತು ಹೋಬಳಿಗಳ ರೈತರು ಈಗಾಗಲೇ ಕೈಗಾರಿಕಾ ಅಭಿವೃದ್ಧಿಗಾಗಿ ತಮ್ಮ ಕೃಷಿ ಭೂಮಿ ಕಳೆದುಕೊಂಡಿದ್ದಾರೆ. ಈಗ ‘ಹೈಟೆಕ್‌ ಡಿಫೆನ್ಸ್‌ ಮತ್ತು ಏರೊಸ್ಪೇಸ್‌ ಪಾರ್ಕ್‌’ ಯೋಜನೆಗಾಗಿ ಮತ್ತೆ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಏರೊಸ್ಪೇಸ್‌ ಯೋಜನೆ ಮತ್ತು ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಹೋರಾಡುತ್ತಿರುವ ರೈತರು ನಾಲ್ಕು ವರ್ಷಗಳಿಂದಲೂ ನಿರಂತರ ಸಂಘರ್ಷದಲ್ಲಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಈಗಿನ ಸರ್ಕಾರವು ರೈತರ ಹಕ್ಕೊತ್ತಾಯಗಳಿಗೆ ಮಣಿದು, ಕೆಲವು ಗ್ರಾಮಗಳಲ್ಲಿನ ಕೃಷಿ ಮತ್ತು ಜನವಸತಿ ಪ್ರದೇಶಗಳನ್ನು ಹೊಂದಿರುವ 495 ಎಕರೆ ಕೃಷಿ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧರಿಸಿದೆ.

ಆದರೆ, ಇನ್ನುಳಿದ 1,232 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ದೃಢ ನಿರ್ಧಾರ ಮಾಡಿದ್ದು, ಪರಿಹಾರದ ರೂಪದಲ್ಲಿ ಸಂತ್ರಸ್ತ ರೈತರಿಗೆ ಅಭಿವೃದ್ಧಿಪಡಿಸಿದ 1 ಎಕರೆ ಭೂಮಿಯಲ್ಲಿ 10,771 ಚದರಡಿ ಜಾಗ ಕೊಡಲು ನಿರ್ಧರಿಸಿದೆ. ಈ ಜಾಗವನ್ನೂ ರೈತರು ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ಬಳಸಬಹುದಾಗಿರುತ್ತದೆ. ಈ ಷರತ್ತುಗಳಿಗೆ ಒಪ್ಪಿ ರೈತರು ತಮ್ಮ ಮುಷ್ಕರ ಕೈಬಿಡುವಂತೆ ಸರ್ಕಾರ ಒತ್ತಡ ಹೇರುತ್ತಿದೆ.

ಕಾರ್ಪೊರೇಟ್‌ ಮಾರುಕಟ್ಟೆ ನೀತಿ ಮತ್ತು ಮೂಲ ಸೌಕರ್ಯ ಆಧಾರಿತ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಜಾರಿಗೊಳಿಸಲಾಗುವ ಯೋಜನೆಗಳು ಕೃಷಿ ಭೂಮಿಯನ್ನು ಬೆಂಗಾಡು ಮಾಡುವುದರ ಜೊತೆಗೆ, ರೈತ ಸಮುದಾಯದ ಭವಿಷ್ಯದ ತಲೆಮಾರುಗಳ ಪಾಲಿಗೆ ತ್ರಿಶಂಕು ಜಗತ್ತನ್ನೇ ಸೃಷ್ಟಿಸುತ್ತವೆ. ರೈತರ ಸದ್ಯದ ಸಮಸ್ಯೆಗಳು ಹಾಗೂ ಜೀವನದ ಮೂಲಾಧಾರ ಕೃಷಿಯಿಂದ ವಿಮುಖರಾಗಿ ನಗರೀಕರಣಕ್ಕೆ ಒಳಗಾಗುವ ರೈತ ಕುಟುಂಬಗಳ ಮುಂದಿನ ತಲೆಮಾರು ಎದುರಿಸಬಹುದಾದ ಸಂಕೀರ್ಣ ಸಮಸ್ಯೆಗಳ ಬಗ್ಗೆ ಯಾವ ಸರ್ಕಾರಗಳೂ ಗಂಭೀರವಾಗಿ ಯೋಚಿಸುತ್ತಿಲ್ಲ.

