ADVERTISEMENT

ಸಂಗತ | ಬೇಡ ಶಾಲೆಯ ವಾತಾವರಣ!

ಬೇಸಿಗೆ ಶಿಬಿರವು ಮತ್ತೊಂದು ಶಾಲೆ ಎಂಬ ಭಾವನೆಯನ್ನು ಬಿತ್ತುವಂತೆ ಇರಬಾರದು. ಮಗು ಉತ್ಸಾಹದಿಂದ ತೆರಳಿ ಪ್ರಫುಲ್ಲ ಭಾವದಿಂದ ಮನೆಗೆ ಮರಳುವಂತೆ ಇರಬೇಕು

ಗೌರಿ ಚಂದ್ರಕೇಸರಿ
Published 20 ಮಾರ್ಚ್ 2025, 23:30 IST
Last Updated 20 ಮಾರ್ಚ್ 2025, 23:30 IST
   

ಮತ್ತೊಂದು ಬೇಸಿಗೆ ರಜೆ ಬರುತ್ತಿದೆ. ಮಕ್ಕಳು ಪರೀಕ್ಷೆ ಮುಗಿಸಿ ಆಟದ ಮನಃಸ್ಥಿತಿಗೆ ಹೊರಳಲಿದ್ದಾರೆ. ಹೆತ್ತವರು, ಇನ್ನೆರಡು ತಿಂಗಳು ಮಕ್ಕಳನ್ನು ಹೇಗೆ ಸಂಭಾಳಿಸುವುದು ಎಂಬ ಚಿಂತೆಯಲ್ಲಿದ್ದಾರೆ. ಇದನ್ನೇ ಅವಕಾಶವನ್ನಾಗಿಸಿಕೊಂಡು ದಿನನಿತ್ಯ ಹಲವಾರು ಸಂಘ-ಸಂಸ್ಥೆಗಳಿಂದ ‘ಬೇಸಿಗೆ ಶಿಬಿರ’ಗಳ ಕುರಿತು ಜಾಹೀರಾತುಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ.

ಪಾಲಕರು ಯಾವುದಾದರೊಂದು ಬೇಸಿಗೆ ಶಿಬಿರಕ್ಕೆ ತಮ್ಮ ಮಕ್ಕಳನ್ನು ಸೇರಿಸಿ ನಿರಾಳರಾಗುತ್ತಾರೆ. ಆದರೆ ಆ ಶಿಬಿರದ ಗುಣಮಟ್ಟ, ಕಲಿಕೆಯ ಸಾಮರ್ಥ್ಯದ ಕುರಿತು ಯಾರೂ ಯೋಚಿಸುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಶಿಬಿರಗಳಿಗೆ ದುಬಾರಿ ಶುಲ್ಕವನ್ನು ತೆರಬೇಕಾದ ಸ್ಥಿತಿ ಇದೆ. ಆದರೆ ಅಂತಹ ಶಿಬಿರಗಳ ಫಲಶ್ರುತಿಯ ಕುರಿತು ಪೋಷಕರು ತಲೆಕೆಡಿಸಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ತಮ್ಮ ಮಗು ರಜೆಯಲ್ಲಿ ಕಾರ್ಯತತ್ಪರವಾಗಿರಬೇಕು ಎಂದಷ್ಟೇ ಬಯಸುತ್ತಾರೆ.

ಬೇಸಿಗೆ ಶಿಬಿರಗಳು ಮಕ್ಕಳ ಮನೋವಿಕಾಸಕ್ಕೆ ದಾರಿ ಮಾಡಿಕೊಡುವಂತೆ ಇರಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯ, ಜೀವನಮೌಲ್ಯ, ದೈನಂದಿನ ಜೀವನಕ್ಕೆ ಅವಶ್ಯವಾದ ವ್ಯವಹಾರ ಚಾತುರ್ಯ, ಸಾಮಾನ್ಯ ಜ್ಞಾನ, ತಂದೆ-ತಾಯಿ, ಗುರು-ಹಿರಿಯರ ಬಗ್ಗೆ ಗೌರವ ಮನೋಭಾವವನ್ನು ಬೆಳೆಸುವ ದಿಸೆಯಲ್ಲಿ ಗಮನ ಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲ ಮನೆಗಳಲ್ಲೂ ಮಕ್ಕಳು ಮೊಬೈಲ್ ಫೋನ್‌, ಟಿ.ವಿ.ಯಂತಹ ಗ್ಯಾಜೆಟ್‍ಗಳ ವ್ಯಸನಿಗಳಾಗುತ್ತಿದ್ದಾರೆ ಎಂಬ ದೂರಿದೆ. ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯದಿಂದ ಹೊರತರುವ ಹಾಗೂ ಪ್ರಕೃತಿಯ ಜೊತೆಗೆ ಬೆರೆತು ಚಟುವಟಿಕೆಯಿಂದ ಇರುವಂತೆ ಅವರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಇಂದಿನ ಮಕ್ಕಳಿಗೆ ಪ್ರಚಲಿತ ವಿದ್ಯಮಾನಗಳ ಕುರಿತು ಹೆಚ್ಚು ಅರಿವಿರುವುದಿಲ್ಲ. ಹಾಲು ಎಲ್ಲಿಂದ ದೊರೆಯುತ್ತದೆ ಎಂಬ ಪ್ರಶ್ನೆಗೆ ಹಲವಾರು ಮಕ್ಕಳು ‘ಪ್ಯಾಕೆಟ್ಟಿನಿಂದ’ ಎಂಬ ಉತ್ತರವನ್ನು ನೀಡುತ್ತಾರೆ. ಕೃಷಿ ಚಟುವಟಿಕೆಗಳು, ಗುಡಿ ಕೈಗಾರಿಕೆಯಂತಹ ಉದ್ಯಮಗಳ ಕುರಿತು ಅವರಲ್ಲಿ ಅರಿವನ್ನು ಉಂಟುಮಾಡುವ ಅವಶ್ಯಕತೆ ಇದೆ.

