ADVERTISEMENT

ಸಂಗತ | ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಬೌದ್ಧಿಕ ಕೇಂದ್ರವಾಗಲಿ

ನಾ ದಿವಾಕರ
Published 20 ಫೆಬ್ರುವರಿ 2023, 1:50 IST
Last Updated 20 ಫೆಬ್ರುವರಿ 2023, 1:50 IST
ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ
ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ   

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರೆಯದಿರುವುದು ರಾಜಕೀಯ-– ಸಾಹಿತ್ಯಕ ವೈಫಲ್ಯವೇ ಸರಿ

ಮೈಸೂರಿನಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ತನ್ನ ಸಾಹಿತ್ಯಕ ಪಯಣದ 15 ವರ್ಷಗಳನ್ನು ಪೂರೈಸಿದೆ. ಕೇಂದ್ರ ಭಾರತೀಯ ಭಾಷಾ ಸಂಸ್ಥೆಯ ಆವರಣದಲ್ಲಿ, ಈ ಸಂಸ್ಥೆಯ ಆಶ್ರಯದಲ್ಲೇ 2008ರಲ್ಲಿ ಆರಂಭವಾದ ಕನ್ನಡ ಶಾಸ್ತ್ರೀಯ ಸಂಸ್ಥೆಯು ಕೇಂದ್ರ ಸರ್ಕಾರದ ಬಳುವಳಿಯಾಗಿ ಬಂದಿರುವುದಲ್ಲ. ಬದಲಾಗಿ ನಮ್ಮ ಸಾಹಿತಿಗಳು, ಕಲಾವಿದರು ಮತ್ತು ಕನ್ನಡಪರ ಹೋರಾಟಗಾರರು ನಡೆಸಿದ ಹೋರಾಟದ ಫಲವಾಗಿ ಬಂದಿರುವುದು. ಕನ್ನಡದ ಅಭಿಜಾತ ಸಾಹಿತ್ಯದಲ್ಲಿನ ಅಮೂಲ್ಯ ಕೃತಿಗಳನ್ನು ಮುಂದಿನ ಪೀಳಿಗೆಗಾಗಿ ಕಾಪಿಟ್ಟುಕೊಳ್ಳುವ ಉದ್ದೇಶದಿಂದ ಸಂಶೋಧನೆ, ಅಧ್ಯಯನ ಮತ್ತು ಸಾಹಿತ್ಯಕ ಉತ್ಖನನದ ಪ್ರಕ್ರಿಯೆಯ ಮೂಲಕ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನೂ ಚಾರಿತ್ರಿಕ ಹೆಜ್ಜೆಗಳನ್ನೂ ಗುರುತಿಸುವ ಒಂದು ಬೌದ್ಧಿಕ ಕೇಂದ್ರವಾಗಿ ಈ ಕೇಂದ್ರ ರೂಪುಗೊಳ್ಳಬೇಕಿದೆ. ಈ ಸಂಸ್ಥೆಯನ್ನು ಒಂದು ಅಧ್ಯಯನ ಪೀಠದಂತೆ ಅಥವಾ ಸಂಶೋಧನಾ ಕೇಂದ್ರದಂತೆ ಪರಿಗಣಿಸುವುದೇ ಅಕ್ಷಮ್ಯ.