ಆಧುನಿಕ ಆರ್ಥಿಕ ಅಭಿವೃದ್ಧಿ ಮಾದರಿಗಳಲ್ಲಿ ಯೋಜನೆಗಳಿಂದ ಆಗುವ ಆರ್ಥಿಕ ವೆಚ್ಚವನ್ನು ಮಾತ್ರ ಪರಿಗಣಿಸಲಾಗುತ್ತದೆಯೇ ಹೊರತು ಸಾಮಾಜಿಕ ವೆಚ್ಚವನ್ನು ಅಲ್ಲ. ಹಾಗಾಗಿ ವರ್ತಮಾನ– ಭವಿಷ್ಯದ ತಳಸಮಾಜದ ಜೀವನೋಪಾಯ ಮಾರ್ಗಗಳು, ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಪಲ್ಲಟಗಳು ಇಲ್ಲಿ ಚರ್ಚೆಗೊಳಗಾಗುವುದೇ ಇಲ್ಲ.

ರೈತರ ಭೂ ಹೋರಾಟದಲ್ಲಿ ಇರುವುದು ಬರೀ ಭೂಮಿಯ ಪ್ರಶ್ನೆಯಲ್ಲ, ಅದು ಭವಿಷ್ಯದ ತಲೆಮಾರಿನ ಭವಿಷ್ಯದ ಪ್ರಶ್ನೆಯೂ ಹೌದು. ಇಂತಹ ಹೋರಾಟಗಳನ್ನು ನಿರ್ವಹಿಸುವಾಗ ಸರ್ಕಾರಗಳಿಗೆ ಸಂಯಮ, ಸಹಾನುಭೂತಿ, ಪರಾನುಭೂತಿ ಮತ್ತು ಸಂವೇದನೆ ಇರುವುದು ಮುಖ್ಯವಾಗುತ್ತದೆ. ಪೊಲೀಸ್‌ ದಬ್ಬಾಳಿಕೆಗೆ ಮುಂದಾಗುವ ಬದಲು, ಮುಖ್ಯಮಂತ್ರಿ, ಸಚಿವರು, ಜನಪ್ರತಿನಿಧಿಗಳು ಕೂಡಲೇ ಮಧ್ಯಪ್ರವೇಶಿಸಿ, ರೈತ ಮುಖಂಡರೊಡನೆ ಆರೋಗ್ಯಕರ ಸಮಾಲೋಚನೆ ನಡೆಸಿ, ಪರಿಹರಿಸುವುದು ವಿವೇಕಯುತ ಕ್ರಮವಾಗುತ್ತದೆ.

ನಮ್ಮ ಜನಪ್ರತಿನಿಧಿಗಳೆಲ್ಲರೂ ‘ತಾವೂ ಮಣ್ಣಿನ ಮಕ್ಕಳೇ?’ ಎಂದು ಬೆನ್ನುತಟ್ಟಿಕೊಳ್ಳುತ್ತಾರೆ. ಆದರೆ, ಮಣ್ಣಿನ ಮಕ್ಕಳ ಹಿತಾಸಕ್ತಿಗೆ ಧಕ್ಕೆಯುಂಟಾಗಿ ಅವರು ಮುಷ್ಕರ ಹೂಡಿದಾಗ ಕ್ರೂರವಾಗಿ ಹತ್ತಿಕ್ಕಲು ಮುಂದಾಗುತ್ತಾರೆ. ಇದು ಪ್ರಜಾತಂತ್ರದ ಚೋದ್ಯವಷ್ಟೇ ಅಲ್ಲ, ಮಾನವೀಯತೆಯ ವಿಡಂಬನೆಯೂ ಹೌದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.