ADVERTISEMENT

ಇಂದಿನ ಮಕ್ಕಳು ತಮ್ಮ ಬಾಲ್ಯಸಹಜ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ. ಇಂದಿನ ಶೈಕ್ಷಣಿಕ ವ್ಯವಸ್ಥೆಯು ಮಕ್ಕಳಲ್ಲಿ ಅತಿಯಾದ ಒತ್ತಡವನ್ನು ಹುಟ್ಟುಹಾಕುತ್ತಿದೆ. ಅಜ್ಜಿ ಮನೆ ಎಂಬ ಪರಿಕಲ್ಪನೆಯೇ ಮರೆಯಾಗಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಮಕ್ಕಳು ಗ್ರಾಮೀಣ ಪರಿಸರವನ್ನು ಅನುಭವಿಸುವಂತೆ ಆಗಬೇಕು. ಹಳ್ಳಿಯ ವಾತಾವರಣದಲ್ಲಿ ಬೇಸಿಗೆ ಶಿಬಿರಗಳನ್ನು ಆಯೋಜಿಸಿ ಅಲ್ಲಿನ ಪರಿಸರವನ್ನು ಆಸ್ವಾದಿಸಲು ಅನುವು ಮಾಡಿಕೊಡಬೇಕು.

ಹೆಚ್ಚಿನ ಬೇಸಿಗೆ ಶಿಬಿರಗಳು ಶಾಲಾ ಚಟುವಟಿಕೆಗಳಿಗಿಂತ ಭಿನ್ನವಾದ ಅಂಶಗಳನ್ನೇನೂ ಹೊಂದಿರುವುದಿಲ್ಲ. ಬೆಳಗಿನಿಂದ ಸಂಜೆಯವರೆಗೆ ನಾಲ್ಕು ಗೋಡೆಗಳ ಮಧ್ಯದಲ್ಲಿ ಚಿತ್ರಕಲೆ, ಹಾಡು, ಕತೆ, ಒಂದಿಷ್ಟು ಒಳಾಂಗಣ ಆಟಗಳಿಗೆ ಸೀಮಿತವಾಗಿ ರುತ್ತವೆ. ಇದರಿಂದ ಮಕ್ಕಳು ಶಾಲಾ ವಾತಾವರಣದ ಪರಿಧಿಯಿಂದ ಹೊರಬರಲು ಸಾಧ್ಯವಾಗುವುದೇ ಇಲ್ಲ. ಇಂಥ ಶಿಬಿರಗಳಿಗೆ ಹೋಗಲು ಹಟ ಮಾಡುತ್ತಾರೆ ಇಲ್ಲವೇ ಹೆತ್ತವರ ಒತ್ತಾಯಕ್ಕೆ ಕಟ್ಟುಬಿದ್ದು ಒಲ್ಲದ ಮನಸ್ಸಿನಿಂದ ಹೋಗುತ್ತಾರೆ. ಬೇಸಿಗೆ ಶಿಬಿರಗಳು ಮಗು ದಿನವೂ ಉತ್ಸಾಹದಿಂದ ತೆರಳಿ ಪ್ರಫುಲ್ಲ ಭಾವದಿಂದ ಮನೆಗೆ ಮರಳುವಂತೆ ಇರಬೇಕು. ಶಿಬಿರದಲ್ಲಿ ನಡೆದ ಚಟುವಟಿಕೆಗಳನ್ನು ಸಂತಸದಿಂದ ಮನೆಯವರೊಡನೆ ಹಂಚಿಕೊಳ್ಳುವಂತೆ ಇರಬೇಕು.