ನಮ್ಮ ಸಾಹಿತ್ಯ ವಲಯದ ಆಸಕ್ತ ಮನಸ್ಸುಗಳು ಒಂದಾಗಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ವಾಯತ್ತತೆಗಾಗಿ ನಾಲ್ಕು ವರ್ಷಗಳಿಂದ ಹೋರಾಡುತ್ತಿವೆ. ಕೇಂದ್ರ ಸಂಸ್ಥೆಯೊಂದರ ಆಶ್ರಯದಲ್ಲಿ ಬೆಳೆಯುವುದಕ್ಕೂ ತನ್ನದೇ ಆದ ಸ್ವಾಯತ್ತತೆಯೊಂದಿಗೆ ಕಾರ್ಯನಿರ್ವಹಿಸುವುದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳು ರಾಜಕೀಯ ನಾಯಕರಿಗೆ ಅರ್ಥವಾಗುವುದಿಲ್ಲ. ಆದರೆ ಸಾಹಿತ್ಯಕ ಮನಸ್ಸುಗಳಿಗೆ ಇದು ಅರ್ಥವಾಗುತ್ತದೆ. 2013ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಈ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವ ಪ್ರಯತ್ನವೂ ನಡೆದಿತ್ತು. ಈ ಸಂದರ್ಭದಲ್ಲಿ ಮೈಸೂರಿನ ಸಾಹಿತಿಗಳ ಒತ್ತಡಕ್ಕೆ ಮಣಿದು ಸರ್ಕಾರವು ಸಂಸ್ಥೆಯನ್ನು ಮೈಸೂರಿನಲ್ಲೇ ಉಳಿಸಲು ಒಪ್ಪಿತ್ತು. ದಿವಂಗತ ಪ. ಮಲ್ಲೇಶ್‌ ಅವರ ಕೊಡುಗೆಯನ್ನು ಸ್ಮರಿಸದಿದ್ದರೆ ನಾವು ಕೃತಘ್ನರಾಗುತ್ತೇವೆ. ಇದಕ್ಕೂ ಮುನ್ನ ಇದೇ ಕೇಂದ್ರೀಯ ಸಂಸ್ಥೆಯ ಆಶ್ರಯದಲ್ಲಿದ್ದ ಶಾಸ್ತ್ರೀಯ ತಮಿಳು ಅತ್ಯುನ್ನತ ಅಧ್ಯಯನ ಕೇಂದ್ರ ತನ್ನ ಬಂಧನವನ್ನು ಬಿಡಿಸಿಕೊಂಡು ಚೆನ್ನೈಗೆ ವರ್ಗಾವಣೆಯಾಗಿತ್ತು. ತಮಿಳು ಶಾಸ್ತ್ರೀಯ ಕೇಂದ್ರವನ್ನು ವರ್ಗಾಯಿಸಿದ ಒಂದೇ ವರ್ಷದಲ್ಲಿ ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಒಕ್ಕೊರಲಿನಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಶಾಸ್ತ್ರೀಯ ಕೇಂದ್ರಕ್ಕೆ ಸ್ವಾಯತ್ತತೆಯನ್ನು ಒದಗಿಸುವುದರಲ್ಲಿ ಯಶಸ್ವಿಯಾಗಿದ್ದರು. ಹೋದ ವರ್ಷ ಈ ಕೇಂದ್ರವು ತನ್ನದೇ ಆದ ಸ್ವಂತ ಕಟ್ಟಡವನ್ನೂ ನಿರ್ಮಿಸಿ, ಪೂರ್ಣ ಪ್ರಮಾಣದ ಸ್ವಾತಂತ್ರ್ಯವನ್ನು ಪಡೆದಿದೆ.

ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಸ್ವಾಯತ್ತತೆಗಾಗಿ ಹೋರಾಡುತ್ತಿರುವವರು ಹತ್ತಾರು ಬಾರಿ ಸಿಐಐಎಲ್‌ ಸಂಸ್ಥೆಯ ನಿರ್ದೇಶಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸಂಸ್ಥೆಯ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಾಲ್ಕೂವರೆ ಎಕರೆ ಭೂಮಿಯನ್ನು ನೀಡುವುದಾಗಿ ಮೈಸೂರು ವಿಶ್ವವಿದ್ಯಾಲಯ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಆ ಕಡತ ಬಹುಶಃ ಯಾವುದೋ ಕಪಾಟಿನಲ್ಲಿ ದೂಳು ತಿನ್ನುತ್ತಾ ಕುಳಿತಿದ್ದಂತೆ ಕಾಣುತ್ತದೆ. ಈಗ ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಜಯಲಕ್ಷ್ಮಿ ವಿಲಾಸ ಅರಮನೆ ಕಟ್ಟಡಕ್ಕೆ ವರ್ಗಾವಣೆ ಮಾಡಲು ಪ್ರಯತ್ನಗಳು ನಡೆಯುತ್ತಿದ್ದು, ತಡವಾಗಿಯಾದರೂ ಈ ವಿಚಾರದಲ್ಲಿ ಆಸಕ್ತಿ ತೋರಿದ ಸಂಸದ ಪ್ರತಾಪ ಸಿಂಹ ಅವರ ಪ್ರಯತ್ನ ಶ್ಲಾಘನೀಯವೇ. ಈ ಕಟ್ಟಡವೂ ದುರಸ್ತಿಯಾಗಬೇಕಿದ್ದು, ಶಾಸ್ತ್ರೀಯ ಕೇಂದ್ರಕ್ಕೆ ಬೇಕಾದ ಕಟ್ಟಡದ ಒಂದು ಭಾಗವನ್ನು ದುರಸ್ತಿ ಮಾಡಲು ಕೇಂದ್ರ ಸರ್ಕಾರದಿಂದ ₹ 27 ಕೋಟಿ ಮಂಜೂರಾಗಿರುವುದಾಗಿ ಸಂಸದರು ಹೇಳಿದ್ದಾರೆ.

ADVERTISEMENT

ಆದರೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಅಭಿವೃದ್ಧಿಗೆ ಒಂದು ಸ್ಥಾವರಕ್ಕಿಂತಲೂ ಅವಶ್ಯವಾಗಿ ಬೇಕಿರುವುದು ಅಭಿಜಾತ ಕನ್ನಡ ಸಾಹಿತ್ಯದ ಜಂಗಮ ಸ್ವರೂಪಿ ಅಧ್ಯಯನವನ್ನು ಮುಂದುವರಿಸಲು ಮತ್ತು ಅಭಿವೃದ್ಧಿಪಡಿಸಲು ನೆರವಾಗುವ ಸ್ವಾಯತ್ತತೆ. ಕನ್ನಡದ ಮನಸ್ಸುಗಳು ಈ ಸ್ವಾಯತ್ತತೆಗಾಗಿ ಹಲವು ಹೋರಾಟ, ಪ್ರತಿಭಟನೆಗಳನ್ನು ನಡೆಸಿ, ಮನವಿಗಳನ್ನು ಸಲ್ಲಿಸಿದ್ದರೂ, ನಮ್ಮ ಜನಪ್ರತಿನಿಧಿಗಳು ತುಟಿಪಿಟಿಕ್ಕೆನ್ನದೆ ಇರುವುದು ಕನ್ನಡದ ದುರಂತ ಅಲ್ಲವೇ? ಈಗಲೂ ಸಂಸದರು ಒಂದು ಸ್ಥಾವರಕ್ಕಾಗಿ ಶ್ರಮಿಸುತ್ತಿದ್ದಾರೆ. ಆದರೆ ಸ್ವಾಯತ್ತತೆ ಪಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಲಕ್ಷಣಗಳು ಕಾಣುತ್ತಿಲ್ಲ. ಸ್ವಾಯತ್ತತೆ ಇಲ್ಲದೆ ಕಟ್ಟಡ ಬದಲಾಗುವುದರಿಂದ ಏನೂ ಸಾಧಿಸಲಾಗುವುದಿಲ್ಲ. ಸ್ವಂತ ಸ್ಥಾವರದಲ್ಲಿ ಕನ್ನಡ ಅಭಿಜಾತ ಸಾಹಿತ್ಯದ ಜಂಗಮವಾಣಿ ಮುನ್ನಡೆಯುವುದಾದರೆ ಈ ಸಂಸ್ಥೆಗಾಗಿ ಹೋರಾಡಿದ ಕನ್ನಡ ಮನಸ್ಸುಗಳ ಶ್ರಮವೂ ಸಾರ್ಥಕವಾದೀತು. ಇದು ರಾಜಕೀಯ ಪ್ರತಿಷ್ಠೆಯ ವಿಚಾರವಲ್ಲ, ಶುದ್ಧ ಸಾಹಿತ್ಯಕ ಅಭಿವ್ಯಕ್ತಿಯ ಪ್ರಶ್ನೆ ಎನ್ನುವುದು ಜನಪ್ರತಿನಿಧಿಗಳಿಗೆ ಅರ್ಥವಾಗಬೇಕಿದೆ.

ಸಮಾಜವಾದಿ, ದಿವಂಗತ ಪ. ಮಲ್ಲೇಶ್‌ ಅವರ ‘ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಮೊದಲು ಕೊಡಲಿ ರೀ, ಮರದ ಕೆಳಗೆ ಟೇಬಲ್ಲು ಕುರ್ಚಿ ಹಾಕ್ಕೊಂಡು ಕೆಲಸ ಮಾಡೋಣ’ ಎಂಬ ಬಿರುನುಡಿಗಳು ಸಹಜವಾಗಿಯೇ ನೆನಪಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.