ರಂಗಭೂಮಿಯು ಮಕ್ಕಳ ಮನಸ್ಸನ್ನು ವಿಕಸಿತಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಅದು ಬದುಕುವ ಕಲೆಯನ್ನು ಹೇಳಿಕೊಡುತ್ತದೆ. ಒಗ್ಗಟ್ಟು, ಶ್ರಮ, ಏಕಾಗ್ರತೆ, ಜ್ಞಾಪಕಶಕ್ತಿ, ಶಿಸ್ತು, ಸಾಮಾಜಿಕ ಜವಾಬ್ದಾರಿಯಂತಹ ಹಲವಾರು ಸಕಾರಾತ್ಮಕ ಅಂಶಗಳನ್ನು ಕಲಿಸುತ್ತದೆ. ಇಂದಿನ ಮಕ್ಕಳಿಗೆ ಸೃಜನಾತ್ಮಕ ಕಲೆಯ ಅವಶ್ಯಕತೆ ಹಾಗೂ ಅನಿವಾರ್ಯ ಎರಡೂ ಇವೆ. ಬೆರಳೆಣಿಕೆಯಷ್ಟು ಬೇಸಿಗೆ ಶಿಬಿರಗಳು ಮಾತ್ರ ರಂಗಭೂಮಿಗೆ ಒತ್ತು ಕೊಡುತ್ತಿವೆ. ಜೀವನಮೌಲ್ಯಗಳನ್ನು ಕಲಿಸುವ ರಂಗಭೂಮಿಯು ಮಕ್ಕಳಲ್ಲಿ ಜವಾಬ್ದಾರಿಯ ಅರಿವನ್ನು ಮೂಡಿಸುತ್ತದೆ.

ಗಂಡು-ಹೆಣ್ಣೆಂಬ ಭೇದಭಾವದ ಅರಿವನ್ನು ಮಕ್ಕಳು ಮನೆಯಿಂದಲೇ ಪಡೆದುಕೊಳ್ಳುತ್ತಾರೆ. ಇದು ಗಂಡಸರು ಮಾಡುವ ಕೆಲಸ, ಅದು ಹೆಂಗಸರು ಮಾಡುವ ಕೆಲಸ ಎಂಬ ಭಾವವನ್ನು ಹೆತ್ತವರೇ ಮಕ್ಕಳಲ್ಲಿ ಬಿತ್ತುತ್ತಾರೆ. ಕುಟುಂಬದ ಎಲ್ಲ ಸದಸ್ಯರೂ ಎಲ್ಲ ಕೆಲಸಗಳನ್ನು ಹಂಚಿಕೊಂಡು ಮಾಡುವಂತೆ ಪ್ರೇರೇಪಿಸುವ, ಸಣ್ಣ ಪುಟ್ಟ ಅಡುಗೆ, ಮನೆಗೆಲಸಗಳನ್ನು ಮಕ್ಕಳು ಸ್ವಯಂಪ್ರೇರಿತರಾಗಿ ಮಾಡುವಂತೆ ಬೇಸಿಗೆ ಶಿಬಿರಗಳು ಅರಿವನ್ನು ನೀಡಬೇಕು. ಸಣ್ಣ ಪುಟ್ಟ ಸೋಲಿಗೂ ಹತಾಶರಾಗುವ, ಒತ್ತಡಕ್ಕೆ ಒಳಗಾಗುವ, ಮುಂಗೋಪಿಗಳಾಗುತ್ತಿರುವ ಇಂದಿನ ಮಕ್ಕಳಿಗೆ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಸದಾ ಸಿಡುಕು, ಮೊಂಡುತನ, ಎದುರಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿರುವ ಮಕ್ಕಳಿಗೆ ಸಮಾಲೋಚನೆಯ ಅಗತ್ಯವಿದೆ. ಇಂಥ ಸಮಾಲೋಚನೆಯನ್ನು ಬೇಸಿಗೆ ಶಿಬಿರದ ಚಟುವಟಿಕೆಗಳಲ್ಲಿ ಆಯೋಜಕರು ಅಳವಡಿಸಿಕೊಂಡಾಗ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಂಡು ಪರಿಹಾರ ಕಂಡುಕೊಳ್ಳಬಹುದು.

ಮಣ್ಣಿನ ಮುದ್ದೆಯಂತಿರುವ ಮಕ್ಕಳ ಮನಸ್ಸು ಎಲ್ಲವನ್ನೂ ಬೇಗ ಗ್ರಹಿಸುತ್ತದೆ. ಹೀಗಾಗಿ, ಮಕ್ಕಳಲ್ಲಿನ ಕುಂದುಕೊರತೆಗಳನ್ನು ಅರಿತು, ಅವರ ದೌರ್ಬಲ್ಯ ಗಳನ್ನು ತಿಳಿದುಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವಂತಹ ಬೇಸಿಗೆ ಶಿಬಿರಗಳ ಅನಿವಾರ್ಯ ನಮಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.